ಬೆಂಗಳೂರು, ಜು.12 www.bengaluruwire.com : ನಗರದಲ್ಲಿ ಅನಧಿಕೃತ ಜಾಹೀರಾತು ಮತ್ತು ಹೋರ್ಡಿಂಗ್, ಬ್ಯಾನರ್ ಬಂಟಿಂಗ್ ತೆರವುಗೊಳಿಸುವಲ್ಲಿ ವಿಫಲವಾದ ಬಿಬಿಎಂಪಿ ಅಧಿಕಾರಿಗಳ ಕಾರ್ಯವೈಖರಿಗೆ ಹೈಕೋರ್ಟ್ ಗರಂ ಆಗಿದೆ.
ಹೈಕೋರ್ಟ್ ನ ಮುಖ್ಯ ನ್ಯಾಯಮೂರ್ತಿಗಳ ಪೀಠವು ನಗರದಲ್ಲಿ ಅನಧಿಕೃತ ಫ್ಲೆಕ್ಸ್, ಬ್ಯಾನರ್ ತೆರವುಗೊಳಿಸದ ಬಿಬಿಎಂಪಿ ಕ್ರಮದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದೆ. ನ್ಯಾಯಾಂಗ ನಿಂದನೆ ಕುರಿತಂತೆ ಜು.24ರಂದು ಅನುಸರಣಾ ವರದಿ ಸಲ್ಲಿಸುವಂತೆ ವಿಚಾರಣೆಗೆ ದಿನ ನಿಗದಿಪಡಿಸಿದೆ.
ಈ ಹಿನ್ನಲೆಯಲ್ಲಿ ಪಾಲಿಕೆ ವಿಶೇಷ ಆಯುಕ್ತ ಮುನೀಷ್ ಮೊದ್ಗಿಲ್, ಪಾಲಿಕೆಯ ಎಲ್ಲಾ ವಲಯ ಆಯುಕ್ತರು ಹಾಗೂ ಜಂಟಿ ಆಯುಕ್ತರಿಗೆ ನಗರದೆಲ್ಲೆಡೆ ಅನಧಿಕೃತ ಜಾಹೀರಾತು ಫ್ಲೆಕ್ಸ್, ಬ್ಯಾನರ್, ಹೋರ್ಡಿಂಗ್ ಮತ್ತು ಬಂಟಿಂಗ್ ತೆರವುಗೊಳಿಸಲು ಸೂಕ್ತ ಕ್ರಮ ಕೈಗೊಳ್ಳುವಂತೆ ಪತ್ರ ಬರೆದು ಸೂಚಿಸಿದ್ದಾರೆ. ಈ ಬಗ್ಗೆ ಪ್ರತಿದಿನ ಸಂಜೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಿ ಪ್ರಗತಿ ಪರಿಶೀಲಿಸುವುದಾಗಿ ಪತ್ರ ಬರೆದಿದ್ದಾರೆ.
ಇದೇ ವಿಷಯಕ್ಕೆ ಸಂಬಂಧಿಸಿದಂತೆ ಜು.15ರಂದು ಸಂಜೆ 5 ಗಂಟೆಗೆ ವಿಶೇಷ ಸಭೆ ನಡೆಸಲಾಗುತ್ತದೆ. ಪೊಲೀಸ್ ಇಲಾಖೆಗೆ ಅನಧಿಕೃತ ಜಾಹೀರಾತು ಅಳವಡಿಸಿದವರ ವಿರುದ್ಧ ಸ್ವಯಂಪ್ರೇರಿತ ಪ್ರಕರಣ ದಾಖಲಿಸುವಂತೆ ಹೈಕೋರ್ಟ್ ಸೂಚಿಸಿದೆ. ಪಾಲಿಕೆ ಸಿಬ್ಬಂದಿಯೂ ಈ ನಿಟ್ಟಿನಲ್ಲಿ ಚುನಾವಣೆ ಸಂದರ್ಭದಲ್ಲಿ ಅಕ್ರಮ ಕಂಡುಬಂದಾಗ ಪ್ರಕರಣ ದಾಖಲಿಸುವಂತೆ ಈ ವಿಷಯದಲ್ಲೂ ಮುಲಾಜಿಲ್ಲದೆ ಕ್ರಮವಹಿಸಲು ಪತ್ರದಲ್ಲಿ ತಿಳಿಸಿದ್ದಾರೆ.