ಬೆಂಗಳೂರು, ಜು.11 www.bengaluruwire.com : ರಾಜ್ಯಾದ್ಯಂತ ಬೆಳ್ಳಂಬೆಳಗ್ಗೆ ಅಕ್ರಮ ಆಸ್ತಿ ಗಳಿಕೆ ಆರೋಪದ ಮೇಲೆ 100 ಲೋಕಾಯುಕ್ತ ಅಧಿಕಾರಿಗಳು 9 ಜಿಲ್ಲೆಗಳಲ್ಲಿರುವ ಭ್ರಷ್ಟ ಅಧಿಕಾರಿಗಳ ಮನೆ, ಕಚೇರಿ ಸೇರಿದಂತೆ ಅವರಿಗೆ ಸಂಬಂಧಿಸಿದ 56 ಕಡೆ ದಾಳಿ ನಡೆಸಿದ್ದಾರೆ.
ದಾವಣಗೆರೆ ಮತ್ತು ಚಿತ್ರದುರ್ಗದಲ್ಲಿ ತಲಾ 2 ಪ್ರಕರಣಗಳು ಸೇರಿದಂತೆ ಒಟ್ಟು 11 ಜನ ಅಧಿಕಾರಿಗಳ ಮೇಲೆ ಈ ದಾಳಿ ನಡೆದಿದ್ದು, ನಗದು, ಚಿನ್ನಾಭರಣ, ಚರಸ್ಥಿರಾಸ್ತಿ ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದಾರೆ.
ಬಿಬಿಎಂಪಿಯ ರಾಜರಾಜೇಶ್ವರಿ ನಗರ ವಲಯದಲ್ಲಿ ಅಕ್ರಮವಾಗಿ ಸ್ವತ್ತುಗಳನ್ನು ಎ ಖಾತೆ ರಿಜಿಸ್ಟರ್ ಗೆ ಸೇರಿಸಿದ್ದ ಆರೋಪದ ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದ ಕೆಂಗೇರಿ ವಿಭಾಗದ ಕಂದಾಯ ಅಧಿಕಾರಿ ಬಸವರಾಜ ಮಾಗಿ ಅವರ ಕಲ್ಬುರ್ಗಿ, ಬೆಂಗಳೂರು ಮನೆಗಳ ಮೇಲೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದಾರೆ.
ಬಸವರಾಜ ಮಾಗಿ ಅವರಿಗೆ ಸಂಬಂಧಿಸಿದಂತೆ ಬೆಂಗಳೂರಿನ 5 ಕಡೆ, ಕಲ್ಬುರ್ಗಿಯಲ್ಲಿ 4 ಕಡೆ ಲೋಕಾ ದಾಳಿ ಸೇರಿದಂತೆ ಒಟ್ಟು 9 ಕಡೆ ಲೋಕಾಯುಕ್ತ ತಂಡ ಪರಿಶೀಲನೆ ನಡೆಸಿದೆ. ಕಲ್ಬುರ್ಗಿ ನಗರದ ಬಡೇಪುರ, ಪಿ ಅಂಡ್ ಟಿ ಕಾಲೋನಿ ಹಾಗೂ ಪಾಳಾ ಗ್ರಾಮದ ಮನೆ ಹಾಗೂ ಫಾರ್ಮ್ ಹೌಸ್ ನಲ್ಲಿ ಪರಿಶೀಲನೆ ನಡೆಯುತ್ತಿದೆ. ಬಡೇಪುರ ಕಾಲೋನಿಯಲ್ಲಿ ಬೃಹತ್ ಭವ್ಯ ಅಪಾರ್ಟ್ಮೆಂಟ್ ಇದ್ದು, ಬಸವರಾಜ ಮಾಗಿ ಸಹೋದರಿ ಹೇಮಾ ರವಿಪ್ರಕಾಶ್ ಹೆಸರಲ್ಲಿದೆ ಎನ್ನಲಾಗಿದೆ.
ಈ ಸ್ವತ್ತು ಕೋಟಿ ಕೋಟಿ ರೂ. ಬೆಲೆ ಬಾಳುವ ಬೃಹತ್ ಅಪಾರ್ಟ್ಮೆಂಟ್ ಆಗಿದದೆ. ಸಹೋದರಿ ಹೇಮಾ ಹೆಸರಲ್ಲಿರುವ ಮನೆಯಲ್ಲಿ 10, 20, 30, 50, 100, 500 ಹಾಗೂ 1000 ಮುಖ ಬೆಲೆಯ ಅಂದಾಜು 12 ಲಕ್ಷ 30 ಸಾವಿರ ರೂ. ಮೌಲ್ಯದ ಕ್ಯಾಸಿನೋ ಕಾಯಿನ್ಸ್ ಪತ್ತೆಯಾಗಿದೆ. ಪ್ರಸ್ತುತ ಲೋಕಾಯುಕ್ತ ಪೊಲೀಸರು ಆಸ್ತಿ ದಾಖಲೆಗಳ ಪತ್ತೆಯಲ್ಲಿ ತೊಡಗಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಉಳಿದಂತೆ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವರ ಹುಟ್ಟೂರಲ್ಲಿ ಲೋಕಾಯುಕ್ತ ಶಾಕ್ ನೀಡಿದೆ. ಬೆಳ್ಳಂಬೆಳಗ್ಗೆ ಇಜ್ಜಲಘಟ್ಟ ಗ್ರಾಮದಲ್ಲಿ ಗ್ರಾಮೀಣ ಕುಡಿಯುವ ನೀರು ಹಾಗೂ ನೈರ್ಮಲ್ಯ ವಿಭಾಗದ ನಿವೃತ್ತ ಇಇ ಶಿವರಾಜು.ಎಸ್ ಮನೆ ಮೇಲೆ ರೇಡ್ ಮಾಡಲಾಗಿದೆ. ಈ ನಿವೃತ್ತ ಸರ್ಕಾರಿ ಅಧಿಕಾರಿ ಶಿವರಾಜು, ಸಚಿವ ಚಲುವರಾಯಸ್ವಾಮಿ ಸಂಬಂಧಿ ಎಂದು ಹೇಳಲಾಗುತ್ತಿದೆ. ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕಿನ ಇಜ್ಜಲಘಟ್ಟ ಗ್ರಾಮ.ಕ್ಕೆ ಎರಡು ಕಾರಿನಲ್ಲಿ ಬಂದ ಅಧಿಕಾರಿಗಳಿಂದ ಏಕಕಾಲದಲ್ಲಿ ದಾಳಿ ನಡೆಸಲಾಗಿದೆ. ಶಿವರಾಜು ಅವರ ತಂದೆ ಮನೆ, ತೋಟದ ಮನೆಯಲ್ಲಿ, ಬೆಳ್ಳೂರು ಬಳಿಯ ಕ್ರಷರ್ ನಲ್ಲೂ ಲೋಕಾಯುಕ್ತ ಶೋಧ ನಡೆಸುತ್ತಿದ್ದಾರೆ. ಆದರೆ ಶಿವರಾಜು ಮೈಸೂರಿನಲ್ಲಿ ನೆಲೆಸಿದ್ದರು.
ಅಕ್ರಮ ಆಸ್ತಿಗಳಿಕೆ ಆರೋಪದ ಹಿನ್ನಲೆಯಲ್ಲಿ ಹಾರೋಹಳ್ಳಿ ರಂಗನಾಥ ಬಡಾವಣೆಯಲ್ಲಿರುವ ತಹಶಿಲ್ದಾರ್ ವಿಜಿಯಣ್ಣ ಮನೆ ಹಾಗೂ ಕಚೇರಿ ಮೇಲೆ ಲೋಕಾಯುಕ್ತ ದಾಳಿ ನಡೆಸಿದ್ದಾರೆ. ಇವರು ಕಳೆದ ಎರಡು ವರ್ಷಗಳಿಂದ ಹಾರೋಹಳ್ಳಿ ತಹಶಿಲ್ದಾರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದು, ಹಾರೋಹಳ್ಳಿ ಹೊರತುಪಡಿಸಿ ಕೋಲಾರ ಸೇರಿದಂತೆ 6 ಕಡೆಗಳಲ್ಲಿ ಒಟ್ಟು 12 ಜನ ಲೋಕಾಯುಕ್ತ ಅಧಿಕಾರಿಗಳಿಂದ ಶೋಧ ಕಾರ್ಯ ನಡೆಯುತ್ತಿದೆ.
ಉಳಿದಂತೆ ದಾಳಿಗೊಳಗಾದ ಅಧಿಕಾರಿಗಳ ವಿವರ ಈ ಕೆಳಕಂಡಂತಿದೆ :
* ಚಿತ್ರದುರ್ಗ
ಎಂ ರವೀಂದ್ರ, ಮುಖ್ಯ ಇಂಜಿನಿಯರ್ (ನಿವೃತ್ತ)
ಸಣ್ಣ ನೀರಾವರಿ ಇಲಾಖೆ, ಬೆಂಗಳೂರು
* ಧಾರವಾಡ
ಶೇಖರಗೌಡ
ಯೋಜನಾ ನಿರ್ದೇಶಕ
* ಬೆಳಗಾವಿ
ಮಹಾದೇವ ಬನ್ನೂರು
ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್
* ದಾವಣಗೆರೆ
ಡಿ ಎಚ್ ಉಮೇಶ್
ಕಾರ್ಯನಿರ್ವಾಹಕ ಇಂಜಿನಿಯರ್ (ವಿ),
* ದಾವಣಗೆರೆ
ಎಂ ಎಸ್ ಪ್ರಭಾಕರ್
ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್
* ಮೈಸೂರು
ಮಹೇಶ್ ಕೆ
ಸುಪ್ಟ್ ಇಂಜಿನಿಯರ್
* ಹಾಸನ
ಎನ್ ಎಂ ಜಗದೀಶ್
ಗ್ರೇಡ್-1 ಕಾರ್ಯದರ್ಶಿ
* ಚಿತ್ರದುರ್ಗ
ಕೆ ಜಿ ಜಗದೀಶ್
ಸುಪ್ಟ್ ಇಂಜಿನಿಯರ್
ಆಯಾ ಜಿಲ್ಲೆಗಳ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಲೋಕಾಯುಕ್ತ ದಾಳಿ ಪ್ರಕರಣದ ಮೇಲ್ವಿಚಾರಣೆ ನಡೆಸುತ್ತಿದ್ದು, ತನಿಖೆ ಮುಂದುವರೆದಿದೆ.