ನವದೆಹಲಿ, ಜು.09 www.bengaluruwire.com : ರಾಮಾಯಾಣದಲ್ಲಿನ ಪ್ರಮುಖ ಸ್ಥಳವಾದ ರಾಮಸೇತುವಿನ ಕುರಿತಂತೆ ಅಮೆರಿಕದ ಉಪಗ್ರಹದ ದತ್ತಾಂಶಗಳನ್ನು ಬಳಸಿಕೊಂಡು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೊ) ವಿಜ್ಞಾನಿಗಳು ಅತ್ಯಂತ ವಿವರವಾದ ನಕ್ಷೆ ಸಿದ್ಧಪಡಿಸಿದ್ದಾರೆ.
ಭಾರತ ಮತ್ತು ಶ್ರೀಲಂಕಾ ನಡುವೆ ಇರುವ ಈ ಸೇತುವೆಯನ್ನು ಆಡಮ್ಸ್ ಬ್ರಿಡ್ಜ್ ಎಂದೂ ಕರೆಯುತ್ತಾರೆ. ಈ ಮುಳಗಿದ ಸೇತುವೆ ಮೂಲದ ಕುರಿತು ದೀರ್ಘಕಾಲದಿಂದ ಹಲವು ರೀತಿ ವಿವಾದ, ಚರ್ಚೆಗಳು ನಡೆಯುತ್ತಿದ್ದು, ಅದನ್ನು ಬಗೆಹರಿಸಲು ಈ ನಕ್ಷೆಯಿಂದ ಸಾಧ್ಯವಾಗಲಿದೆ ಎನ್ನಲಾಗುತ್ತಿದೆ. 29 ಕಿ.ಮೀ. ಉದ್ದದ ಈ ಸೇತುವೆಯ ಸಮುದ್ರದಡಿಯ ನಕ್ಷೆಯನ್ನು ಇಷ್ಟೊಂದು ನಿಖರವಾಗಿ ಸಿದ್ಧಪಡಿಸಿದಿರುವುದು ಇದೇ ಪ್ರಥಮ ಬಾರಿಗೆ. ಸೇತುವೆಯು ಸಮುದ್ರದ ತಳದಿಂದ 8 ಮೀ.ನಷ್ಟು ಎತ್ತರದಲ್ಲಿದೆ ಎಂದು ನಕ್ಷೆಯಲ್ಲಿ ತೋರಿಸಲಾಗಿದೆ.
‘ನಾಸಾದ ಐಸಿಇಸ್ಯಾಟ್-2 (ICESat-2)ಉಪಗ್ರಹದ ದತ್ತಾಂಶಗಳನ್ನು ಬಳಸಿಕೊಂಡು ನಕ್ಷೆ ಸಿದ್ಧಪಡಿಸಲಾಗಿದೆ. ರಾಮಸೇತು ಮತ್ತು ಅದರ ಉಗಮದ ಬಗ್ಗೆ ಇನ್ನಷ್ಟು ತಿಳಿಯಲು ಇದರಿಂದ ಸಾಧ್ಯವಾಗಲಿದೆ’ ಎಂದು ಇಸ್ರೊದ ನ್ಯಾಷನಲ್ ರಿಮೋಟ್ ಸೆನ್ಸಿಂಗ್ ಸೆಂಟರ್ನ ವಿಜ್ಞಾನಿಗಳು ಹೇಳಿದ್ದಾಗಿ ‘ಸೈಂಟಿಫಿಕ್ ರಿಪೋರ್ಟ್ಸ್’ (Scientific Reports)ನಲ್ಲಿ ಪ್ರಕಟವಾದ ವರದಿಯಲ್ಲಿ ವಿವರವಾಗಿ ತಿಳಿಸಲಾಗಿದೆ.
ಸಮುದ್ರ ತಳದಿಂದ ಲೇಸರ್ ಕಿರಣಗಳನ್ನು ಬೌನ್ಸ್ ಮಾಡಿದ ಅಮೆರಿಕ ನಾಸಾ ಉಪಗ್ರಹದೊಂದಿಗೆ ನಡೆಸಿದ ಮ್ಯಾಪಿಂಗ್ ನಲ್ಲಿ ಉಪಗ್ರಹದಲ್ಲಿನ ಲೇಸರ್ ಆಯಲ್ಟಿಮೀಟರ್ ಉಪಕರಣ ಹೊಂದಿದ್ದು, ಅದರ ನೆರವಿನಿಂದ ಸಮುದ್ರದ ಆಳವಿಲ್ಲದ ಪ್ರದೇಶದ ಯಾವುದೇ ರಚನೆಯ ಎತ್ತರವನ್ನು ಅಳೆಯಲು ಸಾಧ್ಯವಾಗುತ್ತದೆ. ಹೀಗೆ ರಾಮಸೇತುವೆಯ 99.98 ಪ್ರತಿಶತದಷ್ಟು – ಸುಣ್ಣದ ಕಲ್ಲುಗಳ 29 ಕಿಮೀ ಸರಪಳಿಯು ಆಳವಿಲ್ಲದ ನೀರಿನಲ್ಲಿ ಮುಳುಗಿದೆ ಎಂಬುದನ್ನು ತೋರಿಸಿದೆ.
ಪ್ರಸ್ತುತ ಮುಳುಗಿರುವ ಪರ್ವತವು ಭಾರತ ಮತ್ತು ಶ್ರೀಲಂಕಾ ನಡುವಿನ ಹಿಂದಿನ ಭೂ ಸಂಪರ್ಕವಾಗಿದೆ ಎಂದು ಭೂವೈಜ್ಞಾನಿಕ ಪುರಾವೆಗಳು ಸೂಚಿಸುತ್ತವೆ. ಕ್ರಿ.ಶ. 9ನೇ ಶತಮಾನದಲ್ಲಿ ಪರ್ಷಿಯನ್ ನಾವಿಕರು ಸೇತುವೆಯನ್ನು ಸೇತು ಬಂಧೈ ಅಥವಾ ಸಮುದ್ರದ ಮೇಲಿನ ಸೇತುವೆ ಎಂದು ಬಣ್ಣಿಸಿದ್ದಾರೆ. ರಾಮೇಶ್ವರಂನ ದೇವಾಲಯದ ದಾಖಲೆಗಳು 1480 ರ ಇಸವಿಯವರೆಗೂ ಸಮುದ್ರ ಮಟ್ಟಕ್ಕಿಂತ ಈ ಸೇತುವೆ ಮೇಲಿತ್ತು, ಅದು ಚಂಡಮಾರುತದ ಸಮಯದಲ್ಲಿ ನಾಶವಾಯಿತು ಎಂದು ಹೇಳುತ್ತವೆ.
ಹಿಂದಿನ ಉಪಗ್ರಹ ಆಧಾರಿತ ಅವಲೋಕನಗಳು ಸಮುದ್ರದೊಳಗಿನ ರಚನೆಯನ್ನು ಬಹಿರಂಗಪಡಿಸಿದ್ದವು. ಆದರೆ ಹೆಚ್ಚಾಗಿ ಸೇತುವೆಯ ತೆರೆದ ಭಾಗಗಳ ಮೇಲೆ ಅವು ಕೇಂದ್ರೀಕೃತವಾಗಿದ್ದವು. ಈ ಪ್ರದೇಶದಲ್ಲಿನ ಸಮುದ್ರವು ತುಂಬಾ ಆಳವಿಲ್ಲ, ಕೇವಲ 1 ಮೀಟರ್ನಿಂದ 10 ಮೀಟರ್ ಆಳವಿದ್ದು, ನೌಕಾಯಾನಕ್ಕೆ ಅಡ್ಡಿಯುಂಟುಮಾಡುವ ಮತ್ತು ಹಡಗುಗಳೊಂದಿಗೆ ಪರ್ವತವನ್ನು ನಕ್ಷೆ ಮಾಡುವ ಯಾವುದೇ ಪ್ರಯತ್ನಗಳಿಗೆ ಅಡ್ಡಿಯಾಗುತ್ತಿತ್ತು. ನಾಸಾದ ಅತ್ಯಾಧುನಿಕ ಐಸಿಇಸ್ಯಾಟ್-2 ಉಪಗ್ರಹದ ದತ್ತಾಂಶಗಳನ್ನು ಬಳಸಿಕೊಂಡು ಇಸ್ರೋ ವಿಜ್ಞಾನಿಗಳು ಹೊಸ ರೀತಿಯ ನಕ್ಷೆಯನ್ನು ಸಿದ್ಧಪಡಿಸಿದ್ದು ಹೆಚ್ಚು ನಿಖರವಾಗಿದೆ ಎಂದು ಹೇಳಲಾಗಿದೆ.
ಹೊಸ ನಕ್ಷೆ ಅಧ್ಯಯನದಿಂದ ಸಮುದ್ರ ಜೀವಿಗಳ ಪಳೆಯುಳಿಕೆಗಳಿಂದ ಸುಣ್ಣದ ಕಲ್ಲು ಹೊರಹೊಮ್ಮುತ್ತದೆ. ಸಮುದ್ರ ಜೀವಿಗಳ ಚಿಪ್ಪುಗಳು ಮತ್ತು ಅಸ್ಥಿಪಂಜರಗಳು ಲಕ್ಷಾಂತರ ವರ್ಷಗಳಿಂದ ಸಾಗರ ತಳದಲ್ಲಿ ನಿರ್ಮಾಣವಾಗುತ್ತಿದ್ದಂತೆ, ಅವುಗಳ ಪದರಗಳು ಒಂದಕ್ಕೊಂದು ಕೆಳಕ್ಕೆ ತಳ್ಳುತ್ತವೆ, ಘನ ಬಂಡೆಯಾಗಿ ಅವು ಕಾಲಾನಂತರದಲ್ಲಿ ಬದಲಾಗುತ್ತವೆ.
ಇಸ್ರೋ ಅಧ್ಯಯನದೊಂದಿಗೆ ಸಂಬಂಧ ಹೊಂದಿಲ್ಲದ ಮುಂಬೈನ ಟಾಟಾ ಇನ್ಸ್ಟಿಟ್ಯೂಟ್ ಆಫ್ ಫಂಡಮೆಂಟಲ್ ರಿಸರ್ಚ್ನ ಖಗೋಳಶಾಸ್ತ್ರದ ಮಾಜಿ ಪ್ರಾಧ್ಯಾಪಕ ಮಯಾಂಕ್ ವಾಹಿಯಾ ಅವರು “ಇದು ಮುಳುಗಿದ ಸೇತುವೆಯ ಹಿಂದೆ ದಾಖಲೆಗಳಿಲ್ಲದ ವೈಶಿಷ್ಟ್ಯಗಳನ್ನು ವಿವರಿಸುವ ಉತ್ತಮ ವೈಜ್ಞಾನಿಕ ಪತ್ರಿಕೆಯಾಗಿದೆ. “ಇದು ಸುಣ್ಣದ ರಚನೆಯ ನೈಸರ್ಗಿಕ, ಭೂವೈಜ್ಞಾನಿಕ ಮೂಲವನ್ನು ದೃಢೀಕರಿಸುತ್ತದೆ” ಎಂದು ಹೇಳಿದ್ದಾರೆ. ಒಟ್ಟಾರೆ ವಿಶ್ವದ ಅತಿ ಹಳೆಯ ಈ ಸೇತುವೆ ಬಗ್ಗೆ ಹೊಸ ನಕ್ಷೆ ತಯಾರಿಕೆಯಿಂದ ಹಲವಾರು ಅಧ್ಯಯನಗಳು ನಡೆದು ಜಗತ್ತಿಗೆ ಕುತೂಹಲಕಾರಿ ಅಂಶಗಳು ದೊರೆಯಲು ಸ್ವಲ್ಪ ಸಮಯ ಹಿಡಿಯಲಿದೆ.