ಸಿಯೋಲ್, ಜು.5 www.bengaluruwire.com : ಕೆಲಸದ ಒತ್ತಡದಿಂದ ಉದ್ಯೋಗ ಕ್ಷೇತ್ರ ಅಥವಾ ಇನ್ನಿತರ ಕಡೆ ಆತ್ಮಹತ್ಯೆ ಮಾಡಿಕೊಂಡಿರುವ ಅನೇಕ ವರದಿಗಳನ್ನು ಮಾಧ್ಯಮಗಳಲ್ಲಿ ಕೇಳಿರುತ್ತೇವೆ. ಆದರೆ ದಕ್ಷಿಣ ಕೊರಿಯಾದಲ್ಲಿ ವಿಚಿತ್ರವೆಂಬಂತೆ ಕೆಲಸದ ಒತ್ತಡದಿಂದ ರೋಬೋಟ್ ಆತ್ಮಹತ್ಯೆ ಮಾಡಿಕೊಂಡಿದೆ. ಕೊರಿಯಾ ರೋಬೋಟ್ ಆತ್ಮಹತ್ಯೆ ಇಡೀ ವಿಶ್ವದಲ್ಲೇ ಮೊದಲ ಪ್ರಕರಣವಾಗಿದ್ದು, ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.
ದಕ್ಷಿಣ ಕೊರಿಯಾದ ಗುಮಿ ನಗರ ಪಾಲಿಕೆ ಕಚೇರಿಯಲ್ಲಿ ಸೇವೆಯಲ್ಲಿ ತೊಡಗಿಕೊಂಡಿದ್ದ ಈ ರೋಬೋಟ್, ಕಚೇರಿ ಮೆಟ್ಟಿಲುಗಳಿಂದ ಜಿಗಿದಿದೆ. ಪರಿಣಾಮ ಅದರ ಭಾಗಗಳು ಛಿದ್ರ ಛಿದ್ರವಾಗಿ ನಾಶವಾಗಿವೆ. ಬಿಡಿ ಭಾಗಗಳನ್ನು ಸಂಗ್ರಹಿಸಲಾಗಿದ್ದು, ಘಟನೆ ಹಿಂದಿನ ಕಾರಣವನ್ನು ಪರಿಶೀಲಿಸಲಾಗುವುದು ಎಂದು ರೋಬೋಟ್ ತಯಾರಿಸಿದ ಕಂಪೆನಿ ತಿಳಿಸಿದೆ.
‘ಬಹುಮುಖಿ ಕಾರ್ಯ ಮಾಡುತ್ತಿದ್ದ ರೋಬೋಟ್:
ಕ್ಯಾಲಿಫೋರ್ನಿಯಾ ಮೂಲದ ಬೇರ್ ರೋಬೋಟಿಕ್ಸ್ ಕಂಪೆನಿ ಅಭಿವೃದ್ದಿಪಡಿಸಿದ ಈ ರೋಬೋಟ್ 2023ರಿಂದ ಇಲ್ಲಿನ ಗುಮಿ ನಗರ ಪಾಲಿಕೆಯಲ್ಲಿ ಮೊದಲ ಸಿಟಿ ಕೌನ್ಸಿಲರ್ ಆಫೀಸರ್ ಆಗಿ ನೇಮಕಗೊಂಡು ಕಾರ್ಯ ನಿರ್ವಹಿಸುತ್ತಿತ್ತು. ಕಡತಗಳ ವಿತರಣೆ, ನಗರದ ಪ್ರಚಾರ, ಅಗತ್ಯ ಮಾಹಿತಿಗಳ ಪೂರೈಕೆ ಸೇರಿ ಬಹುಮುಖಿಯಾಗಿ ಕೆಲಸ ಮಾಡುತ್ತಿತ್ತು. ರೋಬೋಟ್ ಆತ್ಮಹತ್ಯೆ ದಕ್ಷಿಣ ಕೊರಿಯಾದಲ್ಲೇ ಮೊದಲ ಘಟನೆಯಾಗಿದೆ. ಜಾಲತಾಣಗಳಲ್ಲಿ ರೋಬೋಟ್ ಬಗ್ಗೆ ನೆಟ್ಟಿಗರಿಂದ ವಿಷಾದ, ಅನುಕಂಪದ ಮಾತುಗಳು ಕೇಳಿಬರುತ್ತಿದೆ.
ರೋಬೋಟ್ ‘ಆತ್ಮಹತ್ಯೆ’ ಕುರಿತು ತನಿಖೆ ಪ್ರಾರಂಭವಾಗಿದೆ. ರೋಬೋಟ್ ಕೆಲವು ಮೆಟ್ಟಿಲುಗಳ ಕೆಳಭಾಗದಲ್ಲಿ ನಿಷ್ಕ್ರಿಯವಾಗಿ ಕಂಡುಬಂದಿತು ಮತ್ತು ನಂತರ, ಅದು ಬೀಳುವ ಮೊದಲು ಕಟ್ಟಡದ ಮೇಲೆ ತಿರುಗುತ್ತಿರುವುದನ್ನು ಸಾಕ್ಷಿಗಳು ನೋಡಿದ್ದರಂತೆ ಎಂದು ಸಾಮಾಜಿಕ ಮಾಧ್ಯಮದ ಇನ್ ಫ್ಲುಯೆನ್ಸರ್ (Social Media Influencer) ಟಾಮ್ ವಾಲೆಂಟಿನೋ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.
ರೋಬೋಟ್ ಸರ್ಕಾರಿ ಕಚೇರಿಯಲ್ಲಿ ಬೆಳಿಗ್ಗೆ 9 ರಿಂದ ಸಂಜೆ 6 ರವರೆಗೆ ವಿರಾಮವಿಲ್ಲದೆ ಕೆಲಸ ಮಾಡುತ್ತಿತ್ತು. ರೋಬೋಟ್ ಆತ್ಮಹತ್ಯೆಗೆ ನಿಖರ ಕಾರಣವೇನು ಎಂಬುದನ್ನು ಅರ್ಥಮಾಡಿಕೊಳ್ಳಲು ಅದನ್ನು ವಿನ್ಯಾಸಗೊಳಿಸಿದ ಕಂಪನಿಯು ಅದರ ಭಾಗಗಳನ್ನು ವಿಶ್ಲೇಷಿಸುತ್ತಿದೆ ಎಂದು ಅವರು ಹೇಳಿದ್ದಾರೆ.