ಬೆಂಗಳೂರು, ಜು.04 www.bengaluruwire.com : ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಹಲವು ಮಹತ್ವದ ವಿಷಯಗಳ ಬಗ್ಗೆ ಚರ್ಚೆ ಮಾಡಲಾಗಿದೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ಸಂಭವಿಸಿದ ಅಗ್ನಿ ಅವಘಡದಲ್ಲಿ ನಿಧನರಾದ ಅಧೀಕ್ಷಕ ಅಭಿಯಂತರ ಹಾಗೂ ಪ್ರಭಾರ ಮುಖ್ಯ ಅಭಿಯಂತರರಾದ ಸಿ.ಎಂ ಶಿವಕುಮಾರ್ ಇವರಿಗೆ 50 ಲಕ್ಷ ರೂ.ಗಳ ಪರಿಹಾರ ಹಾಗೂ ಅವರ ಅವಲಂಬಿತರಿಗೆ ಸರ್ಕಾರಿ ಉದ್ಯೋಗ ನೀಡಲು ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಅನುಮೋದಿಸಲಾಗಿದೆ.
ಮತ್ತು ಪ್ರಕರಣದಲ್ಲಿ ತೀವ್ರ ಗಾಯಗೊಂಡ ಉಳಿದವರಿಗೆ ಪರಿಹಾರ ಧನವನ್ನು ಇಲಾಖಾ ಸಚಿವರ ಅನುಮೋದನೆಯೊಂದಿಗೆ ನಿರ್ಧರಿಸಿ, ಸರ್ಕಾರಿ ಉದ್ಯೋಗವನ್ನು ನೀಡಲು ಸಚಿವ ಸಂಪುಟ ತೀರ್ಮಾನಿಸಿದೆ. ಕ್ಯಾಬಿನೆಟ್ ನಲ್ಲಿ ಚರ್ಚೆಯಾದ ಹಲವು ನಿರ್ಧಾರಗಳ ಬಗ್ಗೆ ಸಚಿವ ಹೆಚ್.ಕೆ ಪಾಟೀಲ್ ಮಾಧ್ಯಮದವರೊಂದಿಗೆ ಮಾತನಾಡಿ, ಕೌನ್ಸೆಲಿಂಗ್ ಮೂಲಕ ಉಪನೋಂದಣಾಧಿಕಾರಿಗಳ (Sub registrar) ವರ್ಗಾವಣೆ ಬಗ್ಗೆ ಸಂಪುಟ ಸಭೆಯಲ್ಲಿ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ ಎಂದರು.
ಕೌನ್ಸೆಲಿಂಗ್ ಮೂಲಕ ಸಬ್ರಿಜಿಸ್ಟ್ರಾರ್ ವರ್ಗಾವಣೆ ಬಗ್ಗೆ ಸಂಪುಟ ಸಭೆಯಲ್ಲಿ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ. ಇದುವರೆಗೂ ನೇರವಾಗಿ ಸಬ್ ರಿಜಿಸ್ಟ್ರಾರ್ ವರ್ಗಾವಣೆ ಮಾಡಲಾಗುತ್ತಿತ್ತು. ಈಗಿನಿಂದಲೇ ಕೌನ್ಸೆಲಿಂಗ್ ಮೂಲಕ ವರ್ಗಾವಣೆಗೆ ಸರ್ಕಾರ ನಿರ್ಧರಿಸಿದೆ. ಆ ಮೂಲಕ ಅಕ್ರಮ ಹಾಗೂ ಭ್ರಷ್ಟಾಚಾರ ತಡೆಗಟ್ಟಲು ವರ್ಗಾವಣೆಗೆ ಹೊಸ ನೀತಿ ಜಾರಿ ಮಾಡಲಾಗಿದೆ.
ನೋಂದಣಿ ಇಲಾಖೆಯಲ್ಲಿ ವರ್ಗಾವಣೆ ಪಾರದರ್ಶಕ ಮಾಡಲು ಕೌನ್ಸೆಲಿಂಗ್ ಪದ್ದತಿಯನ್ನು ಜಾರಿಗೆ ತರುತ್ತಿದ್ದೇವೆ. ಎಫ್.ಡಿಎ ಹೊರತುಪಡಿಸಿ ಸಬ್ ರಿಜಿಸ್ಟ್ರಾರ್ಗಳಿಗೆ ವರ್ಗಾವಣೆ ಆಗಲಿದೆ. ಕಾರ್ಪೋರೇಷನ್ ಏರಿಯಾದಲ್ಲಿ ಇರುವ ಸಬ್ ರಿಜಿಸ್ಟ್ರಾರ್ಗಳಿಗೆ ವರ್ಗಾವಣೆ ಕೌನ್ಸೆಲಿಂಗ್ ಅನ್ನು ಇಲಾಖೆಯೇ ನೋಡಿಕೊಳ್ಳಲಿದೆ. ಆ ಮೂಲಕ ಪಾರದರ್ಶಕತೆ ತರಲು ಇದರಿಂದ ಸಾಧ್ಯವಾಗುತ್ತದೆ. ಶೋಷಣೆ ಮುಕ್ತ ವ್ಯವಸ್ಥೆ ರೂಪುಗೊಳ್ಳಲು ಮಹತ್ವದ ನಿರ್ಣಯ ಕೈಗೊಳ್ಳಲಾಗಿದೆ ಎಂದರು.
ನಗರ ಮತ್ತು ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಸಂಬಂಧಿಸಿದಂತೆ ನಗರಾಭಿವೃದ್ಧಿ ಇಲಾಖೆ ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‍ರಾಜ್ ಇಲಾಖೆಯ ಚುನಾವಣಾ ಘಟಕಗಳನ್ನು ಆಯಾ ಇಲಾಖೆಗಳ ನಿಯಂತ್ರಣದಲ್ಲಿ ಉಳಿಸಲಾಗುತ್ತದೆ. ಪ್ರಸ್ತುತ ಚಾಲ್ತಿಯಲ್ಲಿರುವ ವ್ಯವಸ್ಥೆಯನ್ನು ಮುಂದುವರೆಸಲು ಸಚಿವ ಸಂಪುಟ ನಿರ್ಣಯಿಸಿದೆ. ಈ ನಿಟ್ಟಿನಲ್ಲಿ ಜಸ್ಟೀಸ್ ಡಾ.ಕೆ ಭಕ್ತವತ್ಸಲ ಆಯೋಗವು ಮಾಡಿರುವ ಶಿಫಾರಸ್ಸನ್ನು ಕೈಬಿಡುವ ತೀರ್ಮಾನಿಸಲಾಗಿದೆ.
ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಗೆ 840 ಸಂಖ್ಯೆಯ BS-6 ಡೀಸೆಲ್ ಬಸ್ಸುಗಳನ್ನು ಒಟ್ಟು 363.82 ಕೋಟಿಗಳ ವೆಚ್ಚದಲ್ಲಿ ಖರೀದಿಸಲು ಆಡಳಿತಾತ್ಮಕ ಅನುಮೋದನೆ ನೀಡುವ ಬಗ್ಗೆ ಸಂಪುಟ ಸಭೆಯಲ್ಲಿ ನಿರ್ಣಯಿಸಲಾಗಿದೆ.
ಕರ್ನಾಟಕ ಆಡಳಿತ ಸೇವೆ ಅಧಿಕಾರಿಗಳ ಸಂಘಕ್ಕೆ ಇನ್‍ಫೆಂಟ್ರಿ ರಸ್ತೆಯಲ್ಲಿ ನೀಡಿರುವ 120*150 ಅಡಿ ನಿವೇಶನದ ಗುತ್ತಿಗೆ ಅವಧಿಯನ್ನು ಜುಲೈ 2023ರಿಂದ ಪೂರ್ವಾನ್ವಯವಾಗುವಂತೆ 30 ವರ್ಷಗಳ ಗುತ್ತಿಗೆ ಅವಧಿಗೆ ವಿವಿಧ ಷರತ್ತಿಗೊಳಪಟ್ಟು ಮುಂದುವರೆಸಲು ಹಾಗೂ ವಾರ್ಷಿಕ 10,000 ರೂ.ಗಳಂತೆ ಗುತ್ತಿಗೆ ಬಾಡಿಗೆಯನ್ನು ಹೆಚ್ಚಿಸಲು ಸಚಿವ ಸಂಪುಟ ಒಪ್ಪಿದೆ.