ಬೆಂಗಳೂರು, ಜು.03 www.bengaluruwire.com : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ವ್ಯಾಪ್ತಿಯಲ್ಲಿ ಆಸ್ತಿ ತೆರಿಗೆ ಹೆಚ್ಚಳದ ಕುರಿತು ಇತ್ತೀಚೆಗೆ ಕೆಲ ಮಾಧ್ಯಮಗಳಲ್ಲಿ ವರದಿಯಾಗಿದ್ದು, ಆಸ್ತಿ ತೆರಿಗೆ ಹೆಚ್ಚಳದ ಸಂಬಂಧ ಯಾವುದೇ ಪ್ರಸ್ತಾವನೆಯಾಗಲಿ, ಚಿಂತನೆಯಾಗಲಿ ಇರುವುದಿಲ್ಲವೆಂದು ಪಾಲಿಕೆ ಸ್ಪಷ್ಟೀಕರಿಸಿದೆ.
ಪಾಲಿಕೆ ವ್ಯಾಪ್ತಿಯಲ್ಲಿ ಆಸ್ತಿ ತೆರಿಗೆ ಹೆಚ್ಚಳ ವಿಚಾರವಾಗಿ ಯಾವುದೇ ಪ್ರಸ್ತಾವನೆ ಇರುವುದಿಲ್ಲ. ಈ ರೀತಿಯ ಊಹಾಪೋಹಗಳಿಗೆ ಯಾರೂ ಕಿವಿಗೊಡಬಾರದೆಂದು ಕಂದಾಯ ವಿಭಾಗದ ವಿಶೇಷ ಆಯುಕ್ತರಾದ ಮುನೀಶ್ ಮೌದ್ಗಿಲ್ ರವರು ನಾಗರೀಕರಲ್ಲಿ ಮನವಿ ಮಾಡಿರುತ್ತಾರೆ.
ಬೃಹತ್ ಕಟ್ಟಡಗಳಿಗೆ ಒಟಿಎಸ್ ಯೋಜನೆ ನೀಡಿರುವ ಪಾಲಿಕೆ :
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಬೃಹತ್ ಕಟ್ಟಡಗಳ ಆಸ್ತಿತೆರಿಗೆ ವ್ಯತ್ಯಾಸ ಕಂಡುಬಂದ ಪ್ರಕರಣಗಳಲ್ಲಿ ಟೋಟಲ್ ಸ್ಟೇಷನ್ ಸರ್ವೆ ಕಾರ್ಯಕ್ಕೆ ಒಳಪಡಿಸಿದಾಗ 105 ಕಟ್ಟಡಗಳಲ್ಲಿ ಘೋಷಣೆಗಳಲ್ಲಿ ವ್ಯತ್ಯಾಸ ಕಂಡುಬಂದಿದೆ. ಈ ಮಾಹಿತಿ ಆಧರಿಸಿ, ಆಸ್ತಿತೆರಿಗೆ ಪರಿಷ್ಕರಿಸಿ ನೋಟಿಸ್ ಜಾರಿ ಮಾಡಲಾಗಿರುತ್ತದೆ. ಇಂತಹ ಸ್ವತ್ತುಗಳಿಗೆ ರಾಜ್ಯ ಸರ್ಕಾರ ನಗರದ ಸ್ವತ್ತಿನ ಮಾಲೀಕರಿಗೆ ಜಾರಿಗೆ ತಂದ ಒಂದು ಬಾರಿ ಪರಿಹಾರ ಯೋಜನೆ (One Time Settelement – OTS Scheme)ಯನ್ನು ಈ ಸ್ವತ್ತುಗಳ ಮಾಲೀಕರಿಗೂ ನೀಡಲು ಬಿಬಿಎಂಪಿ ನಿರ್ಧರಿಸಿದೆ.
ಈ ಒಟಿಎಸ್ ಯೋಜನೆಯ ಅನ್ವಯ ಆಸ್ತಿತೆರಿಗೆ (ಇತರ ವಿಧಿಸುವಿಕೆಯೊಂದಿಗೆ) ಲೆಕ್ಕಾಚಾರ ಮಾಡಿ ಜು.15ರ ಒಳಗಾಗಿ ಬಾಕಿ ಆಸ್ತಿತೆರಿಗೆಯನ್ನು ಪಾವತಿಸುವಂತೆ ತೆರಿಗೆದಾರರಿಗೆ ಬೇಡಕೆ ಸೂಚನಾ ಪತ್ರವನ್ನು ಜಾರಿ ಮಾಡಿ, ಈ ಯೋಜನೆಯ ಸದುಪಯೋಗವನ್ನು ಪಡೆದುಕೊಳ್ಳುವಂತೆ ತಿಳಿಸುವಂತೆ ಕಂದಾಯ ವಿಭಾಗದ ವಿಶೇಷ ಆಯುಕ್ತರಾದ ಮುನೀಶ್ ಮೌದ್ಗಿಲ್ ರವರು ಎಲ್ಲಾ ವಲಯಗಳ ಆಯುಕ್ತರು ಹಾಗೂ ಜಂಟಿ ಆಯುಕ್ತರಿಗೆ ಜು.2ರಂದು ಪತ್ರ ಬರೆದು ಸೂಚಿಸಿದ್ದಾರೆ.
ಈ ರೀತಿ ಸರ್ವೆ ಕಾರ್ಯಕ್ಕೆ ಒಳಪಡಿಸಿರುವ ಸ್ವತ್ತುಗಳ ಘೋಷಣೆಯಲ್ಲಿ ವ್ಯತ್ಯಾಸ ಕಂಡುಬಂದ ಪ್ರಕರಣಗಳಲ್ಲಿ ನೋಟಿಸ್‌ಗಳಿಗೆ ಕೆಲವು ತೆರಿಗೆದಾರರು ಪರಿಷ್ಕೃತ ಆಸ್ತಿತೆರಿಗೆಯನ್ನು ಪಾವತಿಸಿರುತ್ತಾರೆ. ಇನ್ನು ಕೆಲವು ತೆರಿಗೆದಾರರು ಆಸ್ತಿತೆರಿಗೆ ಪರಿಷ್ಕರಣೆಯನ್ನು ಪ್ರಶ್ನಿಸಿ ವಿವಿಧ ನ್ಯಾಯಾಲಯಗಳಲ್ಲಿ ಮೇಲ್ಮನವಿ ಸಲ್ಲಿಸಿದ್ದರು. ತೆರಿಗೆಯನ್ನು ಪಾವತಿಸದೇ ಬಾಕಿ ಉಳಿಸಿಕೊಂಡಿದ್ದರು. ಹೀಗೆ ವಿಧಿಸಿರುವ ಬಡ್ಡಿ ಮತ್ತು ದುಪ್ಪಟ್ಟು ದಂಡದ ಮೊತ್ತವನ್ನು ಕಡಿಮೆ ಮಾಡಿದ್ದಲ್ಲಿ ಪರಿಷ್ಕೃತ ಆಸ್ತಿತೆರಿಗೆ ಪಾವತಿಸುವುದಾಗಿ ಹೇಳಿದ್ದರು. ಹೀಗಾಗಿ ಈ ಬೃಹತ್ ಕಟ್ಟಡ ಮಾಲೀಕರಿಗೆ ಒಟಿಎಸ್ ಯೋಜನೆ ಸೌಲಭ್ಯ ನೀಡಲು ಪಾಲಿಕೆ ತೀರ್ಮಾನಿಸಿದೆ.
ಫೆ.22ರಂದು ಜಾರಿಗೆ ಬಂದ ಒಟಿಎಸ್ ಯೋಜನೆಯಡಿ ಆಸ್ತಿತೆರಿಗೆ ವಿಳಂಬ ಪಾವತಿಗೆ ವಿಧಿಸುವ ಬಡ್ಡಿಯನ್ನು ಮನ್ನ ಮಾಡಲಾಗಿರುತ್ತದೆ ಹಾಗೂ ಆಸ್ತಿತೆರಿಗೆ ಪರಿಷ್ಕರಣೆ ಪ್ರಕರಣಗಳಲ್ಲಿ ವ್ಯತ್ಯಾಸದ ಆಸ್ತಿತೆರಿಗೆಗೆ ದಂಡದ ರೂಪದಲ್ಲಿ ವಿಧಿಸುತ್ತಿದ್ದ ದುಪ್ಪಟ್ಟು ಮೊತ್ತವನ್ನು ಒಂದು ಪಟ್ಟಿಗೆ ಇಳಿಸಲಾಗಿರುತ್ತದೆ.
ಈ ಯೋಜನೆಯು ಜು.31ಕ್ಕೆ ಮುಕ್ತಾಯಗೊಳ್ಳುತ್ತಿದ್ದು, ಈ ಯೋಜನೆ ಅಡಿಯಲ್ಲಿ ಮೇಲ್ಕಂಡ ಪ್ರಕರಣಗಳಿಂದ (ಟಿಎಸ್‌ಎಸ್ ಪ್ರಕರಣಗಳಿಂದ) ಬಾಕಿ ಇರುವ ಆಸ್ತಿತೆರಿಗೆಯನ್ನು ವಸೂಲಾತಿ ಮಾಡಲು ಕ್ರಮ ಕೈಗೊಳ್ಳುವಂತೆ ತಿಳಿಸಿದೆ. ಈ ಸಂಬಂಧ ಕೈಗೊಂಡ ಕ್ರಮದ ಅಂಕಿ-ಅಂಶಗಳನ್ನು ದೈನಂದಿನ ಪ್ರಗತಿ ಪರಿಶೀಲನಾ ಸಭೆಯಲ್ಲಿ ಪರಿಶೀಲಿಸಲಾಗುವುದು.
ಜು.29 ರ ತನಕ ಒಟ್ಟಾರೆ 1,645.63 ಕೋಟಿ ರೂ. ಆಸ್ತಿ ತೆರಿಗೆ ಸಂಗ್ರಹ :
ಪಾಲಿಕೆ ವ್ಯಾಪ್ತಿಯಲ್ಲಿ 2024-25ನೇ ಸಾಲಿನಲ್ಲಿ ಒಟ್ಟಾರೆ 5,210 ಕೋಟಿ ರೂ. ಆಸ್ತಿ ತೆರಿಗೆ ಗುರಿಯಿದ್ದು, ಜು.29 ರ ತನಕ ಒಟ್ಟಾರೆ 1,645.63 ಕೋಟಿ ರೂ. ಆದಾಯ ಸಂಗ್ರಹವಾಗಿದೆ. ಅಂದರೆ ಶೇ.31.59ರಷ್ಟು ತೆರಿಗೆ ಸಂಗ್ರಹವಾಗಿದೆ. ಕಳೆದ ವರ್ಷಕ್ಕೆ ಇದೇ ಅವಧಿಗೆ ಹೋಲಿಸಿದಲ್ಲಿ ಪ್ರಾಪರ್ಟಿ ಟ್ಯಾಕ್ಸ್ ಕಲೆಕ್ಷನ್ ಶೇ.28.06ರಷ್ಟು ಕಡಿಮೆಯಾಗಿದೆ ಎಂದು ಬಿಬಿಎಂಪಿ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ. ವಾರ್ಷಿಕ ಗುರಿಗೆ ಆಧಾರಿತವಾಗಿ ಪ್ರತಿದಿನ ಪಾಲಿಕೆಯ ಎಲ್ಲಾ ವಲಯಗಳಿಂದ 12.96 ಕೋಟಿ ರೂ. ಸಂಗ್ರಹದ ಗುರಿಯನ್ನು ಪಾಲಿಕೆ ಕಂದಾಯ ಸಿಬ್ಬಂದಿಗೆ ನೀಡಲಾಗಿದೆ.
2023-24ನೇ ಆರ್ಥಿಕ ಸಾಲಿನಲ್ಲಿ ಪಾಲಿಕೆ ಕಂದಾಯ ವಿಭಾಗದಿಂದ 3917.60 ಕೋಟಿ ರೂ. ಆಸ್ತಿ ತೆರಿಗೆ ಸಂಗ್ರಹಿಸಲಾಗಿತ್ತು. ಸರಿಯಾಗಿ ಕಟ್ಟಡದ ವಿಸ್ತೀರ್ಣಕ್ಕೆ ತಕ್ಕಂತೆ ಆಸ್ತಿ ತೆರಿಗೆ ಘೋಷಿಸದ ಪ್ರಕರಣಗಳಲ್ಲಿ ಪಾಲಿಕೆ ಕಂದಾಯ ಸಿಬ್ಬಂದಿ ಪರಿಶೀಲಿಸಿ ಈ ಆರ್ಥಿಕ ವರ್ಷದಲ್ಲಿ ಆಸ್ತಿ ವಿಸ್ತೀರ್ಣಕ್ಕೆ ಹೋಲಿಸಿದಾಗ, ತೆರಿಗೆ ಘೊಷಣೆಯಲ್ಲಿ ವ್ಯತ್ಯಾಸ ಕಂಡುಬಂದ 2097 ಪ್ರಕರಣಗಳಲ್ಲಿ ಆಸ್ತಿ ತೆರಿಗೆ ಪರಿಷ್ಕರಿಸಿ 46.86 ಕೋಟಿ ರೂ. ಮೊತ್ತದ ಬೇಡಿಕೆ ನೋಟಿಸ್ ಗಳನ್ನು ಪಾಲಿಕೆ ಕಂದಾಯ ಸಿಬ್ಬಂದಿ ನೀಡಿದ್ದಾರೆ. 15.30 ಕೋಟಿ ರೂ.ಗಳನ್ನು ಸಂಗ್ರಹಿಸಲಾಗಿದೆ ಎಂದು ಪಾಲಿಕೆ ಅಧಿಕಾರಿಗಳು ತಿಳಿಸಿದ್ದಾರೆ.