ಬೆಂಗಳೂರು, ಜು.01 www.bengaluruwire.com : ರಾಜಧಾನಿ ಬೆಂಗಳೂರಿನ ಸ್ಥಳೀಯಾಡಳಿತ ಸಂಸ್ಥೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ಅಕ್ಟೋಬರ್ ವೇಳೆಗೆ ಚುನಾವಣೆ ನಡೆಯುವ ಬಗ್ಗೆ ರಾಜ್ಯದಲ್ಲಿನ ಆಡಳಿತರೂಢ ಕಾಂಗ್ರೆಸ್ ನಾಯಕರು ಹೇಳಿಕೆ ನೀಡುತ್ತಿದ್ದಾರೆ. ಒಂದೊಮ್ಮೆ 225 ವಾರ್ಡ್ ಗಳಿಗೆ ಪಾಲಿಕೆ ಚುನಾವಣೆ ನಡೆದಲ್ಲಿ, ಮಾಸಿಕ ಸಭೆ ನಡೆಯಲು ಕೌನ್ಸಿಲ್ ಸಭಾಂಗಣ ನವವಧುವಿನಂತೆ ಸಿದ್ಧವಾಗುತ್ತಿದೆ. ಜುಲೈ ಅಂತ್ಯದ ವೇಳೆಗೆ ಹೊಸ ರೂಪದ ನಾಡಪ್ರಭು ಕೆಂಪೇಗೌಡ ಪೌರಸಭಾಂಗಣ ಸಿದ್ಧವಾಗಲಿದೆ.
ಪ್ರಸ್ತುತ ಶೇ.90ರಷ್ಟು ಕಾಮಗಾರಿಗಳು ಪೂರ್ಣಗೊಂಡಿದ್ದು ಸಂಸದರು, ರಾಜ್ಯ ಸಭಾ ಸದಸ್ಯರು, ಶಾಸಕರು, ವಿಧಾನಪರಿಷತ್ ಸದಸ್ಯರು, ನಾಮನಿರ್ದೇಶಿತ ಕಾರ್ಪೊರೇಟರ್ ಗಳು ಹಾಗೂ 225 ಕಾರ್ಪೊರೇಟರ್ ಗಳು ಹಾಗೂ ಅಧಿಕಾರಿಗಳು ಸೇರಿದಂತೆ ಒಟ್ಟಾರೆ 320 ಆಸನದ ವ್ಯವಸ್ಥೆ ಕಲ್ಪಿಸಲಾಗುತ್ತಿದೆ. ಈ ಹಿಂದೆ, ಸಭಾಂಗಣದಲ್ಲಿ 270 ಆಸನ ಸಾಮರ್ಥ್ಯವಿತ್ತು, ಇದು ನಗರದಲ್ಲಿ 198 ವಾರ್ಡ್‌ಗಳಿದ್ದ ಕಾರಣ ಸಾಕಾಗಿತ್ತು. ಆದರೆ, ಈಗ ಆಸನ ಸಾಮರ್ಥ್ಯವನ್ನು ವಿಸ್ತರಿಸಿದೆ. ಮಾಧ್ಯಮದವರು ಮತ್ತು ಸಾರ್ವಜನಿಕರಿಗೆ ಪ್ರತ್ಯೇಕ ಆಸನದ ವ್ಯವಸ್ಥೆಯಿರಲಿದೆ.
ಸರಕು ಮತ್ತು ಸೇವಾ ತೆರಿಗೆ ಸೇರಿದಂತೆ ಒಟ್ಟಾರೆ 9.77 ಕೋಟಿ ರೂ. ವೆಚ್ಚದ ಈ ಕಾಮಗಾರಿಯನ್ನು ಡ್ರೀಮ್ಸ್ ಇಂಟೀರಿಯರ್ಸ್ ಎಂಬ ಸಂಸ್ಥೆಗೆ ಜುಲೈ 2022ರಂದು 6 ತಿಂಗಳ ಒಳಗಾಗಿ ಕೌನ್ಸಿಲ್ ಸಭಾಂಗಣದ ಮರು ವಿನ್ಯಾಸ ಕಾಮಗಾರಿಯ ಕಾರ್ಯಾದೇಶವನ್ನು ನೀಡಲಾಗಿತ್ತು. ಆರು ತಿಂಗಳ ಬದಲಿಗೆ 2023ರ ಜನವರಿ ಕಾಮಗಾರಿ ಮುಗಿಯಬೇಕಿತ್ತು. ಆದರೆ 2024ರ ಜೂನ್ ತಿಂಗಳು ಮುಗಿಯುತ್ತಾ ಬರುವ ಹೊತ್ತಿಗೆ ಶೇ.90ರಷ್ಟು ಕೆಲಸಗಳು ಪೂರ್ಣವಾಗಿದೆ.
320ರ ಜನರು ಕುಳಿತುಕೊಳ್ಳಲು ಸಾಗುವನಿ ಮರದ ಕುರ್ಚಿಗಳು ಸಿದ್ಧವಾಗಿದೆ. ಸಾಗುವಾನಿ ಮರದ ಮೇಜಿನ ಕೆಲಸ ಮುಗಿದಿದ್ದು, ಸಂಪೂರ್ಣ ಸಭಾಂಗಣವನ್ನು ಸ್ವಚ್ಛಗೊಳಿಸಿ ನಂತರ ಪಾಲಿಷಿಂಗ್ ಕೆಲಸ ಮಾಡಿ, ಸಿದ್ಧವಾಗಿರುವ ಸಾಗುವಾನಿ ಕುರ್ಚಿಗಳನ್ನು ನಟ್ ಆಗಿ ಶಾಶ್ವತವಾಗಿ ಮೇಜಿನ ಹಿಂಭಾಗ ಅಳವಡಿಸುವ ಕೆಲಸಗಳು ಸೇರಿದಂತೆ ಸಣ್ಣಪುಟ್ಟ ಕೆಲಸಗಳು ಬಾಕಿ ಉಳಿದಿದೆ ಜುಲೈ ತಿಂಗಳ ಅಂತ್ಯದ ವೇಳೆಗೆ ಸಂಪೂರ್ಣ ಕಾಮಗಾರಿ ಪೂರ್ಣವಾಗಲಿದೆ ಎಂದು ಬಿಬಿಎಂಪಿ ಅಧಿಕಾರಿಗಳು ಬೆಂಗಳೂರು ವೈರ್ ಗೆ ತಿಳಿಸಿದ್ದಾರೆ.
ಸಭಾಂಗಣದಲ್ಲಿ ನೆರಳು ಬೀಳದಂತೆ ಲೈಟಿಂಗ್ ವ್ಯವಸ್ಥೆ, ಸಭೆಯಲ್ಲಿ ಪ್ರತಿಯೊಂದು ಆಸನದ ಮುಂದೆ ಆಮದು ಮಾಡಿಕೊಂಡ ಮೈಕ್ರೋ ಫೋನ್ ಅಳವಡಿಸಲು ವ್ಯವಸ್ಥೆ ಕಲ್ಪಿಸಲಾಗಿದೆ, ಸದಸ್ಯರು ಮಾತನಾಡಿದ್ದು, ಪ್ರತಿಧ್ವನಿಸದೆ, ಸರಿಯಾಗಿ ಕೇಳಿಸುವಂತೆ (Sound Proofing) ಹೊಸ ಕೌನ್ಸಿಲ್ ಸಭಾಂಗಣವನ್ನು ಸಿದ್ಧಪಡಿಸಲಾಗಿದೆ. ಸಿಸಿಟಿವಿ ಕ್ಯಾಮೆರಾಗಳು ಇರುತ್ತವೆ. ಸಂಪೂರ್ಣ ಹವಾನಿಯಂತ್ರಿತ ಸಭಾಂಗಣ ವಿನ್ಯಾಸ ಮಾಡಲಾಗಿದೆ. ಬಹಳ ನಾಜೂಕಾಗಿ ಕೌನ್ಸಿಲ್ ಕಟ್ಟಡದ ಮೂಲ ವಿನ್ಯಾಸಕ್ಕೆ ಧಕ್ಕೆಯಾಗಂತೆ ಎಚ್ಚರಿಕೆ ವಹಿಸಿ ಸಭಾಂಗಣವನ್ನು ಮರು ವಿನ್ಯಾಸಗೊಳಿಸಲಾಗಿದೆ.
“ಬೆಂಗಳೂರು ವೈರ್” ಡಿಜಿಟಲ್ ವೆಬ್ ನ್ಯೂಸ್ ಪೋರ್ಟೆಲ್ಲಿನ ಸೋಶಿಯಲ್ ಮೀಡಿಯಾ ಪೇಜ್ ಹಾಗೂ Google News ಗಳಿಗೆ ಉಚಿತವಾಗಿ Subscribe ಆಗಲು Facebook, Telegram, Twitter, Dailyhunt, Youtube, Whatsup Channel ಗೆ ಜಾಯಿನ್ ಆಗಲು ಇವುಗಳ ಲಿಂಕ್ ಮೇಲೆ ಕ್ಲಿಕ್ ಮಾಡಿ.
.