ಬೆಂಗಳೂರು, ಜೂ.30 www.bengaluruwire.com : ಮೈಸೂರು ರಸ್ತೆಯಿಂದ ಹೊಸಕೆರೆಹಳ್ಳಿ ನೈಸ್ ರಸ್ತೆ ಟೋಲ್ ರಸ್ತೆಗೆ ಲಿಂಕ್ ರಸ್ತೆ ನಿರ್ಮಾಣ ಬಹುದಿನಗಳಿಂದ ಬಾಕಿ ಉಳಿದಿತ್ತು. ಆ ಬಾಕಿ ಕಾಮಗಾರಿ ಇದೀಗ ಕಳೆದ ಒಂದು ತಿಂಗಳಿಂದ ಆರಂಭವಾಗಿದ್ದು,ಬಿಎಚ್ ಇಎಲ್ ಜಂಕ್ಷನ್ ನಿಂದ ಚಾಲನೆ ದೊರೆತಿದೆ. ಈ ಲಿಂಕ್ ರಸ್ತೆ ಪೂರ್ಣವಾದರೆ ವಾಹನ ಸವಾರರ 55 ನಿಮಿಷ ಉಳಿತಾಯವಾಗಲಿದೆ.
ಹೊಸಕೆರೆಹಳ್ಳಿ ಟೋಲ್ ಪ್ಲಾಜಾದಿಂದ ಮೈಸೂರು ರಸ್ತೆ ಬಿಎಚ್ ಇಎಲ್ ಜಂಕ್ಷನ್ ಮಧ್ಯದ 1.4 ಕಿ.ಮೀ ಉದ್ದ ರಸ್ತೆಯ ಪೈಕಿ 60 ಮೀಟರ್ ಅಗಲದ 1 ಕಿ.ಮೀ ರಸ್ತೆಯನ್ನು 12 ವರ್ಷಗಳ ಹಿಂದೆಯೇ ನೈಸ್ ಅಭಿವೃದ್ಧಿಪಡಿಸಿತ್ತು. ಆದರೆ ಪಿಇಎಸ್ ಕಾಲೇಜು ಜಂಕ್ಷನ್ ನಿಂದ ಬಿಎಚ್ ಇಎಲ್ ಜಂಕ್ಷನ್ ತನಕದ 400 ಮೀ. ರಸ್ತೆ ಕಾಮಗಾರಿಗಾಗಿ ಎರಡು ಕಡೆಗಳಲ್ಲಿ, ಸರ್ಕಾರದ ಭೂಮಿ ನೈಸ್ ಗೆ ಹಸ್ತಾಂತರಿಸದ ಕಾರಣ ಲಿಂಕ್ ರಸ್ತೆ ಅಪೂರ್ಣವಾಗಿತ್ತು. ವೃಷಭಾವತಿ ರಾಜಕಾಲುವೆಯ ಮೇಲೆ ಸೇತುವೆ ನಿರ್ಮಿಸಿ ಹಲವು ವರ್ಷಗಳಾಗಿತ್ತು.
ನೈಸ್ ಲಿಂಕ್ ರಸ್ತೆಗೆ ಸಂಪರ್ಕ ಕಲ್ಪಿಸುವ ಹಾದಿಯಲ್ಲಿ ಕೆಲವು ಜಾಗ ಕೈಗಾರಿಕೆ ಇಲಾಖೆ ನೈಸ್ ರಸ್ತೆಗೆ ಜಾಗ ಬಿಟ್ಟುಕೊಡಲು ಒಪ್ಪಿರಲಿಲ್ಲ. ಹೀಗಾಗಿ ಕಾಮಗಾರಿ ಅರ್ಧಕ್ಕೆ ನಿಂತಿತ್ತು. ಇತ್ತೀಚೆಗಷ್ಟೆ ಮುಖ್ಯಮಂತ್ರಿ ಸಿದ್ದರಾಮಯ್ಯ ನಗರ ಪ್ರದಕ್ಷಿಣೆ ಕೈಗೊಂಡ ಸಂದರ್ಭದಲ್ಲಿ ಗಾಳಿ ಆಂಜನೇಯ ದೇವಸ್ಥಾನದ ಬಳಿಯ ರಾಜಕಾಲುವೆ ಪರಿಶೀಲನೆ ಸಂದರ್ಭದಲ್ಲಿ ಕೈಗಾರಿಕಾ ಇಲಾಖೆ ಅಧಿಕಾರಿಗಳು ಜಾಗವನ್ನು ನೈಸ್ ಗೆ ಒದಗಿಸದ ಕಾರಣಕ್ಕೆ ಅರ್ಧಕ್ಕೆ ನಿಂತಿರುವ ನೈಸ್ ಕಾಮಗಾರಿ ಮುಗಿಸಲು ಭೂಮಿ ಒದಗಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದರು. ಆನಂತರ ಸರ್ಕಾರಿ ಜಾಗವನ್ನು ನೈಸ್ ಗೆ ಹಸ್ತಾಂತರಿಸಿದ ಮೇಲೆ ಲಿಂಕ್ ರಸ್ತೆ ಕಾಮಗಾರಿ ವೇಗ ಪಡೆದುಕೊಂಡಿದೆ.
ಹೊಸ ಲಿಂಕ್ ರಸ್ತೆಯಿಂದ 55 ನಿಮಿಷ ಸಮಯ ಉಳಿತಾಯ :
ಸದ್ಯ ವಾಹನ ದಟ್ಟಣೆ ಅವಧಿಯಲ್ಲಿ ಬಿಎಚ್ ಇಎಲ್ ಜಂಕ್ಷನ್ ನಿಂದ ವಾಹನಗಳು ಸಾಮಾನ್ಯ ರಸ್ತೆಯಲ್ಲಿ ಸಾಗಿ ಮೈಸೂರು ರಸ್ತೆ ನೈಸ್ ಜಂಕ್ಷನ್ ತನಕ ಸಾಗಲು ಒಂದೂ ಕಾಲು ಗಂಟೆ ಹಿಡಿಯುತ್ತದೆ. ಆದರೆ ಮೈಸೂರು ರಸ್ತೆ ಬಿಎಚ್ ಇಎಲ್ ಜಂಕ್ಷನ್ ನೈಸ್ ಲಿಂಕ್ ರಸ್ತೆ ಪೂರ್ಣಗೊಂಡ ಮೇಲೆ, ಆ ರಸ್ತೆಯಿಂದ ಹೊಸಕೆರೆಹಳ್ಳಿ ನೈಸ್ ರಸ್ತೆಯ ಟೋಲ್ ಮೂಲಕ ಪ್ರವೇಶ ಪಡೆದು ಮೈಸೂರು ರಸ್ತೆ ನೈಸ್ ಜಂಕ್ಷನ್ ಬಳಿಯ ಗಣಪತಿ ದೇವಸ್ಥಾನದ ಬಳಿಯ ಎಕ್ಸ್ ಪ್ರೆಸ್ ವೇ ರಸ್ತೆಯನ್ನು ಕೇವಲ 20 ನಿಮಿಷದಲ್ಲಿ ತಲುಪಬಹುದು. ಇದರಿಂದ ವಾಹನ ಸವಾರರ 55 ನಿಮಿಷ ಒಂದು ಮಾರ್ಗದಲ್ಲಿ ಸಮಯ ಉಳಿತಾಯವಾಗುತ್ತದೆ.
ಆದರೆ ಪ್ರಸ್ತುತ ಬಿಎಚ್ ಇಎಲ್ ಜಂಕ್ಷನ್, ನಾಯಂಡಹಳ್ಳಿ ಜಂಕ್ಷನ್ (ಮೇಲ್ಸತುವೆ ಹೊರತುಪಡಿಸಿ), ಆರ್.ಆರ್.ನಗರ ಸಿಗ್ನಲ್, ಬೆಂಗಳೂರು ವಿಶ್ವವಿದ್ಯಾಲಯ ಸಿಗ್ನಲ್, ಆರ್.ವಿ.ಕಾಲೇಜು, ಕೆಂಗೇರಿ ಬಸ್ ಸ್ಟ್ಯಾಂಡ್ ಸಿಗ್ನಲ್ ಬಳಿ ಟ್ರಾಫಿಕ್ ದಟ್ಟಣೆ ಹೆಚ್ಚಾಗಿ ಪೀಕ್ ಹವರ್ ನಲ್ಲಿ ಈ ಭಾಗದಲ್ಲಿ ಸಂಚರಿಸುವುದು ವಾಹನ ಸವಾರರಿಗೆ ಸವಾಲಾಗಿದೆ.
ನೈಸ್ ಲಿಂಕ್ ರೋಡ್ ಕಾರಣ ಮೈಸೂರು ರಸ್ತೆ ಟ್ರಾಫಿಕ್ ಗೆ ಸಿಗಲಿದೆ ಮುಕ್ತಿ :
“ಬಿಎಚ್ ಇಎಲ್ ಜಂಕ್ಷನ್ ಲಿಂಕ್ ರಸ್ತೆ ಪೂರ್ಣವಾದರೆ ನಾಯಂಡಹಳ್ಳಿ ಜಂಕ್ಷನ್ ನಿಂದ ಬನಶಂಕರಿ ಕಡೆಗೆ ಹೋಗುವ ವಾಹನಗಳು ಇದೇ ಲಿಂಕ್ ನಲ್ಲಿ ಟೋಲ್ ಇಲ್ಲದೆ ಬನಶಂಕರಿ, ಜಯನಗರ, ಪದ್ಮನಾಭನಗರದ ಕಡೆಗೆ ಸಾಗಬಹುದು. ಹೀಗಾಗಿ ನಾಯಂಡಹಳ್ಳಿ ಜಂಕ್ಷನ್ ನಲ್ಲಿ ಅರ್ಧಕ್ಕರ್ಧ ವಾಹನ ಓಡಾಟ ಕಡಿಮೆಯಾಗುತ್ತೆ. ಅಲ್ಲದೆ ಪಿಇಎಸ್ ಕಾಲೇಜು ಬಳಿಯ ಹೊಸಕೆರೆಹಳ್ಳಿ ಟೋಲ್ ಮೂಲಕ ನೈಸ್ ರಸ್ತೆಯಲ್ಲಿ ಸಾಗಿ ಮೈಸೂರು ರಸ್ತೆ ನೈಸ್ ಜಂಕ್ಷನ್ ನಿಂದ ಹೊರಬರುವ ವಾಹನಗಳು ಗಣಪತಿ ದೇವಸ್ಥಾನ ಬಳಿಯ ಎಕ್ಸ್ ಪ್ರೆಸ್ ವೇ ರಸ್ತೆಯನ್ನು ಕೇವಲ 20 ನಿಮಿಷದಲ್ಲಿ ಬೇಗ ತಲುಪಬಹುದು. ಇದರಿಂದ ಬಿಎಚ್ ಇಎಲ್ ಜಂಕ್ಷನ್ ನಿಂದ ಎಕ್ಸ್ ಪ್ರೆಸ್ ರಸ್ತೆ ಆರಂಭವಾಗುವ ಮಧ್ಯೆಯ ಟ್ರಾಫಿಕ್ ಸಾಕಷ್ಟು ಕಡಿಮೆಯಾಗಲಿದೆ. ವಾರ್ಷಿಕ ಅಂದಾಜು 100 ಕೋಟಿ ರೂ.ನಷ್ಟು ಇಂಧನ ಉಳಿತಾಯವಾಗುತ್ತೆ” ಎಂದು ಹೇಳುತ್ತಾರೆ ನೈಸ್ ರಸ್ತೆ ಅಧಿಕಾರಿಗಳು.
ಹೊಸಕೆರೆಹಳ್ಳಿ ಟೋಲ್ ಮೂಲಕ ನೈಸ್ ರಸ್ತೆಯಲ್ಲಿ ಸಾಗಿ ಮೈಸೂರು ರಸ್ತೆ ನೈಸ್ ಜಂಕ್ಷನ್ ನಿಂದ ಒಂದು ಮಾರ್ಗದಲ್ಲಿ ಹೋಗಿ ಬರಲು ಸದ್ಯ ದ್ವಿಚಕ್ರ ವಾಹನಕ್ಕೆ 30 ರೂ., ಕಾರಿಗೆ 100. ರೂ. ಶುಲ್ಕವಿದೆ.
ಸರ್ಕಾರದಿಂದ ಭೂಮಿ ಹಸ್ತಾಂತರವಾಗದೆ ನಿಂತಿದೆ ನೈಸ್ ಎಕ್ಸ್ ಪ್ರೆಸ್ ವೇ :
ಪ್ರಸ್ತುತ ಸೋಂಪುರ ಬಳಿಯ ನೈಸ್ ಕ್ಲೋವರ್ ಲೀಫ್ ಜಂಕ್ಷನ್ ನಿಂದ ಬಿಡದಿಯ ಕೈಗಾರಿಕಾ ಪ್ರದೇಶದ ತನಕದ 13 ಕಿ.ಮೀ ತನಕದ ನೈಸ್ ಎಕ್ಸ್ ಪ್ರೆಸ್ ವೇ ರಸ್ತೆಮಾರ್ಗ ನಿರ್ಮಾಣದ ಪೈಕಿ ಮಧ್ಯ ಮಧ್ಯದಲ್ಲಿ ರಾಜ್ಯ ಸರ್ಕಾರದಿಂದ 95 ಎಕರೆ ಒಟ್ಟಾರೆ ಭೂಮಿ ನೈಸ್ ಸಂಸ್ಥೆಗೆ ಹಸ್ತಾಂತರವಾಗಬೇಕು. ಈಗಾಗಲೇ ಜಾಗ ಹಸ್ತಾಂತರಿಸಿದ ಕಡೆ ನಂದಿ ಇನ್ ಫ್ರಾಸ್ಟ್ರಕ್ಚರ್ ಸಂಸ್ಥೆಯು 5 ಕಿ.ಮೀ ರಸ್ತೆ ಮಾಡಿದೆ. ನೈಸ್ ಕ್ಲೋವರ್ ಲೀಫ್ ಜಂಕ್ಷನ್ ನಿಂದ ಅಗರದ ವರೆಗೆ ರಸ್ತೆ ಮಾಡಿ ಜಾಗ ಲಭ್ಯವಾಗದ ಕಾರಣ ರಸ್ತೆ ಡೆಡ್ ಎಂಡ್ ಆಗಿದೆ.
ಒಂದೊಮ್ಮೆ ಈ 13 ಕಿ.ಮೀ ನೈಸ್ ಎಕ್ಸ್ ಪ್ರೆಸ್ ವೇ ಪೂರ್ಣವಾದರೆ ಮೈಸೂರು ಎಕ್ಸ್ ಪ್ರೆಸ್ ವೇ ಕಡೆಗೆ ಸಾಗುವ ವಾಹನಗಳು, ಬಿಡದಿ ಕೈಗಾರಿಕಾ ಪ್ರದೇಶ ಹಾಗೂ ಅದಕ್ಕೆ ಸಂಪರ್ಕಿಸುವ ರಸ್ತೆಗೆ ಬಂದು ಹೋಗುವ ಭಾರೀ ವಾಹನಗಳ ಓಡಾಟಕ್ಕೆ ಅನುಕೂಲವಾಗಲಿದೆ. ಸಾಮಾನ್ಯ ರಸ್ತೆ ಮೇಲಿನ ದಟ್ಟಣೆ ಮತ್ತು ಒತ್ತಡವೂ ಕಡಿಮೆಯಾಗಲಿದೆ.
ಎನ್ ಎಚ್ 275 ನೈಸ್ ಎಕ್ಸ್ ಪ್ರೆಸ್ ವೇ ಅಂತರ್ಗತ ಯೋಜನೆ :
ನೈಸ್ ಸಂಸ್ಥೆಯು ಇದೇ ಮೇ ತಿಂಗಳಲ್ಲಿ ರಾಜ್ಯ ಸರ್ಕಾರಕ್ಕೆ ಬಿಡದಿಯ ಈಗಲ್ ಟನ್ ಬಳಿಯಿಂದ ಮೈಸೂರು ರಸ್ತೆ ಎನ್ ಎಚ್ 275 ರಾಷ್ಟ್ರೀಯ ಹೆದ್ದಾರಿಗೆ ಸಂಪರ್ಕ ಕಲ್ಪಿಸುವ ಎಕ್ಸ್ ಪ್ರೆಸ್ ವೇ ಅಂತರ್ಗತ ರಸ್ತೆ ಯೋಜನೆ ನಿರ್ಮಿಸುವ ಸಂಬಂಧ ಪ್ರಸ್ತಾವನೆಯೊಂದನ್ನು ಸಲ್ಲಿಸಿದೆ ಎಂದು ನೈಸ್ ಮೂಲಗಳು ತಿಳಿಸಿವೆ.
ಬಿಬಿಎಂಪಿ ಜಂಕ್ಷನ್ ಅಭಿವೃದ್ಧಿ ತಾತ್ಕಾಲಿಕವಾಗಿ ಸ್ಥಗಿತ :
ಈಗಾಗಲೇ ಬಿಎಚ್ ಇಎಲ್ ವೃತ್ತದಲ್ಲಿ ಬಿಬಿಎಂಪಿ ಯೋಜನಾ ವಿಭಾಗದಿಂದ ನಡೆಯುತ್ತಿದ್ದ ಜಂಕ್ಷನ್ ಅಭಿವೃದ್ಧಿ ಕಾಮಗಾರಿ, ನೈಸ್ ಲಿಂಕ್ ರಸ್ತೆ ಕಾಮಗಾರಿ ಆರಂಭದ ಹಿನ್ನಲೆಯಲ್ಲಿ ಸ್ವಲ್ಪ ವಿಳಂಬವಾಗಿದ್ದು, ಸದ್ಯಕ್ಕೆ ಕಾಮಗಾರಿ ಸ್ಥಗಿತಗೊಂಡಿದೆ.
ಮೈಸೂರು, ಎಲೆಕ್ಟ್ರಾನಿಕ್ ಸಿಟಿ, ಬನ್ನೇರುಘಟ್ಟ ಕಡೆಯಿಂದ ಬರುವ ವಾಹನಗಳು ನೈಸ್ ರಸ್ತೆ ಮೂಲಕ ವಿಜಯನಗರದ ಕಡೆಗೆ ಹಾಗೂ ಗಾಳಿ ಆಂಜನೇಯಸ್ವಾಮಿ ದೇವಸ್ಥಾನ ಪಕ್ಕದ ರಾಜಕಾಲುವೆ ಮೇಲಿನ ರಸ್ತೆಯ ಮೂಲಕ ಬೆಂಗಳೂರಿನ ಕಡೆಗೆ ಸಾಗುವ ಮಾರ್ಗದಲ್ಲಿ ಬದಲಾವಣೆ ಮಾಡುವ ಅವಶ್ಯಕತೆ ಕಂಡುಬರುವ ಸಾಧ್ಯತೆಯಿದೆ.
ಈ ವಿಷಯದಲ್ಲಿ ಸಂಚಾರ ಪೊಲೀಸರು, ನೈಸ್ ರಸ್ತೆ ಅಧಿಕಾರಿಗಳು ಹಾಗೂ ಬಿಬಿಎಂಪಿ ಅಧಿಕಾರಿಗಳ ಜೊತೆ ಮಾತುಕತೆ ನಡೆಸಿ ಸಂಚಾರ ವ್ಯವಸ್ಥೆ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕಿದೆ. ಈ ಸ್ಥಳದಲ್ಲಿ ಪುನಃ ಸಿಗ್ನಲ್ ಬಂದಲ್ಲಿ ಜಂಕ್ಷನ್ ಅಭಿವೃದ್ಧಿ ಕಾಮಗಾರಿಯಲ್ಲಿ ಪುನಃ ಬದಲಾವಣೆ ಮಾಡುವ ಸಾಧ್ಯತೆಯಿದೆ.
ಜು.1 ರಿಂದ ಟೋಲ್ ಶುಲ್ಕದಲ್ಲಿ ಶೇ. 13ರಷ್ಟು ಹೆಚ್ಚಳ :
ಜುಲೈ 1 ರಿಂದ ಜಾರಿಗೆ ಬರುವಂತೆ ನೈಸ್ ಸಂಸ್ಥೆಯು ತನ್ನ ಎಲ್ಲಾ ರಸ್ತೆಗಳ ಟೋಲ್ ಶುಲ್ಕವನ್ನು ಶೇ.10ರಿಂದ 13ರಷ್ಟು ಏರಿಕೆ ಮಾಡಿದೆ. ಈ ಕುರಿತಂತೆ ಮಾಧ್ಯಮಗಳಲ್ಲಿ ಸಾರ್ವಜನಿಕ ಪ್ರಕಟಣೆಯನ್ನು ಹೊರಡಿಸಿದೆ. 2022ರಿಂದ ಪ್ರತಿ ವರ್ಷ ನೈಸ್ ಸಂಸ್ಥೆಯು ವರ್ಷಂಪ್ರತಿ ಟೋಲ್ ಶುಲ್ಕವನ್ನು ಹೆಚ್ಚಿಸುತ್ತಾ ಬಂದಿದೆ.