ಬೀದರ್, ಜೂ.29 www.bengaluruwire.com : ಕಲ್ಯಾಣ ಕರ್ನಾಟಕದಲ್ಲಿ ಖಾಲಿ ಇರುವ 42 ಕೃಷಿ ಅಧಿಕಾರಿಗಳು, 231 ಸಹಾಯಕ ಕೃಷಿ ಅಧಿಕಾರಿಗಳ ಹುದ್ದೆ ತುಂಬಲು ಕೆ.ಪಿ.ಎಸ್. ಸಿ ಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಒಟ್ಟಾರೆ ರಾಜ್ಯಾದ್ಯಂತ ಕೃಷಿ ಇಲಾಖೆಯಲ್ಲಿ 979 ಹುದ್ದೆಗಳನ್ನು ಭರ್ತಿ ಮಾಡಲಾಗುವುದು ಎಂದು ಕೃಷಿ ಸಚಿವ ಚಲುವರಾಯಸ್ವಾಮಿ ಅವರು ಮಾಹಿತಿ ನೀಡಿದರು.
ಬೀದರ್ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಶನಿವಾರ, ಗುಲ್ಬರ್ಗ ವಿಭಾಗದ ಕೃಷಿ ಮತ್ತು ಜಲಾನಯನ ಇಲಾಖೆಗಳ ಪ್ರಗತಿ ಪರಿಶೀಲನೆ ಸಭೆ ನಡೆಸಿ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ಕಲ್ಯಾಣ ಕರ್ನಾಟಕದ 7 ಜಿಲ್ಲೆಗಳಲ್ಲಿ ಸ್ವಂತ ಕಟ್ಟಡ ಇಲ್ಲದ 17 ರೈತ ಸಂಪರ್ಕ ಕೇಂದ್ರಗಳನ್ನು 34 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ಮಾಡಲಾಗುವುದು ಎಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ತಿಳಿಸಿದ್ದಾರೆ.
ಕಲ್ಯಾಣ ಕರ್ನಾಟಕ ಭಾಗದಲ್ಲಿ 14.50 ಕೋಟಿ ರೂಪಾಯಿ ವೆಚ್ಚದಲ್ಲಿ 58 ಗೋದಾಮುಗಳನ್ನು ನಿರ್ಮಿಸಲಾಗುವುದು. ಬೀದರ್ ಜಿಲ್ಲೆಯಲ್ಲಿ ಕೃಷಿ ಭಾಗ್ಯ ಯೋಜನೆ ಜಾರಿಗೆ ತರಲಾಗುವುದು. ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗುವುದು. ಅರಣ್ಯ ಸಚಿವರ ಮನವಿಯಂತೆ ಸೂಕ್ಷ್ಮ ನೀರಾವರಿ , ಹನಿ ನೀರಾವರಿ ಸೇರಿದಂತೆ ಬೀದರ್ ಜಿಲ್ಲೆಗೆ ಯಂತ್ರೋಪಕರಣಗಳ ವಿತರಣೆಗೆ ಹೆಚ್ಚುವರಿ ಅನುದಾನವನ್ನು ನೀಡಲಾಗುವುದು ಎಂದು ಚಲುವರಾಯಸ್ವಾಮಿ ಭರವಸೆ ನೀಡಿದರು.
ಕೇಂದ್ರದ ವಿಳಂಭ ಧೋರಣೆಯ ನಡುವೆಯೂ ರಾಜ್ಯದಲ್ಲಿ 4,600 ಕೋಟಿ ರೂ. ಬರ ಪರಿಹಾರ ನೀಡಲಾಗಿದೆ. 1700 ಕೋಟಿ ರೂ ಮುಂಗಾರು ಹಂಗಾಮಿನ ವಿಮೆ ಪರಿಹಾರ ಇತ್ಯರ್ಥ ಮಾಡಲಾಗಿದೆ. ಈ ಬಾರಿ 20 ಕೋಟಿ ರೂ.ಗೂ ಅಧಿಕ ಲಾಭ ಪಡೆಯದಂತೆ ಬೆಳೆ ವಿಮಾ ಕಂಪನಿಗಳ ಷರತ್ತುಗಳನ್ನು ಬದಲಾವಣೆ ಮಾಡಿ, ಹೆಚ್ಚು ರೈತ ಪರ ನಿಯಮ ಅಳವಡಿಸಲಾಗಿದೆ ಎಂದು ಕೃಷಿ ಸಚಿವರು ಮಾಹಿತಿ ನೀಡಿದರು.
ರಾಜ್ಯದಲ್ಲಿ 1000 ಕೋಟಿ ರೂ. ವೆಚ್ಚದಲ್ಲಿ ಕೃಷಿ ಯಂತ್ರೋಪಕರಣಗಳನ್ನು ವಿತರಿಸಲಾಗಿದೆ. ಜೊತೆಗೆ ರಾಜ್ಯ ಸರ್ಕಾರ ಈ ಬಜೆಟ್ ನಲ್ಲಿಯೂ ಕೃಷಿಗೆ ಹೆಚ್ಚಿನ ಆದ್ಯತೆ ನೀಡಿದೆ. ಇದು ರೈತರ ಬಗ್ಗೆ ನಮಗೆ ಇರುವ ಬದ್ದತೆಗೆ ಸಾಕ್ಷಿ ಎಂದರು.
ರಾಜ್ಯದಲ್ಲಿ ಉತ್ತಮ ಮಳೆ ; ಶೇ.51 ರಷ್ಟು ಬಿತ್ತನೆ :
ರಾಜ್ಯಾದ್ಯಂತ ಉತ್ತಮ ಮಳೆಯಾಗಿದ್ದು 84 ಲಕ್ಷ ಹೆಕ್ಟೇರ್ ನಲ್ಲಿ ಈಗಾಗಲೇ ಶೇ.51 ರಷ್ಟು ಬಿತ್ತನೆಯಾಗಿದೆ. ರಸಗೊಬ್ಬರ ಬಿತ್ತನೆ ಬೀಜಕ್ಕೆ ಯಾವುದೇ ಕೊರತೆಯಾಗದಂತೆ ಪೂರೈಕೆ ಮಾಡಿದ್ದು ಲೋಪ ರಹಿತ ವಿತರಣೆಗೆ ನಿರ್ದೇಶನ ನೀಡಲಾಗಿದೆ. ಈ ವರ್ಷ ಕರ್ನಾಟಕ ರೈತ ಸಮೃದ್ಧಿ ಯೋಜನೆ ಜಾರಿ ಮಾಡಲಾಗುವುದು. ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಕೃಷಿ ಅಭಿವೃದ್ಧಿ ಪ್ರಾಧಿಕಾರ ರಚನೆ ಮಾಡಲಾಗಿದೆ. ಕೃಷಿ ಭಾಗ್ಯ ಯೋಜನೆಗೆ 200 ಕೋಟಿ ರೂಪಾಯಿ ಮೀಸಲು ಇರಿಸಲಾಗಿದೆ ಎಂದು ಅವರು ತಿಳಿಸಿದರು.
ಆಹಾರ ಸಂಸ್ಕರಣೆ ಮತ್ತು ರಫ್ತು ಉತ್ತೇಜನಕ್ಕೆ ಪ್ರತ್ಯೇಕ ಆಯುಕ್ತಾಲಯ ಸ್ಥಾಪನೆ ಮಾಡಲಾಗುತ್ತಿದೆ. ಇದೇ ರೀತಿ ಇ-ಸ್ಯಾಪ್ ತಂತ್ರಾಂಶ (e-sap Software) ವಿಸ್ತರಣೆ ಮಾಡಲಾಗುವುದು. ಜೊತೆಗೆ ಕೃಷಿಯಲ್ಲಿ ತಂತ್ರಜ್ಞಾನ ಆಧಾರಿತ ಮುನ್ಸೂಚನೆ ಮತ್ತು ದತ್ತಾಂಶ ಅಭಿವೃದ್ಧಿಗೆ ಒತ್ತು ನೀಡಲಾಗುವುದು. ಸ್ಟಾರ್ಟಪ್ (Startup) ಗಳಿಗೆ ಉತ್ತೇಜನ ನೀಡಲಾಗುವುದು ಎಂದು ಎನ್.ಚಲುವರಾಯಸ್ವಾಮಿ ಹೇಳಿದರು.
ಕಾರ್ಯಕ್ರಮದಲ್ಲಿ ಸಚಿವ ಈಶ್ವರ್ ಖಂಡ್ರೆ, ಕೃಷಿ ಇಲಾಖೆಯ ಹಿರಿಯ ಅಧಿಕಾರಿಗಳು ಪಾಲ್ಗೊಂಡಿದ್ದರು.