ಬೆಂಗಳೂರು, ಜೂ.28 www.bengaluruwire.com : ರಾಜ್ಯಾದ್ಯಂತ ಖಾಸಗಿ ಮತ್ತು ಸರ್ಕಾರಿ ಬಸ್ ನಿಲ್ದಾಣಗಳಲ್ಲಿ 19 ಆಹಾರ ಮಳಿಗೆಗಳಿಗೆ 48,000 ರೂ.ಗಳ ದಂಡವನ್ನು ವಿಧಿಸಲಾಗಿದೆ. 179 ವ್ಯಾಪಾರ ಮಳಿಗೆಗಳು ನೋಂದಣಿ ಅಥವಾ ಪರವಾನಿಗೆ ಹೊಂದಿಲ್ಲದಿರುವುದರಿಂದ ಮತ್ತು 120 ಆಹಾರ ಮಳಿಗೆಗಳಲ್ಲಿ ನೈರ್ಮಲ್ಯದ ಕೊರತೆ ಕಂಡುಬಂದಿರುವುದರಿಂದ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ ನೋಟಿಸ್ಗಳನ್ನು ಜಾರಿಗೊಳಿಸಿದೆ.
ರಾಜ್ಯದ ಎಲ್ಲಾ ಜಿಲ್ಲಾ ಮತ್ತು ತಾಲ್ಲೂಕು ಕೇಂದ್ರಗಳ ಸರ್ಕಾರಿ ಮತ್ತು ಖಾಸಗಿ ಬಸ್ ನಿಲ್ದಾಣಗಳಲ್ಲಿ ಇರುವ ವ್ಯಾಪಾರ ಮಳಿಗೆಗಳು ಮತ್ತು ಆಹಾರ ಉದ್ದಿಮೆಗಳಲ್ಲಿ ಅವಧಿ ಮೀರಿದ ಆಹಾರ ಪದಾರ್ಥಗಳ ಮಾರಾಟ ಮಾಡಲಾಗುತ್ತಿದೆ. ನೈರ್ಮಲ್ಯದ ಕೊರತೆ ಎದ್ದು ಕಾಣ್ತಿದೆ. ಇದರ ಬಗ್ಗೆ ಹಲವು ಬಾರಿ ಮಾಧ್ಯಮಗಳು ಗಮನ ಸೆಳೆಯುತ್ತಲೇ ಇವೆ.
ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲೂ ಸಾರ್ವಜನಿಕರು ಆಕ್ರೋಶ ಹೊರಹಾಕುತ್ತಿದ್ದಾರೆ. ಇಷ್ಟಾದರೂ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ ಅಧಿಕಾರಿಗಳಾಗಲಿ, ಸಿಬ್ಬಂದಿಯಾಗಲಿ ಕಮಿಕ್ – ಕಿಮಿಕ್ ಅಂದಿರಲಿಲ್ಲ. ಈ ಬಗ್ಗೆ ಯಾವಾಗ ಮುಖ್ಯಮಂತ್ರಿಗಳ ಕಛೇರಿ ಕ್ರಮವಹಿಸುವಮನತೆ ಸೂಚನೆ ಕೊಟ್ಟಿತೋ ಆಗ ಇಲಾಖೆ ಅಧಿಕಾರಿಗಳು ನಿದ್ದೆಯಿಂದ ಎದ್ದಿದ್ದಾರೆ.
ರಾಜ್ಯಾದ್ಯಂತ 201 ಜಿಲ್ಲಾ ಮತ್ತು ತಾಲ್ಲೂಕು ಕೇಂದ್ರಗಳ ಸ್ಥಳಗಳಲ್ಲಿನ ಸರ್ಕಾರಿ ಮತ್ತು ಖಾಸಗಿ ಬಸ್ ನಿಲ್ದಾಣಗಳಲ್ಲಿ ಇರುವ 748 ವ್ಯಾಪಾರ ಮಳಿಗೆಗಳು ಮತ್ತು ಆಹಾರ ಉದ್ದಿಮೆಗಳನ್ನು ಪರಿಶೀಲನೆ ಮಾಡಲಾಗಿರುತ್ತದೆ. ಪರಿಶೀಲನೆ ಸಂದರ್ಭದಲ್ಲಿ ವ್ಯಾಪಾರ ಮಳಿಗೆಗಳ ಮೇಲೆ ಈ ಮೇಲಿನಂತೆ ಆಹಾರ ಸುರಕ್ಷತಾ ಇಲಾಖೆ ಸಿಎಂ ಕಚೇರಿಯ ಸೂಚನೆ ಮೇರೆಗೆ ಸೌಜನ್ಯಕ್ಕೆಂದು ಕೆಲವು ವಾಣಿಜ್ಯ ಮಳಿಗೆಗಳಿಗೆ ದಂಡ ವಿಧಿಸಿ, ನೋಟಿಸ್ ನೀಡುವ ಶಾಸ್ತ್ರ ಮಾಡಿದೆ.
ಬಸ್ ನಿಲ್ದಾಣಗಳು ಮತ್ತು ಸುತ್ತಮುತ್ತಲಿನ ರಸ್ತೆಗಳಲ್ಲಿ ಇರುವ ವ್ಯಾಪಾರ ಮಳಿಗೆಗಳು ಮತ್ತು ಆಹಾರ ಉದ್ದಿಮೆಗಳಲ್ಲಿ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ 2006 ಮತ್ತು ನಿಯಮಗಳು 2011 ಅನ್ನು ಪಾಲಿಸುತ್ತಿರುವ ಬಗ್ಗೆ ಪರಿಶೀಲನೆ ಮಾಡುವ ಬಗ್ಗೆ ಜೂನ್-2024ರ ಮಾಹೆಯಲ್ಲಿ ವಿಶೇಷ ಅಭಿಯಾನವನ್ನು ಕೈಗೊಳ್ಳಲಾಗಿರುತ್ತದೆ. ಈ ಹಿನ್ನಲೆಯಲ್ಲಿ ಅಂಗಡಿ ಮತ್ತು ಉದ್ದಿಮೆಗಳಿಗೆ ನೋಟಿಸ್ ಮತ್ತು ದಂಡ ವಿಧಿಸಲಾಗುತ್ತಿದೆ ಎಂದು ಇಲಾಖೆ ಆಯುಕ್ತರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪರಿಶೀಲನಾ ಭೇಟಿಯ ಸಮಯದಲ್ಲಿ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ ಪಾಲಿಸುವಂತೆ ಕೇವಲ ಅರಿವು ಮೂಡಿಸಲಾಗಿರುತ್ತದೆ. ಮುಂದಿನ ದಿನಗಳಲ್ಲಿ ಪುನರ್ ಪರಿಶೀಲನೆ ಸಂದರ್ಭದಲ್ಲಿ ಸಂಬಂಧಿಸಿದ ಲೋಪದೋಷಗಳನ್ನು ಸರಿಪಡಿಸಿಕೊಳ್ಳದೇ ಇದ್ದಲ್ಲಿ ನಿಯಮಾನುಸಾರ ಕಾನೂನಾತ್ಮಕ ಕ್ರಮಗಳನ್ನು ಜರುಗಿಸಲಾಗುತ್ತದೆ ಎಂದು ಆಯುಕ್ತರು ವಿವರಿಸಿದ್ದಾರೆ.