ಬೆಂಗಳೂರು, ಜೂ.28 www.bengaluruwire.com : ನಾಡಪ್ರಭು ಕೆಂಪೇಗೌಡ ಲೇಔಟ್ (Nadaprabhu Kempegowda Layout)ನಲ್ಲಿ ನಡೆಯುತ್ತಿರುವ ಕಾಮಗಾರಿಗಳ ನಿಧಾನಗತಿ ಮತ್ತು ಮೂಲ ಸೌಕರ್ಯಗಳ ಕೊರತೆ ಕುರಿತು ಕರ್ನಾಟಕ ವಿಧಾನಸಭೆಯ ಅರ್ಜಿ ಸಮಿತಿ (Karnataka Legislative Assembly Petition Committee) ಯು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.
ಜೂನ್ 27ರ ಗುರುವಾರದ ವಿಚಾರಣೆ ವೇಳೆ ಸಮಿತಿಯು ಬಡಾವಣೆಗೆ ಸಂಬಂಧಿಸಿದ ಮೂರು ಪ್ರಮುಖ ಅರ್ಜಿಗಳನ್ನು ಪರಿಗಣಿಸಿತ್ತು. ಈ ಅರ್ಜಿಗಳಲ್ಲಿ ಮನೆ ನಿರ್ಮಿಸುವವರಿಗೆ ನೀರು, ಶುದ್ಧೀಕರಿಸಿದ ನೀರು ಮತ್ತು ಭೂಗತ ಒಳಚರಂಡಿ (ಯುಜಿಡಿ) ಸಂಪರ್ಕಗಳನ್ನು ಪಡೆಯಲು ಬಿಡಿಎ ಹೊಸ ಶುಲ್ಕ 31,000 ರೂ., ಬಾಕಿ ಉಳಿದಿರುವ 1,300 ಎಕರೆ ಭೂಸ್ವಾಧೀನ ಮತ್ತು ಮೂಲಭೂತ ಸೌಕರ್ಯಗಳನ್ನು ಲೇಔಟ್ ನ ಒಂಬತ್ತು ಬ್ಲಾಕ್ ಗಳಿಗೆ ಒದಗಿಸುವ ಕಾಮಗಾರಿಗಳ ಒಟ್ಟಾರೆ ಪ್ರಗತಿಯ ಬಗ್ಗೆ ಕಳವಳಗಳನ್ನು ಒಳಗೊಂಡಿತ್ತು ಎಂದು ನಾಡಪ್ರಭು ಕೆಂಪೇಗೌಡ ಲೇಔಟ್ ಮುಕ್ತ ವೇದಿಕೆಯ ವಕ್ತಾರ ಸೂರ್ಯ ಕಿರಣ್ ಹೇಳಿದ್ದಾರೆ.
ಬಿಡಿಎ ಆಯುಕ್ತ ಜಯರಾಮ್ ಸಭೆಗೆ ಗೈರು ಹಾಜರಾಗಿದ್ದರು. ಪ್ರಾಧಿಕಾರವನ್ನು ಎಂಜಿನಿಯರ್ ಸದಸ್ಯ ಶಾಂತರಾಜ್ ನೇತೃತ್ವದ ತಂಡ ಪ್ರತಿನಿಧಿಸಿತ್ತು. ”ಲೇಔಟ್‌ನಲ್ಲಿ ಸರ್ಕಾರದ ವಸತಿ ಯೋಜನೆ ವಿಫಲವಾಗಿರುವ ಕುರಿತು ಬಿಡಿಎಯನ್ನು ಸಮಿತಿಯು ಪ್ರಶ್ನಿಸಿದ್ದು, 26,000 ನಿವೇಶನಗಳಲ್ಲಿ 26 ಮನೆಗಳನ್ನು ಮಾತ್ರ ನಿರ್ಮಿಸಲಾಗಿದೆ. ಕಡಿಮೆ ಮನೆಗಳ ನಿರ್ಮಾಣವಾಗಿರುವುದಕ್ಕೆ ಬಿಡಿಎ ಮೂಲ ಸೌಕರ್ಯಗಳ ಕೊರತೆಯೇ ಕಾರಣ ಎಂದು ಸಮಿತಿ ಖಾರವಾಗಿ ತಿಳಿಸಿತು,” ಎಂದು ಕಿರಣ್ ತಿಳಿಸಿದ್ದಾರೆ.
ಬಡಾವಣೆ ಅಭಿವೃದ್ಧಿಗೆ ಬಿಡಿಎ ಕಡೆಯಿಂದ ಸತತ ಗಮನ ಹರಿಸುತ್ತಿಲ್ಲ. ಸಾಕಷ್ಟು ರಸ್ತೆಗಳು, ಕುಡಿಯುವ ನೀರು, ಒಳಚರಂಡಿ ವ್ಯವಸ್ಥೆಗಳು ಮತ್ತು ಬೀದಿ ದೀಪಗಳಂತಹ, ವಸತಿ ಜೀವನಕ್ಕೆ ಅಗತ್ಯವಾದ ಅಗತ್ಯ ಸೌಕರ್ಯಗಳು ಅಪೂರ್ಣವಾಗಿ ಉಳಿದಿವೆ. ವಿಧಾನಸಭೆ ಹಾಗೂ ಅರ್ಜಿ ಸಮಿತಿ ಸದಸ್ಯನಾಗಿ ನ್ಯಾಯ ದೊರಕಿಸಿಕೊಡುವಂತೆ ನಿವೇಶನದಾರರ ಪರವಾಗಿ ಹಲವು ಬಾರಿ ಮನವಿ ಸಲ್ಲಿಸಿದ್ದೇನೆ. ನಾನೇ ಹಲವು ಬಾರಿ ಲೇಔಟ್ ಪರಿಶೀಲನೆ ನಡೆಸಿ ಈ ಲೋಪದೋಷಗಳನ್ನು ಎತ್ತಿ ತೋರಿಸಲು ಪ್ರಯತ್ನಿಸಿದ್ದೇನೆ ಎಂದು ಸಮಿತಿ ಸದಸ್ಯ ಹಾಗೂ ರಾಜಾಜಿನಗರ ಶಾಸಕ ಎಸ್.ಸುರೇಶ್ ಕುಮಾರ್ ಸಮಿತಿ ಸಭೆಯಲ್ಲಿ ತಿಳಿಸಿದರು.
“ವಿಚಾರಣೆಯಲ್ಲಿ, ಹಿಂದಿನ ವರ್ಷ ನೀಡಿದ ಭರವಸೆಗಳನ್ನು ಈಡೇರಿಸಲು ವಿಫಲವಾದ ಕಾರಣಕ್ಕಾಗಿ ಬಿಡಿಎ ಅಧಿಕಾರಿಗಳು ಪರಿಶೀಲನೆಯನ್ನು ಎದುರಿಸಿದರು. ಸೆಪ್ಟೆಂಬರ್ ವೇಳೆಗೆ ಬಡಾವಣೆಯ ಒಂಬತ್ತು ಬ್ಲಾಕ್‌ಗಳಲ್ಲಿ ಮೂಲ ಸೌಕರ್ಯ ಕಲ್ಪಿಸಲಾಗುವುದು ಎಂದು ಭರವಸೆ ನೀಡಿದರು. ಇಂದು, ತೃಪ್ತಿಕರ ಉತ್ತರಗಳನ್ನು ನೀಡಲು ಅವರ ಅಸಮರ್ಥತೆಯು ಈ ಬದ್ಧತೆಗಳನ್ನು ಪೂರೈಸುವಲ್ಲಿ ಅವರ ಆತ್ಮವಿಶ್ವಾಸದ ಕೊರತೆಯನ್ನು ಸಭೆಯಲ್ಲಿ ಪ್ರತಿಬಿಂಬಿತವಾಗಿದೆ ”ಎಂದು ಅವರು ಅರ್ಜಿ ಸಮಿತಿ ಸಭೆಯಲ್ಲಿ ಹೇಳಿದರು.
ಇನ್ನು ಕೆಂಪೇಗೌಡ ಲೇಔಟ್ ಬಡಾವಣೆ ಕಾಮಗಾರಿ ಹಾಗೂ ಅಭಿವೃದ್ಧಿಯು ನಿಧಾನಗತಿಯಲ್ಲಿ ಸಾಗುತ್ತಿರುವುದಕ್ಕೆ, ಅರ್ಜಿ ಸಮಿತಿ ಸಭೆಯ ವಿವರಗಳನ್ನು ಶಾಸಕ ಸುರೇಶ್ ಕುಮಾರ್ ಫೇಸ್‌ಬುಕ್ ಪೇಜ್‌ನಲ್ಲಿ ಬರೆದುಕೊಂಡಿದ್ದಾರೆ.
ಕಾಕತಾಳಿಯ ಎಂಬಂತೆ ನಾಡಪ್ರಭುಗಳ ಜಯಂತಿ ದಿನವಾದ ಗುರುವಾರ ವಿಧಾನಸಭೆ ಅರ್ಜಿ ಸಮಿತಿಯ ಮುಂದೆ ಕೆಂಪೇಗೌಡ ಬಡಾವಣೆಯ ಅಭಿವೃದ್ಧಿ ಕಾರ್ಯಗಳ ಕುರಿತು ಪರಿಶೀಲನೆ ನಡೆದಿದೆ. ಕೆಂಪೇಗೌಡ ಬಡಾವಣೆ ಅಂದಾಜು 20 ಸಾವಿರಕ್ಕೂ ಹೆಚ್ಚು ನಿವೇಶನಗಳನ್ನು ಹಂಚಿಕೆ ಮಾಡಿ ಏಳೆಂಟು ವರ್ಷಗಳೇ ಕಳೆದಿದೆ. ಆದರೂ, ಸಕಲ ಮೂಲಸೌಕರ್ಯ ಕಲ್ಪಿಸಿ ಲೇಔಟ್‌ಅನ್ನು ವಾಸಯೋಗ್ಯ ಮಾಡುವಲ್ಲಿ ವೈಫಲ್ಯ ಕಂಡಿದೆ. ಇದೇ ಬಡಾವಣೆಯ ಆಸುಪಾಸಿನಲ್ಲಿರುವ ಖಾಸಗಿ ಲೇಔಟ್‌ಗಳಿಗೆ ಹೋಲಿಸಿದರೆ ನಾಡಪ್ರಭು ಕೆಂಪೇಗೌಡ ಬಡಾವಣೆಯ ನಿವೇಶನಗಳು ನಿಜಕ್ಕೂ ದುಬಾರಿಯಾಗಿದೆ.