ಬೆಂಗಳೂರು, ಜೂ.27 www.bengaluruwire.com : ಕೆಂಪೌಗೌಡ ಲೇಔಟ್, ಶಿವರಾಮ ಕಾರಂತ ಬಡಾವಣೆ ಅಭಿವೃದ್ಧಿಗೆ ಹೆಣಗಾಡುತ್ತಿರುವ, ಸ್ವಂತ ಆರ್ಥಿಕ ಸಂಪನ್ಮೂಲ ಸಂಗ್ರಹಕ್ಕಾಗಿ ಸಾಲ, ಕಾರ್ನರ್ ಸೈಟ್ ಹರಾಜು ಮೊದಲಾದ ಸರ್ಕಸ್ ಮಾಡುತ್ತಿರುವ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಲ್ಲಿ, ಕೇಂದ್ರ ಕಚೇರಿಯಲ್ಲಿ ಸುಸ್ಥಿತಿಯಲ್ಲಿದ್ದ ಅಧ್ಯಕ್ಷ ಎನ್.ಎ.ಹ್ಯಾರೀಸ್ ಕಚೇರಿಗೆ ಅನಗತ್ಯವಾಗಿ ಲಕ್ಷಾಂತರ ರೂಪಾಯಿ ವೆಚ್ಚ ಮಾಡಿ ಐಷಾರಾಮಿ ಇಂಟೀರಿಯರ್ ಮಾಡಲಾಗುತ್ತಿದೆ.
ಕಳೆದ ಒಂದು ತಿಂಗಳಿನಿಂದ ಇಂಟೀರಿಯರ್ ಡಿಸೈನ್ ಕೆಲಸಗಳು ನಡೆಯುತ್ತಿದ್ದು, ವಾಸ್ತು ಮತ್ತು ಹೈಟೆಕ್ ಲುಕ್ ಗಾಗಿ ಲಕ್ಷಾಂತರ ರೂಪಾಯಿ ಹಣವನ್ನು ದುಂದುವೆಚ್ಚ ಮಾಡಲಾಗುತ್ತಿದೆ. ಈ ಹಿಂದಿನ ಅಧ್ಯಕ್ಷರಾಗಿದ್ದ ಎಸ್.ಆರ್.ವಿಶ್ವನಾಥ್ ಇದೇ ಕೊಠಡಿಯಲ್ಲಿದ್ದ ಹಳೆಯ ಪೀಠೋಪಕರಣಗಳನ್ನು ಬದಲಿಸಿ ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ಹೊಸ ಪೀಠೋಪಕರಣಗಳನ್ನು ತಂದು ಹಾಕಲಾಗಿತ್ತು. ಆಗ ಅವರು ಉತ್ತರ ದಿಕ್ಕಿಗೆ ಮುಖ ಮಾಡಿಕೊಂಡು ಕೂತು ಸಾರ್ವಜನಿಕರು, ಅಧಿಕಾರಿಗಳನ್ನು ಭೇಟಿ ಮಾಡುತ್ತಿದ್ದರು.
ಆದರೀಗ ಜನವರಿ 29ರಂದು ನೂತನ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಹೊಸದರಲ್ಲಿ ಬಿಡಿಎ ಕೇಂದ್ರ ಕಚೇರಿಯ ಎ-ಬ್ಲಾಕ್ ನಲ್ಲಿರುವ ಅಧ್ಯಕ್ಷರ ಕೊಠಡಿಯಲ್ಲಿ ಕೂರುತ್ತಿದ್ದ ಎನ್.ಎ.ಹ್ಯಾರೀಸ್ ತಮ್ಮ ಕೊಠಡಿಯನ್ನು ಐಷಾರಾಮಿ ಒಳಾಂಗಣ ವಿನ್ಯಾಸದ ಕೊಠಡಿಯಾಗಿ ಬದಲಿಸಲು ಒಟ್ಟಾರೆಯಾಗಿ 40 ಲಕ್ಷ ರೂಪಾಯಿ ವೆಚ್ಚ ಮಾಡುತ್ತಿದ್ದಾರೆ. ಇಷ್ಟೊಂದು ಹಣ ತೆತ್ತು ಐಷಾರಾಮಿ ಕೊಠಡಿಯನ್ನಾಗಿ ನವೀಕರಣ ಮಾಡುವ ಅಗತ್ಯವೇನಿತ್ತು? ಬಿಡಿಎ ಉನ್ನತ ಮೂಲಗಳ ಖಚಿತ ಮಾಹಿತಿ ಪ್ರಕಾರ “40 ಲಕ್ಷ ರೂ. ಹಣವನ್ನು ಇಂಟೀರಿಯರ್ ಡಿಸೈನ್ ಗಾಗಿ ಖಾಸಗಿ ಸಂಸ್ಥೆಯೊಂದಕ್ಕೆ ಯಾವುದೇ ಟೆಂಡರ್ ಕರೆಯದೇ ಕಾಮಗಾರಿಯನ್ನು ನೀಡಲಾಗಿದೆ. ಪೀಸ್ ವರ್ಕ್ ಲೆಕ್ಕದಲ್ಲಿ ಇಂಟೀರಿಯರ್ ಕೆಲಸವನ್ನು ನೀಡಲಾಗಿದೆ” ಬಿಡಿಎನ ಉನ್ನತ ಮೂಲಗಳು ಖಚಿತಪಡಿಸಿವೆ. ಸರ್ಕಾರದ ನಿಯಮಗಳನ್ನು ಇಲ್ಲಿ ಸ್ಪಷ್ಟವಾಗಿ ಗಾಳಿಗೆ ತೂರಿರುವುದು ಕಂಡು ಬಂದಿದೆ.
ಬಿಡಿಎ ಆರ್ಥಿಕ ಪರಿಸ್ಥಿತಿ ಅದೆಷ್ಟು ಕೆಟ್ಟಿದೆಯೆಂದರೆ ಬೆಸ್ಕಾಂ ಕರೆಂಟ್ ಬಿಲ್, ಲ್ಯಾಂಡ್ ಲೈನ್ ಫೋನ್ ಬಿಲ್ ಬಾಕಿ ಉಳಿಸಿಕೊಂಡ ಉದಾಹರಣೆಗಳಿವೆ. ಪ್ರಾಧಿಕಾರವು ತನ್ನಲ್ಲಿ ಆರ್ಥಿಕ ಸಂಪನ್ಮೂಲ ಕ್ರೋಢಿಕರಿಸಲು ತರೇಹವಾರಿ ಸರ್ಕಸ್ ಮಾಡುತ್ತಿದೆ. ತನ್ನ ಬಳಿಯಿದ್ದ 7 ಬಿಡಿಎ ಕಾಂಪ್ಲೆಕ್ಸ್ ಗಳನ್ನು ಕೆಡವಿ ಬಹು ಮಹಡಿ ಕಟ್ಟಡ ಕಟ್ಟಲು ಆ ಆಸ್ತಿಯನ್ನು 60 ವರ್ಷಗಳ ಗುತ್ತಿಗೆಗೆ ನೀಡಿ ವಾರ್ಷಿಕ ಒಟ್ಟಾರೆ 40 ಕೋಟಿ ರೂ. ಹಣ ಸಂಪಾದಿಸಲು ಹೋಗಿ ಬಿಡಿಎ ಯನ್ನು ಖಾಸಗಿ ಮಾಡಲು ಹೊರಟಿರುವುದಕ್ಕೆ ಈಗಾಗಲೇ ಸಾರ್ವಜನಿಕರು, ಸರ್ಕಾರೇತರ ನಾಗರೀಕ ಸಂಘಟನೆಗಳು ವಿರೋಧ ವ್ಯಕ್ತಪಡಿಸಿವೆ. ಈ ಹಿಂದೆ ಕೆಲವು ವರ್ಷಗಳ ಹಿಂದೆ ಬಿಡಿಎ ಆಯುಕ್ತರ ಕಚೇರಿಯನ್ನು ಇದೇ ರೀತಿ ಅನಗತ್ಯವಾಗಿ ಲಕ್ಷಾಂತರ ರೂಪಾಯಿ ಕರ್ಚು ಮಾಡಿ ನವೀಕರಣ ಮಾಡಲಾಗಿತ್ತು.
ದಶಕಗಳೇ ಕಳೆದರೂ ಈತನಕ ಹೊರವರ್ತುಲ ರಸ್ತೆ ಮಾಡಲಾಗದೆ ನೂರಾರು ಎಕರೆ ಭೂಸ್ವಾಧೀನ ಅಧಿಸೂಚನೆ ಹೊರಡಿಸಿ, ಅತ್ತ ರಸ್ತೆಗೆ ಟೆಂಡರ್ ಯಶಸ್ವಿಯಾಗಿ ಟೆಂಡರ್ ಕರೆದು ರಸ್ತೆ ಕಾಮಗಾರಿಯನ್ನು ಮಾಡದೆ, ಸಾವಿರಾರು ರೈತರ ಭೂಮಿ ಅತಂತ್ರ ಸ್ಥಿತಿಯಲ್ಲಿರಿಸಿ ರೈತರು ಪರಿಪಾಡಲು ಪಡುವಂತೆ ಮಾಡಿದೆ. ಇನ್ನೊಂದೆಡೆ ಕೆಂಪೇಗೌಡ ಲೇಔಟ್ ಕಾಮಗಾರಿ ಪೂರೈಸಿರುವ ಗುತ್ತಿಗೆದಾರರಿಗೆ ಸಮಯಕ್ಕೆ ಸರಿಯಾಗಿ ಗುತ್ತಿಗೆ ಹಣವನ್ನು ನೀಡಲಾಗದೆ, ಅಲ್ಲಿನ ಅಭಿವೃದ್ಧಿ ಕಾಮಗಾರಿಗಳು ಕುಂಠಿತವಾಗಿದೆ. ಬರೀ ಎಲ್ಲಿ ನೋಡಿದರೂ ಕೋಟ್ಯಾಂತರ ರೂಪಾಯಿ ಸಾಲ ಸಾಲ. ಹೀಗೆ ಸಾಲ ಮಾಡಿಕೊಂಡಿರುವ ಬಿಡಿಎಗೆ ಇಂತಹ ಹೊತ್ತಿನಲ್ಲಿ ಅಧ್ಯಕ್ಷ ಕೊಠಡಿಯನ್ನು 40 ಲಕ್ಷ ರೂ. ವೆಚ್ಚ ಮಾಡಿ ನವೀಕರಣ ಮಾಡುವ ಜರೂರತ್ತು ಏನಿತ್ತು? ಎಂಬ ಅಭಿಪ್ರಾಯ ವ್ಯಕ್ತವಾಗಿದೆ.
ಇಡೀ ಬಿಡಿಎ ಕೇಂದ್ರ ಕಚೇರಿ ಕಟ್ಟಡಗಳನ್ನೇ ಕೆಡವಲು ಪ್ಲಾನ್ ಇತ್ತು :
ಬಿಡಿಎ ಕೇಂದ್ರ ಕಚೇರಿಯಲ್ಲಿ ಒಟ್ಟು ಎ, ಬಿ, ಸಿ, ಡಿ ಮತ್ತು ಇ ಬ್ಲಾಕ್ ಗಳಿವೆ. ಆ ಪೈಕಿ ಎಲ್ಲಾ ಬ್ಲಾಕ್ ಗಳು ಸಾಕಷ್ಟು ಹಳೆಯದಾಗಿದ್ದು, ಈ ಕಟ್ಟಡಗಳನ್ನು ಕೆಡವಿ 200 ಕೋಟಿ ರೂ. ವೆಚ್ಚದಲ್ಲಿ ಎರಡು ನೆಲಮಹಡಿ, ನೆಲ ಮತ್ತು 12 ಅಂತಸ್ತುಗಳ ಎರಡು ಟವರ್ ಗಳನ್ನು ಸಾರ್ವಜನಿಕ- ಖಾಸಗಿ ಸಹಭಾಗಿತ್ವದಲ್ಲಿ ಕಟ್ಟಲು ಈ ಹಿಂದೆ ಬಿಡಿಎ ಬಸವರಾಜ ಬೊಮ್ಮಾಯಿ ಯವರು ಮುಖ್ಯಮಂತ್ರಿಗಳಾಗಿದ್ದಾಗ ಬಿಡಿಎ ಅಧಿಕಾರಿಗಳು ನಗರಾಭಿವೃದ್ಧಿ ಇಲಾಖೆಯ ಮೂಲಕ ಪ್ರಸ್ತಾವನೆ ಸಲ್ಲಿಸಿದ್ದರು. ಹಣಕಾಸು ಕೊರತೆಯ ಕಾರಣ ನೀಡಿ ಆಗಿನ ಮುಖ್ಯಮಂತ್ರಿಗಳು ಬಿಡಿಎ ಈ ಪ್ರಸ್ತಾವನೆಯನ್ನು ವಾಪಸ್ ಕಳಿಸಿದ್ದರು.
ಐಷಾರಾಮಿ ಕೊಠಡಿ ಮೇಲೆ ಪಾಳುಬಿದ್ದಿದೆ ದಾಖಲೆಯಿಡುವ ಬೀರುಗಳು :
ಎನ್.ಎ.ಹ್ಯಾರೀಸ್ ಅಧ್ಯಕ್ಷರಾಗಿರುವ ಕೊಠಡಿಯಿರುವ ಎ-ಬ್ಲಾಕ್ ಕಟ್ಟಡದಲ್ಲಿ ಮೊದಲ ಮತ್ತು ಎರಡನೇ ಅಂತಸ್ತಿನಲ್ಲಿ ಸಾರ್ವಜನಿಕರಿಗೆ ಸೇರಿದ ಬಿಡಿಎ ದಾಖಲೆಗಳನ್ನು ಇಡಲು ಕಬ್ಬಿಣದ ಬೀರುಗಳನ್ನು ಕಾರಿಡಾರ್ ನಲ್ಲಿ ಹೊರಗಡೆ ಹಲವಾರು ವರ್ಷಗಳಿಂದ ಇಡಲಾಗಿದೆ. ಈ ಬೀರುಗಳನ್ನು ಸೂಕ್ತ ಕೊಠಡಿಯಲ್ಲಿಡಲೂ ಸೂಕ್ತ ವ್ಯವಸ್ಥೆ ಮಾಡಲು ಬಿಡಿಎ ಅಧಿಕಾರಿಗಳಿಗೆ ಇನ್ನೂ ಸಾಧ್ಯವಾಗಿಲ್ಲ. ಈ ಕಾರಿಡಾರ್ ಹೊರಗೆ ಇಟ್ಟಿರುವ ಈ ಕಬ್ಬಿಣದ ಬೀರು ಬಿಸಿಲು, ಮಳೆಗೆ ಒಡ್ಡಿಕೊಂಡು ಹಲವು ತುಕ್ಕುಹಿಡಿದಿವೆ. ಇಂತಹ ಬೀರುವಿನಲ್ಲಿಟ್ಟ ದಾಖಲೆಗಳು ಎಷ್ಟು ಸುರಕ್ಷಿತ ಎಂಬುದು ಪ್ರಶ್ನೆಯಾಗಿದೆ. ಇದೇ ಕಟ್ಟಡದ ಹಲವು ಕಡೆಗಳಲ್ಲಿ ಗೋಡೆಗಳಲ್ಲಿ ನೀರು ಕಾಣಿಸಿಕೊಂಡು ಪಾಚಿ ಕಟ್ಟಿವೆ. ಕಟ್ಟಡದ ಈ ಪರಿಸ್ಥಿತಿ ಕಣ್ಣಿಗೆ ರಾಚುವಂತಿದ್ದರೂ ಈ ಬಗ್ಗೆ ಬಿಡಿಎನ ಈಗಿನ ಅಧ್ಯಕ್ಷ ಎನ್.ಎ.ಹ್ಯಾರೀಸ್ ಅವರಾಗಲೀ, ಹಿಂದಿನ ಅಧ್ಯಕ್ಷರಿಗಾಗಲೀ ಯಾಕೆ ಕ್ರಮ ಕೈಗೊಳ್ಳಲಿಲ್ಲ.
ಸಾರ್ವಜನಿಕರು ಬೇಕಾಬಿಟ್ಟಿ ಬಾರದಂತೆ ಒಂದೇ ಪ್ರವೇಶದ್ವಾರ :
“ಬಿಡಿಎ ಅಧ್ಯಕ್ಷರ ವಿಶ್ರಾಂತಿ ಕೊಠಡಿ ಬಹಳ ಚಿಕ್ಕದಾಗಿತ್ತು. ಕುಳಿತುಕೊಂಡು ಊಟ ಮಾಡಲು ಸ್ಥಳಾವಕಾಶ ಕಡಿಮೆಯಿತ್ತು. ಆದರೀಗ ಅಧ್ಯಕ್ಷರು ಕೂರುವ ಕೊಠಡಿಯ ಪಕ್ಕದಲ್ಲಿನ ಆಂಟಿ ಚೇಂಬರ್ ಸ್ವಲ್ಪ ದೊಡ್ಡ ಮಾಡಲಾಗಿದೆ. ಸಾರ್ವಜನಿಕರು ಎರಡು ಮೂರು ಕಡೆಗಳಿಂದ ಕಚೇರಿಗೆ ಪ್ರವೇಶಿಸುತ್ತಿದ್ದರು. ಕೇವಲ ಒಂದು ಕಡೆಯಿಂದಲೇ ಪ್ರವೇಶ ಮತ್ತು ನಿರ್ಗಮನ ದ್ವಾರವಿದ್ದರೆ, ಬಂದು ಹೋದವರ ಮೇಲೆ ನಿಗಾ ಇಡುವ ಸಲುವಾಗಿ ಇದೀಗ ಕೇವಲ ಒಂದು ಪ್ರವೇಶದ್ವಾರ ಮಾಡಲು ವ್ಯವಸ್ಥೆ ಮಾಡಲಾಗಿದೆ. ಈಗಿನ ಅಧ್ಯಕ್ಷರು ಪೂರ್ವ ದಿಕ್ಕಿಗೆ ಮುಖ ಮಾಡಿ ಕೂರುವಂತೆ ವಾಸ್ತು ಕೊಂಚ ಬದಲಾವಣೆ ಮಾಡಲಾಗಿದೆ. ಕೇಂದ್ರೀಕೃತ ಹವಾನಿಯಂತ್ರಣ ವ್ಯವಸ್ಥೆ ಮತ್ತು ಅಲಂಕೃತ ಬೆಳಕಿನ ವ್ಯವಸ್ಥೆ ಮಾಡಲಾಗುತ್ತಿದೆ. ಇನ್ನು ಒಂದು ವಾರದಲ್ಲಿ ಕಾಮಗಾರಿ ಪೂರ್ಣಗೊಳ್ಳುತ್ತದೆ” ಎಂದು ಬಿಡಿಎ ಅಧಿಕಾರಿಯೊಬ್ಬರು ಬೆಂಗಳೂರು ವೈರ್ ಗೆ ತಿಳಿಸಿದ್ದಾರೆ.
ಬಿಡಿಎ ಮುಖ್ಯ ಪ್ರವೇಶ ದ್ವಾರವೆಂಬ ಖುಲ್ ಜಾ ಸಿಂಸಿಂ :
ಬಿಡಿಎ ಕೇಂದ್ರ ಕಚೇರಿಗೆ ಮಧ್ಯಾಹ್ನ 3 ಗಂಟೆಯ ನಂತರವಷ್ಟೇ ಸಾರ್ವಜನಿಕರಿಗೆ ಪ್ರವೇಶ ಅಂತ ದೊಡ್ಡದಾಗಿ ಬೋರ್ಡ್ ಹಾಕಲಾಗಿದೆ. ಆದರೆ ಅದು ಹೆಸರಿಗಷ್ಟೇ. ದೊಡ್ಡ ದೊಡ್ಡ ಬ್ರೋಕರ್ ಗಳು, ಡೆವಲಪರ್ ಗಳು, ಪ್ರಭಾವಿಗಳು ಬಂದರೆ ಅವರಿಗೆ, ಅವರ ಐಷಾರಾಮಿ ಕಾರು ಸಲೀಸಾಗಿ ಪ್ರವೇಶ ನೀಡಲು ಎಲ್ಲಿಲ್ಲದ ಆಸಕ್ತಿ ತೋರುತ್ತಾರೆ ಮುಖ್ಯ ಪ್ರವೇಶದ್ವಾರದ ಬಳಿಯಿರುವ ಪೊಲೀಸ್ ಮತ್ತು ಖಾಸಗಿ ಭದ್ರತಾ ಸಿಬ್ಬಂದಿ. ಮೂಲಗಳ ಪ್ರಕಾರ ಬಿಡಿಎ ವಿಶೇಷ ಕಾರ್ಯಾಚರಣೆ ಪಡೆಯಲ್ಲಿ ಪೊಲೀಸ್ ಇಲಾಖೆಯಿಂದ ಇಲ್ಲಿಗೆ ಬಂದು ಹಲವು ವರ್ಷಗಳಾದರೂ ಬಿಡಿಎನಲ್ಲೇ ವೃಂದ ಮತ್ತು ನೇಮಕಾತಿ ನಿಯಮಾವಳಿಗಳನ್ನು ಉಲ್ಲಂಘಿಸಿ ಕಾರ್ಯನಿರ್ವಹಿಸುತ್ತಿದ್ದಾರೆ. ಹೀಗೆ ಹಲವು ವರ್ಷಗಳಿಂದ ಒಂದೇ ಕಡೆ ಬೀಡಿ ಬಿಟ್ಟಿರುವ ಪೊಲೀಸರು ಬಿಡಿಎ ಸೈಟ್ ವ್ಯವಹಾರಗಳಲ್ಲಿ, ವಿವಾದಿತ ನಿವೇಶನಗಳಲ್ಲಿ ಕೈಹಾಕಿದ್ದಾರೆ ಎಂದು ಬಲ್ಲ ಮೂಲಗಳು ತಿಳಿಸಿವೆ.