ಬೆಂಗಳೂರು, ಜೂ.25 www.bengaluruwire.com : ರಾಜ್ಯದಲ್ಲಿ ಸುಗ್ಗಿ ಕಾಲವಾದ್ದರಿಂದ ಕರ್ನಾಟಕ ಸಹಕಾರ ಹಾಲು ಉತ್ಪಾದಕರ ಮಹಾಮಂಡಳ (KMF) ಜಿಲ್ಲಾ ಹಾಲು ಒಕ್ಕೂಟಗಳಲ್ಲಿ ದಿನಂಪ್ರತಿ ಹಾಲಿನ ಶೇಖರಣೆ ಹೆಚ್ಚಾಗುತ್ತಿದೆ. ಒಟ್ಟಾರೆ ಪ್ರತಿದಿನ ಒಂದು ಕೋಟಿ ಲೀ. ಹಾಲು ಸಂಗ್ರಹಣೆ ಸಮೀಪಿಸುತ್ತಿದ್ದು, ಜೂ.26ರಿಂದ ಪ್ರತಿ ಅರ್ಧ ಮತ್ತು ಒಂದು ಲೀಟರ್ ಗೆ 2 ರೂ. ಹೆಚ್ಚಳ ಮಾಡಿ ಆದೇಶ ಹೊರಡಿಸಿದೆ.
ಪ್ರತಿ ಅರ್ಧ ಹಾಗೂ ಒಂದು ಲೀಟರ್ ಗೆ 2 ರೂ. ಹೆಚ್ಚಳ ಮಾಡಿದ್ದು, ಶುಭಂ ಹಾಲು ಇನ್ನು ಮುಂದೆ ಲೀಟರ್ ಗೆ 48 ರೂ. ಇದ್ದದ್ದು 50 ರೂ. ಆಗಲಿದೆ. ಅರ್ಧ ಲೀಟರ್ ಕೂಡ 25 ರೂ. ಇದ್ದದ್ದು 27 ರೂ. ಆಗಲಿದೆ. ಹೋಮೋಜಿನೈಸ್ಡ್ ಹಸುವಿನ ಹಾಲು ಪ್ರತಿ ಲೀ.46ರಿಂದ 48 ರೂ. ಹಾಗೂ ಈ ವಿಧದ ಅರ್ಧ ಲೀಟರ್ ಕೂಡ 24 ರೂ. ಇದ್ದದ್ದು 26 ರೂ. ಆಗಲಿದೆ. ಎಲ್ಲಾ ಪ್ಯಾಕೆಟ್ ಗಳಲ್ಲಿ ಕೂಡ 50 ಎಂಎಲ್ ಹೆಚ್ಚುವರಿ ಹಾಲು ಸೇರಿಸಿ ಪ್ಯಾಕ್ ಮಾಡಲಾಗುತ್ತದೆ.
ಸದ್ಯ ಸಂಗ್ರಹವಿರುವ ಹಳೆಯ ಪ್ಯಾಕೇಟ್ ನಲ್ಲಿ ಹಳೆಯ ದರವೇ ಮುದ್ರಣವಿದ್ದರೂ ಬುಧವಾರ ಬೆಳಗ್ಗೆಯಿಂದಲೇ ಹೊಸ ದರದಲ್ಲಿ ಹಾಲು ಮಾರಾಟ ಆರಂಭವಾಗಲಿದೆ. ಮುಂದಿನ ಆದೇಶದವರೆಗೆ ಈ ದರವಿರಲಿದೆ ಎಂದು ಕೆಎಂಎಫ್ ವ್ಯವಸ್ಥಾಪಕ ನಿರ್ದೇಶಕ ಜಗದೀಶ್ ಬೆಂಗಳೂರು ವೈರ್ ಗೆ ತಿಳಿಸಿದ್ದಾರೆ.
ಹೆಚ್ಚುವರಿ ಹಾಲಿನ ಜೊತೆಗೆ ದರ ಏರಿಕೆಯಾಗಿದ್ದರೂ ಕೆಎಂಎಫ್ ದರವು ಇತರ ರಾಜ್ಯಗಳ ಹಾಲಿನ ದರಕ್ಕಿಂತ ಸಾಕಷ್ಟು ಕಡಿಮೆಯಿದೆ. ರಾಜ್ಯದಲ್ಲಿ ಕೆಎಂಎಫ್ ಸಾಮಾನ್ಯ ಹಾಲಿನ ದರ ಲೀ. 44 ರೂ.ಗಳಿದ್ದರೆ, ಕೇರಳ ಮಿಲ್ಮಾ 52 ರೂ., ದೆಹಲಿ ಮದರ್ ಡೈರಿ 54 ರೂ., ಗುಜರಾತ್ ಮತ್ತು ಮಹಾರಾಷ್ಟ್ರ ಅಮೂಲ್ ದರ 56 ರೂ., ಆಂಧ್ರಪ್ರದೇಶದ ವಿಜಯ 58ರೂ. ದರವಿದೆ ಎಂದು ಕೆಎಂಎಫ್ ಅಧ್ಯಕ್ಷ ಭೀಮಾನಾಯ್ಕ್ ಹೇಳಿದ್ದಾರೆ.