ಬೆಂಗಳೂರು, ಜೂ.24 www.bengaluruwire.com : ರಾಜಧಾನಿ ಬೆಂಗಳೂರಿನಲ್ಲಿ ಮಳೆಯು ಕಣ್ಣಾಮುಚ್ಚಾಲೆ ಹೆಚ್ಚಾಗುತ್ತಿದ್ದಂತೆ ಜೂನ್ ತಿಂಗಳಲ್ಲಿ 20ನೇ ತಾರೀಖಿನ ವರೆಗೆ ಡೆಂಗ್ಯೂ ಪ್ರಕರಣವು, ಜನವರಿಯಿಂದ ಈವರೆಗಿನ ಉಳಿದ ಐದು ತಿಂಗಳಿಗೆ ಹೋಲಿಸಿದರೆ ಹೆಚ್ಚಾಗಿದೆ. ಕೇವಲ 20 ದಿನಗಳಲ್ಲಿ 1,036 ಡೆಂಗ್ಯೂ ಪ್ರಕರಣಗಳು ಕಂಡು ಬಂದಿದೆ. ಹೀಗಾಗಿ ಸಾರ್ವಜನಿಕರು ಎಚ್ಚರಿಕೆವಹಿಸಬೇಕಿದೆ.
ಇನ್ನು ರಾಜ್ಯದಲ್ಲಿ ಡೆಂಗ್ಯೂ ಕೇಸ್ ಗಳು ಹೆಚ್ಚಾಗುತ್ತಿದ್ದು, ಜೂನ್ 18 ರವರೆಗೆ ಒಟ್ಟು ಪ್ರಕರಣಗಳ ಸಂಖ್ಯೆ 4,886 ಕ್ಕೆ ತಲುಪಿದೆ. ಇದು ಕಳೆದ ವರ್ಷದ ಇದೇ ಅವಧಿಯಲ್ಲಿ ವರದಿಯಾದ ಪ್ರಕರಣಗಳ ಸಂಖ್ಯೆಗಿಂತ ಶೇ.149 ಹೆಚ್ಚು. ಈ ವರ್ಷ ಇಲ್ಲಿಯವರೆಗೆ ಯಾವುದೇ ಸಾವುಗಳು ದಾಖಲಾಗಿಲ್ಲ ಎಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಮೂಲಗಳು ತಿಳಿಸಿವೆ.
ಬಿಬಿಎಂಪಿ ವ್ಯಾಪ್ತಿಯಲ್ಲಿ ಈ ವರ್ಷದ ಜನವರಿಯಿಂದ ಜೂನ್ 20ರವರೆಗಿನ ಅವಧಿಯಲ್ಲಿ ಒಟ್ಟಾರೆ 2,457 ಡೆಂಗ್ಯೂ ಪ್ರಕರಣಗಳು ದಾಖಲಾಗಿದ್ದರೆ, ಕಳೆದ ವರ್ಷ ಇದೇ ಅವಧಿಯಲ್ಲಿ 1,272 ಪ್ರಕರಣಗಳು ಕಂಡುಬಂದಿತ್ತು. ಕಳೆದ ವರ್ಷಕ್ಕೆ ಹೋಲಿಸಿದ್ರೆ ಡೆಂಗ್ಯೂ ಕಾಯಿಲೆ ಪ್ರಕರಣಗಳಲ್ಲಿ ಶೇ.51.77ರಷ್ಟು ಹೆಚ್ಚಳವಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಒಂದು ಸಾವಿನ ಪ್ರಕರಣ ದಾಖಲಾಗಿತ್ತು. ಈ ಬಾರಿ ಅದೃಷ್ಟವಶಾತ್ ಯಾವುದೇ ಸಾವುನೋವು ಪ್ರಕರಣಗಳು ದಾಖಲಾಗಿಲ್ಲ.
ಸಿಲಿಕಾನ್ ಸಿಟಿಯಲ್ಲಿ ರಸ್ತೆಗುಂಡಿ, ಖಾಲಿ ನಿವೇಶನ ಮತ್ತಿತರ ತೆರೆದ ಪ್ರದೇಶಗಳಲ್ಲಿ ನೀರು ನಿಂತಿರುವ ಕಡೆ ಸೊಳ್ಳೆಗಳು ಹೆಚ್ಚಾಗುತ್ತಿದ್ದು, ಡೆಂಗ್ಯೂ ಪ್ರಕರಣಗಳು ಹೆಚ್ಚಾಗುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ. ಬಿಬಿಎಂಪಿಯ ಅಧಿಕೃತ ಅಂಕಿಸಂಖ್ಯೆಗಳ ಪ್ರಕಾರ, ಈ ವರ್ಷದ 6 ತಿಂಗಳಲ್ಲಿ ಬಿಬಿಎಂಪಿಯ 8 ವಲಯಗಳ ಪೈಕಿ ಮಹದೇವಪುರ ವಲಯದಲ್ಲಿ ಜೂನ್ ತಿಂಗಳಲ್ಲಿ 801 ಪ್ರಕರಣಗಳು ಕಂಡುಬಂದಿದ್ದು ಅತ್ಯಧಿಕವಾಗಿದೆ. ಎರಡನೇ ಸ್ಥಾನದಲ್ಲಿ ಪಾಲಿಕೆ ಪೂರ್ವ ವಲಯದಲ್ಲಿ 493, ಬೆಂಗಳೂರು ದಕ್ಷಿಣದಲ್ಲಿ 305, ಬೊಮ್ಮನಹಳ್ಳಿ ವಲಯದಲ್ಲಿ 246, ಪಶ್ಚಿಮ ವಲಯದಲ್ಲಿ 236, ಯಲಹಂಕ ವಲಯದಲ್ಲಿ 190, ರಾಜರಾಜೇಶ್ವರಿ ನಗರ ವಲಯದಲ್ಲಿ 168 ಮತ್ತು ದಾಸರಹಳ್ಳಿ ವಲಯದಲ್ಲಿ 18 ಪ್ರಕರಣಗಳು ಅಂದರೆ ಅತಿ ಕಡಿಮೆ ಕೇಸ್ ಗಳು ಪತ್ತೆಯಾಗಿದೆ.
“ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಡೆಂಗ್ಯೂ ಪರಿಣಾಮಕಾರತೆ (Strain) ಸಾಮರ್ಥ್ಯ ಕಡಿಮೆಯಿದೆ. ಸಾವು ಸಂಭವಿಸುವ ಸಾಧ್ಯತೆಗಳು ಕಡಿಮೆಯಿದೆ. ಹಾಗಂತ ಡೆಂಗ್ಯೂ ಬಾರದಂತೆ ಎಚ್ಚರವಹಿಸುವುದು ಅತಿಮುಖ್ಯವಾಗಿದೆ. ಡೆಂಗ್ಯೂ ನಿಯಂತ್ರಣಕ್ಕಾಗಿ ಪಾಲಿಕೆ ವ್ಯಾಪ್ತಿಯಲ್ಲಿ ಜಾಗೃತಿ ಕಾರ್ಯಕ್ರಮ, ಮೂಲದಲ್ಲೇ ಡೆಂಗ್ಯೂ ಹರಡಲು ಕಾರಣವಾಗುವ ಸೊಳ್ಳೆ ಉತ್ಪತ್ತಿಯಾಗುವ ಸ್ಥಳಗಳನ್ನು ನಿಯಂತ್ರಿಸುವ ಕೆಲಸ, ಮನೆ ಮನೆಗೆ ಲಾರ್ವಾ ಸಮೀಕ್ಷೆ, ಸೊಳ್ಳೆ ಹರಡಂತೆ ಸ್ಪ್ರೇ ಮತ್ತು ಫಾಗಿಂಗ್ ಹಾಕುವ ಕಾರ್ಯಕ್ರಮಗಳು ನಡೆಸಲಾಗುತ್ತಿದೆ. ಪಾಲಿಕೆ ವ್ಯಾಪ್ತಿಯಲ್ಲಿ ಜನರಲ್ಲಿ ಕಂಡು ಬರುವ ಜ್ವರದ ಬಗ್ಗೆಯೂ ಕಣ್ಗಾವಲು ವಹಿಸಲಾಗುತ್ತಿದೆ. ಡೆಂಗ್ಯೂ ಶಂಕೆ ಲಕ್ಷಣ ಕಂಡುಬಂದಲ್ಲಿ ಮಾದರಿಯನ್ನು ಎಚ್.ಸಿದ್ದಯ್ಯ ರೆಫರಲ್ ಆಸ್ಪತ್ರೆಗೆ ರವಾಸಿಲಾಗುತ್ತೆ” ಎಂದು ಬಿಬಿಎಂಪಿ ಸಮುದಾಯ ಆರೋಗ್ಯ ವಿಭಾಗದ ಮುಖ್ಯ ಆರೋಗ್ಯಾಧಿಕಾರಿ ಡಾ.ಸಯ್ಯದ್ ಸಿರಾಜುದ್ದೀನ್ ಬೆಂಗಳೂರು ವೈರ್ ಗೆ ತಿಳಿಸಿದ್ದಾರೆ.
ಡೆಂಗ್ಯೂ ಬಂದು ಸುಧಾರಿಸಿಕೊಂಡ ಪಾಲಿಕೆ ಮುಖ್ಯ ಆಯುಕ್ತರು :
ಒಂದು ವಾರದ ಹಿಂದೆ ಬಿಬಿಎಂಪಿ ಮುಖ್ಯ ಆಯುಕ್ತರಾದ ತುಷಾರ್ ಗಿರಿನಾಥ್ ಅವರೇ ಜ್ವರದಿಂದ ನರಳುತ್ತಿದ್ದು, ಪಾಲಿಕೆ ಸಮುದಾಯ ಆರೋಗ್ಯ ವಿಭಾಗದ ಮುಖ್ಯ ಆರೋಗ್ಯಾಧಿಕಾರಿ ಡಾ.ಸೈಯ್ಯದ್ ಸಿರಾಜುದ್ದೀನ್ ಅವರ ಸಲಹೆ ಮೇರೆಗೆ ಪರೀಕ್ಷೆ ಮಾಡಿಸಿದಾಗ ಡೆಂಗ್ಯೂ ಬಂದಿರುವುದು ದೃಢಪಟ್ಟಿದೆ. ಅನಾರೋಗ್ಯದ ನಡುವೆಯೂ ಮುಖ್ಯ ಆಯುಕ್ತರು ಪಾಲಿಕೆ ದೈನನಂದಿನ ಸಭೆ, ಕಡತಗಳ ವಿವೇವಾರಿ ಕೆಲಸವನ್ನು ಮುಂದುವರೆಸಿದ್ದಾರೆ. ಇದೀಗ ಅವರ ಆರೋಗ್ಯದಲ್ಲಿ ಸುಧಾರಣೆ ಕಂಡುಬಂದಿದೆ ಎಂದು ಮೂಲಗಳು ತಿಳಿಸಿವೆ.
ಡೆಂಗ್ಯೂ ಜ್ವರದ ಲಕ್ಷಣಗಳು ಹೀಗಿರುತ್ತದೆ :
ಡೆಂಗ್ಯೂ ಜ್ವರವು ಸೋಂಕಿತ ಸೊಳ್ಳೆಗಳಿಂದ ಹರಡುವ ವೈರಸ್‌ಗಳ ಕುಟುಂಬದಿಂದ ಉಂಟಾಗುವ ಕಾಯಿಲೆಯಾಗಿದೆ. ಇದು ಹಠಾತ್ ಆಕ್ರಮಣದ ತೀವ್ರವಾದ ಕಾಯಿಲೆಯಾಗಿದ್ದು ಅದು ಸಾಮಾನ್ಯವಾಗಿ ಸೌಮ್ಯವಾಗಿರುತ್ತದೆ. ಅನುಸರಿಸುತ್ತದೆ. ತಲೆನೋವು, ಜ್ವರ, ಬಳಲಿಕೆ, ತೀವ್ರವಾದ ಸ್ನಾಯು ಮತ್ತು ಕೀಲು ನೋವು, ಊದಿಕೊಂಡ ದುಗ್ಧರಸ ಗ್ರಂಥಿಗಳಂತಹ ಲಕ್ಷಣಗಳು(ಲಿಂಫಾಡೆನೋಪತಿ), ಮತ್ತು ದದ್ದು. ಜ್ವರ, ತುರಿಕೆ ದದ್ದು ಮತ್ತು ತಲೆನೋವು (“ಡೆಂಗ್ಯೂ ಟ್ರೈಡ್”) ಇರುವಿಕೆಯು ಡೆಂಗ್ಯೂನ ಲಕ್ಷಣವಾಗಿದೆ. ಡೆಂಗ್ಯೂ ಜ್ವರದ ಇತರ ಚಿಹ್ನೆಗಳೆಂದರೆ, ಒಸಡುಗಳಲ್ಲಿ ರಕ್ತಸ್ರಾವ, ಕಣ್ಣುಗಳ ಹಿಂದೆ ತೀವ್ರವಾದ ನೋವು (ರೆಟ್ರೋ-ಆರ್ಬಿಟಲ್), ಮತ್ತು ಕೆಂಪು ಅಂಗೈಗಳು.
ಹೆಚ್ಚಿನ ಜನರು ಒಂದು ವಾರದೊಳಗೆ ಚೇತರಿಸಿಕೊಳ್ಳುತ್ತಾರೆ. ಕೆಲವು ಸಂದರ್ಭಗಳಲ್ಲಿ, ರೋಗಲಕ್ಷಣಗಳು ಉಲ್ಬಣಗೊಳ್ಳುತ್ತವೆ ಮತ್ತು ಜೀವಕ್ಕೆ ಅಪಾಯಕಾರಿಯಾಗಬಹುದು. ಇದನ್ನು ತೀವ್ರ ಡೆಂಗ್ಯೂ, ಡೆಂಗ್ಯೂ ಹೆಮರಾಜಿಕ್ ಜ್ವರ ಅಥವಾ ಡೆಂಗ್ಯೂ ಶಾಕ್ ಸಿಂಡ್ರೋಮ್ ಎಂದು ಕರೆಯಲಾಗುತ್ತದೆ. ಡೆಂಗ್ಯೂ ಜ್ವರ ಬಂದ ವ್ಯಕ್ತಿಯ ರಕ್ತನಾಳಗಳು ಹಾನಿಗೊಳಗಾದಾಗ ಮತ್ತು ಸೋರಿಕೆಯಾದಾಗ ತೀವ್ರವಾದ ಡೆಂಗ್ಯೂ ಸಂಭವಿಸುತ್ತದೆ. ಮತ್ತು ರಕ್ತಪ್ರವಾಹದಲ್ಲಿನ ಹೆಪ್ಪುಗಟ್ಟುವಿಕೆ, ಜೀವಕೋಶಗಳನ್ನು ರೂಪಿಸುವ (ಪ್ಲೇಟ್‌ಲೆಟ್‌ಗಳು) ಸಂಖ್ಯೆಯು ಕಡಿಮೆಯಾಗುತ್ತದೆ. ಇದು ಆಘಾತ, ಆಂತರಿಕ ರಕ್ತಸ್ರಾವ, ಅಂಗಾಂಗ ವೈಫಲ್ಯ ಮತ್ತು ಸಾವಿಗೆ ಕಾರಣವಾಗಬಹುದು.
ತೀವ್ರವಾದ ಡೆಂಗ್ಯೂ ಜ್ವರದ ಎಚ್ಚರಿಕೆ ಚಿಹ್ನೆಗಳು – ಇದು ಮಾರಣಾಂತಿಕ ತುರ್ತುಸ್ಥಿತಿ – ತ್ವರಿತವಾಗಿ ಬೆಳೆಯಬಹುದು. ಎಚ್ಚರಿಕೆಯ ಚಿಹ್ನೆಗಳು ಸಾಮಾನ್ಯವಾಗಿ ನಿಮ್ಮ ಜ್ವರ ಹೋದ ನಂತರ ಮೊದಲ ದಿನ ಅಥವಾ ಎರಡು ದಿನಗಳಲ್ಲಿ ಪ್ರಾರಂಭವಾಗುತ್ತವೆ ಮತ್ತು ಇವುಗಳನ್ನು ಒಳಗೊಂಡಿರಬಹುದು : ತೀವ್ರ ಹೊಟ್ಟೆ ನೋವು, ನಿರಂತರ ವಾಂತಿ, ಒಸಡುಗಳು ಅಥವಾ ಮೂಗಿನಿಂದ ರಕ್ತಸ್ರಾವ, ಮೂತ್ರದಲ್ಲಿ ರಕ್ತ, ಮಲ ಅಥವಾ ವಾಂತಿ, ಚರ್ಮದ ಅಡಿಯಲ್ಲಿ ರಕ್ತಸ್ರಾವ, ಇದು ಮೂಗೇಟಿಗೊಳಗಾದಂತೆ ಕಾಣಿಸಬಹುದು, ಕಷ್ಟ ಅಥವಾ ತ್ವರಿತ ಉಸಿರಾಟ ಆಯಾಸ, ಕಿರಿಕಿರಿ ಅಥವಾ ಚಡಪಡಿಕೆ ಕಂಡು ಬರುತ್ತದೆ. ( ಸೂಚನೆ : ಮೇಲಿನ ಡೆಂಗ್ಯೂ ಜ್ವರದ ಲಕ್ಷಣಗಳ ಅಂಶಗಳು ವೀಕ್ಷಕರ ಮಾಹಿತಿಗಾಗಿ, ಈ ವಿಷಯದ ಬಗ್ಗೆ ತಜ್ಞ ವೈದ್ಯರನ್ನು ಸಂಪರ್ಕಿಸುವುದು.)
“ಬೆಂಗಳೂರು ವೈರ್” ಡಿಜಿಟಲ್ ವೆಬ್ ನ್ಯೂಸ್ ಪೋರ್ಟೆಲ್ಲಿನ ಸೋಶಿಯಲ್ ಮೀಡಿಯಾ ಪೇಜ್ ಹಾಗೂ Google News ಗಳಿಗೆ ಉಚಿತವಾಗಿ Subscribe ಆಗಲು Facebook, Telegram, Twitter, Dailyhunt, Youtube, Whatsup Channel ಗೆ ಜಾಯಿನ್ ಆಗಲು ಇವುಗಳ ಲಿಂಕ್ ಮೇಲೆ ಕ್ಲಿಕ್ ಮಾಡಿ.