ಬೆಂಗಳೂರು, ಜೂ.24 www.bengaluruwire.com : ದೇಶದಲ್ಲಿ ಹೃದಯಾಘಾತ ಪ್ರಕರಣಗಳು ಹೆಚ್ಚಾಗುತ್ತಿದ್ದು, ಕೆಲವರಲ್ಲಿ ಹೃದಯಾಘಾತದ ಲಕ್ಷಣಗಳು ಕಾಣಿಸಿಕೊಂಡರೆ ಇನ್ನೂ ಕೆಲವರಿಗೆ ಯಾವುದೇ ಲಕ್ಷಣಗಳು ಕಾಣಿಸಿಕೊಳ್ಳದೇ ಹೃದಯಾಘಾತವಾಗುತ್ತಿದೆ. ಇದರ ಬಗ್ಗೆ ಸಾಕಷ್ಟು ಎಚ್ಚರಿಕೆ ಮತ್ತು ಮುಂಜಾಗ್ರತೆ ವಹಿಸಬೇಕು. ಹೃದಯಾಘಾತಕ್ಕಿಂತಲೂ ಸೈಲೆಂಟ್ ಹಾರ್ಟ್ ಅಟ್ಯಾಕ್ ಹೆಚ್ಚು ಹಾನಿ ಮಾಡಬಹುದು ಎಂದು ಖ್ಯಾತ ಹೃದಯ ತಜ್ಞ ಡಾ.ದೇವಿಶೆಟ್ಟಿ ಹೇಳಿದ್ದಾರೆ.
ಏಕೆಂದರೆ ಹೃದಯಾಘಾತಕ್ಕಿಂತಲೂ ಸೈಲೆಂಟ್ ಇಸ್ಕೀಮಿಯಾ ಆಗಿ ಅದರಿಂದ ಸೈಲೆಂಟ್ ಹಾರ್ಟ್ ಅಟ್ಯಾಕ್ ಆಗುತ್ತದೆ. ಇದು ಹೆಚ್ಚು ಹಾನಿ ಮಾಡಬಹುದು ಎಂಬುದು ಅವರ ಅಭಿಪ್ರಾಯವಾಗಿದೆ. ಈ ಬಗ್ಗೆ ಎಎನ್ಐ ಗೆ ನೀಡಿದ ಸಂದರ್ಶನದಲ್ಲಿ, ಯುವಜನರಲ್ಲಿ ಹೆಚ್ಚುತ್ತಿರುವ ಹೃದಯಾಘಾತ ಪ್ರಕರಣಗಳ ಬಗ್ಗೆ ಕೆಲವು ಗಂಭೀರ ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ.
“ಬೆಂಗಳೂರಿನಲ್ಲಿ ಕೆಲವು ಸಾವಿರ ಯುವ ಜನತೆ ಸಾಮಾನ್ಯ ಜೀವನ ಸಾಗಿಸಿರುತ್ತಿರುವರು, ಹೆಚ್ಚು ಸಕ್ರಿಯರಾಗಿರುವವರು ಮ್ಯಾರಥಾನ್ ನಲ್ಲಿ ಪಾಲ್ಗೊಂಡರೆ ಅವರ ಶವವನ್ನು ವಾಪಸ್ ತರಬೇಕಷ್ಟೆ. ಏಕಂದರೆ ಅವರಿಗೆ ಹೃದಯದ ಪರಿಧಮನಿಯ ಕಾಯಿಲೆ ಇರುತ್ತೆ. ಕೆಲವು ಸಾವಿರ ಮಹಿಳೆಯರಿಗೆ ಸ್ತನ ಕ್ಯಾನ್ಸರ್ ಇದ್ದು, ಯಾವುದೇ ನೋವಿರುವುದಿಲ್ಲ. ಆ ರೋಗ ಉಲ್ಬಣಗೊಂಡು ನೋವು ಕಾಣಿಸಿಕೊಳ್ಳುವಷ್ಟರಲ್ಲಿ ಸಮಯ ಮೀರಿರುತ್ತೆ. ಆಧುನಿಕ ವೈದ್ಯಕೀಯ ಕ್ಷೇತ್ರ ಅತ್ಯುತ್ತಮ ಉಪಕರಣಗಳನ್ನು ಒದಗಿಸಿದೆ. ಆದರೆ ಜನರು ವೈದ್ಯಕೀಯ ಸಹಾಯ ಪಡೆದುಕೊಳ್ಳುವಲ್ಲಿ ವಿಫಲರಾಗುವುದೇ ಇದಕ್ಕೆಲ್ಲ ಕಾರಣ.
“ವೈದ್ಯರು ನಾವೇ ಜನರ ಬಳಿ ಹೋಗಿ ವೈದ್ಯಕೀಯ ಪರೀಕ್ಷೆ ಮಾಡಿಸಿಕೊಳ್ಳಿ ಅಂತ ಹೇಳೋಕಾಗಲ್ಲ. ಸ್ನೇಹಿತರು, ಸಂಬಂಧಿಗಳಿಗೆ ಹೇಳಬಹುದಷ್ಟೆ. ಜನರಿಗೆ ಹಾಗೆ ಹೇಳುವುದಕ್ಕೆ ಹೋದರೆ ನಾವು ಹಣ ಮಾಡಲು ಹೇಳುತ್ತಿದ್ದೇವೆ ಎಂದು ಭಾವಿಸುತ್ತಾರೆ” ಎಂದು ಡಾ.ದೇವಿಶೆಟ್ಟಿ ವಾಸ್ತವವನ್ನು ತೆರೆದಿಟ್ಟಿದ್ದಾರೆ.
“ಸಿಟಿ ಆಂಜಿಯೋ” ನಂತಹ ಕೆಲವು ಹೃದಯ ಪರೀಕ್ಷೆ ಮಾಡಿಸಿ :
“ಇತ್ತೀಚಿನ ದಿನಗಳಲ್ಲಿ ಸೆಲೆಬ್ರೆಟಿ ಮತ್ತಿತರ ಖ್ಯಾತ ವ್ಯಕ್ತಿಗಳು ಹೃದಯಾಘಾತದಿಂದ ಮೃತಪಟ್ಟಾಗ ಮಾಧ್ಯಮಗಳಲ್ಲಿ, ಸಮಾಜದಲ್ಲಿ ದೊಡ್ಡ ಚರ್ಚೆಯಾಗುತ್ತದೆ. ಆ ರೀತಿ ಮೃತಪಟ್ಟ ವ್ಯಕ್ತಿ ಕೆಲವು ವರ್ಷಗಳ ಹಿಂದೆಯೇ “ಸಿಟಿ ಆಂಜಿಯೋ” ನಂತಹ ಕೆಲವು ಹೃದಯ ಪರೀಕ್ಷೆಗಳನ್ನು ಮಾಡಿಸಿದಲ್ಲಿ ಮುಂಚೆಯೇ ಹೃದಯ ಖಾಯಿಲೆಯನ್ನು ನಿರೀಕ್ಷೆ ಮಾಡಬಹುದು ಅಥವಾ ತಡೆಗಟ್ಟಬಹುದು. ಹೃದಯಾಘಾತಗಳು ತತಕ್ಷಣ ಆಗುವುದಿಲ್ಲ. ಅದಕ್ಕೆ ಪೂರಕ ಪರಿಸ್ಥಿತಿಗಳು ನಿರ್ಮಾಣವಾಗುತ್ತದೆ. ಆಮೇಲಷ್ಟೆ ಹಾರ್ಟ್ ಅಟ್ಯಾಕ್ ಆಗುತ್ತದೆ. ಜನರು ವೈದ್ಯರನ್ನು ಭೇಟಿಯಾಗಿ ಸೂಕ್ತ ಪರೀಕ್ಷೆಗಳನ್ನು ಮಾಡಿಸಿದಲ್ಲಿ ಈ ರೀತಿಯ ಸಾವುಗಳನ್ನು ತಡೆಯಬಹುದು.
“30-40 ವರ್ಷಗಳ ಕೆಳಗೆ ಖಾಯಿಲೆಗಳನ್ನು ಪತ್ತೆ ಮಾಡಲು ಸೂಕ್ತ ವೈದ್ಯಕೀಯ ಯಂತ್ರೋಪಕರಣ, ತಂತ್ರಜ್ಞಾನ ಇರಲಿಲ್ಲ. ಈಗ ಅತ್ಯಾಧುನಿಕ ಸಲಕರಣೆಗಳಿವೆ. ಎಂತಹ ಆರೋಗ್ಯ ಸಮಸ್ಯೆಗಳನ್ನು ಪತ್ತೆಹಚ್ಚಬಹುದು. ಸೂಜಿ ಚುಚ್ಚದೆ ಆರೋಗ್ಯದ ಬಗ್ಗೆ ನಿಖರವಾದ ಫಲಿತಾಂಶ ನೀಡುತ್ತದೆ. ಇದು ಆರೋಗ್ಯ ಕ್ಷೇತ್ರದ ಚಮತ್ಕಾರ. ಆದರೆ ಜನರು ಅವರಿಗೆ ಯಾವ ನೋವು ಇಲ್ಲದಾಗ ವೈದ್ಯರನ್ನು ಭೇಟಿಯಾಗಲು ಹಿಂಜರಿಯುತ್ತಾರೆ. ಪ್ರತಿಯೊಬ್ಬರೂ ಹೃದಯಾಘಾತ ಆಗುವುದು ತಿಳಿಯುವ ತನಕ ಸುಮ್ಮನಿರುತ್ತಾರೆ. ಆನಂತರ ವೈದ್ಯರ ಬಳಿ ಓಡಿ ಬರುತ್ತಾರೆ. ಅಷ್ಟೊತ್ತಿಗಾಗಲೇ ಸಮಯ ಮೀರಿರುತ್ತೆ.
ಅವರು ಹೇಳುವ ಪ್ರಕಾರ “ಆರೋಗ್ಯವಾಗಿರುವಂತೆ ಕಾಣುವಂತವರು ಹೃದಯಾಘಾತಕ್ಕೆ ಬಲಿಯಾಗಬಹುದು. ನಾವು ಆರೋಗ್ಯವಾಗಿದ್ದೇವೆ ಎಂದು ನಂಬಿರುತ್ತೇವೆ ಆದರೆ ಶೇ. 50 ಗಿಂತಲೂ ಹೆಚ್ಚು ರೋಗಿಗಳಲ್ಲಿ ಹೃದ್ರೋಗಕ್ಕೆ ಸಂಬಂಧ ಪಟ್ಟಂತೆ ಯಾವುದೇ ರೀತಿಯ ಲಕ್ಷಣಗಳು ಕಂಡು ಬರುವುದಿಲ್ಲ” ಎಂದಿದ್ದಾರೆ.
ನಿಮ್ಮ ಆರೋಗ್ಯದ ಬಗ್ಗೆ ಇರಲಿ ಕಾಳಜಿ :
ಯಾವುದೇ ಕಾಯಿಲೆ ಇರಲಿ ಅಥವಾ ಇಲ್ಲದಿರಲಿ ವರ್ಷಕ್ಕೆ ಒಂದು ಬಾರಿಯಾದರೂ ದೇಹವನ್ನು ಪೂರ್ತಿಯಾಗಿ ಪರೀಕ್ಷಿಸಿಕೊಳ್ಳಬೇಕು. ನಮ್ಮಲ್ಲಿ ನೋವು ಬರುವವರೆಗೂ ಜನ ಆಸ್ಪತ್ರೆಗೆ ಹೋಗುವುದಿಲ್ಲ ಇದರಿಂದ ಕೊನೆ ಹಂತದ ಚಿಕಿತ್ಸೆ ಫಲ ಕೊಡಬಹುದು ಅಥವಾ ಕೊಡದಿರಬಹುದು ಹಾಗಾಗಿ ಮೊದಲೇ ಈ ಬಗ್ಗೆ ಎಚ್ಚೆತ್ತುಕೊಳ್ಳಬೇಕು. ಅದರಲ್ಲಿಯೂ ನಮ್ಮಲ್ಲಿ ಶೇ.70 ಗಿಂತಲೂ ಹೆಚ್ಚಿನವರಿಗೆ ತಮ್ಮ ರಕ್ತದೊತ್ತಡ ಎಷ್ಟಿದೆ ಎಂಬುದು ತಿಳಿದಿರುವುದಿಲ್ಲ. ನಮ್ಮ ಕರುಳಿನ ಆರೋಗ್ಯ ಹೇಗಿದೆ ಎಂಬುದರ ಅರಿವಿರುವುದಿಲ್ಲ. ಹಾಗಾಗಿ ಇವುಗಳ ಬಗ್ಗೆ ತಿಳಿದುಕೊಳ್ಳುವುದು ಪ್ರಮುಖವಾಗುತ್ತದೆ.
ವರದಿಗಳು ಹೇಳುವ ಪ್ರಕಾರ 2022ರಲ್ಲಿ ಭಾರತದಲ್ಲಿ ಸೈಲೆಂಟ್ ಹಾರ್ಟ್ ಅಟ್ಯಾಕ್ ಅಥವಾ ಹಠಾತ್ ಹೃದಯಾಘಾತಗಳು ಶೇ. 12.5 ಹೆಚ್ಚಾಗಿದೆ. ಇದಕ್ಕೆ ಮುಖ್ಯ ಕಾರಣ ಆಹಾರದಲ್ಲಿ ಆದಂತಹ ಬದಲಾವಣೆ, ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಳ್ಳದಿರುವುದು, ಧೂಮಪಾನ, ಅಧಿಕ ತೂಕ ಅಥವಾ ಸ್ಥೂಲಕಾಯತೆ, ವ್ಯಾಯಾಮದ ಕೊರತೆ, ಅಧಿಕ ರಕ್ತದೊತ್ತಡ, ಹೆಚ್ಚಿನ ಮಟ್ಟದ ಕೊಲೆಸ್ಟ್ರಾಲ್ ಮತ್ತು ಮಧುಮೇಹ, ಚಯಾಪಚಯ ಅಸ್ವಸ್ಥತೆಗಳು ಎಲ್ಲವೂ ಇದಕ್ಕೆ ಕಾರಣವಾಗಬಹುದು. ಹೀಗಾಗಿ ಆರೋಗ್ಯದ ಬಗ್ಗೆ ಕಾಳಜಿ, ಸರಳ ಆಹಾರ ಕ್ರಮ ಹಾಗೂ ನಿಯಮಿತ ವ್ಯಾಯಾಮ, ಒತ್ತಡ ರಹಿತ ಜೀವನವು ಉತ್ತಮ ಆರೋಗ್ಯ ಕಾಯ್ದುಕೊಳ್ಳುವಲ್ಲಿ ಸಹಕಾರಿಯಾಗಿದೆ.
“ಬೆಂಗಳೂರು ವೈರ್” ಡಿಜಿಟಲ್ ವೆಬ್ ನ್ಯೂಸ್ ಪೋರ್ಟೆಲ್ಲಿನ ಸೋಶಿಯಲ್ ಮೀಡಿಯಾ ಪೇಜ್ ಹಾಗೂ Google News ಗಳಿಗೆ ಉಚಿತವಾಗಿ Subscribe ಆಗಲು Facebook, Telegram, Twitter, Dailyhunt, Youtube, Whatsup Channel ಗೆ ಜಾಯಿನ್ ಆಗಲು ಇವುಗಳ ಲಿಂಕ್ ಮೇಲೆ ಕ್ಲಿಕ್ ಮಾಡಿ.