ತಿರುಮಲ, ಜೂ.23 www.bengaluruwire.com : ತಿರುಪತಿಯ ಶ್ರೀ ವೆಂಕಟೇಶ್ವರನ ಭಕ್ತರಿಗೆ ಸಿಹಿ ಸುದ್ದಿ. ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ -TTD) ತಾನು ಉತ್ಪಾದಿಸುವ ಲಡ್ಡು ಪ್ರಸಾದದ ಗುಣಮಟ್ಟವನ್ನು ಸುಧಾರಿಸುವತ್ತ ಗಮನಹರಿಸಿದೆ.
ಇದಕ್ಕೆ ಕಾರಣ, ಆಂಧ್ರಪ್ರದೇಶದಲ್ಲಿ ಬದಲಾವಣೆಯ ಗಾಳಿ ಬೀಸುತ್ತಿದ್ದು, ಚಂದ್ರಬಾಬು ನಾಯ್ಡು ಮುಖ್ಯಮಂತ್ರಿಯಾಗಿ ಅಧಿಕಾರಕ್ಕೆ ಮರಳುತ್ತಿದ್ದಂತೆ ಆದ್ಯತೆ ಮೇರೆಗೆ ತಿರುಪತಿ ತಿಮ್ಮಪ್ಪನ ಸೇವೆಯಲ್ಲಿ ತೊಡಗಿದ್ದಾರೆ. ಅಂದರೆ ತಿರುಪತಿ ತಿಮ್ಮಪ್ಪನ ಭಕ್ತರಿಗೆ ಅನೇಕ ಸಿಹಿ ಸುದ್ದಿಗಳನ್ನು ಕೊಡುತ್ತಿದ್ದಾರೆ. ತಿರುಪತಿ ತಿಮ್ಮಪ್ಪನ ಸನ್ನಿಧಾನದಲ್ಲಿ ಅಕ್ರಮಗಳು ಹೆಚ್ಚಾಗಿವೆ ಎಂದು ಬೇಸರಗೊಂಡಿದ್ದ ಭಕ್ತರಿಗೆ ಸಮಾಧಾನಕರ ಸಂಗತಿಗಳನ್ನು ಹೇಳಿದ್ದಾರೆ.
ಮೊದಲು ಬೆಟ್ಟದ ಸ್ವಚ್ಛತೆಗೆ ಆದ್ಯತೆ ಕೊಟ್ಟಿದ್ದು, ಇನ್ನು ಶ್ರೀ ವೆಂಕಟೇಶ್ವರನ ದೇವಸ್ಥಾನ ಒಳಗಡೆಯೂ ಒಂದಷ್ಟು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಿದ್ದಾರೆ. ಅಲ್ಲದೆ ತಿಮ್ಮಪ್ಪನ ಭಕ್ತರ ಭಾವನೆಗಳನ್ನು ಘಾಸಿಗೊಳಿಸದಂತೆಯೂ ತಿರುಪತಿ ತಿರುಮಲ ದೇವಸ್ಥಾನದ ಆಡಳಿತ ಮಂಡಳಿಗೆ ಸೂಚನೆಗಳನ್ನು ರವಾನಿಸಿದ್ದಾರೆ. ಅದರಲ್ಲಿ ಲಡ್ಡು ಪ್ರಸಾದದ ಗುಣಮಟ್ಟದ ಬಗ್ಗೆ ಭಕ್ತರಿಂದ ಸಾಕಷ್ಟು ದೂರುಗಳು ಬಂದಿದ್ದವು.
ಈ ಹಿನ್ನಲೆಯಲ್ಲಿ ಟಿಟಿಡಿ ಕಾರ್ಯನಿರ್ವಹಣಾಧಿಕಾರಿ (EO) ಜೆ.ಶ್ಯಾಮಲಾ ರಾವ್ ಶುಕ್ರವಾರ ಕರೆದಿದ್ದ ಸಭೆಯಲ್ಲಿ ಟಿಟಿಡಿಯ ಲಡ್ಡು ತಯಾರಿಕೆಯಲ್ಲಿ ಬಳಸುವ ಕಡಲೆ ಹಿಟ್ಟು, ತುಪ್ಪ, ಏಲಕ್ಕಿಗಳ ಗುಣಮಟ್ಟವನ್ನು ಸುಧಾರಿಸುವತ್ತ ಅಲ್ಲಿನ ಅಡುಗೆ ಭಟ್ಟರು, ಕೆಲಸಗಾರರು ಅವರಿಗೆ ಮನವಿ ಮಾಡಿದ್ದಾರೆ.
ವೆಂಕಟೇಶ್ವರ ದೇವಸ್ಥಾನದಲ್ಲಿ ಭಕ್ತರಲ್ಲಿ ಯಾವಾಗಲೂ ಬೇಡಿಕೆಯಲ್ಲಿರುವ ಲಡ್ಡುಗಳ ಗುಣಮಟ್ಟ ಹೆಚ್ಚಾದರೆ ಅಷ್ಟರ ಮಟ್ಟಿಗೆ ಭಕ್ತರಿಗೂ ಸಂತೋಷ ದುಪ್ಪಟ್ಟಾಗುವುದರಲ್ಲಿ ಸಂದೇಹವಿಲ್ಲ. ಟಿಟಿಡಿಯ ಲಡ್ಡು ಪ್ರಸಾದ ತಯಾರಿಸುವ ಅಡುಗೆ ಕೆಲಸಗಾರರು ಮತ್ತು ದೇವಸ್ಥಾನದ ಹಿರಿಯ ಅಧಿಕಾರಿಗಳನ್ನು ಭೇಟಿ ಮಾಡಿ ಸಿಹಿತಿಂಡಿಗಳ ಗುಣಮಟ್ಟ ಕಡಿಮೆಯಾಗುತ್ತಿರುವ ಬಗ್ಗೆ ದೂರುಗಳು ಮತ್ತು ಅದರ ಸುಧಾರಣೆಗೆ ಅನುಸರಿಸಬೇಕಾದ ವಿಧಾನಗಳ ಬಗ್ಗೆ ಇಒ ಜೆ.ಶ್ಯಾಮಲಾ ರಾವ್ ಚರ್ಚಿಸಿದರು.
ಆಗ ಇದಕ್ಕೆ ಪ್ರತಿಕ್ರಿಯೆಯಾಗಿ, ಲಡ್ಡು ತಯಾರಿಸುವ ಕೆಲಸಗಾರರು ಅವರಿಗೆ ಸಂಸ್ಕರಿಸಿದ ಕಡಲೆ ಹಿಟ್ಟು ಮತ್ತು ಉತ್ತಮ ಗುಣಮಟ್ಟದ ತುಪ್ಪ, ಉನ್ನತ ದರ್ಜೆಯ ಏಲಕ್ಕಿಯನ್ನು ಒದಗಿಸುವ ಬಗ್ಗೆ ಇಒ ಅವರಿಗೆ ತಿಳಿಸಿದರು. ಇದರಿಂದಾಗಿ ಲಡ್ಡುವಿನ ಪರಿಮಳ ಮತ್ತು ದೀರ್ಘ ಬಾಳಿಕೆ ಹೆಚ್ಚಾಗುತ್ತದೆ ಎಂದರು. ದೇವಸ್ಥಾನದ ಅಧಿಕಾರಿಗಳು ಲಡ್ಡುಗಳನ್ನು ತಯಾರಿಸಲು ಕಚ್ಚಾ ವಸ್ತುಗಳನ್ನು ಖರೀದಿಸಲು ಮುಕ್ತ ಟೆಂಡರ್‌ಗಳನ್ನು ಆಹ್ವಾನಿಸಿದ್ದಾರೆ ಮತ್ತು ನಿಗದಿಪಡಿಸಿದ ಷರತ್ತುಗಳನ್ನು ಪೂರೈಸಿದ ನಂತರ ಕಡಿಮೆ ಬೆಲೆ ಕೋಟ್ ಮಾಡಿದವರಿಗೆ ಟೆಂಡರ್ ಆದೇಶವನ್ನು ನೀಡಲಾಯಿತು.
ಲಡ್ಡು ಉತ್ಪಾದನೆಗೆ ಸಂಬಂಧಿಸಿದ ಇತರ ವಿಷಯಗಳ ಬಗ್ಗೆ ಪ್ರಶ್ನಿಸಿದಾಗ, ಕಾರ್ಮಿಕರು ಮಾನವ ಸಂಪನ್ಮೂಲದ ಕೊರತೆಯನ್ನು ಎತ್ತಿ ತೋರಿಸಿದರು. ಇತ್ತೀಚಿನ ದಿನಗಳಲ್ಲಿ ಬಹುಪಟ್ಟು ಕೆಲಸದ ಹೊರೆ ಹೆಚ್ಚಾಗಿದ್ದು, ಅದಕ್ಕೆ ತಕ್ಕಂತೆ ಈಗಿರುವ ಮಾನವ ಸಂಪನ್ಮೂಲ ಸಾಕಾಗುವುದಿಲ್ಲ ಎಂದು ವಾಸ್ತವವನ್ನು ಅಧಿಕಾರಿಗಳಿಗೆ ಹೇಳಿದರು.
ಬಹಳ ಹೊತ್ತು ಸುಧೀರ್ಘ ಚರ್ಚೆಯ ನಂತರ, ಆಡಳಿತ ಮಂಡಳಿಯು ಒಂದು ನಿರ್ದಿಷ್ಟ ನಿರ್ಧಾರಕ್ಕೆ ಬರಲು ಅನುವು ಮಾಡಿಕೊಡಲು ಉತ್ತಮ ಗುಣಮಟ್ಟದ ಪದಾರ್ಥಗಳನ್ನು ಬಳಸಿಕೊಂಡು ಪ್ರಾಯೋಗಿಕ ಆಧಾರದ ಮೇಲೆ ಲಡ್ಡುಗಳನ್ನು ತಯಾರಿಸಲು ಶ್ಯಾಮಲಾ ರಾವ್ ಅವರು ಕಾರ್ಮಿಕರಿಗೆ ಸೂಚನೆ ನೀಡಿದ್ದಾರೆ. ಆದ್ದರಿಂದ ಇನ್ನು ಮುಂದಾದರೂ ತಿರುಪತಿ ಲಡ್ಡುವಿನ ಗತವೈಭವ ಮರಳುವುದೇ? ಕಾದು ನೋಡಬೇಕಿದೆ.
ಟಿಟಿಡಿಯು ಪಾವತಿಸಿದ ದರ್ಶನಕ್ಕೆ (ಅರಿಜಿತ್ ಸೇವೆ) ಆದ್ಯತೆ ನೀಡುತ್ತಿರುವುದರಿಂದ ಮತ್ತು ವಿಐಪಿಗಳಿಗೆ ದರ್ಶನ ಟಿಕೆಟ್‌ಗಳ ಕೋಟಾವನ್ನು ಹೆಚ್ಚಿಸುತ್ತಿರುವುದರಿಂದ ಸಾಮಾನ್ಯ ಯಾತ್ರಿಕರಿಗೆ ತೊಂದರೆಯಿಲ್ಲದ ಮತ್ತು ಆರಾಮದಾಯಕ ದರ್ಶನವನ್ನು ಒದಗಿಸುವುದು ಹೊಸ ಕಾರ್ಯನಿರ್ವಾಹಕ ಅಧಿಕಾರಿ ಜೆ ಶ್ಯಾಮಲಾ ರಾವ್‌ಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ.