ಬೆಂಗಳೂರು, ಜೂ.22 www.bengaluruwire.com : ಕನ್ನಡ ಸಾರಸ್ವತ ಲೋಕದ ಅಮೂಲ್ಯ ರತ್ನವೊಂದು ಭುವನೇಶ್ವರಿ ತಾಯಿಯ ಮುಕುಟದಿಂದ ಕಳಚಿಬಿದ್ದಿದೆ. ಕನ್ನಡದ ಖ್ಯಾತ ಸಾಹಿತಿ ನಾಡೋಜ ಕಮಲ ಹಂಪನಾ (89) ಹೃದಯಾಘಾತದಿಂದ ಇಂದು ನಿಧನರಾಗಿದ್ದಾರೆ.
ಹೃದಯಾಘಾತದಿಂದ ಅವರು ಬೆಂಗಳೂರಿನ ರಾಜಾಜಿನಗರದ ತಮ್ಮ ನಿವಾಸದಲ್ಲಿ ಸಾವನ್ನಪ್ಪಿದ್ದಾರೆ. ಸಂಜೆಯ ತನಕ ಅವರ ಮನೆಯಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಬಳಿಕ ಅವರ ಇಚ್ಛೆಯಂತೆ ರಾಮಯ್ಯ ಮೆಡಿಕಲ್ ಕಾಲೇಜಿಗೆ ದೇಹದಾನ ಮಾಡಲಾಗುವುದು ಎಂದು ಅವರ ಕುಟುಂಬ ತಿಳಿಸಿದೆ.
ಕಮಲಾ ಹಂಪನಾ ಅವರು ಕನ್ನಡದ ಲೇಖಕರಾಗಿ, ವಿದ್ವಾಂಸರಾಗಿ, ಪ್ರಾಧ್ಯಾಪಕರಾಗಿ, ಕನ್ನಡದ ಸಾಹಿತ್ಯ ಸೇವೆ ಮಾಡಿದ್ದರು. ಕನ್ನಡ ಸಾಹಿತ್ಯದ ಎಲ್ಲ ಪ್ರಕಾರಗಳಲ್ಲೂ ಗಂಭೀರವಾದ ಅಧ್ಯಯನ ಮತ್ತು ಸಂಶೋಧನೆಯನ್ನು ಕೈಗೊಂಡು ಆ ಎಲ್ಲ ಪ್ರಕಾರಗಳಲ್ಲಿ ಸಾಕಷ್ಟು ಕೊಡುಗೆಗಳನ್ನು ನೀಡಿದ್ದಾರೆ. 2003 ಡಿಸೆಂಬರ್ ತಿಂಗಳಲ್ಲಿ ಮೂಡುಬಿದಿರೆಯಲ್ಲಿ ಜರುಗಿದ 71 ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಕಮಲಾ ಹಂಪನಾ ಅಧ್ಯಕ್ಷರಾಗಿದ್ದರು.
ಕಮಲಾ ಹಂಪನಾ ಅವರು, ಬೆಂಗಳೂರು ಜಿಲ್ಲೆ ದೇವನಹಳ್ಳಿಯಲ್ಲಿ ಸಿ. ರಂಗಧಾಮನಾಯಕ್-ಲಕ್ಷಮ್ಮ ದಂಪತಿಗಳ ಪುತ್ರಿಯಾಗಿ 1935ರ ಅಕ್ಟೋಬರ್ 28ರಲ್ಲಿ ಜನಿಸಿದರು. ಚಳ್ಳಕೆರೆಯಲ್ಲಿ ಪ್ರಾರಂಭವಾದ ಪ್ರಾಥಮಿಕ ವಿದ್ಯಾಭ್ಯಾಸ ಬೇರೆ ಬೇರೆ ಊರುಗಳಲ್ಲಿ ಮುಂದುವರಿಯಿತು. ತುಮಕೂರಿನಲ್ಲಿ ಹೈಸ್ಕೂಲ್ ವಿದ್ಯಾಭ್ಯಾಸವಾಗಿ, 1953ರಲ್ಲಿ ಎಸ್.ಎಸ್.ಎಲ್.ಸಿ ಮುಗಿಸಿದರು. ಕಾಲೇಜು ವಿದ್ಯಾಭ್ಯಾಸ ಮೈಸೂರಿನಲ್ಲಿ ಮುಂದುವರೆದು 1955-58ರಲ್ಲಿ ಬಿ.ಎ. ಆನರ್ಸ್ ಮಾಡಿದರು. 1959 ರಲ್ಲಿ ಕನ್ನಡ ಅಧ್ಯಾಪಕಿಯಾಗಿ ಶಿಕ್ಷಣ ವೃತ್ತಿಗೆ ಪ್ರವೇಶಿಸಿ, ಬೆಂಗಳೂರು ಮತ್ತು ಮೈಸೂರು ಮಹಾರಾಣಿ ಕಾಲೇಜುಗಳಲ್ಲಿ ಪ್ರಾಧ್ಯಾಪಕರಾಗಿ ಬೆಂಗಳೂರಿನ ವಿಜಯನಗರದ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪ್ರಾಂಶುಪಾಲೆ ಆಗಿ ಕಾರ್ಯ ನಿರ್ವಹಿಸಿದರು.
ಸರ್ಕಾರಿ ಸೇವೆಯಿಂದ ನಿವೃತ್ತರಾದ ಮೇಲೆ ಮೈಸೂರು ವಿಶ್ವವಿದ್ಯಾಲಯದ ಜೈನಶಾಸ್ತ್ರ, ಪ್ರಾಕೃತ ಅಧ್ಯಯನದ ಪ್ರಾಧ್ಯಾಪಕರೂ, ಅಧ್ಯಕ್ಷರೂ, ಹಂಪಿ ಕನ್ನಡ ವಿಶ್ವವಿದ್ಯಾನಿಲಯದ ಸಂದರ್ಶಕ ಪ್ರಾಧ್ಯಾಪಕರೂ ಆಗಿದ್ದರು. ಸಾಹಿತ್ಯ ಕೃತಿಗಳು ನಕ್ಕಿತು ಹಾಲಿನ ಬಟ್ಟಲು, ರೆಕ್ಕೆ ಮುರಿದಿತ್ತು, ಚಂದನಾ, ಬಣವೆ ಸೇರಿದಂತೆ ಹಲವು ಸಾಹಿತ್ಯಗಳನ್ನು ರಚಿಸಿದ್ದಾರೆ. “ ಬೇರು ಬೆಂಕಿ ಬಿಳಲು “ ಬೃಹದ್ಗ್ರಂಥ ಕಮಲಾ ಹಂಪನಾ ಅವರ ಜೀವನಯಾನದ ಹೃದಯಸ್ಪರ್ಶಿ ಸಂಕಥನ.