ಬೆಂಗಳೂರು, ಜೂ.22 www.bengaluruwire.com : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ಸೆಪ್ಟೆಂಬರ್ ಅಥವಾ ಅಕ್ಟೋಬರ್ ವೇಳೆಗೆ ನಡೆಸುವ ಸಾಧ್ಯೆತೆ ಹೆಚ್ಚಾಗಿದೆ. ಇದಕ್ಕೆ ಪೂರ್ವಭಾವಿಯಾಗಿ ಕೆಪಿಸಿಸಿ ಅಧ್ಯಕ್ಷ ಮತ್ತು ಬೆಂಗಳೂರು ಅಭಿವೃದ್ಧಿ ಸಚಿವರಾದ ಡಿ.ಕೆ.ಶಿವಕುಮಾರ್, ಕಾಂಗ್ರೆಸ್ ಪಕ್ಷದ ಬೆಂಗಳೂರು ಮಾಜಿ ಮೇಯರ್ ಹಾಗೂ ಉಪಮೇಯರ್ ಗಳ ಜತೆ , ಚುನಾವಣೆ ತಯಾರಿ ಬಗ್ಗೆ ವಿಸ್ತ್ರತವಾಗಿ ಚರ್ಚೆ ನಡೆಸಿದರು.
ಕಾಂಗ್ರೆಸ್ ಕಚೇರಿಯ ಇಂದಿರಾ ಗಾಂಧಿ ಭವನದಲ್ಲಿ ಶನಿವಾರ ಸಭೆ ನಡೆಸಿದ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಶಿವಕುಮಾರ್ ಅವರು, “ಇಂದು ಮಾಜಿ ಮೇಯರ್ ಹಾಗೂ ಉಪಮೇಯರ್ ಗಳ ಜತೆ ಸಭೆ ಮಾಡಿ ಬೆಂಗಳೂರಿನ ಆಚಾರ ವಿಚಾರಗಳ ಬಗ್ಗೆ ಚರ್ಚೆ ಮಾಡಲಾಗಿದೆ. ಸಾರ್ವಜನಿಕರ ಸಮಸ್ಯೆಗಳ ಬಗ್ಗೆ ನಮ್ಮ ನಾಯಕರ ಅಭಿಪ್ರಾಯ ಕೇಳಿದ್ದೇವೆ. ಚುನಾವಣೆ ತಯಾರಿ ಬಗ್ಗೆ ಅನೇಕ ಸಲಹೆ ನೀಡಿದ್ದಾರೆ.”
ಮಾಜಿ ಮೇಯರ್ ಗಳ ಮಟ್ಟದಲ್ಲಿ ಸಮಿತಿ ರಚಿಸಲಾಗಿದ್ದು, ಎ ಖಾತೆ, ಬಿ ಖಾತೆ ಸೇರಿದಂತೆ ಅನೇಕ ಸಾರ್ವಜನಿಕ ಸಮಸ್ಯೆಗಳು ಹಾಗೂ ಆಡಳಿತಕ್ಕೆ ಸಂಬಂಧಪಟ್ಟ ಸಮಸ್ಯೆಗಳ ಬಗ್ಗೆ ಈ ಸಮಿತಿ ಅಧ್ಯಯನ ಮಾಡಿ ವರದಿ ನೀಡಲಿದೆ. ಮುಂದಿನ ಎಂಟು ಹತ್ತು ದಿನಗಳಲ್ಲಿ ಮತ್ತೊಮ್ಮೆ ಸಭೆ ಮಾಡುತ್ತೇವೆ. ಸಮಿತಿ ವರದಿ ಮೇಲೆ ಮುಖ್ಯಮಂತ್ರಿಗಳು ಹಾಗೂ ಶಾಸಕರ ಜತೆ ಚರ್ಚೆ ಮಾಡುತ್ತೇವೆ. ನಂತರ ನಮ್ಮ ಕಾರ್ಯಯೋಜನೆ ರೂಪಿಸುತ್ತೇವೆ. ಬಿಬಿಎಂಪಿ ಚುನಾವಣೆ ಮಾಡುತ್ತೀರಾ ಎಂದು ಕೇಳಿದಾಗ, “ಖಂಡಿತವಾಗಿ ಅದನ್ನು ಮಾಡಲೇಬೇಕು. ಅದನ್ನು ನಿರ್ಲಕ್ಷ್ಯ ಮಾಡಲು ಸಾಧ್ಯವಿಲ್ಲ” ಎಂದು ಹೇಳಿದ್ದಾರೆ.
ಮುಂದಿನ ತಿಂಗಳು ನಡೆಯುವ ಅಧಿವೇಶನದಲ್ಲಿ ಬಿಬಿಎಂಪಿಯನ್ನು ಆಡಳಿತಾತ್ಮಕವಾಗಿ ವಿಭಜನೆ ಮಾಡುವ ಸಂಬಂಧ ಮಸೂದೆಯನ್ನು ಮೇಲ್ಮನೆ ಮತ್ತು ಕೆಳಮನೆಯಲ್ಲಿ ಒಪ್ಪಿಗೆ ಪಡೆದುಕೊಂಡು ಅದನ್ನು, ಬಿಬಿಎಂಪಿ ಚುನಾವಣೆ ಸಂಬಂಧ ಹೈಕೋರ್ಟ್ ನಲ್ಲಿರುವ ಪ್ರಕರಣದ ವಿಚಾರಣೆ ವೇಳೆ ಕೋರ್ಟಿಗೆ ಸಲ್ಲಿಕೆ ಮಾಡಲಾಗುತ್ತದೆ. ಒಂದೊಮ್ಮೆ ಕೋರ್ಟ್ ಬಿಬಿಎಂಪಿ ವಿಭಜನೆಗೆ ಒಪ್ಪಿಗೆ ಸೂಚಿಸಿದರೆ ವಿಭಜನೆಯ ಬಳಿಕ ಬಿಬಿಎಂಪಿ ಚುನಾವಣೆ ನಡೆಸಲಾಗುತ್ತದೆ. ಉಚ್ಛನ್ಯಾಯಾಲಯ ಒಂದೊಮ್ಮೆ ವಿಭಜನೆಗೆ ಒಪ್ಪದಿದ್ದಲ್ಲಿ, ಕೂಡಲೇ ಬಿಬಿಎಂಪಿ ಚುನಾವಣೆ ನಡೆಸಲು ಸೂಚಿಸಿದರೆ, ಈಗಾಗಲೇ 225 ವಾರ್ಡ್ ಗಳ ಪುನರ್ ವಿಂಗಡಣೆ ಮಾಡಲಾಗಿದ್ದು, ಮೀಸಲಾತಿಯನ್ನು ನಿಗದಿಪಡಿಸಿದ್ದನ್ನು ಕೋರ್ಟಿಗೆ ಸಲ್ಲಿಕೆ ಮಾಡಿ, ಚುನಾವಣೆಗೆ ಮುಂದಾಗುತ್ತೇವೆ. ಎರಡೂ ಮಾರ್ಗಗಳನ್ನು ಎದುರು ನೋಡುತ್ತಿದ್ದೇವೆ ಎಂದು ಕಾಂಗ್ರೆಸ್ ಉನ್ನತ ಮೂಲಗಳು ಬೆಂಗಳೂರು ವೈರ್ ಗೆ ತಿಳಿಸಿವೆ.
ವಾರ್ಡ್ ಮಟ್ಟದಲ್ಲಿ ಈಗಾಗಲೇ ಜನರ ಮಧ್ಯೆ ನಿಂತು ಕೆಲಸ ಮಾಡಿ ಗುರ್ತಿಸಿಕೊಂಡ ಅಭ್ಯರ್ಥಿಗಳಿಗೆ ಸಹಜವಾಗಿ ಕಾಂಗ್ರೆಸ್ ಪಕ್ಷ ಆದ್ಯತೆ ನೀಡಲಿದೆ. ಚುನಾವಣೆಗೆ ತೆರೆಮರೆಯಲ್ಲಿ ಬರ್ಭರಿಯಾಗಿ ತಯಾರಿ ನಡೆಸಲಾಗುತ್ತಿದೆ ಎಂದು ಬಿಬಿಎಂಪಿ ಮಾಜಿ ನಾಯಕರೊಬ್ಬರು ಮಾಹಿತಿ ನೀಡಿದ್ದಾರೆ.
ಇಂದಿನ ಸಭೆಯಲ್ಲಿ ಕಾರ್ಯಾಧ್ಯಕ್ಷರಾದ ಡಾ.ಜಿ.ಸಿ ಚಂದ್ರಶೇಖರ್, ಮಂಜುನಾಥ್ ಭಂಡಾರಿ, ಮಾಜಿ ಮೇಯರ್ ಗಳಾದ ಪಿ.ಆರ್ ರಮೇಶ್, ಪದ್ಮಾವತಿ, ಸಂಪತ್ ರಾಜ್, ಮಂಜುನಾಥ್ ರೆಡ್ಡಿ, ಶಾಂತಾಕುಮಾರಿ, ಬಿಬಿಎಂಪಿ ಆಡಳಿತ ಪಕ್ಷದ ಮಾಜಿ ನಾಯಕ ಸತ್ಯನಾರಾಯಣ, ಶಿವರಾಜ್ ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.
ಗ್ಯಾರಂಟಿಯಿಂದ ಬೆಲೆ ಏರಿಕೆ ಮಾಡಿಲ್ಲ:
ಬೆಲೆ ಏರಿಕೆಗೆ ಗ್ಯಾರಂಟಿ ಯೋಜನೆಗಳೇ ಕಾರಣ ಎಂಬ ಎನ್ ಡಿಎ ಸಂಸದರ ಆರೋಪದ ಬಗ್ಗೆ ಕೇಳಿದಾಗ, “ಯಾರು ಏನಾದರೂ ಆರೋಪ ಮಾಡಲಿ. ಗ್ಯಾರಂಟಿ ಯೋಜನೆಗೂ ಬೆಲೆ ಏರಿಕೆಗೂ ಸಂಬಂಧವಿಲ್ಲ. ಕಾಲಕಾಲಕ್ಕೆ ಆಗಬೇಕಿರುವ ಬೆಲೆ ಏರಿಕೆ ನಾವು ಮಾಡಿದ್ದೇವೆ. ನಾವು ಬಿಜೆಪಿಯವರಂತೆ ಎಲ್ಲಾ ವಸ್ತುಗಳ ಬೆಲೆ ಏರಿಕೆ ಮಾಡಿಲ್ಲ. ಬಿಜೆಪಿ ಕಚ್ಛಾತೈಲ ಬೆಲೆ ಕುಸಿದಾಗಲೂ ಬೆಲೆ ಏರಿಕೆ ಮಾಡಿದ್ದಾರೆ. ನಾವು ಬಹಳ ಕಡಿಮೆ ಪ್ರಮಾಣದಲ್ಲಿ ನೆರೆ ರಾಜ್ಯಗಳ ಬೆಲೆ ಪ್ರಮಾಣವನ್ನು ಗಮನದಲ್ಲಿಟ್ಟುಕೊಂಡು ಇಂಧನ ತೈಲ ಬೆಲೆ ಏರಿಕೆ ಮಾಡಿದ್ದೇವೆ. ನಮ್ಮ ಗ್ಯಾರಂಟಿಗಳು ಮುಂದುವರಿಯಲಿದೆ. ರಾಜ್ಯದ ಅಭಿವೃದ್ಧಿಗೆ ಏನು ಮಾಡಬೇಕೋ ಆ ಕೆಲಸ ಮಾಡುತ್ತೇವೆ” ಎಂದರು.
ಸೂರಜ್ ರೇವಣ್ಣ ಅವರ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪದ ಬಗ್ಗೆ ಕೇಳಿದಾಗ, “ಅವರ ಕುಟುಂಬದಲ್ಲಿ ದೊಡ್ಡವರಿದ್ದಾರೆ. ಅವರು ಉತ್ತರ ನೀಡುತ್ತಾರೆ. ನಮಗೆ ಆ ವಿಚಾರ ಬೇಡ” ಎಂದು ಹೇಳಿದರು.