ದೊಡ್ಡಬಳ್ಳಾಪುರ, ಜೂ.17 www.bengaluruwire.com : ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಉಪನಗರದ ಹೊರವರ್ತುಲ ರಸ್ತೆಯ ದಾಬಸ್ ಪೇಟೆ ಮತ್ತು ದೊಡ್ಡಬಳ್ಳಾಪುರ ಟೋಲ್ ರಸ್ತೆ ಪೂರ್ಣಗೊಂಡಿದ್ದು, ಹುಲಿಕುಂಟೆ ಗ್ರಾಮದಲ್ಲಿನ ಟೋಲ್ ಫ್ಲಾಜಾದಲ್ಲಿ ಟೋಲ್ ಸುಂಕ ಸಂಗ್ರಹ ಜೂನ್ 14ರಿಂದ ಪ್ರಾರಂಭವಾಗಿದ್ದು ವಾಹನ ಸವಾರರಿಂದ ಉತ್ತಮ ಸ್ಪಂದನೆ ದೊರೆಯುತ್ತಿದೆ.
ಜೂನ್ 14 ರಿಂದ ಎಲ್ಲ ರೀತಿಯ ಖಾಸಗಿ ಮತ್ತು ವಾಣಿಜ್ಯ ವಾಹನಗಳು ದರಪಟ್ಟಿ ಪ್ರಕಾರ ಸುಂಕ ಪಾವತಿಸಬೇಕಿದೆ. ದ್ವಿಚಕ್ರ ವಾಹನಗಳಿಗೆ ಮಾತ್ರ ಟೋಲ್ ಸುಂಕದಿಂದ ವಿನಾಯಾತಿ ನೀಡಲಾಗಿದೆ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ. ಟೋಲ್ ದರಪಟ್ಟಿಯನ್ನು ಸಹ ಪ್ರಕಟಿಸಿದೆ. ದಾಬಸ್ ಪೇಟೆ- ದೊಡ್ಡಬಳ್ಳಾಪುರ- ದೇವನಹಳ್ಳಿ- ಹೊಸಕೋಟೆ ಮೂಲಕ ಹಾದುಹೋಗಿರುವ ರಾಷ್ಟ್ರೀಯ ಹೆದ್ದಾರಿ ರಾಷ್ಟ್ರೀಯ ಹೆದ್ದಾರಿ ಹಲವು ಕಾರಣಗಳಿಂದ ಯೋಜನೆ ನೆನಗುದಿಗೆ ಬಿದ್ದಿತ್ತು. ಇದೀಗ ದಾಬಸ್ ಪೇಟೆ- ದೊಡ್ಡಬಳ್ಳಾಪುರ ಟೋಲ್ ಪೂರ್ಣಗೊಂಡು ಹೆದ್ದಾರಿ ಸಂಚಾರ ಸುಗಮವಾಗಿದೆ.
ದಿನದ 24 ಗಂಟೆಯಲ್ಲಿ ಕಾರಿನ ಒಂದು ಕಡೆ ಸಂಚಾರಕ್ಕೆ 105 ರೂಪಾಯಿ, ಅದೇ ದಾರಿಯಲ್ಲಿ ಹೋಗಿ ವಾಪಸ್ ಬರುವುದಾದರೆ 155 ರೂಪಾಯಿ ನಿಗದಿ ಮಾಡಿದೆ. ಮಾಸಿಕ ಪಾಸ್ನಲ್ಲಿ 50 ಸಲ ಒನ್ ವೇ ಪ್ರಯಾಣಕ್ಕೆ 3,470 ರೂಪಾಯಿ ನಿಗದಿ ಮಾಡಿದೆ. ಅಲ್ಲದೇ ಭಾರಿ ವಾಹನ ಸೇರಿದಂತೆ ವಿವಿಧ ವಾಹನಗಳಿಗೆ ಬೇರೆ ಬೇರೆ ಶುಲ್ಕ ನಿಗದಿಪಡಿಸಿದೆ.
ಉಪನಗರ ಹೊರವರ್ತುಲ ರಸ್ತೆ ಯೋಜನೆಯಡಿ ಟೋಲ್ ರಸ್ತೆಯನ್ನ ನಿರ್ಮಾಣ ಮಾಡಲಾಗಿದ್ದು, ಈಗಾಗಲೇ ಮೊದಲ ಹಂತದಲ್ಲಿ ನೆಲ್ಲೂರು- ದೇವನಹಳ್ಳಿಯ 34.15 ಕಿ.ಮೀ ಟೋಲ್ ಸುಂಕ ಸಂಗ್ರಹ 2023ರ ನವೆಂಬರ್ 17ರಿಂದ ಪ್ರಾರಂಭವಾಗಿದೆ.
ಬೆಂಗಳೂರು ನಗರಕ್ಕೆ ಪ್ರಮುಖ ನಗರಗಳನ್ನು ಸಂಪರ್ಕಿಸುವ ಕಾರಣಕ್ಕೆ ಉಪನಗರ ಹೊರವರ್ತುಲ ರಸ್ತೆ (STRR) ನಿರ್ಮಾಣ ಮಾಡಲಾಗಿದೆ. ಮೊದಲ ಹಂತದಲ್ಲಿ 101 ಕಿ.ಮೀಗಳ ದಾಬಸ್ಪೇಟ್- ಹೊಸಕೋಟೆ ರಸ್ತೆ ಕಾಮಗಾರಿ ಈಗಾಗಲೇ ಪೂರ್ಣಗೊಂಡಿದ್ದು, ಒಂದು ಕಡೇ ಟೋಲ್ ಸಂಗ್ರಹ ಆಗಲೇ ಆರಂಭವಾಗಿದೆ. ಜೂನ್ 14ರಿಂದ ಎರಡನೇ ಟೋಲ್ ಬೂತ್‌ನಲ್ಲಿ ಟೋಲ್ ಸುಂಕ ಸಂಗ್ರಹ ಪ್ರಾರಂಭವಾಗಿದೆ.
ಈ ಎಸ್ ಟಿಆರ್ ಆರ್ ಮಾರ್ಗದಿಂದ ಡಾಬಸ್‌ಪೇಟೆ – ದೊಡ್ಡಬಳ್ಳಾಪುರ ಮಾರ್ಗ ಸಂಚಾರಕ್ಕೆ ಮುಕ್ತವಾಗಿದ್ದು, ತುಮಕೂರು ರಸ್ತೆಯಿಂದ ಬೆಂಗಳೂರು ನಗರಕ್ಕೆ ಬರುವ ಭಾರೀ ವಾಹನಗಳ ಪ್ರಮಾಣ ತಗ್ಗಲಿದೆ ಎಂದು ಸಂಚಾರಿ ಪೊಲೀಸರು ನಿರೀಕ್ಷೆ ಮಾಡಿದ್ದಾರೆ.
ದೊಡ್ಡಬಳ್ಳಾಪುರ ತಾಲೂಕು ಪ್ರವೇಶಕ್ಕೆ ಟೋಲ್ ಕೋಟೆ!! :
ಬೆಂಗಳೂರು ಗ್ರಾಮಾಂತರ ಜಿಲ್ಲೆಯನ್ನು ಟೋಲ್ ಪ್ಲಾಜಾಗಳು ಆವರಿಸಿವೆ. ದೊಡ್ಡಬಳ್ಳಾಪುರ ತಾಲೂಕಿನ ಒಳಗೆ ಬರಬೇಕಾದರೆ, ಟೋಲ್ ಪಾವತಿ ಮಾಡಿಯೇ ಪ್ರವೇಶಿಸಬೇಕು ಎಂಬಷ್ಟರ ಮಟ್ಟಿಗೆ ಟೋಲ್‌ಗಳಿವೆ. ಬೆಂಗಳೂರಿಂದ ಬರುವವರು ಮಾರಸಂದ್ರ ಟೋಲ್‌ನಲ್ಲಿ, ಗೌರಿಬಿದನೂರು, ಹಿಂದೂಪುರದಿಂದ ಬರುವವರು ಗುಂಜೂರು ಟೋಲ್‌ನಲ್ಲಿ ಹೊಸಕೋಟೆಯಿಂದ ಬರುವವರು ನಲ್ಲೂರು ಟೋಲ್ ನಲ್ಲಿ ಮತ್ತು ಇದೀಗ ದಾಬಸ್‌ಪೇಟೆ ಕಡೆಯಿಂದ ಬರುವ ಸವಾರರು ನೂತನ ಹುಲಿಕುಂಟೆ ಟೋಲ್ ಪ್ಲಾಜಾದಲ್ಲಿ ಸುಂಕ ಪಾವತಿ ಮಾಡಿ ದೊಡ್ಡಬಳ್ಳಾಪುರಕ್ಕೆ ಆಗಮಿಸಬೇಕಾಗಿದೆ.