ಮಂತ್ರಾಲಯ, ಜೂ.15 www.bengaluruwire.com : ಭಕ್ತರ ಅನುಕೂಲಕ್ಕೆಂದು ಕರ್ನಾಟಕದ ಹಿಂದೂ ಧಾರ್ಮಿಕ ಸಂಸ್ಥೆಗಳು ಹಾಗೂ ಧರ್ಮಾದಾಯ ದತ್ತಿಗಳ ಇಲಾಖೆ 2022ರಲ್ಲಿ ಉದ್ಘಾಟಿಸಿರುವ 50 ಕೊಠಡಿಗಳ ನೂತನ ಅತಿಥಿಗೃಹ ಹಲವು ಅವ್ಯವಸ್ಥೆಗಳ ಅಗರವಾಗಿದೆ. ಕಟ್ಟಡ ನಿರ್ಮಾಣದಲ್ಲಿ ಕಳಪೆ ಸಾಮಗ್ರಿ ಬಳಸಿ ಕೋಟ್ಯಾಂತರ ರೂಪಾಯಿ ಭ್ರಷ್ಟಾಚಾರ ನಡೆದಿರುವುದು ಮೇಲ್ನೋಟಕ್ಕೆ ಕಂಡುಬರುತ್ತಿದೆ.
ಇಡೀ ಕಟ್ಟಡಕ್ಕೆ ರಾಜ್ಯ ಸರ್ಕಾರ 5 ಕೋಟಿ ರೂ. ವೆಚ್ಚದ ಮಾಡಿದರೂ ಇಡೀ ಕಟ್ಟಡ ಕಾಮಗಾರಿಯಲ್ಲಿ ಕಳಪೆ ಕಾಮಗಾರಿ ಕಣ್ಣಿಗೆ ರಾಚುತ್ತದೆ. ಕಟ್ಟಡ ನಿರ್ಮಾಣದಲ್ಲಿ ಕಳಪೆ ಕಾಮಗಾರಿ ನಡೆಸಿ ವ್ಯಾಪಕ ಭ್ರಷ್ಟಾಚಾರ ನಡೆಸಿರುವುದು ಮೇಲ್ನೋಟಕ್ಕೆ ಕಂಡುಬರುತ್ತಿದೆ. ನೂತನ ಕಟ್ಟಡದ ಅಡಿಪಾಯದಲ್ಲಿ ತೀಕ್ಷ್ಣವಾದ ಬಿರುಕು ಮೂಡಿದ್ದರೆ, ಕಟ್ಟಡದ ಕಿಟಕಿ ಭಾಗದ ಗೋಡೆಗಳು, ಥಾರಸಿ ಭಾಗದಲ್ಲಿ ನೀರು ಜಿನುಗುತ್ತಿದೆ. ಕಳಪೆ ಗುಣಮಟ್ಟದ ಪೇಯಿಂಟ್ ಹಾಕಿರುವುದು ಗಮನಕ್ಕೆ ಬರುತ್ತದೆ. ಕಟ್ಟಡದ ಆವರಣದಲ್ಲಿ ಗಿಡಗಂಟಿಗಳು ಬೆಳದಿದ್ದರೂ ಅದನ್ನು ತೆರವು ಮಾಡುವ ಗೋಜಿಗೆ ಇಲಾಖೆ ಸಿಬ್ಬಂದಿ ಗಮನ ಹರಿಸುತ್ತಿಲ್ಲ. ಅತಿಥಿಗೃಹದ ಹಲವು ಕೊಠಡಿಗಳಲ್ಲಿ ಕಿಟಕಿ ಗಾಜುಗಳು ಕಿತ್ತುಬಂದಿದೆ. ಕೆಲವು ಕಡೆ ಗಾಜುಗಳನ್ನೇ ಅಳವಡಿಸಿಲ್ಲ.
ಮಂತ್ರಾಲಯ ಶ್ರೀ ರಾಘವೇಂದ್ರ ಸ್ವಾಮಿಗಳ ಭಕ್ತರ ಪಾಲಿಗೆ ಕಲ್ಪವೃಕ್ಷ. ಇಂತಹ ಪವಿತ್ರ ಸ್ಥಳಕ್ಕೆ ವರ್ಷಕ್ಕೆ ಲಕ್ಷಾಂತರ ಭಕ್ತರು ಭೇಟಿ ಕೊಡುತ್ತಾರೆ. ಹೀಗಾಗಿ ಹಿಂದಿನ ಕರ್ನಾಟಕದ ರಾಜ್ಯದ ಛತ್ರದ ಆವರಣದಲ್ಲಿನ ಹಳೆಯ ಕಟ್ಟಡ ಮುಚ್ಚಿ, 2022 ರಲ್ಲಿ ರಾಜ್ಯದ ಭಕ್ತರಿಗಾಗಿ ಆರಂಭಿಸಿದ 50 ಕೊಠಡಿಗಳಿರುವ ಅತಿಥಿಗೃಹದಲ್ಲಿ ಅಸಮರ್ಪಕ ವಿದ್ಯುತ್ ಪೂರೈಕೆ, ಇರುವ ಸಾಮಾನ್ಯ 30 ಕೊಠಡಿಗಳಲ್ಲಿ ಹಾಸಿಗೆ ಇದೆ. ಆದರೆ ಹೊದೆಯಲು ಹೊದಿಕೆ ಇಲ್ಲ. ಸ್ನಾನದ ಮನೆಯಲ್ಲಿ ಕೆಲವು ಕಡೆ ಗೀಸರ್ ಇದ್ದರೂ, ಯಾವುದೂ ಕಾರ್ಯ ನಿರ್ವಹಿಸುತ್ತಿಲ್ಲ. ಮೊದಲ ಅಂತಸ್ತಿನಲ್ಲಿ 10 ಡೀಲಕ್ಸ್ ಹವಾನಿಯಂತ್ರಣ ವ್ಯವಸ್ಥೆಯಿರದ ಕೊಠಡಿಗಳು, 10 ಎಸಿ ಕೊಠಡಿಗಳಿದ್ದರೂ, ಎಸಿ ಕಾರ್ಯನಿರ್ವಹಿಸುತ್ತಿಲ್ಲ.
ಹೀಗಾಗಿ ಭಕ್ತರಿಗೆ ಸ್ನಾನಕ್ಕೆ ಬಿಸಿ ನೀರು ಲಭ್ಯವಿಲ್ಲ. ದಿವ್ಯಾಂಗರು ಗಾಲಿ ಚೇರುಗಳಲ್ಲಿ ಬಂದರೆ ಕಟ್ಟಡ ಮೇಲ್ಭಾಗ ಏರಿಬರುವುದು ಕಷ್ಟ ಸಾಧ್ಯ. ಏಕೆಂದರೆ ಆ ರಾಂಪ್ ಹಲವು ಭಾಗಗಳಲ್ಲಿ ಕಿತ್ತುಬಂದಿದೆ. ಕಟ್ಟಡದ ಒಳ ಆವರಣದಲ್ಲಿ ಅಳವಡಿಸಿದ ದೀಪ, ಕಿತ್ತುಬಂದಿವೆ. ಇರುವ ಫ್ಯಾನ್ ಗಳನ್ನು ಕಿತ್ತು ಹಾಕಲಾಗಿದೆ. ಬರುವ ಭಕ್ತರ ಸುರಕ್ಷತೆಗೆ ಸಿಸಿ ಕ್ಯಾಮರಾಗಳನ್ನು ಅಳವಡಿಸಿಲ್ಲ. ಕೇವಲ 10 ಸಿಬ್ಬಂದಿ ಕಾರ್ಯನಿರ್ವಹಸುವ ಈ ಅತಿಥಿಗೃಹದ ಅವ್ಯವಸ್ಥೆ ಬಗ್ಗೆ ಪ್ರತಿಕ್ರಿಯೆ ಪಡೆಯಲು ಧಾರ್ಮಿಕ ದತ್ತಿ ಇಲಾಖೆಯದ, ಮಂತ್ರಾಲಯ ಕರ್ನಾಟಕ ಅತಿಥಿಗೃಹದ ವ್ಯವಸ್ಥಾಪಕಿ ತ್ರಿವೇಣಿಯವರನ್ನು ಸಂಪರ್ಕಿಸಿದರೂ ಪ್ರತಿಕ್ರಿಯೆಗೆ ಲಭ್ಯವಾಗಿಲ್ಲ.
“ಇಡೀ ಕಟ್ಟಡದಲ್ಲಿ ಸರಿಯಾಗಿ ಎಲೆಕ್ಟ್ರಿಕ್ ವೈರಿಂಗ್ ಮಾಡಿಲ್ಲ. ಹಾಗಾಗಿ ಕೆಲವು ಕಡೆ ಸ್ವಿಚ್ ಗಳನ್ನು ಮುಟ್ಟಿದರೂ ಕರೆಂಟ್ ಶಾಕ್ ಹೊಡೆಯುತ್ತದೆ. ಇದೇ ಕಾರಣಕ್ಕೆ ಇಡೀ ಕಟ್ಟಡದಲ್ಲಿ ಗೀಸರ್ ಅಳವಡಿಸಿದ ಸ್ವಿಚ್ ಗಳನ್ನು ತೆಗೆಯಲಾಗಿದೆ. ಹೀಗಾಗಿ ರೂಮ್ ಪಡೆಯುವರಿಗೆ ಸ್ನಾನಕ್ಕೆ ಬಿಸಿನೀರು ಲಭ್ಯವಿರಲ್ಲ” ಎಂದು ಅತಿಥಿಗೃಹದ ಸಿಬ್ಬಂದಿಯೊಬ್ಬರು ಬೆಂಗಳೂರು ವೈರ್ ಗೆ ತಿಳಿಸಿದ್ದಾರೆ.
ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿಗಳ ಮಠವು ಅತ್ಯಂತ ಪ್ರಸಿದ್ಧವಾದ ದೇವಾಲಯಗಳಲ್ಲಿ ಒಂದಾಗಿದೆ. ಇಲ್ಲಿನ ಶ್ರೀಗಳ ದರ್ಶನಕ್ಕೆ ಪ್ರತಿ ವರ್ಷ ಲಕ್ಷಾಂತರ ಭಕ್ತರು ಆಗಮಿಸುತ್ತಾರೆ. ಇಲ್ಲಿನ ದೇವಾಲಯವು ಶ್ರೀ ರಾಘವೇಂದ್ರ ಸ್ವಾಮಿಗಳ ಬೃಂದಾವನವಾಗಿದೆ. ಹೀಗಾಗಿ ಹಳೆಯ ಕಟ್ಟಡವು ಶಿಥಿಲವಾಗಿದ್ದರಿಂದ 2016-17 ರಲ್ಲಿ 5 ಕೋಟಿ ರೂ. ವೆಚ್ಚದಲ್ಲಿ ಹೊಸ ಕಟ್ಟಡ ಕಟ್ಟಲು ಆರಂಭಿಸಿದರೂ, ಸಕಾಲದಲ್ಲಿ ಈ ಕಟ್ಟಡವನ್ನು ಪೂರ್ಣಗೊಳಿಸಲಿಲ್ಲ. ಒಳಂಗಾಣ ವಿನ್ಯಾಸ ಪೂರ್ಣಗೊಳಿಸಲು ಅನುದಾನ ಕೊರತೆಯಿಂದ ಒಂದೂವರೆ ಎರಡೂವರೆ ವರ್ಷ ವಿಳಂಬವಾಯಿತು. 2020-2021 ರಲ್ಲಿ ಕರೋನಾ ಬಂದ ಕಾರಣ ಕಟ್ಟಡ ಕಾಮಗಾರಿ ಕೆಲಸ ಸಂಪೂರ್ಣ ಸ್ಥಗಿತಗೊಂಡಿತ್ತು ಎಂದು ಮೂಲಗಳು ತಿಳಿಸಿವೆ.
ಕಳಪೆ ಕಾಮಗಾರಿ ಬಗ್ಗೆ ಲೋಕಾಯುಕ್ತ ಸಂಸ್ಥೆಗೆ ಇಲಾಖೆಯಿಂದ ದೂರಿಗೆ ಕ್ರಮ :
“ಮಂತ್ರಾಲಯದಲ್ಲಿನ ಕರ್ನಾಟಕದ ಧಾರ್ಮಿಕ ದತ್ತಿ ಇಲಾಖೆಯ ನೂತನ ಕಟ್ಟಡ ನಿರ್ಮಾಣ ಹೊಣೆಯನ್ನು ಲೋಕೋಪಯೋಗಿ ಇಲಾಖೆಗೆ ವಹಿಸಲಾಗಿತ್ತು. ಇಲಾಖೆಯು ಗುತ್ತಿಗೆದಾರರಿಗೆ ಕಟ್ಟಡ ಕಟ್ಟಲು ಜವಾಬ್ದಾರಿ ನೀಡಿದ್ದು, ಕಾಮಗಾರಿ ಸಂಪೂರ್ಣವಾಗಿ ಕಳಪೆ ಗುಣಮಟ್ಟದಿಂದ ಕೂಡಿದೆ. ಕಳೆದ ಮಾರ್ಚ್ ನಲ್ಲಿ ನಾನೇ ಸ್ವತಃ ನಮ್ಮ ಇಲಾಖೆಯಲ್ಲಿ ಎಂಜಿನಿಯರ್ ಗಳನ್ನು ಕರೆಸಿ ಕಟ್ಟಡ ಪರಿಶೀಲನೆ ನಡೆಸಿದಾಗ ಕಳಪೆ ಕಾಮಗಾರಿ ನಡೆಸಿರುವುದು ಕಂಡುಬಂದಿದೆ. ಈ ಕಾಮಗಾರಿ ಬಗ್ಗೆ ಲೋಕಾಯುಕ್ತ ತನಿಖೆ ನಡೆಸಲು ಮುಜರಾಯಿ ಇಲಾಖೆ ಕಾರ್ಯದರ್ಶಿಗಳಿಗೆ ಒಪ್ಪಿಗೆ ನೀಡುವಂತೆ ಪ್ರಸ್ತಾವನೆ ಮಂಡಿಸಲಾಗಿದೆ. ಒಪ್ಪಿಗೆ ದೊರೆತ ಕೂಡಲೇ ಲೋಕಾಯುಕ್ತ ಸಂಸ್ಥೆಗೆ ದೂರು ನೀಡುತ್ತೇವೆ.”
– ಬಸವರಾಜೇಂದ್ರ, ಆಯುಕ್ತರು, ಧಾರ್ಮಿಕ ದತ್ತಿ ಇಲಾಖೆ
ಹಿಂದಿನ ಮುಜರಾಯಿ ಇಲಾಖೆ ಆಯುಕ್ತೆ ರೋಹಿಣಿ ಸಿಂಧೂರಿ ಯವರು ಆಗಸ್ಟ್ 2022 ರಲ್ಲಿ ಈ ಕಳಪೆ ಕಟ್ಟಡವನ್ನು ಉದ್ಘಾಟನೆ ಮಾಡಿದ್ದರು. ಮಂತ್ರಾಲಯದಲ್ಲಿ ಶ್ರೀ ರಾಘವೇಂದ್ರ ಸ್ವಾಮಿಗಳ ಬೃಂದಾವನಕ್ಕೆ ಕರ್ನಾಟಕ ಭವನದಿಂದ ತೆರಳಲು ಕೇವಲ 5-10 ನಿಮಿಷ ಸಾಕು. ಬೃಂದಾವನದ ಸುತ್ತಮುತ್ತಲ ಭಾಗಗಳಲ್ಲಿ ಮಠದಿಂದ ಕಟ್ಟಿರುವ ಅತಿಥಿಗೃಹಗಳು ಸಾಕಷ್ಟಿವೆ. ಆದರೆ ಶ್ರಾವಣ ಮಾಸ, ರಾಯರ ಆರಾಧನಾ ಮಹೋತ್ಸವ, ಗುರುವಾರ ಮತ್ತಿತರ ಸಂದರ್ಭದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಕ್ಷೇತ್ರಕ್ಕೆ ಬರುತ್ತಾರೆ. ಈ ಸಂದರ್ಭದಲ್ಲಿ ಕೊಠಡಿಗಳು ಲಭ್ಯವಿರುವುದಿಲ್ಲ. ಆಗ ಮುಜರಾಯಿ ಇಲಾಖೆ ಈ ನೂತನ ಕಟ್ಟಡಗಳಲ್ಲಿ ಸೂಕ್ತ ಸೌಲಭ್ಯಗಳು ಇರದಿದ್ದರೂ, ಕರ್ನಾಟಕದ ಭಕ್ತರು ಅನಿವಾರ್ಯವಾಗಿ ಇಲ್ಲಿನ ಅತಿಥಿಗೃಹ ಬುಕ್ ಮಾಡಿ ಉಳಿದುಕೊಳ್ಳುವ ಪರಿಸ್ಥಿತಿಯಿದೆ.
ಮಂತ್ರಾಲಯದಲ್ಲಿನ ಹಳೆಯ ಕಟ್ಟಡವನ್ನು ಪೂರ್ತಿ ಕೆಡವಿ ಆ ಸ್ಥಳದಲ್ಲಿ ಹೊಸದಾಗಿ ಇಲಾಖೆ ವತಿಯಿಂದಲೇ ನೂತನ ಕಟ್ಟಡ ಕಟ್ಟುವ ಚಿಂತನೆ ನಡೆಸಿದ್ದೇವೆ ಎಂದು ಉನ್ನತ ಮೂಲಗಳು ತಿಳಿಸಿವೆ. ಒಟ್ಟಾರೆ ಕಳಪೆ ಕಟ್ಟಡ ಕಾಮಗಾರಿ ನಡೆಸಿರುವ ಕಾಂಟ್ರಾಕ್ಟರ್ ಹಾಗೂ ಅದಕ್ಕೆ ಕಾರಣರಾಗಿರುವ ಲೋಕೋಪಯೋಗಿ ಇಲಾಖೆಯ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಶೀಘ್ರವೇ ಕ್ರಮ ಕೈಗೊಳ್ಳಬೇಕಿದೆ. ಕರ್ನಾಟಕದಿಂದ ಬರುವ ಭಕ್ತರಿಗೆ ಅಗತ್ಯ ಮೂಲಸೌಕರ್ಯಗಳನ್ನು ಕಲ್ಪಿಸುವ ಕೆಲಸವನ್ನು ಧಾರ್ಮಿಕ ದತ್ತಿ ಇಲಾಖೆಯವರು ಕೂಡಲೇ ಕೈಗೆತ್ತಿಕೊಳ್ಳಬೇಕಿದೆ. ಕಳಪೆಯಾಗಿರುವ ಈ ಕಟ್ಟಡದ ದೃಢತೆಯ ಹಾಗೂ ಸುರಕ್ಷತೆಯ ಬಗ್ಗೆ ಇಲಾಖೆ ವತಿಯಿಂದ ಕೂಡಲೇ ಕ್ರಮ ಕೈಗೊಳ್ಳುವ ಅವಶ್ಯಕತೆಯಿದೆ ಎಂದು ಕಟ್ಟಡಕ್ಕೆ ಬರುವ ಯಾತ್ರಿಕರು ಆಗ್ರಹಿಸಿದ್ದಾರೆ.