ಬೆಂಗಳೂರು, ಜೂ.14 www.bengaluruwire.com : ಹೊರ ವರ್ತುಲ ರಸ್ತೆಯಲ್ಲಿ ಮೆಟ್ರೋ ಕಾಮಗಾರಿ ಪೂರ್ಣಗೊಂಡಿರುವ ಕಡೆ ಕೂಡಲೆ ಸರ್ವೀಸ್ ರಸ್ತೆ ಹಾಗೂ ಪಾದಚಾರಿ ಮಾರ್ಗವನ್ನು ಅಭಿವೃದ್ಧಿಪಡಿಸಬೇಕು ಎಂದು ಮುಖ್ಯ ಆಯುಕ್ತರಾದ ತುಷಾರ್ ಗಿರಿನಾಥ್ ರವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಬಿಬಿಎಂಪಿ, ಮೆಟ್ರೋ, ಜಲಮಂಡಳಿ ಹಾಗೂ ಒರೆಕಾ (Outer Ring Road Companies- ORRCA) ಖಾಸಗಿ ಸಂಸ್ಥೆಯ ಸಹಭಾಗಿತ್ವದಲ್ಲಿ ಇಂದು ಒರೆಕಾ ಸಂಸ್ಥೆಯಲ್ಲಿ ನಡೆದ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ನಗರದ ಮಹದೇವಪುರ ವಲಯ ವ್ಯಾಪ್ತಿಯ ಹೊರ ವರ್ತುಲ ರಸ್ತೆಯಲ್ಲಿ ಪಾಲಿಕೆ ಹಾಗೂ ಮೆಟ್ರೋ ಅಧಿಕಾರಿಗಳು ಜಂಟಿ ಪರಿಶೀಲನೆ ನಡೆಸಿ ಮೆಟ್ರೋ ಕಾಮಗಾರಿ ಪೂರ್ಣಗೊಂಡಿರುವ ಕಡೆ ಸರ್ವೀಸ್ ರಸ್ತೆ ಹಾಗೂ ಪಾದಚಾರಿ ಮಾರ್ಗವನ್ನು ಅಭಿವೃದ್ಧಿಪಡಿಸಲು ಸೂಚಿಸಿದರು.
ಹೊರ ವರ್ತುಲ ರಸ್ತೆಗೆ ಸಂಪರ್ಕ ಕಲ್ಪಿಸುವ ಪ್ರಮುಖ 22 ರಸ್ತೆಗಳು ಸುಸ್ತಿತಿಯಲ್ಲಿರುವಂತೆ ನೋಡಿಕೊಳ್ಳಬೇಕು. ಜೊತೆಗೆ ಹೊರ ವರ್ತುಲ ರಸ್ತೆಯಲ್ಲಿ ಬರುವ ಮೇಲು ಸೇತುವೆಗಳಲ್ಲಿನ ಮೇಲ್ಪದರವನ್ನು ಸರಿಪಡಿಸಬೇಕು. ಪಣತ್ತೂರ್ ರಸ್ತೆ ಅಗಲೀಕರಣ ಕಾಮಗಾರಿಯನ್ನು ಶೀಘ್ರವಾಗಿ ಕೈಗೆತ್ತಿಕೊಳ್ಳಲು ಸೂಚಿಸಿದರು.
ಹೊರ ವರ್ತುಲ ರಸ್ತೆಯಲ್ಲಿ ಕೈಗೆತ್ತಿಕೊಂಡಿರುವ ಮೆಟ್ರೋ ಕಾಮಗಾರಿ ಪೂರ್ಣಗೊಂಡಲ್ಲಿ ಈ ಭಾಗದಲ್ಲಾಗುವ ಸಂಚಾರದಟ್ಟಣೆಯು ಕಡಿಮೆಯಾಗಲಿದೆ. ಮೆಟ್ರೋ ಕಾಮಗಾರಿ ಪೂರ್ಣಗೊಂಡಿರುವ ಕಡೆ ಹಾಕಿರುವ ಬ್ಯಾರಿಗೇಟ್ಸ್ ಗಳನ್ನು ತೆರವುಗೊಳಿಸಬೇಕು. ಸರ್ವಿಸ್ ರಸ್ತೆಯಲ್ಲಿ ವಾಹನ ಸವಾರರಿಗೆ ಸಂಚರಿಸಲು ಯಾವುದೇ ಅಡೆ-ತಡೆ ಆಗದಂತೆ ನೋಡಿಕೊಳ್ಳಕೆಂದು ಸೂಚಿಸಿದರು.
ನಗರದಲ್ಲಿ ಈಗಾಗಲೇ ಮಳೆಗಾಲ ಪ್ರಾರಂಭವಾಗಿದ್ದು, ರಾಜಕಾಲುವೆಗಳ ಸಮರ್ಪಕ ನಿರ್ವಹಣೆ ಮಾಡಿ, ಮಳೆಯಾಗುವ ಸಂದರ್ಭದಲ್ಲಿ ಎಲ್ಲಿಯೂ ಸಮಸ್ಯೆಯಾಗದಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸೂಚಿಸಿದರು.
ಮೆಟ್ರೋ ವ್ಯವಸ್ಥಾಪಕ ನಿರ್ದೇಶಕರಾದ ಮಹೇಶ್ವರ್ ರಾವ್ ಮಾತನಾಡಿ, ಮೆಟ್ರೊ 2ಎ ಕಾಮಗಾರಿ ನಡೆಯುವ ರಸ್ತೆಯ ಮಿಡಿಯನ್ ನಿರ್ವಹಣೆ ಮೆಟ್ರೋ ವತಿಯಿಂದಲೇ ಮಾಡಲಿದ್ದು, ಬಿಬಿಎಂಪಿ ಹಾಗೂ ಮೆಟ್ರೊ ಸಮನ್ವಯದಲ್ಲಿ ಮೆಟ್ರೋ ಕಾಮಗಾರಿಯನ್ನು ನಾಗರೀಕರಿಗೆ ಹಾಗೂ ಐಟಿ ಉದ್ಯೋಗಿಗಳಿಗೆ ತೊಂದರೆ ಉಂಟಾಗದ ರೀತಿ ಕಾರ್ಯ ನಿರ್ವಹಿಸಲಿದೆ ಎಂದು ತಿಳಿಸಿದರು.
ಸಭೆಯಲ್ಲಿ ಮಹದೇವಪುರ ವಲಯ ಆಯುಕ್ತರಾದ ರಮೇಶ್, ಪ್ರಧಾನ ಅಭಿಯಂತರರಾದ ಪ್ರಹ್ಲಾದ್, ಮಹದೇವಪುರ ವಲಯ ಜಂಟಿ ಆಯುಕ್ತರಾದ ದಾಕ್ಷಾಯಿಣಿ, ಮುಖ್ಯ ಅಭಿಯಂತರರಾದ ಲೋಕೇಶ್, ಒರೆಕಾ ಉಪಾಧ್ಯಕ್ಷರಾದ ಅರ್ಚನಾ ಟಯಾದೆ, ಪಾಲಿಕೆ, ಮೆಟ್ರೋ, ಜಲಮಂಡಳಿ ಅಧಿಕಾರಿಗಳು ಸೇರಿದಂತೆ ಇನ್ನಿತರೆ ಸಂಬಂಧಪಟ್ಟ ಅಧಿಕಾರಿಗಳು ಉಪಸ್ಥಿತರಿದ್ದರು.