ಬೆಂಗಳೂರು, ಜೂ.13 www.bengaluruwire.com : ರಾಜ್ಯದ ಆರ್ಥಿಕ ಸಂಪನ್ಮೂಲಗಳಲ್ಲಿ ಪ್ರಮುಖವಾಗಿರುವ ಅಬಕಾರಿ ಇಲಾಖೆಯಿಂದ 2024-25ನೇ ಸಾಲಿನ ಮೇ ತಿಂಗಳ ತನಕ 38,525 ಕೋಟಿ ರೂ.ಗಳ ಗುರಿಯ ಪೈಕಿ ಎರಡು ತಿಂಗಳಲ್ಲಿ ಕೇವಲ 5,449.80 ಕೋಟಿ ರೂ. ಗಳ ಆದಾಯ ಸಂಗ್ರಹವಾಗಿದೆ. ವಾರ್ಷಿಕ ಗುರಿಗೆ ಶೇ.14.15 ಸಾಧನೆಯಾಗಿದೆಯಷ್ಟೇ ಎಂದು ಅಬಕಾರಿ ಇಲಾಖೆಯ ಉನ್ನತ ಮೂಲಗಳು ತಿಳಿಸಿವೆ.
2023-24ನೇ ಇಸವಿಯ ಇದೇ ಅವಧಿಯಲ್ಲಿ 4915.59 ಕೋಟಿ ರೂ.ಗಳಷ್ಟು ಅಬಕಾರಿ ಆದಾಯ ಸಂಗ್ರಹವಾಗಿತ್ತು. ಕಳೆದ ಬಾರಿಗೆ ಹೋಲಿಸಿದರೆ ಈ ಬಾರಿ 534.21 ಕೋಟಿ ರೂ. ಹೆಚ್ಚುವರಿಯಾಗಿ ಸಂಗ್ರಹಿಸಲಾಗಿದೆ. ಕಳೆದ ಬಾರಿಗೆ ಹೋಲಿಸಿದರೆ ಆದಾಯ ಸಂಗ್ರಹ ಈ ಬಾರಿ ಎರಡು ತಿಂಗಳಲ್ಲಿ ಶೇ.10.87ರಷ್ಟು ಏರಿಕೆ ದಾಖಲಿಸಿದೆ.
ಜೂ.11 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿಧಾನಸೌಧದಲ್ಲಿ ಅಬಕಾರಿ ಇಲಾಖೆಯ ಪ್ರಗತಿ ಪರಿಶೀಲನೆ ಮಾತನಾಡುತ್ತಾ, “ಚುನಾವಣಾ ನೀತಿ ಸಂಹಿತೆ ಕಾರಣದಿಂದ ತೆರಿಗೆ ಸಂಗ್ರಹ ಬೆಳವಣಿಗೆ ದರ ನಿರೀಕ್ಷಿತ ಮಟ್ಟ ತಲುಪಿಲ್ಲ ಎಂದು ಅಧಿಕಾರಿಗಳು ಮಾಹಿತಿ ನೀಡಿದಾಗ, ಮುಂದಿನ ದಿನಗಳಲ್ಲಿ ಇದನ್ನು ಭರ್ತಿ ಮಾಡಬೇಕು. ಇಲಾಖೆಯ ತೆರಿಗೆ ಸಂಗ್ರಹ ಸಾಮರ್ಥ್ಯವನ್ನು ಆಧರಿಸಿಯೇ ನಿಗದಿ ಪಡಿಸುವ ಗುರಿ ತಲುಪಲು ಅಧಿಕಾರಿಗಳು ಗರಿಷ್ಠ ಪ್ರಯತ್ನ ಮಾಡಬೇಕು” ಎಂದು ಸೂಚಿಸಿದ್ದರು.
2021-22ನೇ ಸಾಲಿನಲ್ಲಿ 24,580 ಕೋಟಿ ರೂ.ಗಳ ಗುರಿಯ ಪೈಕಿ 26,377.68 ಕೋಟಿ ರೂ.ಗಳ ಆದಾಯ ಸಂಗ್ರಹ ಮಾಡಿ ಇಲಾಖೆಯು ಗುರಿ ಮೀರಿದ ಸಾಧನೆ (ಶೇ.107.31 ರಷ್ಟು )ಮಾಡಿತ್ತು. 2022-23ನೇ ಸಾಲಿನಲ್ಲಿ 32,000 ಕೋಟಿ ರೂ.ಗಳ ಪರಿಷ್ಕ್ರತ ಆದಾಯ ಗುರಿಗೆ ಎದುರಾಗಿ 29,920.37 ಕೋಟಿ ರೂ.ಗಳಷ್ಟು ಅಂದರೆ ಶೇ.93.50ರಷ್ಟು ಮಾತ್ರ ಗುರಿ ತಲುಪಲು ಸಾಧ್ಯವಾಗಿತ್ತು. 2023-24ನೇ ಸಾಲಿನಲ್ಲಿ 34,500 ಕೋಟಿ ರೂ.ಗಳ ಗುರಿಯ ಪೈಕಿ 34,628.98 ಕೋಟಿ ರೂ.ಗಳ ಆದಾಯ ಸಂಗ್ರಹ ಮಾಡಿ ಇಲಾಖೆಯು ಗುರಿ ಮೀರಿದ (ಶೇ.100.97) ಸಾಧನೆ ಮಾಡಿತ್ತು. 2022- 23ನೇ ಸಾಲಿಗೆ ಹೋಲಿಸಿದರೆ 4,708.61 ಕೋಟಿ ರೂ. ಹೆಚ್ಚುವರಿ ಆದಾಯ ಸಂಗ್ರಹ ಮಾಡಿತ್ತು.
ಈ ಬಾರಿ ಆರ್ಥಿಕ ವರ್ಷ ಆರಂಭಕ್ಕೂ ಮೊದಲೇ ಸಾರ್ವತ್ರಿಕ ಲೋಕಸಭಾ ಚುನಾವಣೆ ನೀತಿಸಂಹಿತೆ ಮಾ.15ರಿಂದಲೇ ಜಾರಿಗೆ ಬಂದ ಕಾರಣ ಅನೇಕ ಸರ್ಕಾರಿ ಅಧಿಕಾರಿಗಳನ್ನು ಚುನಾವಣಾ ಕಾರ್ಯಕ್ಕೆ ನೇಮಿಸಿದ್ದರಿಂದ ಅಬಕಾರಿ ಇಲಾಖೆ ಆದಾಯ ಸಂಗ್ರಹ ಗಣನೀಯವಾಗಿ ಕಡಿಮೆಯಾಗಿತ್ತು.
202-23 ಹಾಗೂ 2023-24ನೇ ಸಾಲಿನಲ್ಲಿ ಮಾಸಿಕಾವಾರು ಆದಾಯ ಸಂಗ್ರಹದ ಪೈಕಿ ಜೂನ್, ಡಿಸೆಂಬರ್ ಹಾಗೂ ಮಾರ್ಚ್ ನಲ್ಲಿ ಆದಾಯ ಸಂಗ್ರಹದಲ್ಲಿ ಹೆಚ್ಚಳವಾಗಿತ್ತು.