ಬೆಂಗಳೂರು, ಜೂ.12 www.bengaluruwire.com : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP)ಯನ್ನು 5 ಭಾಗಗಳಾಗಿ ವಿಭಜನೆ ಮಾಡಲು ನಿರ್ಧರಿಸಿರುವ ಬಗ್ಗೆ ಮಾಹಿತಿ ದೊರೆತಿದ್ದು, ಯಾವುದೇ ಕಾರಣಕ್ಕೂ ರಾಜ್ಯ ಸರ್ಕಾರ ನಾಡಪ್ರಭು ಕೆಂಪೇಗೌಡರು ನಿರ್ಮಿಸಿರುವ ಬೆಂಗಳೂರು ಮಹಾನಗರವನ್ನು ಯಾವುದೇ ಕಾರಣಕ್ಕೂ ವಿಭಜನೆ ಮಾಡಬಾರದೆಂದು ಬೆಂಗಳೂರು ದಕ್ಷಿಣ ಜಿಲ್ಲಾ ಬಿಜೆಪಿ ಘಟಕ ಮಾಜಿ ಅಧ್ಯಕ್ಷ , ಎನ್. ಆರ್.ರಮೇಶ್ ಆಗ್ರಹಿಸಿದ್ದಾರೆ.
ಬೆಂಗಳೂರು ಮಹಾನಗರವನ್ನು ವಿಭಜನೆ ಮಾಡುವುದಿಲ್ಲ – ಆದರೆ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಆಡಳಿತ ವ್ಯವಸ್ಥೆಯನ್ನು ಐದು ಭಾಗಗಳಾಗಿ ವಿಭಜನೆ ಮಾಡುತ್ತೇವೆ ಎಂದು ಅತ್ಯಂತ ಜಾಣ ತನದಿಂದ ಹೇಳಿಕೆ ನೀಡಿದಾಕ್ಷಣ, ತಮ್ಮ ನಿಜ ಬಣ್ಣ ಬಯಲಾಗುವುದಿಲ್ಲ ಎಂದು ತಾವು ಭಾವಿಸಿದರೆ ಅದು ತಪ್ಪಾಗುತ್ತದೆ ಎಂದು ಎನ್.ಆರ್.ರಮೇಶ್ ಕಾಂಗ್ರೆಸ್ ಆಡಳಿತಕ್ಕೆ ಚಾಟಿ ಬೀಸಿದ್ದಾರೆ. ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಹಾಗೂ ಬೆಂಗಳೂರು ಅಭಿವೃದ್ಧಿ ಸಚಿವ ಡಿ.ಕೆ.ಶಿವಕುಮಾರ್ ಗೆ ಈ ಸಂಬಂಧ ಪತ್ರ ಬರೆದು ಬೆಂಗಳೂರನ್ನು “ಏಕ ಬೆಂಗಳೂರು ಮಹಾನಗರ”ವನ್ನಾಗಿಯೇ ಉಳಿಸಿಕೊಳ್ಳುವ ಸಂಬಂಧ ನಿರ್ಧಾರ ತೆಗೆದುಕೊಳ್ಳಬೇಕೆಂದು ಒತ್ತಾಯಿಸಿದ್ದಾರೆ.
ಬೆಂಗಳೂರು ಮಹಾನಗರವನ್ನು ವಿಭಜಿಸುವುದೂ ಒಂದೇ ಅಥವಾ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯನ್ನು ಆಡಳಿತಾತ್ಮಕವಾಗಿ ವಿಭಜಿಸುವುದೂ ಒಂದೇ. “ಅಳಿಯ ಅಲ್ಲ ಮಗಳ ಗಂಡ” ಎಂಬ ಗಾದೆಯ ನಾಣ್ನುಡಿಯಂತೆ ಬೆಂಗಳೂರು ಮಹಾನಗರವನ್ನು ಆಡಳಿತಾತ್ಮಕವಾಗಿ ಒಡೆಯುವ ಕೆಲಸಕ್ಕೆ ಕೈಹಾಕುತ್ತಿರುವುದು ಸರಿಯಾದ ಕ್ರಮವಲ್ಲ.
ಈಗಾಗಲೇ ದೆಹಲಿ ಮಹಾನಗರ ಪಾಲಿಕೆಯನ್ನು ಆಡಳಿತಾತ್ಮಕವಾಗಿ ಮೂರು ಭಾಗಗಳಾಗಿ ವಿಭಜಿಸಿ ಆಗಿರುವ ಅನಾಹುತಗಳ ಬಗ್ಗೆ ತಮಗೆ ಅರಿವು ಇದೆ ಎಂದು ಭಾವಿಸುತ್ತೇನೆ.
ದೆಹಲಿ ಮಹಾನಗರ ಪಾಲಿಕೆಯನ್ನು ಮೂರು ಭಾಗಗಳಾಗಿ ವಿಭಜಿಸಿದ ನಂತರ ಆರ್ಥಿಕ ಅಸಮತೋಲನ ಉಂಟಾಗಿತ್ತು. ಈ ಆರ್ಥಿಕ ಅಸಮತೋಲನದಿಂದ ಚೇತರಿಸಿಕೊಳ್ಳಲಾಗದೇ ಕೊನೆಗೆ ದೆಹಲಿಯ ಮೂರು ಮಹಾನಗರ ಪಾಲಿಕೆಗಳು ಒಂದಾಗಬೇಕೆಂದು ನಿರ್ಣಯ ತೆಗೆದುಕೊಂಡು, ಒಂದೇ ಮಹಾನಗರ ಪಾಲಿಕೆಯನ್ನಾಗಿ ಮಾಡಿರುತ್ತಾರೆ.
ತಾವು ಈ ರೀತಿ ವಿಭಜನೆ ಮಾಡಿದರೆ, ಪ್ರಾದೇಶಿಕವಾಗಿ ಆರ್ಥಿಕ ಅಸಮತೋಲನ ಹೆಚ್ಚಾಗುತ್ತದೆಯೇ ಹೊರತು ಇದರಿಂದ ಬೆಂಗಳೂರಿಗೆ ಒಳಿತಾಗುವ ಕೆಲಸ ಕಾರ್ಯಗಳಾಗುವುದಿಲ್ಲ. ಉದಾಹರಣೆಗೆ ಬೆಂಗಳೂರು ಮಹಾನಗರದ ಪಶ್ಚಿಮ ಭಾಗದ ಬಹುತೇಕ ಭಾಗಗಳಲ್ಲಿ ಆದಾಯ ತೆರಿಗೆ ಸಂಗ್ರಹ ಸೇರಿದಂತೆ ಪಾಲಿಕೆಯ ವಿವಿಧ ಮೂಲಗಳ ಆದಾಯ ಸಂಗ್ರಹವು ಅತ್ಯಂತ ಕಡಿಮೆ ಪ್ರಮಾಣದಲ್ಲಿರುತ್ತದೆ. ಹಾಗೆಯೇ ಬೆಂಗಳೂರು ಮಹಾನಗರದ ಪೂರ್ವ ಭಾಗಗಳ ಪ್ರದೇಶಗಳಲ್ಲಿನ ಆದಾಯ ತೆರಿಗೆ ಸೇರಿದಂತೆ ವಿವಿಧ ಆದಾಯ ಮೂಲಗಳಿಂದ ಸಂಗ್ರಹವಾಗುವ ಹಣದ ಪ್ರಮಾಣ ಬಹಳ ಹೆಚ್ಚಾಗಿರುತ್ತದೆ.
ನೀವು ವಿಭಜಿಸಬೇಕೆಂದುಕೊಂಡಿರುವ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಒಂದು ಭಾಗಕ್ಕೆ ಸೇರ್ಪಡೆಯಾಗುವ ಮಹದೇವಪುರ ವಲಯ ಮತ್ತು ಪೂರ್ವ ವಲಯಗಳನ್ನು ಒಳಗೊಂಡಿರುವ ಪಾಲಿಕೆ ಆರ್ಥಿಕವಾಗಿ ಅತ್ಯಂತ ಶ್ರೀಮಂತ ಪಾಲಿಕೆಯಾಗುತ್ತದೆ ಹಾಗೂ ದಾಸರಹಳ್ಳಿ ವಲಯ ಮತ್ತು ಪಶ್ಚಿಮ ವಲಯಗಳನ್ನು ಒಳಗೊಂಡ ಪಾಲಿಕೆ ಆರ್ಥಿಕವಾಗಿ ಅತ್ಯಂತ ಹಿಂದುಳಿದ ಪಾಲಿಕೆಯಾಗುತ್ತದೆ.
ಈ ಎಲ್ಲಾ ವಿಷಯಗಳನ್ನು ತಾವು ಅರ್ಥ ಮಾಡಿಕೊಂಡು ಪ್ರಾದೇಶಿಕವಾಗಿ ಆರ್ಥಿಕ ಅಸಮತೋಲನ ಉಂಟು ಮಾಡುವ ಪರಿಸ್ಥಿತಿಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯನ್ನು ತರುವಂತಹ ತಮ್ಮ ಯೋಚನೆಯನ್ನು ಕೈಬಿಡಬೇಕೆಂದು ಹಾಗೂ ಕೆಂಪೇಗೌಡರು ನಿರ್ಮಾಣ ಮಾಡಿರುವ ಬೆಂಗಳೂರು ಮಹಾನಗರವನ್ನು ಆಡಳಿತಾತ್ಮಕವಾಗಿ ಅಥವಾ ಭೌಗೋಳಿಕವಾಗಿ ವಿಭಜನೆ ಮಾಡುವಂತಹ ದುಸ್ಸಾಹಸಕ್ಕೆ ಕೈಹಾಕಬಾರದೆಂದು ಮತ್ತು ಆ ಮೂಲಕ ಕನ್ನಡಿಗರ, ವಿಶೇಷವಾಗಿ ಬೆಂಗಳೂರಿನ ಮೂಲ ನಾಗರಿಕರ ಆಕ್ರೋಶಗಳಿಗೆ ತುತ್ತಾಗಬಾರದೆಂದು ಎನ್.ಆರ್.ರಮೇಶ್ ಹೇಳಿದ್ದಾರೆ.
ಬೆಂಗಳೂರು ಮಹಾನಗರದ ನಿರ್ಮಾಣಕ್ಕೆಂದು ಹನ್ನೆರಡು ಹೋಬಳಿಗಳನ್ನು (ಉತ್ತರಹಳ್ಳಿ, ವರ್ತೂರು, ಯಲಹಂಕ, ಬೇಗೂರು, ಹಲಸೂರು, ಕೆಂಗೇರಿ, ತಲಘಟ್ಟಪುರ, ಜಿಗಣಿ, ಕುಂಬಳಗೋಡು, ಕಾಗಳ್ಳಿ, ಬಾಣಾವಾರ ಮತ್ತು ಹೆಸರುಘಟ್ಟ) ವಿಜಯನಗರ ಸಾಮ್ರಾಜ್ಯದ ಅರಸರಾದ ಅಚ್ಯುತರಾಯರು ಜಹಗೀರಾಗಿ ಪಡೆದ ನಾಡಪ್ರಭು ಕೆಂಪೇಗೌಡರು ಅವರ ಶಕ್ತ್ಯಾನುಸಾರ 1537 ರಲ್ಲಿ ಬೆಂಗಳೂರು ಮಹಾನಗರವನ್ನು ನಿರ್ಮಿಸಿರುತ್ತಾರೆ. ಮುಂದೆ ಬೆಂಗಳೂರು ಮಹಾನಗರ ಬೃಹದಾಕಾರವಾಗಿ ಬೆಳೆಯುವ ಮುನ್ಸೂಚನೆಯನ್ನು ಅರಿತಿದ್ದ ಕೆಂಪೇಗೌಡರು ಆ ಎಲ್ಲಾ ಹನ್ನೆರಡು ಹೋಬಳಿಗಳ ವ್ಯಾಪ್ತಿಯಲ್ಲಿ ನಲವತ್ತಕ್ಕೂ ಹೆಚ್ಚು ಕೆರೆ – ಕುಂಟೆಗಳನ್ನು, ಗಡಿ ಗೋಪುರಗಳನ್ನು ನಿರ್ಮಿಸಿದ್ದರು ಎಂದು ನಗರದ ಬೆಳವಣಿಗೆಗೆ ಕಾರಣವಾದ ಅಂಶಗಳನ್ನು ಮನವಿ ಪತ್ರದಲ್ಲಿ ತಿಳಿಸಿದ್ದಾರೆ.