ಬೆಂಗಳೂರು, ಜೂ.11 www.bengaluruwire.com : “ಆಸ್ತಿ ತೆರಿಗೆ ಪಾವತಿ ಮಾಡದವರಿಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಿಂದ ನೀಡಲಾಗಿರುವ ಒನ್ ಟೈಮ್ ಸೆಟ್ಲಮೆಂಟ್ (OTS – ಓಟಿಎಸ್) ಅವಕಾಶ ಜುಲೈ 31ರವರೆಗೆ ಮಾತ್ರ ಇರಲಿದೆ. ಹೀಗಾಗಿ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿರುವರು ಕೊನೆಯ ದಿನಾಂಕದ ಒಳಗಾಗಿ ಈ ಅವಕಾಶವನ್ನು ಸದುಪಯೋಗ ಮಾಡಿಕೊಳ್ಳಬೇಕು” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ತಿಳಿಸಿದರು.
ವಿಧಾನಸೌಧದಲ್ಲಿ ಮಂಗಳವಾರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಬೆಂಗಳೂರು ನಗರಾಭಿವೃದ್ಧಿ ಸಚಿವರೂ ಆದ ಶಿವಕುಮಾರ್, “ಚುನಾವಣೆಗಳು ನಡೆಯುತ್ತಿದ್ದ ಕಾರಣ ತೆರಿಗೆ ಪಾವತಿ ವಿಚಾರದಲ್ಲಿ ಪಾಲಿಕೆ ಒತ್ತಡ ಹಾಕಿರಲಿಲ್ಲ. ಆಸ್ತಿ ತೆರಿಗೆ ಕಟ್ಟದವರಿಗೆ ತೆರಿಗೆ ವ್ಯಾಪ್ತಿಯಲ್ಲಿ ಬರಲು ಪಾಲಿಕೆ ವತಿಯಿಂದ ನೀಡಿರುವ ಒನ್ ಟೈಮ್ ಸೆಟ್ಲಮೆಂಟ್ ಅವಕಾಶವನ್ನು ಜುಲೈ 31ಕ್ಕೆ ಅಂತಿಮಗೊಳಿಸಲಾಗುವುದು. ಈ ಅವಕಾಶವನ್ನು ಯಾವುದೇ ಕಾರಣಕ್ಕೂ ವಿಸ್ತರಣೆ ಮಾಡುವುದಿಲ್ಲ. ಈ ಅವಕಾಶದಲ್ಲಿ ದಂಡದ ಮೇಲೆ ಶೇ.50 ರಷ್ಟು ವಿನಾಯಿತಿ ನೀಡಿದ್ದು, 100%ರಷ್ಟು ಬಡ್ಡಿ ಮನ್ನಾ ಕೂಡ ಮಾಡಲಾಗಿದೆ. ಬಿಜೆಪಿ ಸರ್ಕಾರ ತರಾತುರಿಯಲ್ಲಿ ಜಾರಿಗೆ ತಂದ ಕಾಯ್ದೆ. ನಮ್ಮ ಸರ್ಕಾರ ಇದನ್ನು ಸರಿಪಡಿಸಲು ಮುಂದಾಗಿದೆ. ನಾಗರಿಕರು ಈ ಅವಕಾಶವನ್ನು ಸರಿಯಾದ ರೀತಿಯಲ್ಲಿ ಬಳಸಿಕೊಳ್ಳಬೇಕು.
ಆಸ್ತಿ ತೆರಿಗೆ ಸಂಗ್ರಹದಲ್ಲಿ ಬಿಬಿಎಂಪಿಗೆ ಹಿನ್ನಡೆ :
20 ಲಕ್ಷ ಕಟ್ಟಡಗಳು ಆಸ್ತಿ ತೆರಿಗೆ ವ್ಯಾಪ್ತಿಯಲ್ಲಿದ್ದು, ಅನೇಕರು ಹೊರಗಿದ್ದಾರೆ. ತೆರಿಗೆ ಪಾವತಿಸಲು ಅವರಿಗೂ ಅವಕಾಶ ಕಲ್ಪಿಸಲಾಗಿದೆ. ಅವರು ತೆರಿಗೆ ಪಾವತಿಸಿ 90 ದಿನದೊಳಗೆ ಸೂಕ್ತ ದಾಖಲೆ ಕೊಟ್ಟರೆ ಅವರಿಗೆ ಸೂಕ್ತ ಖಾತೆ ನೀಡಲಾಗುವುದು. ಇನ್ನು 4 ಲಕ್ಷ ಮಂದಿ ಆಸ್ತಿ ತೆರಿಗೆ ಪಾವತಿ ಮಾಡಿಲ್ಲ. ಈಗಾಗಲೇ 50 ಸಾವಿರ ಮಂದಿ ಈ ಅವಕಾಶ ಬಳಸಿಕೊಂಡು ಆಸ್ತಿ ತೆರಿಗೆ ಪಾವತಿಸಿದ್ದಾರೆ. ಆಗಸ್ಟ್ 1ರಿಂದ ತೆರಿಗೆ ಪಾವತಿಸದಿದ್ದರೆ ಡೀಫಾಲ್ಟರ್ ಪಟ್ಟಿಗೆ ಸೇರುತ್ತಾರೆ. ಹೀಗಾಗಿ ಜುಲೈ 31ರ ಒಳಗೆ ಆಸ್ತಿ ತೆರಿಗೆ ಪಾವತಿ ಮಾಡಿ. ಸದ್ಯದ ಲೆಕ್ಕಾಚಾರದ ಪ್ರಕಾರ 5200 ಕೋಟಿ ರೂ.ನಷ್ಟು ಆಸ್ತಿ ತೆರಿಗೆ ಸಂಗ್ರಹವಾಗಬೇಕಿತ್ತು. ಆದರೆ ನಮಗೆ 1300 ಕೋಟಿ ರೂ. ಮಾತ್ರ ಸಂಗ್ರಹವಾಗಿದೆ ಎಂದು ಡಿಕೆಶಿ ತಿಳಿಸಿದ್ದಾರೆ.
ಮೂರು ತಿಂಗಳಲ್ಲಿ ಆಸ್ತಿ ದಾಖಲೆ ಡಿಜಿಟಲೀಕರಣ ಪೂರ್ಣ :
ಕಳೆದ ವರ್ಷ ಆಸ್ತಿ ದಾಖಲೆ ಡಿಜಲೀಕರಣ ಕಾರ್ಯವನ್ನು ಫೆಬ್ರವರಿ- ಮಾರ್ಚ್ ವೇಳೆಗೆಲ್ಲಾ ಪೂರ್ಣಗೊಳಿಸಲಾಗುವುದು ಎಂದು ಇದೇ ಬಿಬಿಎಂಪಿ ಮತ್ತು ಬೆಂಗಳೂರು ಅಭಿವೃದ್ಧಿ ಸಚಿವ ಡಿ.ಕೆ.ಶಿವಕುಮಾರ್ ಹೇಳಿದ್ದರು. ಆದರೀಗ ಯುಟರ್ನ್ ಹೊಡೆದು, “20 ಲಕ್ಷ ಆಸ್ತಿ ದಾಖಲೆಗಳ ಡಿಜಿಟಲೀಕರಣ ಪ್ರಕ್ರಿಯೆ ಮಾಡಲಾಗುತ್ತಿದೆ. ಈ ಆಸ್ತಿ ಮಾಲೀಕರ ಮನೆ ಬಾಗಿಲಿಗೆ ದಾಖಲೆಗಳನ್ನು ತಲುಪಿಸಲಾಗುವುದು. 20 ಲಕ್ಷ ಆಸ್ತಿಗಳ ಪೈಕಿ 8 ಲಕ್ಷ ಆಸ್ತಿಗಳ ದಾಖಲೆಗಳು ಡಿಜಿಟಲೀಕರಣವಾಗಿದ್ದು, ಮುಂದಿನ ಮೂರು ತಿಂಗಳಲ್ಲಿ ಉಳಿದ ಆಸ್ತಿಗಳ ದಾಖಲೆಗಳನ್ನು ಡಿಜಿಟಲೀಕರಣ ಮಾಡಲು ನಿರ್ಧರಿಸಿದ್ದೇವೆ” ಎಂದು ಹೇಳಿದ್ದಾರೆ.
ಜೂನ್ 5 ರಂದು ವಿಶ್ವ ಪರಿಸರ ದಿನ ಕಾರ್ಯಕ್ರಮ ಮಾಡಬೇಕಿತ್ತು. ನೀತಿ ಸಂಹಿತೆ ಹಿನ್ನೆಲೆಯಲ್ಲಿ ಮಾಡಲು ಆಗಿರಲಿಲ್ಲ. ಹೀಗಾಗಿ ಜೂನ್ 14 ರಂದು ಬಾಲಭವನದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಸಾರ್ವಜನಿಕರು ಭಾಗವಹಿಸಬಹುದು. ಹವಾಮಾನ ವೈಪರಿತ್ಯ ವಿಚಾರವಾಗಿ ಜಾಗತಿಕ ಮಟ್ಟದಲ್ಲಿ ಬೆಂಗಳೂರು ಸಿ40 ವಿಭಾಗದಲ್ಲಿ ಸ್ಥಾನ ಪಡೆದಿತ್ತು. ಬಿಬಿಎಂಪಿ ಕಳೆದ ವರ್ಷ ನವೆಂಬರ್ 27ರಂದು ಮೊದಲ ಹವಾಮಾನ ವೈಪರಿತ್ಯ ಕಾರ್ಯಯೋಜನೆಯನ್ನು ಅನಾವರಣಗೊಳಿಸಿತ್ತು.
ಬ್ಲ್ಯೂ ಗ್ರೀನ್ ಊರು ಅಭಿಯಾನ :
ನಮ್ಮ ನಗರವನ್ನು ಹಸಿರಾಗಿಡಲು ಬ್ಲೂ ಗ್ರೀನ್ ಊರು ಎಂಬ ಅಭಿಯಾನ ಆರಂಭಿಸಿದ್ದು, ಹೆಚ್ಚಿನ ಮರಗಳನ್ನು ನೆಡಲು ಸಿದ್ಧತೆ ಮಾಡಲಾಗಿದೆ. ಇದರ ಜತೆಗೆ ಹವಾಮಾನ ಪ್ರಕ್ರಿಯಾ ಕೋಶ (Climate Action Cell) ಕೂಡ ರಚಿಸಲಾಗಿದ್ದು, ಇದರಲ್ಲಿ ಬಿಡಬ್ಲ್ಯೂಎಸ್ಎಸ್ ಬಿ, ಬೆಸ್ಕಾಂ, ಬಿಎಂಟಿಸಿ, ಬಿಟಿಪಿ, ಬಿಎಂಆರ್ ಸಿಎಲ್, ಡೆಲ್ಟ್, ಘನತ್ಯಾಜ್ಯ ನಿರ್ವಹಣೆ, ಮಾಲಿನ್ಯ ನಿಯಂತ್ರಣ ಮಂಡಳಿ, ಅರಣ್ಯ, ಕೈಗಾರಿಕೆ, ಗಣಿಗಾರಿಗೆ ಇಲಾಖೆ ಸೇರಿದಂತೆ ಎಲ್ಲಾ ಇಲಾಖೆಗಳನ್ನು ಒಳಗೊಳ್ಳಲಾಗಿದೆ. ಈ ಬಗ್ಗೆ ಸಂಪೂರ್ಣ ಮಾಹಿತಿ ಬಿಬಿಎಂಪಿ ಜಾಲತಾಣದಲ್ಲಿ ಲಭ್ಯವಿದೆ.
ಹಸಿರು ರಕ್ಷಕ ಮೂಲಕ 2 ಲಕ್ಷ ಗಿಡ ನೆಡುವ ಗುರಿ :
ಕಳೆದ ವರ್ಷ ಹಸಿರು ರಕ್ಷಕ ಕಾರ್ಯಕ್ರಮ ಅನಾವರಣ ಮಾಡಿದ್ದೆವು. ಶಾಲಾ ಮಕ್ಕಳು ತಮ್ಮ ಪ್ರದೇಶದಲ್ಲಿ ಗಿಡ ನೆಟ್ಟು ಅವುಗಳನ್ನು ಅವರೇ ಬೆಳೆಸುವ ಕಾರ್ಯಕ್ರಮ ಇದಾಗಿತ್ತು. ಈಗಾಗಲೇ 250 ಶಾಲೆಗಳ ಸಹಯೋಗದಲ್ಲಿ 52 ಸಾವಿರ ಗಿಡಗಳನ್ನು ನೆಡಲಾಗಿದೆ. ಈ ಪೈಕಿ ಶೇ. 80 ರಷ್ಟು ಗಿಡಗಳು ಉಳಿದುಕೊಂಡಿವೆ. ಶೇ.20 ಹಾಳಾಗಿದ್ದು, ಆ ಜಾಗದಲ್ಲಿ ಬದಲಿ ಗಿಡ ನೆಡಲಾಗುವುದು.
ಶಾಲೆಗಳು ಪಾಲಿಕೆ ಜತೆ ಒಡಂಬಡಿಕೆ ಮಾಡಿಕೊಂಡಿದ್ದು, ಈ ಗಿಡಗಳು ಆರೋಗ್ಯಕರವಾಗಿ ಬೆಳೆಯುತ್ತಿವೆಯೇ ಎಂದು ಪರಿಶೀಲಿಸಲು ಮೊಬೈಲ್ ಅಪ್ಲಿಕೇಷನ್ ಸಿದ್ಧಪಡಿಸಲಾಗಿದೆ. ಈ ಕಾರ್ಯಕ್ರಮದ ಭಾಗವಾಗಿ ಈ ವರ್ಷ ಹೆಚ್ಚಿನ ಶಾಲೆಗಳನ್ನು ಸೇರಿಸಿಕೊಂಡು 2 ಲಕ್ಷ ಗಿಡಗಳನ್ನು ನೆಡುವ ಗುರಿ ಹೊಂದಲಾಗಿದೆ. ಮೂರ್ನಾಲ್ಕು ಗಿಡ ನೆಟ್ಟು ಅವುಗಳನ್ನು ಬೆಳೆಸಿ ಹಸಿರು ಕಾಪಾಡಲು ನೆರವಾಗಿ ಎಂದು ಎಲ್ಲಾ ಶಿಕ್ಷಣ ಸಂಸ್ಥೆ ಮುಖ್ಯಸ್ಥರು, ಅಧ್ಯಾಪಕರು, ಮಕ್ಕಳಿಗೆ ಮನವಿ ಮಾಡುತ್ತೇನೆ. ಬಿಬಿಎಂಪಿ ವತಿಯಿಂದ ವಲಯವಾರು ಮರಗಣತಿ ಮಾಡಲು ಟೆಂಡರ್ ಕರೆಯಲಾಗಿದೆ. ದಕ್ಷಿಣವಲಯದ ವಿದ್ಯಾಪೀಠ, ಕತ್ತರಿಗುಪ್ಪೆ ವಾರ್ಡ್ ಗಳಲ್ಲಿ ಈಗಾಗಲೇ 94 ಸಾವಿರ ಮರಗಳ ಸರಿಯಾದ ಬೆಳವಣಿಗೆಗೆ ಕ್ರಮ ಕೈಗೊಳ್ಳಲಾಗಿದೆ. ಇನ್ನು ಮೆಪಥಾನ್ ಕಾರ್ಯಕ್ರಮದ ಮೂಲಕ ಎಲ್ಲೆಲ್ಲಿ ಗಿಡ ನೆಡಲು ಅವಕಾಶವಿದೆ ಎಂದು ಸ್ಥಳ ಗುರುತಿಸಲು ಮುಂದಾಗಿದ್ದೇವೆ. ಬೊಮ್ಮನಹಳ್ಳಿ ವಲಯದಲ್ಲಿ ಈ ಪ್ರಾಯೋಗಿಕ ಪ್ರಕ್ರಿಯೆ ನಡೆದಿದ್ದು, ಸಾರ್ವಜನಿಕರು ಕೂಡ ಈ ವಿಚಾರದಲ್ಲಿ ನೆರವಾಗಬಹುದು ಎಂದು ಉಪಮುಖ್ಯಮಂತ್ರಿಗಳು ಹಾಗೂ ಬೆಂಗಳೂರು ಅಭಿವೃದ್ಧಿ ಸಚಿವರು ಹೇಳಿದ್ದಾರೆ.
ಇನ್ನು ನಗರದಲ್ಲಿ ಅಂತರ್ಜಲ ನೀರಿನ ಮಟ್ಟ ಕುಸಿಯುತ್ತಿರುವ ಹಿನ್ನೆಲೆಯಲ್ಲಿ ನಗರದಲ್ಲಿರುವ ಬಾವಿಗಳ ರಕ್ಷಣೆಗೆ ಪಾಲಿಕೆ ಮುಂದಾಗಿದೆ. ಇನ್ನು ನಗರದಲ್ಲಿ ಎಲ್ಲೆಲ್ಲಿ ತೆರೆದ ಬಾವಿಗಳಿವೆ ಅವುಗಳ ಮಾಹಿತಿ ಪಡೆದು ಅವುಗಳನ್ನು ಅಭಿವೃದ್ಧಿಪಡಿಸಲಾಗುವುದು. ನಗರದಲ್ಲಿ 7 ಸಾವಿರ ಕೊಳವೆ ಬಾವಿಗಳು ಬತ್ತಿದ್ದವು. ಇವುಗಳ ಪುನಶ್ಚೇತನಕ್ಕಾಗಿ ಕೆರೆಗಳಿಗೆ ಸಂಸ್ಕರಿಸಿದ ನೀರನ್ನು ತುಂಬಿಸಲು ನಿರ್ಧರಿಸಿದ್ದೇವೆ.
ಬೆಳಗ್ಗೆ 5 ರಿಂದ ರಾತ್ರಿ 10 ಗಂಟೆವರೆಗೆ ಪಾರ್ಕ್ ತೆರೆದಿರುತ್ತದೆ :
ಇನ್ನು ನಗರದಲ್ಲಿನ ಪಾಲಿಕೆ ವ್ಯಾಪ್ತಿಯ ಉದ್ಯಾನವನಗಳನ್ನು ನಿರ್ದಿಷ್ಟ ಸಮಯದಲ್ಲಿ ಮಾತ್ರ ತೆರೆಯಲಾಗುತ್ತಿದೆ. ಸಾರ್ವಜನಿಕರು ಮಧ್ಯಾಹ್ನದ ವೇಳೆಯೂ ಉದ್ಯಾನಗಳನ್ನು ತೆರೆಯಬೇಕು ಎಂದು ಮನವಿ ನೀಡಿದ್ದು, ಹೀಗಾಗಿ ನಗರದ ಎಲ್ಲಾ ಉದ್ಯಾನಗಳನ್ನು ಬೆಳಗ್ಗೆ 5 ಗಂಟೆಯಿಂದ ರಾತ್ರಿ 10 ರವರೆಗೆ ತೆರೆಯಲು ನಿರ್ಧರಿಸಲಾಗಿದೆ. ಕಬ್ಬನ್ ಪಾರ್ಕ್ ತೋಟಗಾರಿಕಾ ಇಲಾಖೆ ವ್ಯಾಪ್ತಿಯಲ್ಲಿದ್ದು ಈ ಸಮಯ ಇಲ್ಲಿಗೆ ಅನ್ವಯವಾಗುವುದಿಲ್ಲ. ಉದ್ಯಾನವನಗಳಲ್ಲಿ ಕಾನೂನುಬಾಹಿರ ಚಟುವಟಿಕೆ ನಿಯಂತ್ರಿಸಲು ಪೊಲೀಸರ ಗಸ್ತು, ಮಾರ್ಷಲ್ ಗಳನ್ನು ನಿಯೋಜಿಸಲಾಗುವುದು. ಇದರ ಜತೆಗೆ 22660000, 22221188 ಪಾಲಿಕೆಯ ದೂರವಾಣಿ ಸಂಖ್ಯೆಗೆ ಕರೆ ಮಾಡಿ ದೂರು ನೀಡಬಹುದು. 9480685700 ಗೆ ವಾಟ್ಸಪ್ ಮೂಲಕ ಮಾಹಿತಿ ನೀಡಬಹುದು.
ಅನಧಿಕೃತ ಫ್ಲೆಕ್ಸ್; ಎಆರ್ ಓ ವಿರುದ್ಧವೂ ಪ್ರಕರಣ :
ಪಾಲಿಕೆ ವತಿಯಿಂದ ಅನಧಿಕೃತ ಫ್ಲೆಕ್ಸ್ ನಿಷೇಧ ಮಾಡಿದ್ದರೂ, ಎಲ್ಲಾ ರಾಜಕೀಯ ಪಕ್ಷಗಳ ವತಿಯಿಂದ ಫ್ಲೆಕ್ಸ್ ಹಾಕಲಾಗುತ್ತಿದೆ. ಇದನ್ನು ನಿಯಂತ್ರಿಸುವುದು ಆಯಾ ಪ್ರದೇಶದ ಸಹಾಯಕ ಕಂದಾಯ ಅಧಿಕಾರಿಯ (ARO) ಜವಾಬ್ದಾರಿಯಾಗಿದ್ದು, ಇನ್ನು ಮುಂದೆ ಅನಧಿಕೃತ ಫ್ಲೆಕ್ಸ್ ಇದ್ದರೆ, ಅನಧಿಕೃತ ಫ್ಲೆಕ್ಸ್ ಹಾಕಿದವರ ಜತೆಗೆ ಈ ಅಧಿಕಾರಿಗಳ ಮೇಲೂ ಶಿಸ್ತುಕ್ರಮ ದಾಖಲಿಸಲು ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ. ಅನಧಿಕೃತ ಫ್ಲೆಕ್ಸ್ ಗಳ ಬಗ್ಗೆ ಸಾರ್ವಜನಿಕರು ಪಾಲಿಕೆಗೆ ದೂರು ನೀಡಲು 1533 ಸಹಾಯವಾಣಿಯನ್ನು ಸಂಪರ್ಕಿಸಬಹುದು. 9480683939 ವಾಟ್ಸಪ್ ಮೂಲಕ ಸಾರ್ವಜನಿಕರು ಅನಧಿಕೃತ ಫ್ಲೆಕ್ಸ್ ಹಾಕಿರುವ ಫೋಟೋ ಹಾಗೂ ವಿಳಾಸ ಕಳುಹಿಸಬಹುದು. ಆಗ ಪಾಲಿಕೆ ವತಿಯಿಂದ ತಕ್ಷಣ ಕ್ರಮ ಕೈಗೊಳ್ಳಲಾಗುವುದು ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಉಮಾಶಂಕರ್, ಬಿಬಿಎಂಪಿ ಮುಖ್ಯ ಆಯುಕ್ತರಾದ ತುಷಾರ್ ಗಿರಿನಾಥ್, ವಿಶೇಷ ಆಯುಕ್ತರಾದ ಸುರೋಳ್ಕರ್ ವಿಕಾಸ್ ಕಿಶೋರ್, ಪ್ರೀತಿ ಗೆಹ್ಲೋತ್ ಸೇರಿದಂತೆ ಮತ್ತಿತರ ಹಿರಿಯ ಅಧಿಕಾರಿಗಳು ಪಾಲ್ಗೊಂಡಿದ್ದರು.