ಬೆಂಗಳೂರು, ಜೂ.10 www.bengaluruwire.com : ರಾಜಧಾನಿ ಬೆಂಗಳೂರು ದಿನೇ ದಿನೇ ಬೆಳೆಯುತ್ತಿದ್ರೂ, 2024ನೇ ಇಸವಿ ಬಂದ್ರೂ ಇನ್ನು 2015ರ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ರೂಪಿಸಿದ ಪರಿಷ್ಕೃತ ನಗರ ಮಹಾಯೋಜನೆ (Revised Master Plan) ಅನ್ನೇ ಬಳಸಲಾಗುತ್ತಿದೆ. ಇದೀಗ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ಸಿಲಿಕಾನ್ ಸಿಟಿಗೆ ಪೂರಕವಾಗಿ 2041ರ ಪರಿಷ್ಕೃತ ನಗರ ಮಹಾಯೋಜನೆ ರೂಪಿಸಲು ಬಿಡಿಎ ಅಂತೂ ಮೊದಲ ಹೆಜ್ಜೆಯಿಟ್ಟಿದೆ.
2007ರಲ್ಲಿ ನಗರಕ್ಕಾಗಿ 2015ರ ಮಾಸ್ಟರ್ ಪ್ಲಾನ್ ತಯಾರಿಸಲಾಗಿತ್ತು. ಆನಂತರ ಹಲವು ಕಾರಣಗಳಿಂದ ಈ ಪರಿಷ್ಕೃತ ನಗರ ಮಹಾಯೋಜನೆಯನ್ನು ಜಾರಿಗೆ ತರಲು ಆಗಿರಲಿಲ್ಲ. ಇದೀಗ ಪರಿಷ್ಕೃತ ಮಾಸ್ಟರ್ ಪ್ಲಾನ್ ಸಿದ್ಧಪಡಿಸುವ ನಿಟ್ಟಿನಲ್ಲಿ ಡ್ರೋನ್ ಮೂಲಕ 3ಡಿ ಸರ್ವೇ ನಡೆಸಲು ಬಿಡಿಎ ಅರ್ಹ ಸಂಸ್ಥೆಗಳಿಂದ ಇದೇ ಮೇ.30 ರಂದು ಟೆಂಡರ್ (ಸಂಖ್ಯೆ : ಬೆಂಅಪ್ರಾ/ಆರ್.ಎಂ.ಪಿ-2041/386/2024-25) ಆಹ್ವಾನಿಸಿದೆ.
ಕರ್ನಾಟಕ ರಾಜ್ಯ ದೂರ ಸಂವೇದಿ ಅನ್ವಯಿಕ ಕೇಂದ್ರ (Karnataka State Remote Sensing Applications Centre – KSRSAC)ದ ಮೂಲಕವೇ ಸರ್ವೇ ನಡೆಸಲು ಪ್ರಾಧಿಕಾರವು ತೀರ್ಮಾನಿಸಿತ್ತು. ಆದರೆ, ರಾಜ್ಯ ಸರಕಾರ ಬದಲಾವಣೆಯಾದ ನಂತರ ಈ ಯೋಜನೆಯನ್ನು ಖಾಸಗಿ ಸಂಸ್ಥೆಯ ಮುಲಕ ನಡೆಸಲು ಬಿಡಿಎ ಕರೆದಿರುವ ಟೆಂಡರ್ ಸಲ್ಲಿಕೆಗೆ ಜೂ. 15 ಕಡೆಯ ದಿನವಾಗಿದ್ದು, ಜೂ.21ರಂದು ಆರ್ಥಿಕ ಬಿಡ್ ತೆರೆಯಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.
ಈಗ 2015ರ ಮಾಸ್ಟರ್ ಪ್ಲಾನ್ ಚಾಲ್ತಿಯಲ್ಲಿದೆ. ಈ ಹಿಂದೆ ಪ್ರಾಧಿಕಾರವು ರೂಪಿಸಿರುವ ಪರಿಷ್ಕೃತ ನಗರ ಮಹಾಯೋಜನೆ 2031ರ ಕರಡಿನಲ್ಲಿ ಸಾಕಷ್ಟು ಲೋಪದೋಷಗಳು, ವಿವಾದ, ಟೀಕೆಗಳು ಕೇಳಿ ಬಂದ ಹಿನ್ನಲೆಯಲ್ಲಿ 2019ರಲ್ಲಿ ಕೈಬಿಡಲಾಗಿತ್ತು. ಇದೀಗ ಪರಿಷ್ಕೃತ ನಗರ ಮಹಾಯೋಜನೆ-2041 ಅನ್ನು ಸಿದ್ಧಪಡಿಸಲು ತಯಾರಿ ನಡೆಸಲಾಗಿದೆ. ಸಿಲಿಕಾನ್ ಸಿಟಿಯು ಶರವೇಗದಲ್ಲಿ ಬೆಳೆಯುತ್ತಿದೆ. ಜನಸಂಖ್ಯೆ 1.5 ಕೋಟಿ ಗಿಂತಲೂ ಹೆಚ್ಚಿದೆ. ವಾಹನಗಳ ಸಂಖ್ಯೆಯೂ ಇದೇ ಅಂಕಿಸಂಖ್ಯೆಯ ಆಸುಪಾಸಿನಲ್ಲಿದೆ. ಇದಕ್ಕೆ ತಕ್ಕಂತೆ ರಸ್ತೆಗಳು, ಬಡಾವಣೆಗಳು, ಮೇಲು ಸೇತುವೆ, ಕೆಳ ಸೇತುವೆ, ಎಲಿವೇಟೆಡ್ ಕಾರಿಡಾರ್ ಗಳಂತಹ ಮೂಲ ಸೌಲಭ್ಯಗಳನ್ನು ಕಲ್ಪಿಸಲು, ವಲಯ ನಿಯಂತ್ರಣವನ್ನು ದೃಷ್ಟಿಯಲ್ಲಿಟ್ಟುಕೊಂಡು ಮಹಾಯೋಜನೆಯನ್ನು ಸಿದ್ಧಪಡಿಸಬೇಕು. ಇದೊಂದು ಸವಾಲಿನ ಕೆಲಸ. ಏಕೆಂದರೆ ಭವಿಷ್ಯದ ಬೆಂಗಳೂರಿನ ಅಭಿವೃದ್ಧಿಗೆ ಇದೇ ಕೈಗನ್ನಡಿಯಾಗಿರುತ್ತದೆ.
ಪ್ರತಿ 10 ವರ್ಷಕ್ಕೊಮ್ಮೆ ನಗರದ ಅಭಿವೃದ್ಧಿಯನ್ನು ಗಮನದಲ್ಲಿಟ್ಟುಕೊಂಡು ದೂರದೃಷ್ಟಿಯುಳ್ಳ ಮಹಾಯೋಜನೆ ಸಿದ್ಧಪಡಿಸಬೇಕು. ಆದರೆ 2007ರ ಜೂನ್ ನಲ್ಲಿ ರೂಪಿಸಲಾದ ‘ಮಾಸ್ಟರ್ ಪ್ಲ್ಯಾನ್-2015’ರ ಅನ್ನು ಆನಂತರ ಪರಿಷ್ಕರಿಸುವ ಕೆಲಸಕ್ಕೆ ಮುಹೂರ್ತ ಕೂಡಿ ಬಂದಿರಲಿಲ್ಲ. ಇದೀಗ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು ‘ಪರಿಷ್ಕೃತ ಮಾಸ್ಟರ್ ಪ್ಲಾನ್-204’ಕ್ಕೆ ಸಿದ್ಧತೆ ಆರಂಭಿಸಿದ್ದು, ಡ್ರೋನ್ ಮೂಲಕ 3ಡಿ ಸರ್ವೆ ನಡೆಸಲು ಟೆಂಡರ್ ಆಹ್ವಾನಿಸಿದೆ.
ಇದನ್ನೂ ಓದಿ : Illegal Private Sites | ಸಾರ್ವಜನಿಕರ ಗಮನಕ್ಕೆ : ಅನಧಿಕೃತ ಬಡಾವಣೆಗಳ ನಿರ್ಮಾಣ ಅಥವಾ ನಿವೇಶನ ಖರೀದಿ ಮಾಡುವವರಿಗೆ ಬಿಡಿಎ ಎಚ್ಚರಿಕೆ!!
ಹೇಗೆ ನಡೆಸುತ್ತಾರೆ ಡ್ರೋನ್ ಸರ್ವೆ?:
ಸುಮಾರು 800 ಚ.ಕಿ.ಮೀ ವಿಸ್ತೀರ್ಣದ ಬಿಬಿಎಂಪಿ ವ್ಯಾಪ್ತಿ ಹೊರತುಪಡಿಸಿದಂತೆ ಬಿಡಿಎ ವ್ಯಾಪ್ತಿಯ 440 ಚದರ ಕಿ.ಮೀ ವ್ಯಾಪ್ತಿಯಲ್ಲಿ ದ್ರೋಣ್ ಯಂತ್ರದ ಮೂಲಕ ಸರ್ವೇ ಕೈಗೊಳ್ಳಬೇಕು. ಬೇಸ್ ಮ್ಯಾಪ್ ಹಾಗೂ ಭೂ ಬಳಕೆಯ ನಕ್ಷೆ ಹಾಗೂ ದ್ರೋಣ್ ಸರ್ವೇ ಆಧರಿಸಿ ಆರ್ಥೋ ರೆಕ್ಟಿಫೈಯ್ಡ್ ಇಮೇಜಸ್ (Orthorectified Images) ಮತ್ತು ಡಿಜಿಟಲ್ ಎಲಿವೇಷನ್ ಮಾಡಲ್ (Digital Elevation Model)ಗಳನ್ನು ಸಿದ್ಧಪಡಿಸಿಕೊಂಡು ಮಾಸ್ಟರ್ ಪ್ಲಾನ್ ರಚಿಸಲು ಬಿಡಿಎ ಉದ್ದೇಶಿಸಿದೆ.
ಆರ್ಥೋರೆಕ್ಟಿಫೈಡ್ ಚಿತ್ರಣವು ವಿರೂಪಗಳಿಂದ ಮುಕ್ತವಾಗಿದೆ. ನಿಖರವಾದ ಸ್ಥಾನಿಕ ಮಾಹಿತಿ ಮತ್ತು ಖಚಿತ ಮಾಪನದ ಅಗತ್ಯವಿರುವ ಅಪ್ಲಿಕೇಶನ್‌ಗಳಿಗೆ ಇದು ಅತ್ಯಗತ್ಯವಾಗಿರುತ್ತದೆ. ಆರ್ಥೋಫೋಟೋಗಳು ನಿಖರವಾದ ಡೇಟಾ ಸಮ್ಮಿಲನ, ಓವರ್‌ಲೇ ಮತ್ತು ವೈಶಿಷ್ಟ್ಯದ ಹೊರತೆಗೆಯುವಿಕೆಯನ್ನು ಖಚಿತಪಡಿಸುತ್ತದೆ. ಆರ್ಥೋ ಇಮೇಜ್‌ಗಳು ಬಹುಮುಖ ಮತ್ತು ಅನೇಕ ಉದ್ದೇಶಗಳನ್ನು ಪೂರೈಸಬಲ್ಲವು ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ.ಇನ್ನು ಡಿಜಿಟಲ್ ಎಲಿವೇಶನ್ ಮಾಡೆಲ್ (DEM) ಎಂಬುದು ಮರಗಳು, ಕಟ್ಟಡಗಳು ಮತ್ತು ಯಾವುದೇ ಇತರ ಮೇಲ್ಮೈ ವಸ್ತುಗಳನ್ನು ಹೊರತುಪಡಿಸಿ ಭೂಮಿಯ ಬರಿಯ ನೆಲದ (ಬೇರ್ ಅರ್ಥ್) ಸ್ಥಳಾಕೃತಿಯ ಮೇಲ್ಮೈಯನ್ನು ಪ್ರತಿನಿಧಿಸುತ್ತದೆ.
ಡ್ರೋನ್ ಸರ್ವೇ ಕಾರ್ಯಕ್ಕೆ ರಕ್ಷಣಾ ಸಚಿವಾಲಯ ಸೇರಿದಂತೆ ಇತರ ಎಲ್ಲಾ ಸಂಸ್ಥೆಗಳಿಂದ ಅನುಮತಿಗಳನ್ನು ಯಶಸ್ವೀ ಬಿಡ್ ದಾರರು ಪಡೆದುಕೊಳ್ಳಬೇಕು. ಕೆರೆ, ರಾಜಕಾಲುವೆ ಸೇರಿದಂತೆ ಎಲ್ಲಾ ರೀತಿಯ ಬಫರ್ ಜೋನ್‌ಗಳನ್ನು ಗುರುತಿಸಬೇಕು. 360 ಡಿಗ್ರಿ ಚಿತ್ರಗಳನ್ನೂ ಸಂಗ್ರಹಿಸಿಕೊಂಡು, ವಾಸ್ತವದಲ್ಲಿನ ಭೂಮಿಯೊಂದಿಗೆ ಅದನ್ನು 3ಡಿ ರಿಯಾಲಿಟಿ ಮೆಷ್ ಮಾಡೆಲ್ ನಲ್ಲಿ ಅಳವಡಿಸಬೇಕೆಂದು ಷರತ್ತು ವಿಧಿಸಲಾಗಿದೆ. ಒಟ್ಟಿನಲ್ಲಿ ಈ ಬಾರಿಯಾದರೂ ಬಿಡಿಎ ಪರಿಷ್ಕೃತ ನಗರ ಮಹಾಯೋಜನೆಯನ್ನು ಸಕಾಲದಲ್ಲಿ ತಯಾರಿಸಿದಲ್ಲಿ, ಅಡ್ಡಾದಿಡ್ಡಿಯಾಗಿ ಬೆಳೆಯುತ್ತಿರುವ ಬೆಂಗಳೂರಿಗೆ ಸೂಕ್ತ ಮಾರ್ಗದರ್ಶನ ಸಿಗುವ ನಿಟ್ಟಿನಲ್ಲಿ ಸಹಾಯಕವಾದೀತು.
“ಬೆಂಗಳೂರು ವೈರ್” ಡಿಜಿಟಲ್ ವೆಬ್ ನ್ಯೂಸ್ ಪೋರ್ಟೆಲ್ಲಿನ ಸೋಶಿಯಲ್ ಮೀಡಿಯಾ ಪೇಜ್ ಹಾಗೂ Google News ಗಳಿಗೆ ಉಚಿತವಾಗಿ Subscribe ಆಗಲು Facebook, Telegram, Twitter, Dailyhunt, Youtube, Whatsup Channel ಗೆ ಜಾಯಿನ್ ಆಗಲು ಇವುಗಳ ಲಿಂಕ್ ಮೇಲೆ ಕ್ಲಿಕ್ ಮಾಡಿ.