ಹೈದರಾಬಾದ್, ಜೂ.8 www.bengaluruwire.com : ರಾಮೋಜಿ ಸಮೂಹ ಸಂಸ್ಥೆಗಳ ಅಧ್ಯಕ್ಷರಾದ ರಾಮೋಜಿ ರಾವ್ (87) ಅವರು ಶನಿವಾರ ಮುಂಜಾನೆ ನಿಧನ ಹೊಂದಿದ್ದಾರೆ. ಇತ್ತೀಚೆಗಷ್ಟೇ ಆರೋಗ್ಯ ಸಮಸ್ಯೆಯಿಂದಾಗಿ ಹೈದರಾಬಾದ್‌ನ ಆಸ್ಪತ್ರೆಗೆ ದಾಖಲಾಗಿದ್ದರು. ಬಳಿಕ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿತ್ತು.
ಆರೋಗ್ಯ ಹದಗೆಟ್ಟ ಹಿನ್ನೆಲೆಯಲ್ಲಿ ಇದೇ 5ರಂದು ಆಸ್ಪತ್ರೆಗೆ ದಾಖಲಾಗಿದ್ದ ರಾಮೋಜಿ ರಾವ್ ಅವರು ಶನಿವಾರ ಬೆಳಗಿನ ಜಾವ 4.50ಕ್ಕೆ ನಿಧನರಾದರು. ವಯೋಸಹಜ ಅನಾರೋಗ್ಯ ಸಮಸ್ಯೆಗಳಿಂದಾಗಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.
ರಾಮೋಜಿ ರಾವ್ ಅವರ ಪಾರ್ಥಿವ ಶರೀರವನ್ನು ರಾಮೋಜಿ ಫಿಲ್ಮ್ ಸಿಟಿಯಲ್ಲಿರುವ ಅವರ ನಿವಾಸಕ್ಕೆ ತರಲಾಗಿದೆ. ಅಲ್ಲಿ ಕುಟುಂಬ, ಸ್ನೇಹಿತರು ಮತ್ತು ಹಿತೈಷಿಗಳು ಅಗಲಿದ ಚೇತನಕ್ಕೆ ಅಂತಿಮ ನಮನ ಸಲ್ಲಿಸಲಿದ್ದಾರೆ. 1936ರಲ್ಲಿ ನವೆಂಬರ್ 16ರಂದು ಆಗಿನ ಮದ್ರಾಸ್ ಪ್ರಾಂತ್ಯ ಹಾಗೂ ಈಗಿನ ಆಂಧ್ರಪ್ರದೇಶದ ಪೆದಪುರುಪುಡಿಯಲ್ಲಿ ಜನಿಸಿದರು.
ರಾಮೋಜಿ ರಾವ್ ಅವರ ನಿಧನಕ್ಕೆ ಪ್ರಧಾನ ನರೇಂದ್ರ ಮೋದಿ ಸಂತಾಪ ಸೂಚಿಸಿದ್ದಾರೆ. ಶ್ರೀ ರಾಮೋಜಿ ರಾವ್ ಅವರ ಅಗಲಿಕೆ ಅತ್ಯಂತ ದುಃಖ ತಂದಿದೆ. “ಅವರು ಭಾರತೀಯ ಮಾಧ್ಯಮದಲ್ಲಿ ಕ್ರಾಂತಿಯನ್ನು ಮಾಡಿದ ದಾರ್ಶನಿಕರಾಗಿದ್ದರು. ಅವರ ಶ್ರೀಮಂತ ಕೊಡುಗೆಗಳು ಪತ್ರಿಕೋದ್ಯಮ ಮತ್ತು ಚಲನಚಿತ್ರಗಳ ಜಗತ್ತಿನಲ್ಲಿ ಅಳಿಸಲಾಗದ ಛಾಪು ಮೂಡಿಸಿವೆ. ಅವರ ಗಮನಾರ್ಹ ಪ್ರಯತ್ನಗಳ ಮೂಲಕ, ಅವರು ಮಾಧ್ಯಮ ಮತ್ತು ಮನರಂಜನಾ ಜಗತ್ತಿನಲ್ಲಿ ನಾವೀನ್ಯತೆ ಮತ್ತು ಶ್ರೇಷ್ಠತೆಗಾಗಿ ಹೊಸ ಮಾನದಂಡಗಳನ್ನು ಸ್ಥಾಪಿಸಿದರು.”
“ರಾಮೋಜಿ ರಾವ್ ಅವರು ಭಾರತದ ಅಭಿವೃದ್ಧಿಯ ಬಗ್ಗೆ ಅಪಾರವಾದ ಉತ್ಸುಕರಾಗಿದ್ದರು. ಅವರೊಂದಿಗೆ ಸಂವಹನ ನಡೆಸಲು ಮತ್ತು ಅವರ ಬುದ್ಧಿವಂತಿಕೆಯಿಂದ ಪ್ರಯೋಜನ ಪಡೆಯಲು ಹಲವಾರು ಅವಕಾಶಗಳನ್ನು ಪಡೆದಿರುವುದು ನನ್ನ ಅದೃಷ್ಟ. ಈ ಕಷ್ಟದ ಸಮಯದಲ್ಲಿ ಅವರ ಕುಟುಂಬ, ಸ್ನೇಹಿತರು ಮತ್ತು ಅಸಂಖ್ಯಾತ ಅಭಿಮಾನಿಗಳಿಗೆ ಸಂತಾಪ. ಓಂ ಶಾಂತಿ” ಎಂದು ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.
ಮಾಧ್ಯಮ ಕ್ಷೇತ್ರದ ಉದ್ಯಮಿಯಾಗಿ ಸಾಕಷ್ಟು ಪ್ರಯೋಗಗಳನ್ನು ಮಾಡಿದ್ದರು ಮತ್ತು ಚಲನಚಿತ್ರ ನಿರ್ಮಾಪಕರಾಗಿದ್ದರು. ಅವರು ವಿಶ್ವದ ಅತಿದೊಡ್ಡ ಚಲನಚಿತ್ರ ನಿರ್ಮಾಣ ಸೌಲಭ್ಯವಾದ ರಾಮೋಜಿ ಫಿಲ್ಮ್ ಸಿಟಿಯ ರಾಮೋಜಿ ಗ್ರೂಪ್, ಈನಾಡು ಪತ್ರಿಕೆ, ಟಿವಿ ಚಾನೆಲ್‌ಗಳ ಈಟಿವಿ ನೆಟ್‌ವರ್ಕ್ (ETV Network), ಚಲನಚಿತ್ರ ನಿರ್ಮಾಣ ಕಂಪನಿ ಉಷಾ ಕಿರಣ್ ಮೂವೀಸ್ ಮುಖ್ಯಸ್ಥರಾಗಿದ್ದರು. ಮಾರ್ಗದರ್ಶಿ ಚಿಟ್ ಫಂಡ್, ಡಾಲ್ಫಿನ್ ಗ್ರೂಪ್ ಆಫ್ ಹೋಟೆಲ್‌ಗಳು, ಕಲಾಂಜಲಿ ಶಾಪಿಂಗ್ ಮಾಲ್, ಪ್ರಿಯಾ ಉಪ್ಪಿನಕಾಯಿ ಮತ್ತು ಮಯೂರಿ ಫಿಲ್ಮ್ ಡಿಸ್ಟ್ರಿಬ್ಯೂಟರ್ಸ್ ಅವರ ಇತರ ವ್ಯಾಪಾರ ಉದ್ಯಮಗಳಾಗಿದ್ದವು.
ಅವರು ದಕ್ಷಿಣದ ನಾಲ್ಕು ಫಿಲ್ಮ್‌ಫೇರ್ ಅವಾರ್ಡ್ಸ್, ಐದು ನಂದಿ ಪ್ರಶಸ್ತಿಗಳು ಮತ್ತು ತೆಲುಗು ಸಿನಿಮಾದಲ್ಲಿನ ಅವರ ಕೆಲಸಗಳಿಗಾಗಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು ಗಳಿಸಿದ್ದರು. 2016 ರಲ್ಲಿ, ಅವರು ಪತ್ರಿಕೋದ್ಯಮ, ಸಾಹಿತ್ಯ ಮತ್ತು ಶಿಕ್ಷಣದಲ್ಲಿನ ಅವರ ಕೊಡುಗೆಗಳಿಗಾಗಿ ಭಾರತದ ಎರಡನೇ ಅತ್ಯುನ್ನತ ನಾಗರಿಕ ಗೌರವವಾದ ಪದ್ಮವಿಭೂಷಣ ಪ್ರಶಸ್ತಿಗೆ ಪಾತ್ರರಾದರು.