ಗಾಜಿಯಾಬಾದ್ (ಉತ್ತರಪ್ರದೇಶ), ಜೂ.2 www.bengaluruwire.com : ದೇಶದಲ್ಲಿ ಹಲವು ರಾಜ್ಯಗಳಲ್ಲಿ ಈ ಬಾರಿ ತೀವ್ರ ಬಿಸಿಲಿನ ಶಾಖದಿಂದ ಜನರು ತತ್ತರಿಸುತ್ತಿದ್ದಾರೆ. ಮನೆಯಿಂದ ಹೊರಗೆ ಕಾಲಿಡುವುದೇ ಕಷ್ಟವಾಗಿದೆ. ಎಷ್ಟೋ ನಾಗರೀಕರು, ವಯಸ್ಸಾದವರು ಆರೋಗ್ಯ ಹದಗೆಡುತ್ತಿದೆ. ಈ ಸ್ಥಿತಿಯಲ್ಲಿ, ನಾವು ಕೇವಲ ಮನುಷ್ಯರು ಮಾತ್ರವಲ್ಲ, ಬಿಸಿಲ ಝಳಕ್ಕೆ ಪ್ರಾಣಿ ಪಕ್ಷಿಗಳು ತೊಂದರೆ ಅನುಭವಿಸುತ್ತಿವೆ.
ಉತ್ತರ ಪ್ರದೇಶದ ಗಾಜಿಯಾಬಾದ್‌ನಲ್ಲಿ ಹೆಚ್ಚಿನ ತಾಪಮಾನವು ಪ್ರಾಣಿಗಳು ಮತ್ತು ಪಕ್ಷಿಗಳು ಸೇರಿದಂತೆ ಎಲ್ಲರಿಗೂ ತೊಂದರೆ ಉಂಟುಮಾಡುತ್ತಿದೆ. ಇತ್ತೀಚೆಗಷ್ಟೇ ಬಿಸಿಲಿನ ತಾಪಕ್ಕೆ ಕೋತಿಯೊಂದು ಮರದಿಂದ ಸುಸ್ತಾಗಿ ಕೆಳಗೆ ಬಿದ್ದಿತ್ತು. ಅದೃಷ್ಟವಶಾತ್, ಇದನ್ನು ಕಂಡ ಕೆಲವು ಸ್ಥಳೀಯ ನಿವಾಸಿಗಳು ಆ ಮಂಗನ ಕಂಡು ತಕ್ಷಣವೇ ಅದರ ಸಹಾಯಕ್ಕೆ ಮುಂದಾದರು.
ಇದೀಗ ವೈರಲ್ ಆಗಿರುವ ವಿಡಿಯೋದಲ್ಲಿ ಕೆಲವರು ಕೋತಿಯನ್ನು ತಣ್ಣೀರಿನಿಂದ ಸಂತೈಸಲು ಪ್ರಯತ್ನಿಸುತ್ತಿರುವುದನ್ನು ನಾವು ನೋಡಬಹುದು. ಅಲ್ಲದೆ ಮಂಗನ ದೇಹದ ತಾಪಮಾನ ಕಡಿಮೆ ಮಾಡಲು ಎಣ್ಣೆಯನ್ನು ಹಾಕಿ ಮಸಾಜ್ ಮಾಡಿ ಮಂಗನ ದೇಹವನ್ನು ತಂಪು ಮಾಡಲು ಪ್ರಯತ್ನಿಸಿ ಯಶಸ್ವಿಯಾದರು. ಆನಂತರ ಕೆಲವರು ಮಂಗನ ದೇಹ ದ್ರವಸ್ಥಿತಿ ಕಾಯ್ದುಕೊಳ್ಳಲು ಅನುವಾಗುವಂತೆ ಒಆರ್ ಎಸ್ (Oral Rihidration Solution) ಪಾನೀಯ ಕುಡಿಸುತ್ತಾರೆ. ದಣಿದು ಸಾವರಿಸಿಕೊಂಡ ಆ ಕೋತಿ ಆ ಪಾನೀಯ ಕುಡಿದು ಸಾವರಿಸಿಕೊಂಡಿತು. ನಿವಾಸಿಗಳ ತ್ವರಿತ ಪ್ರತಿಕ್ರಿಯೆ ಮತ್ತು ಸಕ್ರಿಯ ಕಾಳಜಿಯು ಮಂಗದ ಜೀವವನ್ನು ಉಳಿಸಿತು.
ಸಾಮಾಜಿಕ ಜಾಲ ತಾಣದಲ್ಲಿ ಅಪಲೋಡ್ ಮಾಡಿದ ವಿಡಿಯೋ ನೋಡಿದ ಅನೇಕ ವೀಕ್ಷಕರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಲು ಮತ್ತು ಕೋತಿಗೆ ಸಹಾಯ ಮಾಡಿದ ನಿವಾಸಿಗಳನ್ನು ಪ್ರಶಂಸಿದ್ದಾರೆ.
“ಬೇಸಿಗೆಯಲ್ಲಿ ಪ್ರಾಣಿಗಳ ಸ್ಥಿತಿ ತುಂಬಾ ಕೆಟ್ಟದಾಗಿದೆ, ಮತ್ತು ಕೆಲವೇ ಜನರು ಅದರ ಬಗ್ಗೆ ಗಮನ ಹರಿಸುತ್ತಾರೆ. ಆ ರೀತಿ ಸಹಾಯ ನೋಡುವುದು ಒಳ್ಳೆಯದು.” ಎಂದು ಹೇಳಿದ್ದರೆ, ಮತ್ತೊಬ್ಬ ಎಕ್ಸ್ ಬಳಕೆದಾರರು, “ಮನುಷ್ಯರು ಮಾತ್ರವಲ್ಲ, ಪ್ರಾಣಿಗಳೂ ಸಹ ಶಾಖದ ಸಮಸ್ಯೆಯಿಂದ ಬಳಲುತ್ತಿದ್ದಾರೆ.” ಎಂದು ಪೋಸ್ಟ್ ಮಾಡಿದ್ದಾರೆ.
ಶಾಖದ ಅಲೆಯಿಂದ ಬಳಲುತ್ತಿರುವ ಪ್ರಾಣಿಗಳ ಈ ಘಟನೆಯು ಹೊಸತಲ್ಲ. ಮರುಕಳಿಸುತ್ತಲೇ ಇದೆ. ಕೆಲವು ದಿನಗಳ ಹಿಂದೆ ಉತ್ತರ ಪ್ರದೇಶದ ಬುಲಂದ್‌ಶಹರ್‌ನಲ್ಲಿ ಮತ್ತೊಂದು ಕೋತಿ ಇದೇ ರೀತಿ ಮರದಿಂದ ಕೆಳಗೆ ಬಿದ್ದು ಮೂರ್ಛೆ ಹೋಗಿತ್ತು. ಬಳಿಕ ಸ್ಥಳದಲ್ಲಿದ್ದ ಹೆಡ್ ಕಾನ್‌ಸ್ಟೆಬಲ್ ವಿಕಾಸ್ ತೋಮರ್ ಅದನ್ನು ರಕ್ಷಿಸಿದ್ದರು. ಹದ್ದು, ಪಾರಿವಾಳ, ಅಳಿಲು ನಂತಹ ಜೀವಿಗಳು ಸೂರ್ಯನ ಧಗೆಗೆ ಬಳಲಿ ನೆಲಕ್ಕುರುಳಿದ ಘಟನೆಗಳು ನಡೆಯುತ್ತಲೇ ಇದೆ. ಈ ಮಧ್ಯೆ ದೇಶದಲ್ಲಿ ಮುಂಗಾರು ಮಳೆ ಆಗಮನವಾಗಿರುವುದು ಸಮಾಧಾನಕರ ವಿಷಯವಾಗಿದೆ.