ಬೆಂಗಳೂರು, ಜೂ.2 www.bengaluruwire.com : ಲೋಕಸಭಾ ಫಲಿತಾಂಶಕ್ಕೆ ಒಂದು ದಿನ ಬಾಕಿ ಇರುವಾಗ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ.ಸಿ.ಎನ್.ಮಂಜುನಾಥ್ ಅವರು ಕೇಂದ್ರ ಚುನಾವಣಾ ಆಯೋಗಕ್ಕೆ ಮಹತ್ವದ ಪತ್ರ ಬರೆದಿದ್ದಾರೆ.
ಬೆಂಗಳೂರು ಗ್ರಾಮಾಂತರ ಲೋಕಸಭೆ ಕ್ಷೇತ್ರದಲ್ಲಿ ಶಾಂತಿ ಕದಡುವ ಸಂಚು ನಡೆಯುವ ಆತಂಕವನ್ನು ಪತ್ರದಲ್ಲಿ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಸೋಲುವ ಸಂಭವ ಇದ್ದರೆ ಕ್ಷೇತ್ರದಲ್ಲಿ ಗಲಾಟೆ, ಸಂಘರ್ಷಗಳು ನಡೆಯುವ ಸಾಧ್ಯತೆಗಳಿವೆ. ಈ ಸಂದರ್ಭದಲ್ಲಿ ಡಿಕೆಶಿ ಅವರು ಆಡಳಿತ ಯಂತ್ರ ದುರುಪಯೋಗ ಪಡಿಸಿಕೊಳ್ಳುವ ಸಾಧ್ಯತೆ ಇದೆ. ಹೀಗಾಗಿ ಬೆಂಗಳೂರು ಗ್ರಾಮಾಂತರ ಲೋಕಸಭೆ ಕ್ಷೇತ್ರದ ವ್ಯಾಪ್ತಿಯಲ್ಲಿ ಹೆಚ್ಚುವರಿ ಬಿಗಿ ಭದ್ರತೆ ಒದಗಿಸಬೇಕು. ಮತ ಎಣಿಕೆ ಕೇಂದ್ರದಲ್ಲಿ ಯಾವುದೇ ಗೊಂದಲ, ಗಲಾಟೆಗಳು ಆಗಬಾರದು ಎಂದು ಆಯೋಗಕ್ಕೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.
ಹೆಚ್ಚುವರಿ ಭದ್ರತಾ ಪಡೆಗಳ ನಿಯೋಜನೆ ಮಾಡಬೇಕು. ಎಣಿಕೆ ಕೇಂದ್ರದ ಸುತ್ತಲೂ ಹೆಚ್ಚುವರಿ ಪೊಲೀಸ್ ಮತ್ತು ಅರೆಸೇನಾ ಪಡೆಗಳ ನಿಯೋಜನೆ ಮಾಡಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಬೇಕು. ಯಾವುದೇ ವ್ಯಕ್ತಿಯ ಅನಧಿಕೃತ ಪ್ರವೇಶ ಅಥವಾ ಉಲ್ಲಂಘನೆಯ ಪ್ರಯತ್ನಗಳನ್ನು ತಡೆಗಟ್ಟಲು ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಬೇಕುಎಂದು ಕೋರಿದ್ದಾರೆ.
ಪಕ್ಷದ ಏಜೆಂಟ್‌ಗಳು ಸೇರಿದಂತೆ ಮತ ಎಣಿಕೆ ಪ್ರದೇಶವನ್ನು ಪ್ರವೇಶಿಸುವ ಎಲ್ಲಾ ವ್ಯಕ್ತಿಗಳನ್ನು ಸಂಪೂರ್ಣವಾಗಿ ತಪಾಸಣೆ ಮಾಡಬೇಕು. ಅಧಿಕಾರಿಗಳು ಮತ್ತು ಮಾಧ್ಯಮ ಸಿಬ್ಬಂದಿ ಅವರ ಉಪಸ್ಥಿತಿಯು ಅತ್ಯಗತ್ಯವಾಗಿದ್ದು, ಪೂರ್ವ ಅನುಮತಿ ಪಡೆದ ವ್ಯಕ್ತಿಗಳಿಗೆ ಮಾತ್ರ ಮತ ಎಣಿಕೆ ಕೇಂದ್ರದ ಒಳಗೆ ಅವಕಾಶ ಮಾಡಿಕೊಡಬೇಕು. ಎಣಿಕೆ ಕೇಂದ್ರದ ಒಳಗೆ ಮತ್ತು ಸುತ್ತಮುತ್ತ ಸಿಸಿಟಿವಿ, ವೆಬ್‌ಕಾಸ್ಟಿಂಗ್ ವ್ಯವಸ್ಥೆ ಮಾಡಬೇಕೆಂದು ಪತ್ರದಲ್ಲಿ ಮಂಜುನಾಥ್ ಅವರು ಮನವಿ ಮಾಡಿದ್ದಾರೆ.
ರಾಜ್ಯದ 28 ಲೋಕಸಭಾ ಕ್ಷೇತ್ರಗಳಲ್ಲಿ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ನಿಂದ ಡಿ.ಕೆ.ಸುರೇಶ್ ಮತ್ತು ಬಿಜೆಪಿ- ಜೆಡಿಎಸ್ ಪಕ್ಷದ ಒಮ್ಮತ ಅಭ್ಯರ್ಥಿಯಾಗಿ ಡಾ.ಸಿ.ಎನ್.ಮಂಜುನಾಥ್ ನಡುವೆ ಟಫ್ ಸ್ಪರ್ಧೆ ನಡೆದಿದ್ದು ಹೈಪರ್ ಕ್ಷೇತ್ರವೆಂದೇ ಪರಿಗಣಿಸಲಾಗಿದೆ. ಜೂ.4ರ. ದು ಲೋಕಸಭಾ ಚುನಾವಣೆಯ ಮತ ಎಣಿಕೆ ನಡೆಯುತ್ತಿದ್ದು, ಈಗಾಗಲೇ ಈ ಹೈಪರ್ ಕ್ಷೇತ್ರದಲ್ಲಿ ಸೋಲು ಗೆಲುವಿನ ಲೆಕ್ಕಾಚಾರ ಜೋರಾಗಿ ನಡೆಯುತ್ತಿದೆ.