ಬೆಂಗಳೂರು, ಜೂ.1 www.bengaluruwire.com : ಲೋಕಸಭಾ ಚುನಾವಣೆಯ ಮತ ಎಣಿಕೆ ಜೂ.4ರಂದು ನಡೆಯಲಿದ್ದು, ನಗರದ ಮೂರು ಮತ ಎಣಿಕೆ ಕೇಂದ್ರ ಬಳಿ ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಸೂಕ್ತ ಕ್ರಮಗಳನ್ನು ಕೈಗೊಳ್ಳಲು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಮುಖ್ಯ ಆಯುಕ್ತರಾದ ತುಷಾರ್ ಗಿರಿ ನಾಥ್ ರವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಲೋಕಸಭಾ ಚುನಾವಣೆಯ ಮತ ಎಣಿಕೆ ಸಂಬಂಧಿಸಿದಂತೆ ಪಾಲಿಕೆ ಕೇಂದ್ರ ಕಛೇರಿ ಮುಖ್ಯ ಆಯುಕ್ತರ ಕಛೇರಿಯಲ್ಲಿ ಶನಿವಾರ ನಡೆದ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಲೋಕಸಭಾ ಚುನಾವಣೆಯ ಮತ ಎಣಿಕೆಯು ಜೂನ್ 4ರಂದು ನಡೆಯಲಿದ್ದು, ಈ ಸಂಬಂಧ ಮತ ಎಣಿಕೆ ದಿನದಂದು ಎಲ್ಲಾ ರೀತಿಯ ಸಿದ್ದತೆಗಳನ್ನು ಮಾಡಲು ಸಲಹೆ- ಸೂಚನೆಗಳನ್ನು ನೀಡಿದರು.
ನಗರದಲ್ಲಿ ಮೂರು ಮತ ಎಣಿಕೆ ಕೇಂದ್ರಗಳು ಬರಲಿದ್ದು, ಚುನಾವಣಾ ಆಯೋಗದ ಮಾರ್ಗಸೂಚಿ ಅನ್ವಯ ಮತ ಎಣಿಕೆ ಕೇಂದ್ರಗಳ ಬಳಿ ಸಿಸಿ ಟಿವಿ ಹಾಗೂ ವಿಡಿಯೋಗ್ರಾಫಿ ವ್ಯವಸ್ಥೆ ಮಾಡಿಕೊಳ್ಳಬೇಕು. ಅಂಚೆ ಮತ ಪತ್ರ ಎಣಿಕೆಯನ್ನು ಸರಿಯಾಗಿ ಮಾಡಬೇಕು. ಈ ಕೇಂದ್ರಗಳ ಬಳಿ ಸ್ಥಾಪಿಸುವ ಮಾಧ್ಯಮ ಕೇಂದ್ರಗಳಲ್ಲಿ ಎಲ್ಲಾ ರೀತಿಯ ವ್ಯವಸ್ಥೆಯನ್ನು ಸರಿಯಾಗಿ ಮಾಡಿರಬೇಕು. ಮಾಧ್ಯಮ ಪ್ರತಿನಿಧಿಗಳಿಗೆ ಸೂಕ್ತ ಸೌಲಭ್ಯಗಳನ್ನು ಸರಿಯಾಗಿ ಕಲ್ಪಿಸಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು.
ಈಗಾಗಲೇ ಮತ ಎಣಿಕೆ ಸಿಬ್ಬಂದಿಯನ್ನು ನಿಯೋಜಿಸಿ ಅವರಿಗೆ ಅಗತ್ಯ ತರಬೇತಿಯನ್ನು ನೀಡಲಾಗಿದೆ. ಬೆಂಗಳೂರು ಪದವೀಧರ ಕ್ಷೇತ್ರದ ಚುನಾವಣೆಗೆ ಸಂಬಂಧಿಸಿದಂತೆ ಜೂನ್ 3 ರಂದು ಮತದಾನ ನಡೆಯಲಿದ್ದು, ಈ ಸಂಬಂಧ ಎಲ್ಲಾ ರೀತಿಯ ಸಿದ್ದತೆಗಳನ್ನು ಮಾಡಿಕೊಳ್ಳಲು ಅಧಿಕಾರಿಗಳಿಗೆ ತಿಳಿಸಿದರು. ಸಭೆಯಲ್ಲಿ ಚುನಾವಣಾ ವಿಭಾಗದ ವಿಶೇಷ ಆಯುಕ್ತರಾದ ಸೆಲ್ವಮಣಿ, ಅಪರ ಜಿಲ್ಲಾ ಚುನಾವಣಾಧಿಕಾರಿಗಳಾದ ವಿನೋತ್ ಪ್ರಿಯಾ, ಸ್ನೇಹಲ್, ದಯಾನಂದ್, ಚುನಾವಣಾ ವಿಭಾಗದ ಸಹಾಯಕ ಆಯುಕ್ತರಾದ ರವಿ ಚಂದ್ರ ನಾಯ್ಕ್ ಸೇರಿದಂತೆ ಇನ್ನಿತರೆ ಸಂಬಂಧಪಟ್ಟ ಅಧಿಕಾರಿಗಳು ಉಪಸ್ಥಿತರಿದ್ದರು.
ಬೆಂಗಳೂರು ನಗರ ಜಿಲ್ಲೆಯ 3 ಲೋಕಸಭಾ ಕ್ಷೇತ್ರಗಳ ಮತ ಎಣಿಕೆ ಮತ್ತು ಸ್ಟ್ರಾಂಗ್ ರೂಂ ಕೇಂದ್ರಗಳ ವಿವರ:
1. ಬೆಂಗಳೂರು ಕೇಂದ್ರ: ಮೌಂಟ್ ಕಾರ್ಮೆಲ್ ಕಾಲೇಜು, ಅರಮನೆ ರಸ್ತೆ, ವಸಂತನಗರ, ಬೆಂಗಳೂರು.
2. ಬೆಂಗಳೂರು ಉತ್ತರ: ಸೆಂಟ್ ಜೋಸೆಫ್ ಕಾಲೇಜು, ಮಲ್ಯ ರಸ್ತೆ, ಬೆಂಗಳೂರು.
3. ಬೆಂಗಳೂರು ದಕ್ಷಿಣ: ಎಸ್.ಎಸ್.ಎಂ.ಆರ್.ವಿ ಕಾಲೇಜು, 9ನೇ ಬ್ಲಾಕ್, ಜಯನಗರ, ಬೆಂಗಳೂರು.