ಬೆಂಗಳೂರು, ಜೂ.1 www.bengaluruwire.com : ರಾಜಧಾನಿಯ ವಾಯುಪಡೆ ತಾಂತ್ರಿಕ ಕಾಲೇಜಿನಲ್ಲಿ ಯಶಸ್ವಿಯಾಗಿ ಶಾಶ್ವತ ಹಾಗೂ ತಾತ್ಕಾಲಿಕ ಸೇವೆ ಇಂಜಿನಿರಿಂಗ್ ತರಬೇತಿ ಪೂರ್ಣಗೊಳಿಸಿ ಉತ್ತೀರ್ಣರಾದ 20 ಮಹಿಳಾ ಅಧಿಕಾರಿಗಳು ಸೇರಿದಂತೆ ಒಟ್ಟು 60 ಇಂಜಿನಿಯರಿಂಗ್ ಅಧಿಕಾರಿಗಳು ಶನಿವಾರ ವಿದ್ಯುಕ್ತವಾಗಿ ಆಕರ್ಷಕ ನಿರ್ಗಮನ ಪಥಸಂಚಲನ ನಡೆಸಿದರು.
74 ವಾರಗಳ ಕಠಿಣ ತರಬೇತಿ ಪೂರ್ಣಗೊಳಿಸಿದ 60 ಇಂಜಿನಿಯರಿಂಗ್ ಅಧಿಕಾರಿಗಳು ಗಣ್ಯರು, ಅಧಿಕಾರಿಗಳು, ವಾಯುಪಡೆಯ ಯೋಧರು, ಪೋಷಕರ ಉಪಸ್ಥಿತಿಯ ನಡುವೆ ಮನಸೆಳೆಯುವ ಪರೇಡ್ ಕೈಗೊಂಡರು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ ಭಾರತೀಯ ವಾಯುಪಡೆಯ ಈಸ್ಟರ್ನ್ ಏರ್ ಕಮಾಂಡ್ (ಇಎಸಿ) ನ ಏರ್ ಆಫೀಸರ್ ಕಮಾಂಡಿಂಗ್-ಇನ್-ಚೀಫ್ ಆದ ಏರ್ ಮಾರ್ಷಲ್ ಎಸ್ಪಿ ಧಾರ್ಕರ್ ಅವರನ್ನು ಕಾಲೇಜಿನ ಕಮಾಂಡೆಂಟ್ ಏರ್ ಕಮಾಂಡರ್ ಅಶುತೋಷ್ ಶ್ರೀವಾಸ್ತವ ಬರಮಾಡಿಕೊಂಡರು. ನಂತರ ಧಾರ್ಕರ್ ಅವರು ಪಥಸಂಚಲನ ಪರಿಶೀಲಿಸಿದರು. ಪರೇಡ್ ನಡೆದ ಸಂದರ್ಭದಲ್ಲಿ ಡಾರ್ನಿಯರ್ ವಿಮಾನದಿಂದ ಆಕಾಶದಲ್ಲಿ ಅದ್ಭುತವಾದ ಫ್ಲೈಪಾಸ್ಟ್ ಮತ್ತು ಸ್ಕೈ ಡೈವಿಂಗ್ ಪ್ರದರ್ಶನ ಹಮ್ಮಿಕೊಳ್ಳಲಾಯಿತು. ಭಾರತೀಯ ಸೇನೆಯ ‘ಏರ್ ಡೆವಿಲ್ಸ್ ತಂಡ’ (Air Devils Team) ‘ಏರ್ ವಾರಿಯರ್ ಡ್ರಿಲ್ ಟೀಮ್’ ( Air Warriors Drill Team) ಕೂಡ ಮೆರವಣಿಗೆಯಲ್ಲಿ ತಮ್ಮ ಕೌಶಲ್ಯವನ್ನು ಪ್ರದರ್ಶಿಸಿತು.
ಈ ಸಂದರ್ಭದಲ್ಲಿ ಮಾತನಾಡಿದ ಏರ್ ಮಾರ್ಷಲ್ ಎಸ್ಪಿ ಧಾರ್ಕರ್ ಅವರು ಸಭೆಯನ್ನು ಉದ್ದೇಶಿಸಿ ಪದವೀಧರ ಅಧಿಕಾರಿಗಳನ್ನು ಅಭಿನಂದಿಸಿದರು. ಸದಾ ನವೀನತೆ, ತಂತ್ರಜ್ಞಾನದಲ್ಲಿನ ಪ್ರಗತಿಯ ಜೊತೆಗೆ ನಿರ್ವಹಣೆ ಸವಾಲುಗಳನ್ನು ನಿಭಾಯಿಸಲು ಜ್ಞಾನ ಮತ್ತು ಕೌಶಲ್ಯಗಳನ್ನು ನಿರಂತರವಾಗಿ ನವೀಕರಿಕೊಳ್ಳುತ್ತಿರಬೇಕು ಮತ್ತು ಇರುವ ಸಂಪನ್ಮೂಲಗಳಲ್ಲಿ ವಿಶ್ವಾಸಾರ್ಹತೆಯನ್ನು ಖಾತ್ರಿಪಡಿಸಿಕೊಳ್ಳಬೇಕು. ಆ ಮೂಲಕ ಕಾರ್ಯಾಚರಣೆ ಸನ್ನದ್ಧತೆಯತ್ತ ಗಮನಹರಿಸಬೇಕು. ಅಧಿಕಾರಿಗಳು ದೈಹಿಕವಾಗಿ ಮತ್ತು ಮಾನಸಿಕವಾಗಿ ಸದೃಢರಾಗಿ ಎಲ್ಲಾ ನಿಯೋಜಿತ ಕಾರ್ಯಗಳನ್ನು ಸಾಧಿಸುವಲ್ಲಿ ಯಶಸ್ವಿಯಾಗಲು ಶ್ರಮಿಸಬೇಕು ಎಂದು ಅವರು ತರಬೇತಿಯ ಪೂರೈಸಿ ನಿರ್ಗಮಿಸುತ್ತಿರುವ ಭಾವೀ ವಾಯುಪಡೆ ಅಧಿಕಾರಿಗಳಿಗೆ ಮನದಟ್ಟು ಮಾಡಿದರು.
ತರಬೇತಿ ಅವಧಿಯಲ್ಲಿ ಉತ್ತಮ ಸಾಧನೆ ಮಾಡಿದ ಅಧಿಕಾರಿಗಳಿಗೆ ಏರ್ ಮಾರ್ಷಲ್ ಟ್ರೋಫಿ ಮತ್ತು ಪದಕಗಳನ್ನು ನೀಡಿದರು. ಫ್ಲೈಯಿಂಗ್ ಆಫೀಸರ್ ಇ.ವಿ. ರಾಹುಲ್ ಅವರಿಗೆ ಆರ್ಡರ್ ಆಫ್ ಮೆರಿಟ್‌ನಲ್ಲಿ ಪ್ರತಿಷ್ಠಿತ ‘ಸ್ವೋರ್ಡ್ ಆಫ್ ಆನರ್’ , ವೃತ್ತಿಪರ ವಿಷಯಗಳಲ್ಲಿ ಉತ್ತಮ ಅಧಿಕಾರಿ ಮತ್ತು ಸಾಮಾನ್ಯ ಸೇವಾ ತರಬೇತಿಗಾಗಿ ‘ಅಧ್ಯಕ್ಷರ ಫಲಕ’ವನ್ನು ಫ್ಲೈಯಿಂಗ್ ಆಫೀಸರ್ ನುನ್ನಾ ಊಹಾ ಅವರಿಗೆ ನೀಡಲಾಯಿತು. ಎಲೆಕ್ಟ್ರಾನಿಕ್ಸ್ ಮತ್ತು ಮೆಕ್ಯಾನಿಕಲ್ ವಿಭಾಗದಲ್ಲಿ ಮೆರಿಟ್‌ನಲ್ಲಿ ಪ್ರಥಮ ಬಾರಿಗೆ ‘ಚೀಫ್ ಆಫ್ ಏರ್ ಸ್ಟಾಫ್ ಮೆಡಲ್’ಗಳನ್ನು ಕ್ರಮವಾಗಿ ಫ್ಲೈಯಿಂಗ್ ಆಫೀಸರ್ ರಿತು ರಂಜನ್ ಮತ್ತು ಫ್ಲೈಯಿಂಗ್ ಆಫೀಸರ್ ಪತಿವಾಡ ಹೇಮಂತ್ ಕುಮಾರ್ ಅವರಿಗೆ ನೀಡಲಾಯಿತು.