ಬೆಂಗಳೂರು, ಮೇ.31 www.bengaluruwire.com : ಬಿಬಿಎಂಪಿಯ ವಲಯ ಮಟ್ಟದಲ್ಲಿ ಶಾಲಾ ಮತ್ತು ಕಾಲೇಜುಗಳಿಗೆ ಭದ್ರತಾ ಏಜನ್ಸಿ ಮೂಲಕ ಶಿಕ್ಷಕರ ನಿಯೋಜನೆ ಮಾಡಲು ಹೊರಟು ಸಾರ್ವಜನಿಕ ವಲಯದಿಂದ ತೀವ್ರ ವಿರೋಧ ವ್ಯಕ್ತವಾದ ನಂತರ ಹಿಂದೆ ಸರಿದು ಮುಜುಗರಕ್ಕೆ ಒಳಗಾಗಿದ್ದ ಶಿಕ್ಷಣ ಇಲಾಖೆಯಲ್ಲಿ ಇದೀಗ ಮತ್ತೊಂದು ಯಡವಟ್ಟು ಮಾಡಿಕೊಂಡಿರುವುದು ಬಹಿರಂಗವಾಗಿದೆ. ಪಾಲಿಕೆಯ ಶಾಲಾ ಕಾಲೇಜುಗಳಲ್ಲಿನ 33 ಮಂದಿ ಶಿಕ್ಷಕರು ಕಾನೂನು ಉಲ್ಲಂಘಿಸಿ 23 ರಿಂದ 25 ಲಕ್ಷ ರೂ. ಹಣ ದುರ್ಬಳಕೆ ಮಾಡಿರುವುದು ಮೇಲ್ನೋಟಕ್ಕೆ ಕಂಡುಬಂದಿರುವ ಸಂಬಂಧ ಶೋಕಾಸ್ ನೋಟಿಸ್ ನೀಡಲಾಗಿದೆ.
ಬಿಬಿಎಂಪಿ ಶಾಲಾ ಮತ್ತು ಕಾಲೇಜಿನ 33 ಜನ ಪ್ರಾಂಶುಪಾಲರು ಹಾಗೂ ಶಿಕ್ಷಕರು ಕಾನೂನು ಉಲ್ಲಂಘಿಸಿ ತಾವೇ ಸ್ವತಃ ಹಾಗೂ ಸಹೋದ್ಯೋಗಿಗಳಿಂದ ಹಣವನ್ನು ವಿತ್ ಡ್ರಾ ಮಾಡಿರುವ ಪ್ರಕರಣದಲ್ಲಿ ವಿಶೇಷ ಆಯುಕ್ತೆ ಪ್ರೀತಿ ಗೆಹ್ಲೋಟ್ ಮೇ.24ರಂದು ಸೂಕ್ತ ಸಮಜಾಯುಷಿಯನ್ನು ಲಿಖಿತ ರೂಪದಲ್ಲಿ ನೀಡುವಂತೆ ಕಾರಣ ಕೇಳಿ ನೋಟಿಸ್ ನೀಡಿದ್ದಾರೆ. ಈ 33 ಶಿಕ್ಷಕರು ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ ಅಧಿನಿಯಮ (KTTP Act) ಉಲ್ಲಂಘಿಸಿ ತಮಗೆ ಬೇಕಾದಂತೆ ಹಣ ಬಳಕೆ ಮಾಡಿಕೊಂಡಿದ್ದಾರೆಂದು ಈ ನೋಟಿಸ್ ನೀಡಲಾಗಿದೆ. ಮೇ.24ರಂದೇ ಈ ಶೋಕಾಸ್ ನೀಡಿ, ಆ ಪತ್ರ ತಲುಪಿದ ಮೂರು ದಿನಗಳ ಒಳಗಾಗಿ ಉತ್ತರ ನೀಡುವಂತೆ ತಿಳಿಸಿದ್ದರೂ, ಮೇ.30ರ ತಾರೀಖಿನವರೆಗೂ ಒಬ್ಬೇ ಒಬ್ಬ ಶಿಕ್ಷಕರು ಸೂಕ್ತ ಸಮಜಾಯುಷಿಯನ್ನು ನೀಡದಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.
2023-24ನೇ ಸಾಲಿನಲ್ಲಿ ಪಾಲಿಕೆಯ ಶಾಲಾ- ಕಾಲೇಜುಗಳಿಗೆ ಶಿಕ್ಷಣ ಲೇಖನ ಸಾಮಗ್ರಿ, ಶಾಲಾ- ಕಾಲೇಜು ವಾರ್ಷಿಕೋತ್ಸವ, ಕಟ್ಟಡದ ಸಣ್ಣಪುಟ್ಟ ರಿಪೇರಿ, ಪರೀಕ್ಷಾ ವೆಚ್ಚ ಹಾಗೂ ಶೈಕ್ಷಣಿಕ ಪ್ರವಾಸಕ್ಕಾಗಿ ಪಾಲಿಕೆ ಕೇಂದ್ರ ಕಚೇರಿಯಿಂದ ಸುಮಾರು 35 ಲಕ್ಷ ರೂ.ಗಳ ಅನುದಾನದ ಹಣವನ್ನು ಬಿಡುಗಡೆ ಮಾಡಲಾಗಿತ್ತು. ಕೆಟಿಟಿಪಿ ಕಾಯ್ದೆಯ ಪ್ರಕಾರ ಸಾಮಾನ್ಯವಾಗಿ ಸರಕು, ಸೇವೆ ನೀಡಿದವರಿಗೆ ಆರ್ ಟಿಜಿಎಸ್ ಮೂಲಕ ಹಣ ಪಾವತಿ ಮಾಡಬೇಕಿರುತ್ತದೆ. ಆದರೆ ಇಲ್ಲಿ ಶಾಲಾ- ಕಾಲೇಜುಗಳ ಪ್ರಿನ್ಸಿಪಾಲರು, ಶಾಲೆ- ಕಾಲೇಜು ಅನುದಾನದ ಹಣದ ವಹಿವಾಟು ನಡೆಸಲು ಅಧಿಕಾರ ಹೊಂದಿದ ಶಿಕ್ಷಕರು ಸ್ವಯಂ ರೀತಿಯಲ್ಲಿ ಹಣ ವಿತ್ ಡ್ರಾ ಮಾಡಿರುವುದು, ತಮ್ಮ ಸಹದ್ಯೋಗಿಗಳ ಹೆಸರಿನಲ್ಲಿ, ಡಿ-ಗ್ರೂಪ್ ನೌಕರರ ಹೆಸರಿನಲ್ಲಿ ಹೀಗೆ ಬೇರೆ ಬೇರಿ ರೀತಿಯಲ್ಲಿ ಪಾಲಿಕೆಯ ಹಣವನ್ನು ಬ್ಯಾಂಕ್ ನಿಂದ ಹಿಂಪಡೆದು ಹಣ ಬಳಸಿಕೊಂಡಿರುವುದು ಬ್ಯಾಂಕ್ ಪಾಸ್ ಶೀಟ್ ಪರಿಶೀಲಿಸಿದಾಗ ಈ ನಿಯಮ ಉಲ್ಲಂಘನೆ ಮಾಡಿರುವುದು ಕಂಡು ಬಂದಿದೆ ಎಂದು ಬಿಬಿಎಂಪಿಯ ಮೂಲಗಳು ಬೆಂಗಳೂರು ವೈರ್ ಗೆ ತಿಳಿಸಿವೆ.
ಈ ಬಗ್ಗೆ ವಿಶೇಷ ಆಯುಕ್ತರು ಹೇಳುವುದೇನು? :
“ಬಿಬಿಎಂಪಿ ಶಾಲಾ- ಕಾಲೇಜುಗಳಲ್ಲಿ ಶೈಕ್ಷಣಿಕ ಪ್ರವಾಸ, ವಾರ್ಷಿಕೋತ್ಸವ, ಶಾಲಾ-ಕಾಲೇಜು ಲೇಖನ ಸಾಮಗ್ರಿ, ರಿಪೇರಿ ಮತ್ತಿತರ ಕಾರ್ಯಗಳಿಗೆಂದು 2023-24ನೇ ಸಾಲಿನಲ್ಲಿ ಅನುದಾನದ ಹಣ ಬಿಡುಗಡೆ ಮಾಡಲಾಗಿತ್ತು. ಆದರೆ ಹಣ ಹಿಂಪಡೆಯುವಿಕೆ ಹಾಗೂ ಇತರರಿಗೆ ಹಣ ಪಾವತಿ ವಿಷಯದಲ್ಲಿ ಕೆಟಿಟಿಪಿ ಕಾಯ್ದೆಯನ್ನು ಉಲ್ಲಂಘಿಸಿ ಸ್ವಂತಕ್ಕೆ ಬಳಸಿಕೊಂಡಿರುವುದು, ಸಹದ್ಯೋಗಿಗಳ ಮೂಲಕ ಪಾಲಿಕೆಯ ಅನುದಾನದ ಹಣ ಬ್ಯಾಂಕಿನಿಂದ ಹಿಂಪಡೆದಿರುವ ಬ್ಯಾಂಕ್ ಪಾಸ್ ಶೀಟ್ ಪರಿಶೀಲನೆಯಿಂದ ಗೊತ್ತಾಗಿದೆ. ಇನ್ಯಾವುದೇ ರೀತಿಯಲ್ಲಿ ಕಾನೂನು ಉಲ್ಲಂಘನೆಯಾಗಿರುವ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ. ಸದ್ಯ ಅವರಿಗೆಲ್ಲಾ ಕಾರಳ ಕೇಳಿ ನೋಟಿಸ್ ನೀಡಲಾಗಿದೆ. ಜೂನ್ 5ರ ತನಕ ಅವರು ನೀಡುವ ಉತ್ತರ ಆಧರಿಸಿ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ.”
- ಪ್ರೀತಿ ಗೆಹ್ಲೋಟ್, ಬಿಬಿಎಂಪಿ ಶಿಕ್ಷಣ ಇಲಾಖೆ ವಿಶೇಷ ಆಯುಕ್ತೆ
ಇದೊಂದು ಗಂಭೀರವಾದ ವಿಷಯ. ಏಕೆಂದರೆ ಐದು ಮಂದಿಯಲ್ಲ, ಹತ್ತು ಮಂದಿಯಲ್ಲ, ಪಾಠ ಹೇಳುವ 33 ಜನ ಶಿಕ್ಷಕರು ಕಾನೂನು ಪಾಲನೆ ಮಾಡುವುದು ಬಿಟ್ಟು ಉಲ್ಲಂಘಿಸಿದ್ದಾರೆಂದರೆ ಮಕ್ಕಳಿಗೆ ಇನ್ಯಾವ ರೀತಿ ಇವರು ಶಿಕ್ಷಣ ನೀಡಲು ಸಾಧ್ಯ? ಎಂಬ ಪ್ರಶ್ನೆ ಉದ್ಭವಾಗುತ್ತದೆ.
ಭದ್ರತಾ ಏಜೆನ್ಸಿ ಮೂಲಕ ಶಿಕ್ಷಕರನ್ನು ನಿಯೋಜನೆ ಮಾಡುವುದಕ್ಕೆ ಸಾರ್ವಜನಿಕ ವಲಯದಿಂದ ತೀವ್ರ ಆಕ್ರೋಶ ವ್ಯಕ್ತವಾದ ಹಿನ್ನೆಲೆಯಲ್ಲಿ ಬಿಬಿಎಂಪಿ ಮೇ.28ರಂದು ತನ್ನ ನಿಲುವಿನಿಂದ ಹಿಂದೆ ಸರಿದಿದೆ. ಕೊನೆಗೆ ಆ ಏಜೆನ್ಸಿಗಳಿಗೆ ನೀಡಿದ್ದ ಟೆಂಡರ್ ಅನ್ನು ರದ್ದುಪಡಿಸಿತ್ತು. 2024–25ನೇ ಸಾಲಿನ ಶೈಕ್ಷಣಿಕ ವರ್ಷದ ಮೇ 29ರಂದು ಆರಂಭವಾಗಿದೆ. ಬಿಬಿಎಂಪಿ ಶಾಲೆ, ಕಾಲೇಜುಗಳನ್ನು ಶೈಕ್ಷಣಿಕವಾಗಿ ಉತ್ತಮ ಗೊಳಿಸಲು ಅಗತ್ಯ ಶಿಕ್ಷಕರು ಹಾಗೂ ಉಪನ್ಯಾಸಕರನ್ನು ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ (ಎಸ್‌ಡಿಎಂಸಿ) ಹಾಗೂ ಕಾಲೇಜು ಅಭಿವೃದ್ಧಿ ಮಂಡಳಿ (ಸಿಡಿಸಿ) ಮೂಲಕ ನಿಯೋಜಿಸಿಕೊಳ್ಳಲು ತೀರ್ಮಾನಿಸಲಾಯಿತು. ಇದೀಗ ಶಾಲಾ- ಕಾಲೇಜು ಶಿಕ್ಷಕರೇ ನಿಯಮ ಉಲ್ಲಂಘಿಸಿ ಪಾಲಿಕೆ ಅನುದಾನ ಬಳಕೆಯಲ್ಲಿ ಅವ್ಯವಹಾರ ನಡೆಸಿರುವ ಸಾಧ್ಯೆತೆಗಳ ಬಗ್ಗೆ ಪೂರ್ಣ ರೂಪದ ತನಿಖೆ ನಂತರವಷ್ಟೇ ಸತ್ಯ ಸಂಗತಿ ಬೆಳಕಿಗೆ ಬರಬೇಕಿದೆ.