- ವಿಶ್ಲೇಷಣಾ ಬರಹ – ಶ್ಯಾಮ್ ಹೆಬ್ಬಾರ್.ಎಸ್
ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದ ಅವಿಭಾಜ್ಯ ಅಂಗದಂತಿರುವ ಪಾಕಿಸ್ತಾನ ಆಕ್ರಮಿತ ಕಾಶ್ಮೀರ (Pakistan Occupied Kashmir)ವನ್ನು ನರೇಂದ್ರ ಮೋದಿ ಅವರು 3ನೇ ಬಾರಿಗೆ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡ ಆರು ತಿಂಗಳೊಳಗೆ ಭಾರತದ ಭಾಗವಾಗಲಿದೆ ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಇತ್ತೀಚೆಗೆ (ಮೇ.18) ಮಹಾರಾಷ್ಟ್ರದ ಪಾಲ್ವರ್‌ನಲ್ಲಿನ ಲೋಕಸಭಾ ಚುನಾವಣಾ ರ್ಯಾಲಿ ಉದ್ದೇಶಿಸಿ ಹೇಳಿದ್ದಾರೆ. ಈ ಹೇಳಿಕೆಯು ರಾಷ್ಟ್ರಮಟ್ಟದಲ್ಲಿ ಮಹತ್ವ ಕಂಡುಕೊಂಡಿದೆ. ಅಲ್ಲದೆ ಹಲವು ವಿಷಯಗಳಲ್ಲಿ ಯೋಗಿ ಅವರ ಹೇಳಿಕೆಯು ಚಿಂತನೆ, ಚರ್ಚೆಗೆ ದಾರಿಯಾಗಿದೆ. ದೇಶದ ಸಾರ್ವಭೌಮತೆ ದೃಷ್ಟಿಯಿಂದ ಈ ಹೇಳಿಕೆ ಪ್ರಮುಖವಾಗಿದೆ.
“ನಮ್ಮ ಶತ್ರುವನ್ನು ನಾವು ಪೂಜಿಸುವುದಿಲ್ಲ. ಯಾರಾದರೂ ನಮ್ಮವರನ್ನು ಕೊಂದರೆ, ನಮ್ಮ ಸಾಮರ್ಥ್ಯ ಏನೆಂಬುದನ್ನು ತೋರಿಸುತ್ತೇವೆ. ಪಾಕ್ ಆಕ್ರಮಿತ ಕಾಶ್ಮೀರವನ್ನು ಉಳಿಸಿಕೊಳ್ಳುವುದು ಪಾಕಿಸ್ತಾನಕ್ಕೆ ಕಷ್ಟಕರವಾಗಿದೆ. ಕಳೆದ 10 ವರ್ಷಗಳಲ್ಲಿ ನಾವು ನವ ಭಾರತವನ್ನು ಕಂಡಿದ್ದೇವೆ.ಗಡಿಗಳನ್ನು ಭದ್ರಪಡಿಸಲಾಗಿದೆ, ಭಯೋತ್ಪಾದನೆ ಮತ್ತು ನಕ್ಸಲಿಸಂ ಅನ್ನು ನಿಗ್ರಹಿಸಲಾಗಿದೆ, ಮುಂಬೈ ಸ್ಫೋಟ ನಡೆದಾಗ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರವು ಭಯೋತ್ಪಾದಕರು ಗಡಿಯಾಚೆಯಿಂದ ಬಂದವರು ಎಂದು ಹೇಳುತ್ತಿತ್ತು. ಹಾಗಾದರೆ ನಿಮ್ಮ ಕ್ಷಿಪಣಿಯ ಉಪಯೋಗವೇನು?” ಅವರು ಆಗ ತಮ್ಮ ಮಾತಿನಿಂದ ಕುಟುಕಿದ್ದರು.”
ಪಿಒಕೆಯಲ್ಲಿ ಪಾಕಿಸ್ತಾನ ವಿರುದ್ಧ ಹೋರಾಟ ತೀವ್ರಗೊಂಡಿರುವ ಹಿನ್ನೆಲೆಯಲ್ಲಿ ಕೇಂದ್ರ ರಕ್ಷಣಾ ಸಚಿವರು, ವಿದೇಶಾಂಗ ಸಚಿವರು ಕೂಡ ಪಿಒಕೆ ಮರುವಶದ ಕುರಿತು ಪ್ರಸ್ತಾಪಿಸಿರುವುದು ಮಹತ್ವದ ಸಂಗತಿಯಾಗಿದೆ. ಯುಪಿ ಸಿಎಂ ಯೋಗಿ ಆದಿತ್ಯನಾಥ್ ಹೇಳಿಕೆಗೂ ಮುನ್ನ ಕೇಂದ್ರ ಗೃಹ ಸಚಿವ ಅಮಿತ್ ಷಾ ಪಶ್ಚಿಮ ಬಂಗಾಲದಲ್ಲಿ ಉತ್ತರ 24 ಪರಗಣ ಜಿಲ್ಲೆಯಲ್ಲಿ ಮಾತನಾಡುತ್ತಾ, ಪಾಕ್ ಆಕ್ರಮಿತ ಕಾಶ್ಮೀರ (ಪಿಒಕೆ) ಭಾರತದ ಭಾಗವಾಗಿದೆ ಎಂದು ಪುನರುಚ್ಚರಿಸಿದ್ದರು. ಅದರ ಮೇಲೆ ನಮಗೆ ಹಕ್ಕಿದೆ, ಅದನ್ನು ಯಾರೂ ಅಲ್ಲಗಳೆಯುವಂತಿಲ್ಲ ಎಂದರು. ಭಾರತವು ಪಿಒಕೆ ವಿಷಯದ ಬಗ್ಗೆ ಯಾವುದೇ “ಪರ-ಸಕ್ರಿಯ ಕ್ರಮಗಳನ್ನು” ತೆಗೆದುಕೊಂಡಿದೆಯೇ ಎಂದು ಮಾಧ್ಯಮದವರು ಕೇಳಿದಾಗ, “ಅವುಗಳನ್ನು ಸರಿಯಾದ ಸಮಯದಲ್ಲಿ ತೆಗೆದುಕೊಳ್ಳಲಾಗುವುದು” ಎಂದು ಅಮಿತ್ ಶಾ ಹೇಳಿದ್ದರು.
ಈ ಹಿಂದೆ, ಅಸ್ಸಾಂ ಸಿಎಂ ಹಿಮಂತ ಬಿಸ್ವಾ ಶರ್ಮಾ ಅವರು ಪ್ರಧಾನಿ ಮೋದಿ ನೇತೃತ್ವದಲ್ಲಿ ಪಾಕಿಸ್ತಾನ ಆಕ್ರಮಿತ ಜಮ್ಮು ಮತ್ತು ಕಾಶ್ಮೀರವನ್ನು (ಪಿಒಜೆಕೆ) ಭಾರತದಲ್ಲಿ ಸೇರಿಸಲಾಗುವುದು ಎಂದು ಹೇಳಿದ್ದರು. “ಕಾಂಗ್ರೆಸ್ ಸರ್ಕಾರವು ಅಧಿಕಾರದಲ್ಲಿದ್ದಾಗ, ಒಂದು ಕಾಶ್ಮೀರವು ಭಾರತದಲ್ಲಿ ಮತ್ತು ಇನ್ನೊಂದು ಪಾಕಿಸ್ತಾನದಲ್ಲಿದೆ ಎಂದು ನಮಗೆ ಹೇಳುತ್ತಿತ್ತು. ಪಾಕಿಸ್ತಾನವು, ‘ಆಕ್ರಮಿತ ಕಾಶ್ಮೀರ’ವನ್ನು ಹೊಂದಿದೆ ಎಂದು ನಮ್ಮ ಸಂಸತ್ತಿನಲ್ಲಿ ಎಂದಿಗೂ ಚರ್ಚಿಸಲಿಲ್ಲ. ಅದು ನಿಜವಾಗಿ ನಮ್ಮದು, ಇದೀಗ ಪಿಒಕೆನಲ್ಲಿ ಆಂದೋಲನ ನಡೆಯುತ್ತಿದೆ. ಅಲ್ಲಿ ಪ್ರತಿದಿನ ಜನರು ಭಾರತೀಯ ತ್ರಿವರ್ಣ ಧ್ವಜವನ್ನು ಹಿಡಿದುಕೊಂಡು ಪ್ರತಿಭಟಿಸುತ್ತಿದ್ದಾರೆ. ಮೋದಿ ಜಿ ಲೋಕಸಭಾ ಚುನಾವಣೆಯಲ್ಲಿ 400 ಸ್ಥಾನಗಳನ್ನು ಪಡೆದರೆ, ಪಿಒಕೆ ಭಾರತದ ಭಾಗವಾಗಲಿದೆ. ಈಗ ಆ ಕಾರ್ಯ ಶುರುವಾಗಿದೆ ”ಎಂದು ಹಿಮಂತ ತಿಳಿಸಿದ್ದರು.
ಸಣ್ಣ ತಪ್ಪಿನಿಂದ ಆಗ ಭಾರತದಿಂದ ಜಮ್ಮು ಮತ್ತು ಕಾಶ್ಮೀರದ ಒಂದು ಭಾಗ ಕೈತಪ್ಪಿತು ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಒಂದು ಕಡೆ ಹೇಳುತ್ತಾರೆ. ಆಗ ಅದಕ್ಕೆ ಕೌಂಟರ್ ಆಗಿ ಪಾಕಿಸ್ತಾನದಲ್ಲಿ ಆಟಮ್ ಬಾಂಬ್ ಇದೆ ಅಂತ ನ್ಯಾಷನಲ್ ಕಾನ್ಫರೆನ್ಸ್ ಫಾರೂಕ್ ಅಬ್ದುಲ್ ಹೇಳಿದ್ದರು. ಕೇಂದ್ರದಲ್ಲಿ ಹೊಸ ಸರ್ಕಾರ ರಚನೆ ಮಾಡಿದ ನಂತರ ಪಾಕ್ ಆಕ್ರಮಿತ ಕಾಶ್ಮೀರ ಭಾರತದೊಳಗೆ ತಾನೇ ತಾನಾಗಿ ವಿಲೀನವಾಗುತ್ತಾ? ಅಥವಾ ಭಾರತ ಪಾಕ್ ವಿರುದ್ಧ ಯುದ್ಧ ಸಾರುತ್ತಾ? ಅಥವಾ ಪಾಕ್ ಮೇಲೆ ರಾಜತಾಂತ್ರಿಕ ಒತ್ತಡ ತಂದು, ಮೋದಿ ಪರ ಅಲೆ ಹಾಗೂ ಪಾಕ್ ವಿರೋಧಿ ಅಲೆಯನ್ನು ಭಾರತ ಎನ್ ಕ್ಯಾಷ್ ಮಾಡಿಕೊಂಡು ಯೋಗಿ ಆದಿತ್ಯನಾಥ್ ಹೇಳಿದಂತೆ ಆರು ತಿಂಗಳಲ್ಲಿ ಪಾಕ್ ಆಕ್ರಮಿತ ಕಾಶ್ಮೀರ ಭಾರತಕ್ಕೆ ಮತ್ತೆ ಸೇರ್ಪಡೆಯಾಗುತ್ತಾ? ಈ ಹೇಳಿಕೆಗಳ ಹಿಂದೆ ಏನಾದರೂ ಬಿಜೆಪಿ ದೊಡ್ಡ ಮಟ್ಟದ ಕಾರ್ಯತಂತ್ರವಿದೆಯಾ? ಅಥವಾ ಲೋಕಸಭೆ ಚುನಾವಣೆಯಲ್ಲಿ ಕೇವಲ ಈ ವಿಷಯ ಮತಗಳಿಕೆ ತಂತ್ರವಾ? ಅನ್ನೋದರ ಬಗ್ಗೆ ಒಂದೊಂದೇ ಅಂಶಗಳನ್ನು ನೋಡುತ್ತಾ ಬರೋಣ.
ಪಾಕಿಸ್ತಾನಕ್ಕೆ ಯುದ್ಧ ಮಾಡಲು ಸದ್ಯಕ್ಕೆ ಆ ಶಕ್ತಿಯಿಲ್ಲ. ಪಿಒಕೆ ಭಾಗದ ಶೇ.90 ಜನ ಪಾಕಿಸ್ತಾನದ ವಿರುದ್ಧ ಇದ್ರೆ, ಶೇ.10 ಜನ ಸೇನಾ ಪರ ಒಲವು ತೋರಿದ್ದಾರೆ ಎನ್ನಲಾಗಿದೆ. ಕಳೆದ ಕೆಲವು ದಿನಗಳ ಹಿಂದೆ ಮುಜಫರಾಬಾದ್ ಮತ್ತು ಉಪನಗರಗಳಲ್ಲಿ ಸುಮಾರು 500,000 ಜನರು ಆಹಾರ, ಇಂಧನ ಮತ್ತು ನಿತ್ಯಪಯೋಗಿ ವಸ್ತುಗಳ ಮೇಲೆ ಹೆಚ್ಚಿನ ತೆರಿಗೆಗಳ ವಿರುದ್ಧ ಪ್ರತಿಭಟಿಸಿದ್ದರು. ಆಗ ಮೂವರು ನಾಗರೀಕರು ಸೇನಾ ಗುಂಡೇಟಿಗೆ ಬಲಿಯಾದರು. ಸಾವಿರಾರು ಜನರನ್ನು ಅಲ್ಲಿನ ಪಾಕಿಸ್ತಾನಿ ಪೊಲೀಸರು ಬಂಧಿಸಿದರು. ಈ ವಿಷಯ ಅಂತರರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆಯಿತು. ಆ ಬಳಿಕ ಪಾಕಿಸ್ತಾನದ ಐಎಸ್ ಐ ಬೆಂಬಲಿತ ನಾಗರೀಕರು ಪಾಕ್ ಪರವಾಗಿ ರ್ಯಾಲಿ ನಡೆಸಿದರೂ ಬೆರಳಿಕೆಯಷ್ಟು ಮಾತ್ರ ಭಾಗವಹಿಸಿದ್ದರು. ಇದು ಪಾಕ್ ಆಕ್ರಮಿತ ಕಾಶ್ಮೀರ ಇರಲಿ ಇಡೀ ಪಾಕಿಸ್ತಾನವು ತನ್ನ ಆಡಳಿತದಲ್ಲಿ ಸೋತಿರುವುದನ್ನು ಎತ್ತಿ ತೋರಿಸುತ್ತಿದೆ.
ಜಮ್ಮು ಮತ್ತು ಕಾಶ್ಮೀರದಲ್ಲಿ ಪ್ರಜಾಪ್ರಭುತ್ವದ ಬಗ್ಗೆ ಹೆಚ್ಚಿದ ಒಲವು : ಮತದಾನದಲ್ಲಿ ದಾಖಲೆ ಏರಿಕೆ :
ಇನ್ನೊಂದೆಡೆ ಶ್ರೀನಗರ, ಬಾರಾಮುಲ್ಲಾ, ಅನಂತನಾಗ್ ರಜೌರಿ, ಉದಾಂಪುರ ಹಾಗೂ ಜಮ್ಮು ಸೇರಿದಂತೆ ಐದು ಲೋಕಸಭಾ ಕ್ಷೇತ್ರಗಳನ್ನು ಒಳಗೊಂಡಿರುವ ಜಮ್ಮು ಮತ್ತು ಕಾಶ್ಮೀರ ಕೇಂದ್ರಾಡಳಿತ ಪ್ರದೇಶದಲ್ಲಿ 1996ರ ಸಾರ್ವತ್ರಿಕ ಲೋಕಸಭಾ ಚುನಾವಣೆಯಲ್ಲಿ 47.99 ಶೇ. ಮತದಾನ ಆಗಿತ್ತು. ಈಗ 2024ರಲ್ಲಿ ಶೇ.58.46ರಷ್ಟು ಮತದಾನವಾಗಿದ್ದು, ಕಳೆದ 35 ವರ್ಷಗಳಲ್ಲೇ ಅತಿಹೆಚ್ಚು ಮತದಾನವಾಗಿರುವುದು ದೇಶದ ಆಡಳಿತ, ಪ್ರಜಾಪ್ರಭುತ್ವ ವ್ಯವಸ್ಥೆ ಬಗ್ಗೆ ಜಮ್ಮು ಮತ್ತು ಕಾಶ್ಮೀರದ ಜನತೆ ಹೆಚ್ಚಿನ ಒಲವು ತೋರಿರುವುದು ಕಂಡುಬರುತ್ತದೆ.
ಶೋಪಿಯಾನ್, ಉರಿ, ರಜೌರಿ, ಪೂಂಚ್, ಅನಂತನಾಗ್ ಹಾಗೂ ಅದಕ್ಕೆ ಹೊಂದಿಕೊಂಡಿರುವ ಜಮ್ಮು ಮತ್ತು ಕಾಶ್ಮೀರದ ಕೇಂದ್ರಾಡಳಿತ ಪ್ರದೇಶದ ರಾಜಧಾನಿಯಲ್ಲಿ ಮೊದಲು ಕಡಿಮೆ ಮತದಾನವಾಗುತ್ತಿತ್ತು. ಈಗ ಆರ್ಟಿಕಲ್ 370 ತೆಗೆದ ಮೇಲೆ ಅಲ್ಲಿನ ಮತದಾರರು ಭಾರತದ ಪರ ಒಲವು ಜಾಸ್ತಿಯಾಗಿದೆ. ಹೀಗಾಗಿ 2024ರಲ್ಲಿ ಶೇ.58.46 ರಷ್ಟು ಮತದಾನವಾಗಿದೆ.
370ನೇ ವಿಧಿ ರದ್ದತಿ ನಂತರ ಕಣಿವೆ ರಾಜ್ಯದಲ್ಲಿ ಹೆಚ್ಚಿದ ಆರ್ಥಿಕತೆ- ಪ್ರವಾಸೋದ್ಯಮ :
ದೇಶದ ಕಣಿವೆ ಪ್ರದೇಶವಾದ ಜಮ್ಮು ಮತ್ತು ಕಾಶ್ಮೀರದಲ್ಲಿ ನಿಯಂತ್ರಣದಲ್ಲಿರುವ ಪ್ರದೇಶವನ್ನು ಕಾನೂನಾತ್ಮಕವಾಗಿ ಸಬಲ ಮಾಡಲಾಗಿದೆ. ಇದರಿಂದ ಅಂತರರಾಷ್ಟ್ರೀಯವಾಗಿ ಯಾರೂ ಕೂಡ ಈ ಬಗ್ಗೆ ಪ್ರಶ್ನಿಸಲಾಗದ ರೀತಿಯಲ್ಲಿ ಬದಲಾವಣೆ ಮಾಡಲಾಗಿದೆ. ಆಗಸ್ಟ್ 5, 2019 ರಂದು, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು 370 ನೇ ವಿಧಿಯನ್ನು ರದ್ದುಗೊಳಿಸುವ ದೂರದೃಷ್ಟಿಯ ನಿರ್ಧಾರವನ್ನು ತೆಗೆದುಕೊಂಡರು. 370 ನೇ ವಿಧಿಯನ್ನು ರದ್ದುಗೊಳಿಸಿದ ನಂತರ ಜಮ್ಮು ಮತ್ತು ಕಾಶ್ಮೀರದ ಕಣಿವೆ ರಾಜ್ಯದಲ್ಲಿ ಶಾಂತಿ ಮತ್ತು ಸಹಜತೆ ಮರಳಿದೆ. ಹಿಂಸಾಚಾರದಿಂದ ನಲುಗಿದ ಕಣಿವೆಯಲ್ಲಿ ಬೆಳವಣಿಗೆ ಮತ್ತು ಅಭಿವೃದ್ಧಿಯು ಮಾನವ ಜೀವನಕ್ಕೆ ಹೊಸ ಅರ್ಥವನ್ನು ತಂದಿದೆ. ಪ್ರವಾಸೋದ್ಯಮ ಮತ್ತು ಕೃಷಿ ಕ್ಷೇತ್ರಗಳಲ್ಲಿನ ಸಮೃದ್ಧಿಯು ಜಮ್ಮು, ಕಾಶ್ಮೀರ ಮತ್ತು ಲಡಾಖ್‌ನ ನಿವಾಸಿಗಳ ಆದಾಯ ಮಟ್ಟವನ್ನು ಹೆಚ್ಚಿಸಿದೆ.
1949 ರಲ್ಲಿ ಭಾರತದ ಸಂವಿಧಾನ ಸಭೆಯ ಸದಸ್ಯರಾದ ಎನ್.ಗೋಪಾಲಸ್ವಾಮಿ ಅಯ್ಯಂಗಾರ್ ಅವರು ಭಾರತೀಯ ಸಂವಿಧಾನದ 370 ನೇ ವಿಧಿಯನ್ನು ‘ತಾತ್ಕಾಲಿಕ ನಿಬಂಧನೆ’ಯಾಗಿ ಸಂವಿಧಾನಕ್ಕೆ ಸೇರಿಸಲಾಗಿತ್ತು. ಇದರ ಅನ್ವಯ ಭಾರತ, ಪಾಕಿಸ್ತಾನ ಮತ್ತು ಚೀನಾ ವಿವಾದಿತ ಪ್ರದೇಶವಾದ ಜಮ್ಮು ಮತ್ತು ಕಾಶ್ಮೀರಕ್ಕೆ ಭಾರತೀಯ ಸಂವಿಧಾನದ 370 ನೇ ವಿಧಿಯು ವಿಶೇಷ ಸ್ಥಾನಮಾನವನ್ನು ನೀಡಲಾಗಿತ್ತು. ಅಕ್ಟೋಬರ್ 1947 ರಲ್ಲಿ ಭಾರತಕ್ಕೆ ಸೇರ್ಪಡೆಗೊಂಡ ಜೆ & ಕೆ ಮೂಲ ರಾಜ್ಯವಾಗಿದ್ದ ಅದರ ವಿಸ್ತೀರ್ಣವು 2,22,236 ಚದರ ಕಿ.ಮೀ.ಯಾಗಿತ್ತು. ಆದರೆ ಇಂದು ಇಂದು ಭಾರತವು ಜೆ & ಕೆ ಮೂಲ ರಾಜ್ಯದ ಕೇವಲ 1,06,566 ಚದರ ಕಿ.ಮೀ ಭೌತಿಕವಾಗಿ ಉಳಿಸಿಕೊಂಡಿದೆ. ಉಳಿದ ವಿಸ್ತೀರ್ಣದಲ್ಲಿ ಪಾಕ್ ಆಕ್ರಮಿತ ಕಾಶ್ಮೀರ (ಪಿಒಕೆ) 72,935 ಚದರ ಕಿ.ಮೀ ಇದ್ದು, ಅದರಲ್ಲಿ 5,180 ಚ.ಕಿ.ಮೀ ಷಕ್ಸ್‌ಗಾಮ್ ಕಣಿವೆಯನ್ನು 1963 ರಲ್ಲಿ ಪಾಕ್ ಚೀನಾಕ್ಕೆ ಗುತ್ತಿಗೆ ನೀಡಿತು. ಚೀನಾ ಆಕ್ರಮಿತ ಕಾಶ್ಮೀರ (ಸಿಒಕೆ) 37,555 ಚದರ ಕಿ.ಮೀ ಇದ್ದು, ಅಕ್ಸಾಯ್ ಚಿನ್ ಮತ್ತು ಷಕ್ಸ್‌ಗಮ್ ಸೇರಿ ಒಟ್ಟಾರೆ 42,735 ಚದರ ಕಿ.ಮೀ. ಭೂಪ್ರದೇಶವನ್ನು ಒಳಗೊಂಡಿದೆ.
ಪಿಒಕೆ ವಶಕ್ಕೆ ಇರುವ ದಾರಿಗಳೇನು? :
ಪಿಒಕೆನ ಯಾವ ಪ್ರದೇಶ ಈಗ ನಮ್ಮ ದೇಶದ ನಿಯಂತ್ರಣದಲ್ಲಿಲ್ಲ. ಉತ್ತಪ್ರದೇಶದ ಸಿಎಂ 6 ತಿಂಗಳಲ್ಲಿ ವಾಪಸ್ ಪಡೆಯುವುದಾಗಿ ಹೇಳಿದ್ದಾರೆ. ಪಿಒಕೆ ಕಾಶ್ಮೀರ ವಶಪಡಿಸಿಕೊಳ್ಳುವ ವಿಷಯದಲ್ಲಿ ಒಂದನೇ ದಾರಿ, ಮಿಲಿಟರಿ ಪ್ರಯೋಗ, ಅದನ್ನು ಈಗ ಸುಮ್ಮನೆ ಪಾಕ್ ಮೇಲೆ ಯುದ್ಧ ಮಾಡಲು ಆಗಲ್ಲ. ಒಂದಮ್ಮೆ ಯುದ್ಧ ಮಾಡಿದರೆ, ವಿಶ್ವದ ಇತರ ರಾಷ್ಟ್ರಗಳು ಇದನ್ನು ವಿರೋಧಿಸಬಹುದು. ಅಕ್ಕಪಕ್ಕದ ರಾಷ್ಟ್ರಗಳು ವಿರೋಧ ಎದುರಾಗುತ್ತದೆ.
ಇನ್ನು ಆರ್ಥಿಕವಾಗಿ ಪಾಕಿಸ್ತಾನವನ್ನು ಕಟ್ಟಿಹಾಕಲು ಕಷ್ಟವಾಗಬಹುದು. ಅಲ್ಲಿನ ಸ್ಥಳೀಯರು ಭಾರತದ ಜಮ್ಮು ಮತ್ತು ಕಾಶ್ಮೀರದ ಭಾಗವಾಗುವುದರ ಬಗ್ಗೆ ಒಲವು ತೋರಿದರೂ ಅಷ್ಟು ಬೇಗ ಭಾರತಕ್ಕೆ ಆ ಭೂಪ್ರದೇಶ ಸೇರ್ಪಡೆ ವಾಸ್ತವದಲ್ಲಿ ಕಷ್ಟಸಾಧ್ಯ. ಪಾಕಿಸ್ತಾನದ ಮೇಲೆ ರಾಜತಾಂತ್ರಿಕ ಒತ್ತಡ ತರಲು ಆಗುವುದಿಲ್ಲ. ಬಾಂಗ್ಲದೇಶ ಲಿಬರೇಷನ್ ಯುದ್ಧವನ್ನು 1971 ರಲ್ಲಿ ಪಾಕಿಸ್ತಾನದ ವಿರುದ್ಧ ಭಾರತ ಗೆಲವು ಸಾಧಿಸಿತ್ತು. ಆ ಸಂದರ್ಭದಲ್ಲಿ 15,000 ಚದರ ಕಿ.ಮೀ ಪಾಕ್ ಜಾಗವನ್ನು ಶಿಮ್ಲಾ ಅಗ್ರಿಮೆಂಟ್ ಆದಾಗ ಬಿಟ್ಟುಕೊಟ್ಟಿತ್ತು ಭಾರತ. 93,000 ಯುದ್ಧ ಖೈದಿಗಳನ್ನು ಬಿಡುಗಡೆ ಮಾಡಲಾಗಿತ್ತು. 6 ತಿಂಗಳಲ್ಲಿ ಪಿಒಕೆ ವಶ ಮಾಡುವ ಹೇಳಿಕೆ ಏನೋ ಸರಿ ಆದರೆ ಯಶಸ್ವಿಯಾಗಿ ಅದನ್ನು ಅಷ್ಟು ಸುಲಭವಾಗಿ ಜಾರಿಗೆ ತರಲು ಆಗುವುದಿಲ್ಲ.
ಏಕೆಂದರೆ 1947-48ರಲ್ಲಿ, ಪಾಕ್ ಅಕ್ರಮಿತ ಕಾಶ್ಮೀರ, ಗಿಲ್ಗಿಟ್ ಮತ್ತು ಬಾಲ್ಟಿಸ್ತಾನ್ ಪಾಕಿಸ್ತಾನದ ಪಾಲಾಗಿತ್ತು. ಆ ಪ್ರದೇಶವು ಭಾರತದ ಸಿಯಾಚಿನ್ ಪಶ್ಚಿಮಕ್ಕೆ (North West) ಬರುತ್ತೆ. ಅದರಲ್ಲಿನ ಭಾರತದ ಈ ಹಿಂದಿನ ಮತ್ತೊಂದು ಪ್ರದೇಶದ ಸ್ವಲ್ಪ ಜಾಗವನ್ನು ಆಗ ಚೀನಾಕ್ಕೆ ಸೀಸ್ ಫೈರ್ ಆದಾಗ ಪಾಕ್ ಬಿಟ್ಟುಕೊಟ್ಟಿತ್ತು. ಆ ಪ್ರದೇಶವನ್ನು ಕೇವಲ 6 ತಿಂಗಳಲ್ಲಿ ವಶಪಡಿಸಿಕೊಳ್ಳುವುದು ಅಷ್ಟು ಸುಲಭವಲ್ಲ. ಚೀನಾ ಭಾರತದಲ್ಲಿ ಲಡಾಕ್ ನಲ್ಲಿನ ಆಕ್ರಮಿತ ಜಾಗವನ್ನು ಭಾರತವು ಪ್ರಯತ್ನ ಮಾಡಿ ವಾಪಸ್ ಪಡೆಯುತ್ತದೆ ಅಂದರೆ ನಂಬಬಹುದು. ಮೊದಲು ಜಮ್ಮು ಮತ್ತು ಕಾಶ್ಮೀರದಲ್ಲಿ ಬೇರೆಯವರು ಮನೆ ಖರೀದಿಸಿ ಇರೋಕೆ ಆಗುತ್ತಿರಲಿಲ್ಲ. ಆರ್ಟಿಕಲ್ 370 ತೆಗೆದ ಮೇಲೆ ಈಗ ಬೇರೆಯವರು ಅಲ್ಲಿ ಹೋಗಿ ಭೂಮಿ ಖರೀದಿಸಿ, ಕಟ್ಟಡ ಕಟ್ಟಿ ನೆಲಸಬಹುದಾಗಿದೆ. ಆದರೆ ಪಿಒಕೆನಲ್ಲಿ ಪಾಕಿಸ್ತಾನದ ಜನರು ತಮ್ಮದೇ ಜಾಗ ಅಂತ ಅಲ್ಲಿ ನೆಲೆಸಿದ್ದಾರೆ. ಇಂತಹ ಸ್ಥಳವನ್ನು 6 ತಿಂಗಳಲ್ಲಿ ವಶಪಡಿಸಿಕೊಳ್ಳುವುದು ಅಷ್ಟು ಸುಲಭವಾಗಿಲ್ಲ.
ಈಗ ಪಾಕಿಸ್ತಾನದಲ್ಲಿನ ಆರ್ಥಿಕತೆ, ಸಾಮಾಜಿಕ, ಆಡಳಿತ ಮತ್ತಿತರ ವಿಷಯಗಳಲ್ಲಿ ಅಲ್ಲಿನ ನಾಗರೀಕರೇ ಬೇಸೆತ್ತಿದ್ದಾರೆ. ಕೆಲವು ದಿನಗಳ ಹಿಂದೆ ಪಿಒಕೆನಲ್ಲಿ ದೊಡ್ಡ ಪ್ರತಿಭಟನೆ ನಡೆಯಿತು. ಇದನ್ನೇ ಆಧಾರವಾಗಿಟ್ಟುಕೊಂಡು ಭಾರತ ಅಲ್ಲಿನ ಪ್ರದೇಶವನ್ನು ವಶಪಡಿಸಿಕೊಳ್ಳಲಾಗದು. ಪಾಕಿಸ್ತಾನ ಮಿಲಿಟರಿ ಸುಮ್ಮನೆ ಕೈಕಟ್ಟಿ ಕೂರುತ್ತಾ? ಇದಕ್ಕೆ ಪಾಕಿಸ್ತಾನದ ದೋಸ್ತಿ ರಾಷ್ಟ್ರ ಚೈನಾ ಸಹಾಯ ಮಾಡದೆ ಇರಲು ಸಾಧ್ಯನಾ? ಖಂಡಿತ ಪಾಕ್ ಗೆ ನೆರವು ನೀಡುತ್ತೆ.
1972ರಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವಿನ ಶಿಮ್ಲಾ ಅಗ್ರಿಮೆಂಟ್ ನಲ್ಲಿ ಆಗಿನ ಪಾಕ್ ಪ್ರಧಾನಿ ಬೆನೆಜಿರ್ ಬುಟ್ಟೊ ಮತ್ತು ದೇಶದ ಪ್ರಧಾನಿಯಾಗಿದ್ದ ಇಂದಿರಾಗಾಂಧಿ ನಡುವೆ ಒಪ್ಪಂದದ ಪ್ರಕಾರ, ಎರಡೂ ದೇಶಗಳ ವಿಷಯದಲ್ಲಿ ದ್ವಿಪಕ್ಷಿಯವಾಗಿ ಯಾವುದೇ ವಿಷಯವನ್ನು ಚರ್ಚೆ ನಡೆಸಿ ಬಗೆಹರಿಸಿಕೊಳ್ಳೋಣ. ಯುಎನ್ ಮತ್ತು ಇತರ ದೇಶಗಳು ಇದರಲ್ಲಿ ಮೂಗು ತೋರಿಸುವಂತಿಲ್ಲ. ದ್ವಿಪಕ್ಷೀಯವಾಗಿ ಬಗೆಹರಿಸಿಕೊಳ್ಳಲು ಆಗಿನ ಶಿಮ್ಲಾ ಒಪ್ಪಂದದಲ್ಲಿ ಒಡಂಬಡಿಕೆ ಮಾಡಿಕೊಳ್ಳಲಾಗಿದೆ. ಹೀಗಾಗಿ ವಿದೇಶಗಳ ನೆರವು ಪಿಒಕೆ ವಶಪಡಿಸಿಕೊಳ್ಳುವ ವಿಷಯದಲ್ಲಿ ಮಧ್ಯಪ್ರವೇಶ ಮಾಡಲು ಅವಕಾಶವಿಲ್ಲ.
ಯೋಗಿ ಆದಿತ್ಯನಾಥ್ ಹೇಳಿಕೆ ಮತ್ತು ಇಂದಿನ ವಾಸ್ತವಾಂಶವೇನು? :
ಇದೆಲ್ಲಾ ಅಂಶಗಳನ್ನು ಗಮನಿಸಿ ನೋಡುವುದಾದರೆ, ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಗೃಹ ಸಚಿವ ಅಮಿತ್ ಶಾ ಸೇರಿದಂತೆ ಮತ್ತಿತರ ಬಿಜೆಪಿ ಹಿರಿಯ ನಾಯಕರು ಹೇಳಿದ ಹೇಳಿಕೆಗಳು, ಕೇವಲ ಲೋಕಸಭಾ ಚುನಾವಣೆಗೋಸ್ಕರ ಮಾತನಾಡಿರುವ ವಿಷಯ. ಎರಡನೇ ಹಂತದ ಚುನಾವಣೆಯ ನಂತರ ಉತ್ತರ ಭಾರತದಲ್ಲಿ ಮತ ಸೆಳೆಯಲು ಮಾಡಿರುವ ಬಿಜೆಪಿ ಚುನಾವಣೆಯ ತಂತ್ರ. 6 ತಿಂಗಳಲ್ಲಿ ಪಿಒಕೆ ಯುದ್ಧ ಸಾರಿ ವಶಪಡಿಸಿಕೊಳ್ಳೋದು ಅಷ್ಟು ಸುಲಭವಲ್ಲ. ಬಿಜೆಪಿ ಮೂರನೇ ಬಾರಿ ಕೇಂದ್ರಕ್ಕೆ ಒಂದೊಮ್ಮೆ ಅಧಿಕಾರಕ್ಕೆ ಬಂದಲ್ಲಿ ಮೊದಲು ದೇಶದ ಆರ್ಥಿಕತೆಯನ್ನು ಸಬಲ ಮಾಡಿ, ಮೂಲಭೂತ ಸೌಕರ್ಯ ಹೆಚ್ಚಿಸುವತ್ತ ಗಮನ ನೀಡುತ್ತದೆ. ನಮ್ಮ ದೇಶದ ಆರ್ಥಿಕತೆ ಈಗ 5ನೇ ಸ್ಥಾನದಲ್ಲಿದೆ. ಎರಡನೇ ಅಥವಾ ಮೂರನೇ ಸ್ಥಾನಕ್ಕೆ ದೇಶವನ್ನು ಕೊಂಡೊಯ್ಯುವುದು ಬಿಜೆಪಿಯ ಒಲವಾಗಿದೆ. ಆದರೂ ಹಲವು ದಶಕಗಳ ಕಾಲದಿಂದ ಭಾರತ ಮಾತೆಯ ಭೂಶಿರದ ಭಾಗವು ಮರಳಿ ನಮ್ಮ ರಾಷ್ಟ್ರದ ಭಾಗವಾಗುತ್ತದೆಂದು ಹೇಳಿದರೆ, ಎಂತಹ ದೇಶಭಕ್ತರಿಗೂ ಕ್ಷಣಕಾಲ ಮೈ ರೋಮಾಂಚನವಾಗದೇ ಇರದು. ಇರಲಿ ಯೋಗಿ ಆದಿತ್ಯನಾಥ್ ಹೇಳಿಕೆ ನಿಜವಾದರೆ ಭಾರತೀಯರಿಗೆ ಸಂತಸವೇ ಅಲ್ಲವೇ? ಅದೇ ಸಂದರ್ಭದಲ್ಲಿ ವಾಸ್ತವತೆಯನ್ನು ನಾವು ಗಮನಿಸಬೇಕು.
“ಬೆಂಗಳೂರು ವೈರ್” ಡಿಜಿಟಲ್ ವೆಬ್ ನ್ಯೂಸ್ ಪೋರ್ಟೆಲ್ಲಿನ ಸೋಶಿಯಲ್ ಮೀಡಿಯಾ ಪೇಜ್ ಹಾಗೂ Google News ಗಳಿಗೆ ಉಚಿತವಾಗಿ Subscribe ಆಗಲು Facebook, Telegram, Twitter, Dailyhunt, Youtube, Whatsup Channel ಗೆ ಜಾಯಿನ್ ಆಗಲು ಇವುಗಳ ಲಿಂಕ್ ಮೇಲೆ ಕ್ಲಿಕ್ ಮಾಡಿ.