ಬೆಂಗಳೂರು, ಮೇ.25 www.bengaluruwire.com : ರಾಜ್ಯದಲ್ಲಿ ವಿದ್ಯುತ್ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸಲು ಹಾಗೂ ಪರಿಸರ ಸ್ನೇಹಿ ಸೌರ ಚಾವಣಿ ಯೋಜನೆ (Solar Rooftop Scheme) ಶೀಘ್ರ ಅನುಷ್ಠಾನಕ್ಕಾಗಿ ಇಂಧನ ಇಲಾಖೆಯು ಹೊಸ ಮಾರ್ಗಸೂಚಿಯನ್ನು ಪ್ರಕಟ ಮಾಡಿದೆ. ಕರ್ನಾಟಕದಲ್ಲಿರುವ ಎಲ್ಲಾ ವಿದ್ಯುತ್ ಸರಬರಾಜು ಕಂಪನಿಗಳು (ESCOMS) ಈ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಇಂಧನ ಇಲಾಖೆ ಕಟ್ಟಪ್ಪಣೆ ನೀಡಿದೆ.
ದೊಡ್ಡ ಪ್ರಮಾಣದಲ್ಲಿ ಈ ಯೋಜನೆ ಅನುಷ್ಠಾನಗೊಳಿಸಲು ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರ ಅಧ್ಯಕ್ಷತೆಯಲ್ಲಿ ಈ ಹಿಂದೆ ತಜ್ಞರ ಸಮಿತಿ ರಚನೆ ಮಾಡಲಾಗಿತ್ತು. ಈ ತಜ್ಞರ ಸಮಿತಿ, ಸರ್ಕಾರಕ್ಕೆ ವರದಿಯನ್ನು ಸಲ್ಲಿಸಿದ್ದು ಆ ವರದಿ ಆಧರಿಸಿ ಈಗ ಮಾರ್ಗಸೂಚಿಯನ್ನು ಇಂಧನ ಇಲಾಖೆ ಪ್ರಕಟಿಸಿದೆ.
ಇಂಧನ ಇಲಾಖೆಯ ಮಾರ್ಗಸೂಚಿ ಏನು ಹೇಳುತ್ತೆ?:
ಸೌರ ಯೋಜನೆ ಅನುಷ್ಠಾನಕ್ಕಾಗಿ ಎಲ್ಲ ಎಸ್ಕಾಂಗಳು ಗ್ರಾಹಕರಲ್ಲಿ ಜಾಗೃತಿ ಮೂಡಿಸಬೇಕು. ಹೆಚ್ಚಿನ ಗ್ರಾಹಕರನ್ನು ತಲುಪಲು ವ್ಯಾಪಕವಾದ ಜಾಗೃತಿ ಚಟುವಟಿಕೆ ಕೈಗೊಳ್ಳಬೇಕು. ಸಣ್ಣ ಪ್ರಮಾಣದ ಗ್ರಾಹಕರು 1 ಕೆ.ವಿಯಿಂದ 3 ಕೆ.ವಿ. ಸಾಮರ್ಥ್ಯದ ಸೌರ ಚಾವಣಿ ಸ್ಥಾವರಗಳನ್ನು ಅಳವಡಿಸಿಕೊಳ್ಳುವ ನಿಟ್ಟಿನಲ್ಲಿ ಹೆಚ್ಚಿನ ಗಮನ ಹರಿಸಬೇಕು ಎಂದು ಸೂಚಿಸಿದೆ.
ಗ್ರಾಹಕರು ಸಲ್ಲಿಸುವ ಅರ್ಜಿ ಪ್ರಕ್ರಿಯೆಗೆ ಸಾಮಾನ್ಯ ವಿಆರ್‌ಎಲ್ ಹಾಗೂ ವೆಬ್‌ಸೈಟ್ (Website) ರಚಿಸಲು ಬೆಸ್ಕಾಂ (BESCOM) ನೋಡಲ್ ಕೇಂದ್ರವಾಗಿರುತ್ತದೆ. ಎಲ್ಲಾ ಎಸ್ಕಾಂಗಳಿಗೆ ಒಂದೇ ವೇದಿಕೆ ಒದಗಿಸಲು ಲಾಗಿನ್ ನೀಡಬೇಕು. ಅರ್ಜಿಗಳು, ವಿದ್ಯುತ್ ಖರೀದಿ ಒಪ್ಪಂದಗಳು ಮತ್ತು ಗ್ರಿಡ್‌ಗೆ ಮಾರಾಟದ ವ್ಯವಹಾರಗಳು ಆನ್‌ಲೈನ್‌ನಲ್ಲೇ ನಡೆಯಬೇಕು. ಸೌರ ಬಿಲ್ಲಿಂಗ್ ಸಾಫ್ಟ್‌ವೇರ್ (Solar Billing Software) ಮೇ 31ರ ಒಳಗೆ ಆನ್‌ಲೈನ್ ಲಭ್ಯವಾಗುವಂತೆ ನೋಡಿಕೊಳ್ಳಬೇಕು ಎಂದು ಸೂಚಿಸಿದೆ.
ಯೋಜನೆ ಜಾರಿ ವಿಳಂಬವಾದರೆ ಎಸ್ಕಾಂಗೆ ಅಧಿಕಾರ :
ಯೋಜನೆ ಜಾರಿಯಲ್ಲಿ ವಿಳಂಬ ಧೋರಣೆ ತಾಳುವ ಸಿಬ್ಬಂದಿಗೆ ದಂಡ ವಿಧಿಸಲು ಎಸ್ಕಾಂಗಳಿಗೆ ಅಧಿಕಾರ ನೀಡಲಾಗಿದೆ. ಸ್ಮಾರ್ಟ್ ಮೀಟರ್ ಕಾರ್ಯ ವಿಧಾನದಂತೆಯೇ ಖರೀದಿ ಪ್ರಕ್ರಿಯೆಗಾಗಿ ಬೆಸ್ಕಾಂ ಮೊಬೈಲ್ ತಂತ್ರಾಂಶ (Mobile Software)ವನ್ನು ಅಭಿವೃದ್ಧಿಪಡಿಸಬೇಕು. ಎಲ್ಲ ಎಸ್ಕಾಂಗಳು ಪಿಪಿಎ ಮಾದರಿ ಅನುಮೋದಿಸಲು ಏಕರೂಪದ ವಿಧಾನ ಅನುಸರಿಸಬೇಕು. ಮೀಟರ್ ಪರೀಕ್ಷೆಯು ಒಂದೇ ಕಡೆ ಆಗಬೇಕು. ಎಲ್ಲ ಎಸ್ಕಾಂಗಳು ಮೇಲಿನ ಮಾರ್ಗಸೂಚಿ ಪಾಲಿಸಿ ಸರ್ಕಾರಕ್ಕೆ ವರದಿ ಸಲ್ಲಿಸಬೇಕು ಎಂದು ಆದೇಶದಲ್ಲಿ ಸ್ಪಷ್ಟವಾಗಿ ತಿಳಿಸಿದೆ.
ಸೌರ ಚಾವಣಿ ರಾಜ್ಯದಲ್ಲಿ ಪೂರ್ಣರೂಪದಲ್ಲಿ ಜಾರಿಯಾದರೆ, ಸಾಂಪ್ರದಾಯಿಕ ಇಂಧನ ಮೂಲಗಳ ಮೇಲಿನ ಅವಲಂಬನೆ ಕಡಿಮೆಯಾಗಿ ರಾಜ್ಯದ ಇಂಧನ ವಿಷಯದಲ್ಲಿ ಸ್ವಾವಲಂಬನೆ ಸಾಧಿಸುವಲ್ಲಿ ಸೌರ ಚಾವಣಿ ಯೋಜನೆ ಮಹತ್ವದ್ದಾಗಿದೆ.