ಬೆಂಗಳೂರು, ಮೇ.25 www.bengaluruwire.com : ಮಾವಿನ ಬೆಳೆ ಹವಾಮಾನ ವೈಪರೀತ್ಯದಿಂದಾಗಿ ಈ ಬಾರಿ ಕೊರತೆಯಾಗಿದ್ದು ಶೇ.30ರಷ್ಟು ಫಸಲು ಲಭ್ಯವಾಗಲಿದ್ದು, ರೈತರು ಮತ್ತು ಗ್ರಾಹಕರಿಗೆ ಅನುಕೂಲವಾಗಲೆಂದು ರಾಜಧಾನಿಯಲ್ಲಿ ಹಲಸು ಮತ್ತು ಮಾವು ಮೇಳ 2024 ಆರಂಭವಾಗಿದೆ.
ಲಾಲ್ ಬಾಗ್ನಲ್ಲಿ (Lalbagh) ಹಲಸು ಮತ್ತು ಮಾವು ಮೇಳ ಮೇ.24 ರಿಂದ ಜೂನ್ 10ರ ತನಕ ಮೇಳ ನಡೆಯಲಿದೆ. ಈ ವರ್ಷ ತಾಪಮಾನ ಏರಿಕೆ ಹಾಗೂ ಹವಾಮಾನ ವೈಪರೀತ್ಯದಿಂದಾಗಿ ರಾಜಾಧಾನಿಯಲ್ಲಿ ಮಾವಿನ ಸೀಸನ್ (Mango Season) ತಡವಾಗಿ ಆರಂಭವಾಗಿದೆ. ಮಳೆ ಬಂದ ನಂತರ ಸಿಲಿಕಾನ್ ಸಿಟಿಯ ಮಂದಿ ಈಗ ವಿವಿಧ ರೀತಿಯ ಮಾವಿನ ಹಣ್ಣುಗಳನ್ನು ಸವಿಯುತ್ತಿದ್ದಾರೆ. ತೋಟಗಾರಿಕೆ ಇಲಾಖೆ ಹಾಗೂ ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮ ಮಾವು ಮೇಳ ಆಯೋಜಿಸಿದೆ.
ಮಾವಿನ ಜೊತಗೆ ಹಲಸಿನ ಮೇಳ ಕೂಡ ಇರಲಿದೆ. ಮಾವಿನ ಮೇಳದಲ್ಲಿ ಕೋಲಾರ, ಶ್ರೀನಿವಾಸಪುರ, ಚಿಂತಾಮಣಿ, ಬೆಂಗಳೂರು ಗ್ರಾಮಾಂತರ, ಹಾವೇರಿ, ಧಾರವಾಡ ಸೇರಿದಂತೆ ನಾನಾ ಜಿಲ್ಲೆಗಳ ಮಾವು ಬೆಳೆಗಾರರು ಭಾಗವಹಿಸಿದ್ದು ವಾಣಿಜ್ಯ, ಪಾರಂಪರಿಕ ಮಾವಿನ ತಳಿಗಳು, ಜತೆಗೆ ಉಪ್ಪಿನಕಾಯಿಗೆ ಬಳಸುವ ಮಿಡಿ, ಮಿಡಿ ಮಾವು ಜೊತೆಗೆ ರೈತರು ಬೆಳೆದ ನಾನಾ ತಳಿಯ ಹಲಸಿನ ಹಣ್ಣನ್ನು ಮಾರಾಟ ಮಾಡಲಾಗುತ್ತಿದೆ.
74 ಮಳಿಗೆಗಳನ್ನು ಮಾವು ಬೆಳೆಗಾರರಿಗೆ, 9 ಮಳಿಗೆಗಳನ್ನು ಹಲಸು ಬೆಳೆಗಾರರಿಗೆ ಹಾಗೂ 14 ಮಳಿಗೆಗಳನ್ನು ಮಾವು ಮತ್ತು ಇತರ ಹಣ್ಣಿನ ಉತ್ಪನ್ನ ಮಾರಾಟಗಾರರಿಗೆ ನೀಡಲಾಗಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಯಾವೆಲ್ಲ ತಳಿಯ ಮಾವುಗಳಿವೆ?
ಈ ವರ್ಷದ ಮೇಳದಲ್ಲಿ ಬಾದಾಮಿ, ರಸಪುರಿ, ಸೇಂಧೂರ, ಮಲಗೋವ, ನೀಲಂ, ಮಲ್ಲಿಕಾ, ಆಮ್ರಪಾಲಿ, ಬಂಗನಪಲ್ಲಿ, ಇಮ್ಮಾಮ್ ಪಸಂದ, ತೋತಾಪುರಿ, ಸಕ್ಕರೆಗುತ್ತಿ, ಉತ್ತರಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿ ಜಿಯೋಟ್ಯಾಗ್ ಪಡೆದುಕೊಂಡಿರುವ ವಿಶಿಷ್ಠ ಮಾವು ತಳಿ “ಕರಿಇಶಾದ್” ಸೇರಿದಂತೆ ನಾನಾ ತಳಿಯ ಹಣ್ಣುಗಳಿದ್ದು, ತೋಟಗಾರಿಕೆ ಇಲಾಖೆಯೇ ಮಾವಿನ ಹಣ್ಣುಗಳ ಬೆಲೆ ನಿಗದಿ ಮಾಡಿದೆ.
ಯಾವ ತಳಿಯ ಮಾವಿನ ಹಣ್ಣಿಗೆ ಎಷ್ಟಿದೆ ರೇಟು? (ರೂ.ಗಳಲ್ಲಿ)
ಬಾದಮಿ – 130
ಬಾದಾಮಿ ಬಾಕ್ಸ್ – 450
ರಸಪುರಿ – 100
ಮಲ್ಲಿಕಾ – 130
ಸೇಂದೂರ – 60
ಸಕ್ಕರೆ ಗುತ್ತಿ – 200
ಮಲಗೋವಾ – 220
ಬಂಗನಪಲ್ಲಿ – 80
ಮಲ್ಲಿಕಾ ಬಾಕ್ಸ್ – 375
ದಶೇರಿ – 137
ತೋತಾಪುರಿ – 50
ಕಾಲಾಪಾಡ್ – 135
ಅಮ್ರಪಾಲಿ – 120
ಕೇಸರ್ – 130
ಇಮಾಮ್ ಪಸಂದ್ – 250
ಆಮ್ಲೆಟ್ – 100
ಪ್ರತಿವರ್ಷ ಮಾವಿನ ಸೀಸನ್ನಲ್ಲಿ ಪ್ರತಿವರ್ಷ ಸರಾಸರಿ ಹಂಗಾಮಿನಲ್ಲಿ ರಾಜ್ಯದಲ್ಲಿ 12 ರಿಂದ 14 ಲಕ್ಷ ಟನ್ ಮಾವು ಬೆಳೆ ನಿರೀಕ್ಷಿಸಲಾಗುತ್ತದೆ. ಆದರೆ ಈ ಬಾರಿ ಹವಾಮಾನ ವೈಪರೀತ್ಯದಿಂದಾಗಿ ಗಣನೀಯ ಕೊರತೆ ಉಂಟಾಗಿದ್ದು, ಶೇ.30ರಷ್ಟು ಫಸಲು ಲಭ್ಯವಾಗಲಿದೆ ಎಂದು ತೋಟಗಾರಿಕಾ ಅಧಿಕಾರಿಗಳು ತಿಳಿಸಿದ್ದಾರೆ. ಹೀಗಾಗಿ ಈ ಬಾರಿ ಮೇಳದಲ್ಲಿ ದರ ಕೊಂಚ ಏರಿಕೆಯಾಗಿದೆ. ಆದರೂ ಕೂಡ ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ದೊರೆಯುತ್ತಿದೆ ಎಂದು ರೈತರು ತಿಳಿಸಿದ್ದಾರೆ.
ರಾಜ್ಯದಲ್ಲಿ 2309 ಹೆಕ್ಟೇರ್ ಪ್ರದೇಶದಲ್ಲಿ ಹಲಸಿನ ಬೆಳೆ ಬೆಳೆಯಲಾಗುತ್ತಿದೆ. 39.92 ಸಾವಿರ ಟನ್ ಗಳಷ್ಟು ಉತ್ಪಾದನೆಯಾಗುತ್ತದೆ. ಪ್ರಸ್ತುತ ಹಲಸು ಮತ್ತು ಮಾವಿನಮೇಳದಲ್ಲಿ ಹಳದಿ, ಕೇಸರಿ ಮತ್ತು ಕೆಂಪು ಬಣ್ಣಗಳಲ್ಲಿ ವಿವಿಧ ಗಾತ್ರ, ರುಚಿ ಹೊಂದಿದ ಹಲವು ಪ್ರಸಿದ್ಧ ತಳಿಗಳು ಲಭ್ಯವಿದೆ. ಹಲಸು ಪ್ರಿಯರು ಹೆಚ್ಚಿನ ಸಂಖ್ಯೆಯಲ್ಲಿ ಮಳಿಗೆಗಳಿಗೆ ಭೇಟಿಕೊಡುತ್ತಿದ್ದಾರೆ.