ಬೆಂಗಳೂರು, ಮೇ.23 www.bengaluruwire.com : ಕಾಲೇಜು ಶಿಕ್ಷಣ ಇಲಾಖೆಯಲ್ಲಿ ವೃಂದ ಬದಲಾವಣೆಗೆ ಕಾನೂನಿನಲ್ಲಿ ಅವಕಾಶವಿದ್ದರೂ, ಇಲಾಖೆಯ ಒಳಜಗಳ, ಪಿತೂರಿಯಿಂದಾಗಿ 120 ಮಂದಿ ದ್ವಿತೀಯ ದರ್ಜೆ ಬೆರಳಚ್ಚುಗಾರರು ಕಳೆದ 15 ವರ್ಷಗಳಿಂದ ಒಂದೇ ಹುದ್ದೆಯಲ್ಲಿ ಮುಂದುವರೆಯುವಂತಾಗಿದೆ. ತಮಗಾಗುತ್ತಿರುವ ಅನ್ಯಾಯದ ಬಗ್ಗೆ ಮುಖ್ಯಮಂತ್ರಿಗಳಿಂದ ಹಿಡಿದು ಸಚಿವರು, ಇಲಾಖೆಯ ಆಯುಕ್ತರ ಬಳಿ ಹಲವು ಬಾರಿ ಮನವಿ ಮಾಡಿದರೂ ಈ ಸರ್ಕಾರಿ ನೌಕರರ ಅಳಲು ಅರಣ್ಯ ರೋದನವಾಗಿದೆ.
ಕಾಲೇಜು ಶಿಕ್ಷಣ ಇಲಾಖೆಯ ಕೆ.ಸಿ.ಎಸ್.ಆರ್. ನಿಯಮ 1964ರ ಸೆಪ್ಟೆಂಬರ್ 26ರಂದು ಅಧಿಸೂಚನೆಯಾಗಿದ್ದು, (1988ರ ಡಿಸೆಂಬರ್ 31ರವರೆಗೆ ತಿದ್ದುಪಡಿ) ಹಾಗೂ ಡಿಪಿಎಆರ್ /18/ಎಸ್ ಆರ್/79 ರ 1979ರ ಮಾರ್ಚ್ 3 ರ ಅಧಿಸೂಚನೆಯಂತೆ ಬೆರಳಚ್ಚುಗಾರರ ಹುದ್ದೆಯಲ್ಲಿ 7 ವರ್ಷಗಳ ಸೇವಾವಧಿಯನ್ನು ಪೊರೈಸಿದ ದ್ವೀತಿಯ ದರ್ಜೆ ಬೆರಳಚ್ಚುಗಾರರಿಗೆ ದ್ವಿತೀಯ ದರ್ಜೆ ಸಹಾಯಕರ ಹುದ್ದೆಗೆ ವೃಂದ ಬದಲಾವಣೆ ಮಾಡಿಕೊಳ್ಳಲು ಅವಕಾಶ ಇರುತ್ತದೆ. ಆದರೆ 2013ರಿಂದ 2020ರ ಅವಧಿಯಲ್ಲಿ ಅನುಕಂಪ ಆಧಾರದ ಮೇಲೆ ಕರ್ತವ್ಯಕ್ಕೆ ಸೇರ್ಪಡೆಗೊಂಡ ದ್ವಿತೀಯ ದರ್ಜೆ ಸಹಾಯಕರು ಇಲಾಖೆಯ ಹಿರಿಯ ಅಧಿಕಾರಿಗಳಿಗೆ ದ್ವಿತೀಯ ದರ್ಜೆ ಸಹಾಯಕರುಗಳ ವೃಂದ ಬದಲಾವಣೆ ಬಗ್ಗೆ ಇಲ್ಲಸಲ್ಲದ ತಪ್ಪು ಮಾಹಿತಿ ನೀಡಿರುವ ಕಾರಣಕ್ಕೆ ಟೈಪಿಸ್ಟ್ ಗಳು ಯಾವುದೇ ಬಡ್ತಿಯೂ ಇಲ್ಲದೆ, ಒಂದೇ ಹುದ್ದೆಯಲ್ಲಿ ಮುಂದುವರೆದು ಅದೇ ಹುದ್ದೆಯಲ್ಲಿ ನಿವೃತ್ತಿರಾಗುತ್ತಿದ್ದಾರೆ ಎಂಬ ಬಲವಾದ ಆರೋಪಗಳಿವೆ.
ದ್ವಿತೀಯ ದರ್ಜೆ ಸಹಾಯಕರುಗಳು ಇಲಾಖೆಯ ಅಧಿಕಾರಿಗಳಿಗೆ ತಪ್ಪು ಮಾಹಿತಿಯನ್ನು ನೀಡುತ್ತಾ, ದ್ವಿತೀಯ ದರ್ಜೆ ಸಹಾಯಕರ ಜೇಷ್ಠತೆಯನ್ನು ಕಾಪಾಡಿ ಅಂತಾ ಸುಳ್ಳು ಮಾಹಿತಿಯನ್ನು ಹಬ್ಬಿಸುತ್ತಾ, ಬೆರಳಚ್ಚುಗಾರರಿಗೆ ವ್ಯಂದ ಬದಲಾವಣೆ ನೀಡಬಾರದು ಅಂತಾ ಹಲವಾರು ಮನವಿಗಳನ್ನು ಸಲ್ಲಿಸಿದ್ದು, ತಮಗಿಂತ 06 ರಿಂದ 09 ವರ್ಷ ಸೇವೆಯಲ್ಲಿ ಕಿರಿಯವರಾಗಿದ್ದು, ಯಾವ ಮೂಲದಿಂದಲೂ ಈ ಟೈಪಿಸ್ಟ್ ಗಳಿಗಿಂತ ಸೇವಾ ಹಿರಿತನದಲ್ಲಿ ಹಿರಿಯರಾಗಿರುವುದಿಲ್ಲ. ಅಲ್ಲದೆ ಅವರಿಗೆ ಜೇಷ್ಠತೆಯಲ್ಲಿ ಅನ್ಯಾವಾಗುವುದಿಲ್ಲ. ಅಲ್ಲದೆ ಸರ್ಕಾರದ ಆದೇಶವಿದ್ದರೂ ಸಹ ಕಾಲಕಾಲಕ್ಕೆ ವೃಂದ ಬದಲಾವಣೆ ಮಾಡಿಲ್ಲ.
ಕಾಲೇಜು ಶಿಕ್ಷಣ ಇಲಾಖೆಯಲ್ಲಿನ ಗ್ರೂಪ್ “ಡಿ” ದರ್ಜೆ ನೌಕರರಾಗಿ ಸೇವೆಗೆ ಸೇರಿದ ಸಿಬ್ಬಂದಿ, ವೃಂದ “ಬಿ” ದರ್ಜೆವರೆಗೆ ಬಡ್ತಿ ಹೊಂದಿರುತ್ತಾರೆ. ಆದರೆ ದ್ವಿತೀಯ ದರ್ಜೆ ಬೆರಳಚ್ಚುಗಾರರನ್ನು ಬಡ್ತಿಗೆ ಪರಿಗಣಿಸದೇ ಇರುವುದರಿಂದ, ಸುಮಾರು 30 ವರ್ಷಗಳಿಂದ ಯಾವುದೇ ಮುಂಬಡ್ತಿಯಿಲ್ಲದೆ ಒಂದೇ ಹುದ್ದೆಯಲ್ಲಿ ಮುಂದುವರೆದು, ಅದೇ ಹುದ್ದೆಯಲ್ಲಿ ನಿವೃತ್ತರಾಗಿದ್ದಾರೆ ಹಾಗೂ ನಿವೃತ್ತರಾಗುತ್ತಿದ್ದಾರೆ. 2009ರಲ್ಲಿ ಒಟ್ಟು 250 ಮಂದಿ ದ್ವಿತೀಯ ದರ್ಜೆ ಟೈಪಿಸ್ಟ್ ಗಳಾಗಿ ನೇಮಕಗೊಂಡಿದ್ದರು. ಬಳಿಕ 7 ವರ್ಷ ಸೇವಾವಧಿ ಪೂರ್ಣಗೊಂಡ 50 ಜನರಿಗೆ ದ್ವಿತೀಯ ದರ್ಜೆ ಬೆರಳಚ್ಚುಗಾರರ ಹುದ್ದೆಯಿಂದ ದ್ವಿತೀಯ ದರ್ಜೆ ಸಹಾಯಕರ ವೃಂದ ಬದಲಾವಣೆ ಮಾಡಲಾಯಿತು. ಅದಾದ ನಂತರ 2021ರಲ್ಲಿ 35 ಜನರನ್ನು ಕೆಪಿಎಸ್ ಸ್ಸಿಯಲ್ಲಿ ಪಡೆದ ಮೆರಿಟ್ ಲಿಸ್ಟ್ ಆಧಾರದ ಮೇಲೆ 35 ಟೈಪಿಸ್ಟ್ ಗಳಿಗೆ ವೃಂದ ಬಲಾವಣೆಗೆ ಅವಕಾಶ ನೀಡಲಾಯಿತು. ಆನಂತರ ಉಳಿದ ಅರ್ಹ ಟೈಪಿಸ್ಟ್ ಗಳಿಗೆ ವೃಂದ ಬದಲಾವಣೆ ಎಂಬುದು ಗಗನ ಕುಸುಮವಾಗಿದೆ.
ಈ ಬಗ್ಗೆ ದ್ವಿತೀಯ ದರ್ಜೆ ಟೈಪಿಸ್ಟ್ ಗಳು, ದ್ವಿತೀಯ ದರ್ಜೆ ಸಹಾಯಕರ ಹುದ್ದೆಗೆ ವೃಂದ ಬದಲಾವಣೆ ಮಾಡುವಂತೆ ಮುಖ್ಯಮಂತ್ರಿಗಳಿಗೆ ಕಳೆದ ವರ್ಷ ಡಿಸೆಂಬರ್ 24ರಂದು ಪತ್ರ ಬರೆದು ಸಿಬ್ಬಂದಿಯೆಲ್ಲರೂ ಮನವಿ ಸಲ್ಲಿಸಿದ್ದರು. ಆದರೂ ಈವರೆಗೂ ಮುಖ್ಯಮಂತ್ರಿಗಳ ಕಚೇರಿಯಂದಾಗಲೀ, ಮುಖ್ಯ ಕಾರ್ಯದರ್ಶಿ ಕಚೇರಿಯಿಂದಾಗಲೀ, ಇಲಾಖೆಯ ಆಯುಕ್ತರ ಕಚೇರಿಯಿಂದಾಗಲೀ ಸೂಕ್ತ ಪ್ರತಿಕ್ರಿಯೆ ಅಥವಾ ಕ್ರಮ ಆಗದಿರುವುದು ನಿಜಕ್ಕೂ ವಿಪರ್ಯಾಸವೇ ಸರಿ. ಈ ಬಗ್ಗೆ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಮನವಿ ಸಲ್ಲಿಸಿದಾಗ, ಕಾಲೇಜು ಶಿಕ್ಷಣ ಇಲಾಖೆಯಲ್ಲಿ ದ್ವಿತೀಯ ದರ್ಜೆ ಟೈಪಿಸ್ಟ್ ಗಳ ವೃಂದ ಬದಲಾವಣೆ ಮಾಡಲು ವೃಂದ ಮತ್ತು ನೇಮಕಾತಿಯಲ್ಲಿ ಅವಕಾಶವಿಲ್ಲ ಎಂದು ಹೇಳಿ ಈ 120 ಟೈಪಿಸ್ಟ್ ಗಳನ್ನು ವಾಪಸ್ಸು ಕಳಿಸಿದ್ದಾರೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಬೆಂಗಳೂರು ವೈರ್ ಕಾಲೇಜು ಶಿಕ್ಷಣ ಇಲಾಖೆಯ ಆಯುಕ್ತ ಜಿ.ಜಗದೀಶ್ ಅವರನ್ನು ಸಂಪರ್ಕಿಸಲು ಪ್ರಯತ್ನಿಸಿತಾದರೂ ಅವರು ಪ್ರತಿಕ್ರಿಯೆಗೆ ಲಭ್ಯವಾಗಲಿಲ್ಲ.
- ಇಲಾಖೆಯಲ್ಲಿ ಪ್ರತ್ಯೇಕ ವೃಂದ ಮತ್ತು ನೇಮಕಾತಿ ನಿಯಮ ಪರಿಷ್ಕರಿಸುವ ಅಗತ್ಯವಿಲ್ಲ
- ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ನಿಯಮಗಳ ಅನ್ವಯ ಕ್ರಮ
- ಅಧಿವೇಶನದಲ್ಲಿ ಅಂದಿನ ಉನ್ನತ ಶಿಕ್ಷಣ ಸಚಿವರಿಂದ ಉತ್ತರ
2016ರ ಜುಲೈ 12ರಂದು ಅಧಿವೇಶನದಲ್ಲಿ ಶಾಸಕ ಬಿ.ಎಚ್.ಶ್ರೀನಿವಾಸ್ ವಿಧಾನಸಭೆಯಲ್ಲಿ ಕೇಳಿದ ಚುಕ್ಕೆ ಗುರುತಿನ ಪ್ರಶ್ನೆಗೆ (ಇಡಿ 123 ಯುಜಿಎಚ್ 2016) ಸದನದಲ್ಲಿ ಉತ್ತರ ನೀಡಿದ್ದ ಆಗಿನ ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ, “ಕಾಲೇಜು ಶಿಕ್ಷಣ ಇಲಾಖೆಯಲ್ಲಿ ದ್ವಿತೀಯ ದರ್ಜೆ ಬೆರಳಚ್ಚುಗಾರರ ಹುದ್ದೆಯಿಂದ ದ್ವಿತೀಯ ದರ್ಜೆ ಸಹಾಯಕರ ಹುದ್ದೆಗೆ ವೃಂದ ಬದಲಾವಣೆಯನ್ನು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಹೊರಡಿಸುವ ನಿಯಮಗಳನ್ವಯ ಕ್ರವಹಿಸಲಾಗುತ್ತದೆ. ಇದಕ್ಕಾಗಿ ಕಾಲೇಜು ಶಿಕ್ಷಣ ಇಲಾಖೆಯಲ್ಲಿ ಪ್ರತ್ಯೇಕವಾಗಿ ವೃಂದ ಮತ್ತು ನೇಮಕಾತಿ ನಿಯಮಗಳನ್ನು ಪರಿಷ್ಕರಿಸುವ ಅಗತ್ಯತೆ ಇರುವುದಿಲ್ಲ” ಎಂದು ಹೇಳಿದ್ದರು.
ಬೇರೆಯವರಿಗೊಂದು ನ್ಯಾಯ, ನಮಗೊಂದು ನ್ಯಾಯ ಯಾಕೆ? :
“ಇಲಾಖೆಯಲ್ಲಿನ ದ್ವಿತೀಯ ದರ್ಜೆ ಬೆರಳಚ್ಚುಗಾರರು 1998 ರಿಂದ 2020 ರವರೆಗೆ 22 ವರ್ಷಗಳಿಂದ ವೃಂದ ಬದಲಾವಣಿಗೆ ಮನವಿಗಳನ್ನು ಸಲ್ಲಿಸುತ್ತಾ ಬಂದಿದ್ದು, ಬೆರಳಚ್ಚುಗಾರರ ಹುದ್ದೆಯಲ್ಲಿ 7 ವರ್ಷಗಳ ಸೇವಾವಧಿಯನ್ನು ಪೊರೈಸಿದಲ್ಲಿ ವೃಂದ ಬದಲಾವಣೆ ಮಾಡಲು ಸರ್ಕಾರ ಅವಕಾಶ ಮಾಡಿಕೊಟ್ಟರೂ ಸಹ ಇಲಾಖೆಯು ಕಾಲ ಕಾಲಕ್ಕೆ ವೃಂದ ಬದಲಾವಣೆಯನ್ನು ಮಾಡಿರುವುದಿಲ್ಲ. ನಿರಂತರ ಹೋರಾಟದ ಪ್ರತಿಫಲವಾಗಿ 2020 ರಲ್ಲಿ 50 ಜನರನ್ನು ಹಾಗೂ 2021 ರಲ್ಲಿ 35 ಜನರನ್ನು ವೃಂದ ಬದಲಾವಣೆ ಮಾಡಲಾಯಿತು. ಬಾಕಿ ಉಳಿದಿರುವ ಬೆರಳಚ್ಚುಗಾರರು ವೃಂದ ಬದಲಾವಣೆಗೆ ಈಗಾಗಲೇ ಅನೇಕ ಬಾರಿ ಮನವಿಗಳನ್ನು ಸಲ್ಲಿಸಿದ್ದರೂ ಸಹ ವೃಂದ ಬದಲಾವಣೆಯನ್ನು ಮಾಡಿರುವುದಿಲ್ಲ. ಹೀಗಾಗಿ ನಾವುಗಳು ಬೆರಳಚ್ಚುಗಾರರಾಗಿಯೇ ಕಾರ್ಯನಿರ್ವಹಿಸುವಂತಾಗಿದೆ” ಎಂದು ಹೆಸರು ಹೇಳಲಿಚ್ಛಿಸದ ಕಾಲೇಜು ಶಿಕ್ಷಣ ಇಲಾಖೆಯ ದ್ವಿತೀಯ ದರ್ಜೆ ಬೆರಳಚ್ಚುಗಾರರೊಬ್ಬರು ಬೆಂಗಳೂರು ವೈರ್ ಜೊತೆ ಮಾತನಾಡಿ ತಮ್ಮ ಅಳಲು ತೋಡಿಕೊಂಡಿದ್ದಾರೆ.
“ಇಲಾಖೆಯು 85 ಜನರಿಗೆ ವೃಂದ ಬದಲಾವಣೆಗೆ ಅವಕಾಶ ನೀಡಿತು. ಆದರೆ ಉಳಿದ 120 ಮಂದಿಗೆ ವೃಂದ ಬದಲಾವಣೆಯ ಅವಕಾಶವೇ ನೀಡಿಲ್ಲ. ಇದರಿಂದ 15 ವರ್ಷಗಳಿಂದ ಒಂದೇ ಹುದ್ದೆಯಲ್ಲಿ ಮುಂದುವರೆದಿರುವ ಈ ನೌಕರರಿಗೆ ವೃಂದ ಬದಲಾವಣೆಯಾಗದಿದ್ದಲ್ಲಿ ಉಳಿದ 15 ವರ್ಷಗಳ ಕಾಲ ಅದೇ ಹುದ್ದೆಯಲ್ಲೇ ಕೆಲಸ ಮಾಡಿ ನಿವೃತ್ತರಾಗಬೇಕಾದ ದುಸ್ಥಿತಿ ಎದುರಾಗಲಿದೆ. ಬೇರೆ ಇಲಾಖೆಗಳಲ್ಲಿ ಇದೇ ಬ್ಯಾಚಿನಲ್ಲಿ ಕೆಲಸಕ್ಕೆ ಸೇರಿದ ಇತರ ಸರ್ಕಾರಿ ನೌಕರರು ಬೆರಳಚ್ಚುಗಾರರಾಗಿ ಸೇವೆಗೆ ಸೇರಿ ಪ್ರಸ್ತುತ ಅಧೀಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಆದರೆ ತಮಗ್ಯಾಕೆ ಈ ಅನ್ಯಾಯ?” ಎಂದು ಅವರು ಪ್ರಶ್ನಿಸಿದ್ದಾರೆ.
“2020ರ ನವೆಂಬರ್ 2ರ ಸರ್ಕಾರಿ ಆದೇಶ ಸಂಖ್ಯೆ :42 ಪಿಎಂ 2019 ರ ಅನ್ವಯ ಸರ್ಕಾರವು ಪೋಲಿಸ್ ಇಲಾಖೆಯಲ್ಲಿನ ವಿವಿಧ ಘಟಕಗಳಲ್ಲಿನ ದ್ವಿತೀಯ ದರ್ಜೆ ಬೆರಳಚ್ಚುಗಾರರ 900 ಹುದ್ದೆಗಳನ್ನು ಹಿಂಪಡೆದು ಆಯಾ ಘಟಕಗಳಲ್ಲಿಯೇ 300 ದ್ವಿತೀಯ ದರ್ಜೆ ಸಹಾಯಕರ ಹುದ್ದೆಗಳಾಗಿ ಪರಿವರ್ತನೆ ಮಾಡಿತ್ತು. ಅದೂ ಅಲ್ಲದೆ 2018 ರ 06 ನೇ ಪರಿಷ್ಕೃತ ರಾಜ್ಯ ವೇತನ ಶ್ರೇಣಿಯಲ್ಲಿನ 02 ನೇ ವರದಿಯಲ್ಲಿನ ಅಧ್ಯಾಯ ೦3 ನೇ ಸೇವೆಗಳು ಇಲಾಖೆಗಳ ಕಂಡಿಕೆ 10 ಹಾಗು 11 ರಲ್ಲಿ ವಿವರಿಸಿದಂತೆ ಆಡಳಿತಾತ್ಮಕ ಹಿತದೃಷ್ಟಿಯಿಂದ ದ್ವಿತೀಯ ದರ್ಜೆ ಬೆರಳಚ್ಚುಗಾರರು, ದ್ವಿತೀಯ ದರ್ಜೆ ಸಹಾಯಕ ಹಾಗೂ ಪ್ರಥಮ ದರ್ಜೆ ಸಹಾಯಕ ಹಾಗೂ ಶೀಘ್ರಲಿಪಿಗಾರರ ಹುದ್ದೆಗಳನ್ನು ವಿಲೀನಗೊಳಿಸಿ, ಆ ವೃಂದಗಳನ್ನು ಕಿರಿಯ ಆಡಳಿತ ಸಹಾಯಕರು ಹಾಗು ಹಿರಿಯ ಆಡಳಿತ ಸಹಾಯಕರು ಎಂಬ ಹೊಸ ಹುದ್ದೆಗಳನ್ನು ಸೃಷ್ಟಿಸಬೇಕೆಂದು ವೇತನ ಆಯೋಗವು ಶಿಫಾರಸ್ಸು ಮಾಡಿತ್ತು. ಆದರೂ ಈ ದ್ವಿತೀಯ ದರ್ಜೆ ಬೆರಳಚ್ಚುಗಾರರ ವಿಷಯದಲ್ಲಿ ಹಿರಿಯ ಅಧಿಕಾರಿಗಳು ಅಸಡ್ಡೆ ಮತ್ತು ನಿರ್ಲಕ್ಷ್ಯವಹಿಸುತ್ತಿದೆ” ಎಂದು ಮತ್ತೊಬ್ಬ ಬೆರಳಚ್ಚು ಸಿಬ್ಬಂದಿ ತಮಗಾಗುತ್ತಿರುವ ಸಮಸ್ಯೆ ಬಗ್ಗೆ ಎಳೆ ಎಳೆಯಾಗಿ ಹೇಳಿದ್ದಾರೆ.
ವೃಂದ ಬದಲಾವಣೆಯಿಂದ ಸರ್ಕಾರಕ್ಕೆ ಹೊರೆಯಿಲ್ಲ :
ದ್ವಿತೀಯ ದರ್ಜೆ ಬೆರಳಚ್ಚುಗಾರರು ಹಾಗೂ ದ್ವಿತೀಯ ದರ್ಜೆ ಸಹಾಯಕರುಗಳ ಎರಡು ವೃಂದಗಳ ಹುದ್ದೆಗಳು ಒಂದೇ ವೇತನ ಶ್ರೇಣಿ ಹೊಂದಿರುವುದರಿಂದ ಸರ್ಕಾರಕ್ಕೆ ಯಾವುದೇ ಆರ್ಥಿಕ ಹೊರೆಯುಂಟಾಗುವುದಿಲ್ಲ. ಬೆರಳಚ್ಚುಗಾರರಿಗೆ ವೇತನದಲ್ಲಿ ನೀಡುವ ವಿಶೇಷ ಭತ್ಯೆಯಾದ 200 ರೂ. ಸರ್ಕಾರಕ್ಕೆ ಉಳಿತಾಯವಾಗುತ್ತದೆ.
2012 ರ ಕಂಪ್ಯೂಟರ್ ಸಾಕ್ಷರತಾ ಪರೀಕ್ಷಾ ನಿಯಮಗಳ ಅನುಸಾರ ಸರ್ಕಾರಿ ನೌಕರರು ಎಲ್ಲರೂ ಕಂಪ್ಯೂಟರ್ ಜ್ಞಾನ ಹೊಂದಿರಬೇಕೆಂಬ ನಿಯಮ ಜಾರಿಗೆ ತಂದಿದ್ದು, ಇದರಿಂದ ಕಛೇರಿ ಗಣಕೀಕೃತ ವ್ಯವಸ್ಥೆಗೆ ತೊಂದರೆಯಾಗಲ್ಲ. ಏಕೆಂದರೆ ಈ ಬೆರಳಚ್ಚುಗಾರರು ನಿಗದಿತ ಇಲಾಖಾ ಪರೀಕ್ಷೆಗಳನ್ನು ಹಾಗೂ ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆಯನ್ನು ಉತ್ತೀರ್ಣರಾಗಿದ್ದಾರೆ. ಬೆರಳಚ್ಚುಗಾರರಿಗೆ ವೃಂದ ಮತ್ತು ನೇಮಕಾತಿ ನಿಯಮಗಳ ಪ್ರಕಾರ ಕೇವಲ ಬೆರಳಚ್ಚು ಮಾಡುವುದು ಜವಾಬ್ದಾರಿಯಾಗಿರುತ್ತದೆ. ಆದರೆ ಇಲಾಖೆಯ ಕಛೇರಿ ಮತ್ತು ಕಾಲೇಜುಗಳಲ್ಲಿ ಬೆರಳಚ್ಚು ಜೊತೆಗೆ ಕಾಲೇಜು ಪ್ರವೇಶ , ಪರೀಕ್ಷೆ ಹಾಗೂ ಇನ್ನಿತರ ಎಲ್ಲ ಕಾರ್ಯಗಳನ್ನು ಬೆರಳಚ್ಚುಗಾರರು ಪ್ರಸ್ತುತ ನಿರ್ವಹಿಸುತ್ತಿದ್ದಾರೆ. 2022 ನವೆಂಬರ್ ನಲ್ಲಿ ಇಲಾಖೆಯ 125 ದ್ವಿತೀಯ ದರ್ಜೆ ಸಹಾಯಕರಿಗೆ ಪ್ರಥಮ ದರ್ಜೆ ಸಹಾಯಕರಾಗಿ ಬಡ್ತಿಗಳನ್ನು ನೀಡಲಾಗಿದ್ದು, ಅಂದಿನಿಂದ ಇಂದಿನವರೆಗೆ ದ್ವಿತೀಯ ದರ್ಜೆ ಸಹಾಯಕರ ಹುದ್ದೆಗಳು ಖಾಲಿ ಇರುತ್ತವೆ. ಹೀಗಾಗಿ ದ್ವಿತೀಯ ದರ್ಜೆ ಬೆರಳಚ್ಚುಗಾರರಿಗಾದ ಅನ್ಯಾಯವನ್ನು ಉನ್ನತ ಶಿಕ್ಷಣ ಇಲಾಖೆಯಡಿ ಬರುವ ಕಾಲೇಜು ಶಿಕ್ಷಣ ಇಲಾಖೆ ಸರಪಡಿಸಲಿದೆಯೇ ಎಂದು ಕಾದು ನೋಡಬೇಕಿದೆ.
“ಬೆಂಗಳೂರು ವೈರ್” ಡಿಜಿಟಲ್ ವೆಬ್ ನ್ಯೂಸ್ ಪೋರ್ಟೆಲ್ಲಿನ ಸೋಶಿಯಲ್ ಮೀಡಿಯಾ ಪೇಜ್ ಹಾಗೂ Google News ಗಳಿಗೆ ಉಚಿತವಾಗಿ Subscribe ಆಗಲು Facebook, Telegram, Twitter, Dailyhunt, Youtube, Whatsup Channel ಗೆ ಜಾಯಿನ್ ಆಗಲು ಇವುಗಳ ಲಿಂಕ್ ಮೇಲೆ ಕ್ಲಿಕ್ ಮಾಡಿ.