ಬೆಂಗಳೂರು, ಮೇ.21 www.bengaluruwire.com : ನಗರ ಪೊಲೀಸರು ವಿವಿಧ ಎರಡು ಪ್ರತ್ಯೇಕ ಕಳ್ಳತನ ಪ್ರಕರಣಗಳಲ್ಲಿ ಮೂವರು ಆರೋಪಿಗಳನ್ನು ಬಂಧಿಸಿ ಅವರಿಂದ ಲಕ್ಷಾಂತರ ರೂಪಾಯಿ ಬೆಲೆಬಾಳುವ 25 ಲ್ಯಾಪ್ ಟಾಪ್ ಹಾಗೂ ವಿವಿಧ ಕಂಪನಿಗಳ 176 ಮೊಬೈಲ್ ಫೋನ್ ಗಳನ್ನು ಕೃತ್ಯಕ್ಕೆ ಉಪಯೋಗಿಸುತ್ತಿದ್ದ ಒಂದು ಟಾಯೋಟಾ ಇಟಿಯಾಸ್ ಕಾರನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಕುಮಾರಸ್ವಾಮಿ ಲೇಔಟ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಲ್ಯಾಪ್ ಟ್ಯಾಪ್ ಕಳ್ಳತನ ಮಾಡುತ್ತಿದ್ದ ಅಂತರಾಜ್ಯ ಕಳ್ಳತನ ಮಾಡುತ್ತಿದ್ದ ಕಳ್ಳನನ್ನು ಬಂಧಿಸಿ ಹೆಚ್ಚಿನ ವಿಚಾರಣೆ ನಡೆಸಿದಾಗ ವಿವಿಧ ಇತರ ಪ್ರಕರಣಗಳಲ್ಲಿ ಕಳ್ಳತನ ಮಾಡಿದ್ದ 25 ಲ್ಯಾಪ್ ಟಾಪ್ ಗಳನ್ನು ಪೊಲೀಸರು ವಶಕ್ಕೆ ಪಡಿದ್ದಾರೆ.
ದಯಾನಂದ ಸಾಗರ ಕಾಲೇಜ್ ರಸ್ತೆಯಲ್ಲಿನ ಮನೆಯೊಂದರಲ್ಲಿ ಮೂವರು ವಿದ್ಯಾರ್ಥಿಗಳು ಮೇ.5ರಂದು ರಾತ್ರಿಯೆಲ್ಲಾ ವಿಧ್ಯಾಭ್ಯಾಸ ಮಾಡಿ ಬೆಳಗ್ಗೆ ಸುಮಾರು 6.45 ಗಂಟೆಯವರೆಗೆ ಲ್ಯಾಪ್ ಟಾಪ್ಗಳಲ್ಲಿ ಕೆಲಸ ಮಾಡಿ, ನಂತರ ಬೆಳಗ್ಗೆ 7 ಗಂಟೆಯಲ್ಲಿ ತಮ್ಮ ಮನೆಗೆ ಅಡುಗೆ ಮಾಡುವ ಕೆಲಸದವನು ಬಂದು ಅಡುಗೆ ಮಾಡುತ್ತಾನೆಂದು ರೂಮಿನ ಬಾಗಿಲನ್ನು ತೆಗೆದು ಬೀಗ ಹಾಕದೇ ಮಲಗಿರುತ್ತಾರೆ. ನಂತರ 09:30 ಗಂಟೆಯಲ್ಲಿ ಎದ್ದು ನೋಡಿದಾಗ, ತಮ್ಮ ಮನೆಯ ಕೊಠಡಿಯಲ್ಲಿಟ್ಟಿದ್ದ 2.30 ಲಕ್ಷ ರೂ. ಬೆಲೆ ಬಾಳುವ ಮೂರು ವಿವಿಧ ಕಂಪನಿಯ ಲ್ಯಾಪ್ ಟಾಪ್ ಹಾಗೂ ಒಂದು ಮೊಬೈಲ್ ಫೋನನ್ನು ಯಾರೋ ಕಳವು ಮಾಡಿಕೊಂಡು ಹೋಗಿರುತ್ತಾರೆಂದು ಕೆ.ಎಸ್.ಲೇಔಟ್ ಪೊಲೀಸ್ ಠಾಣೆಯಲ್ಲಿ ದೂರನ್ನು ನೀಡಿದ್ದು, ಕಳ್ಳತನ ಪ್ರಕರಣ ದಾಖಲಾಗಿತ್ತು. ಈ ಪ್ರಕರಣದ ಬಗ್ಗೆ ಪೊಲೀಸರು ತನಿಖೆ ನಡೆಸಿ ವಿವಿಧ ಸಿಸಿಟಿವಿಗಳಲ್ಲಿ ಲಭ್ಯವಾದ ಮಾಹಿತಿ ಆಧರಿಸಿ ತನಿಖೆ ಕೈಗೊಂಡಾಗ, ಕಾಟನಪೇಟೆಯಲ್ಲಿರುವ ಪಿಜಿ ಯೊಂದರಲ್ಲಿ ಕಳ್ಳತನ ಕೃತ್ಯ ನಡೆಸಿರುವ ವ್ಯಕ್ತಿ ವಾಸವಾಗಿರುವ ಮಾಹಿತಿ ಆಧರಿಸಿ ಪೊಲೀಸರು ಅಲ್ಲಿ ಹೋಗಿ ಪರಿಶೀಲಿಸಿದಾಗ ಸ್ಥಳಧಲ್ಲಿರಲಿಲ್ಲ.
ಆ ಬಳಿಕ ಹೆಚ್ಚಿನ ಮಾಹಿತಿ ಕಲೆಹಾಕಿದಾಗ ಇಂದಿರಾನಗರದ ಮೆಟ್ರೋ ಪಿಲ್ಲರ್ ಕೆಳಭಾಗದಲ್ಲಿ ಆಂಧ್ರಪ್ರದೇಶದಿಂದ ಬಂದಿರುವ ಕಳ್ಳತನ ಮಾಡಿದ ಆರೋಪಿಯು ತನ್ನ ಸಂಬಂಧಿಕರ ಜೊತೆ ಇರುವುದು ತಿಳಿದುಬಂದಿರುತ್ತದೆ. ನಂತರ ಆತನನ್ನು ವಶಕ್ಕೆ ಪಡೆದು ಪೊಲೀಸರು ತಮ್ಮ ಶೈಲಿಯಲ್ಲಿ ವಿಚಾರಣೆ ನಡೆಸಿದಾಗ ಆದ ಕಳ್ಳತನ ಮಾಡಿರುವುದನ್ನು ಒಪ್ಪಿಕೊಳ್ಳುತ್ತಾನೆ. ಅಲ್ಲದೆ ಈ ಸಂಬಂಧ ಸುದೀರ್ಘವಾಗಿ ವಿಚಾರಣೆ ಮಾಡಿದಾಗ, ಈತನು ಕಳ್ಳತನ ಮಾಡುತ್ತಿದ್ದ ಲ್ಯಾಪ್ ಟ್ಯಾಪ್ ಗಳನ್ನು ತಮಿಳುನಾಡಿನ ಶಂಕರ್ಪುರದಲ್ಲಿರುವ ಓರ್ವ ವ್ಯಕ್ತಿಗೆ ಮಾರುತ್ತಿದ್ದ ವಿಷಯ ಬೆಳಕಿಗೆ ಬಂದಿದ್ದಲ್ಲದೆ, ಆತನ ವಶದಿಂದ ಒಟ್ಟು ಕಳ್ಳತನ ಮಾಡಿದ್ದ 25 ಲ್ಯಾಪ್ ಟಾಪ್ಗಳನ್ನು ವಶಕ್ಕೆ ಪಡೆದಿದ್ದಾರೆ.
ಬಿಎಂಟಿಸಿ ಬಸ್ಸಿನಲ್ಲಿ ನಡೆದ ಕಳ್ಳತನದಿಂದ ಬಯಲಾಯಿತು ಇತರ ಪ್ರಕರಣ :
ಮೊಬೈಲ್ ಫೋನ್ ಗಳನ್ನು ಕಳ್ಳತನ ಮಾಡುತ್ತಿದ್ದ ಇಬ್ಬರು ವ್ಯಕ್ತಿಗಳನ್ನು ಉಪ್ಪಾರಪೇಟೆ ಪೊಲೀಸರು ಬಂಧಿಸಿದ್ದು, ಅವರಿಂದ 22.40 ಲಕ್ಷ ರೂ. ಮೌಲ್ಯದ ವಿವಿಧ ಕಂಪನಿಗಳ 176 ಮೊಬೈಲ್ ಫೋನ್ ಗಳನ್ನು ವಶಪಡಿಸಿಕೊಂಡಿದ್ದಾರೆ. ಏ.22ರಂದು ಶಿವಮೊಗ್ಗದಿಂದ ರೈಲಿನಲ್ಲಿ ಬೆಂಗಳೂರಿಗೆ ಬಂದ ವ್ಯಕ್ತಿಯೊರ್ವರ ಮೊಬೈಲ್ ಫೋನ್ ಅನ್ನು ಬಿಎಂಟಿಸಿ ಬಸ್ ನಲ್ಲಿ ಪ್ರಯಾಣಿಸುವಾಗ ಯಾರೋ ಎಗರಿಸಿದ್ದರು. ಈ ಸಂಬಂಧ ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದು, ಓರ್ವ ವ್ಯಕ್ತಿಯನ್ನು ಅದೇ ದಿನ ವಶಕ್ಕೆ ಪಡೆದು ವಿಚಾರಣೆ ಮಾಡಿದಾಗ ಆತ ಇಬ್ಬರು ವ್ಯಕ್ತಿಗಳು ಮೊಬೈಲ್ ಫೋನ್ ಕಳ್ಳತನ ಮಾಡಿರುವುದರ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದ.
ಇದನ್ನು ಆಧರಿಸಿ ಪೊಲೀಸರು ಮೇ.7ರಂದು ಬಾಗಲೂರಿನ ಗೋಪಾಲಪುರದಲ್ಲಿ ಇಬ್ಬರನ್ನು ವಶಕ್ಕೆ ಪಡೆದು. ಠಾಣೆಗೆ ಕರೆತಂದು ವಿಚಾರಣೆ ನಡೆಸಿದಾಗ, ಅವರು ನೀಡಿದ ಮಾಹಿತಿ ಮೇರೆಗೆ 176 ವಿವಿಧ ಕಂಪನಿಯ ಮೊಬೈಲ್ ಫೋನ್ಗಳನ್ನು ಕಳ್ಳತನ ಮಾಡಿದ ವಿಷಯ ಬೆಳಕಿಗೆ ಬಂದಿತ್ತು. ಈ ಸಂಬಂಧ ಅವುಗಳನ್ನು ಮತ್ತು ಕೃತ್ಯಕ್ಕೆ ಉಪಯೋಗಿಸುತ್ತಿದ್ದ ಒಂದು ಟಾಯೋಟಾ ಇಟಿಯಾಸ್ ಕಾರನ್ನು ವಶಕ್ಕೆ ಪಡೆಯುವಲ್ಲಿ ಪೊಲೀಸರು ಸಫಲರಾಗಿದ್ದಾರೆ. ಈ ಇಬ್ಬರು ವ್ಯಕ್ತಿಗಳ ಬಂಧನದಿಂದ ಉಪ್ಪಾರಪೇಟೆ ಪೊಲೀಸ್ ಠಾಣೆಯ 3 ಮೊಬೈಲ್ ಫೋನ್ ಕಳುವು ಪ್ರಕರಣ ಪತ್ತೆಯಾಗಿರುತ್ತದೆ.