ಬೆಂಗಳೂರು, ಮೇ.19 www.bengaluruwire.com : ಬಿಬಿಎಂಪಿ ವ್ಯಾಪ್ತಿಯಲ್ಲಿ ಆಸ್ತಿ ತೆರಿಗೆ ತಪ್ಪಾಗಿ ಘೋಷಿಸಿಕೊಂಡಿರುವ ಆಸ್ತಿ ಮಾಲೀಕರಿಗೆ ಸರ್ಕಾರದ ಆದೇಶದಂತೆ ಒಂದು ಬಾರಿ ಪರಿಹಾರ ‘One Time Settlement’(OTS) ಅನ್ನು ಆನ್‌ಲೈನ್ ಮೂಲಕ ಪಾವತಿಸಲು ಜುಲೈ 31ರ ಒಳಗೆ ಕಟ್ಟಲು ಅವಕಾಶ ಕಲ್ಪಿಸಿದ್ದರೂ ಅದನ್ನು ಹೆಚ್ಚಿನವರು ಸದುಪಯೋಗಪಡಿಸಿಕೊಳ್ಳುತ್ತಿಲ್ಲ.
ಬಿಬಿಎಂಪಿ ವ್ಯಾಪ್ತಿಯಲ್ಲಿ ಆಸ್ತಿ ತೆರಿಗೆ ತಪ್ಪಾಗಿ ಘೋಷಿಸಿಕೊಂಡಿರುವ ಮಾಲೀಕರಿಗಾಗಿ ‘ಒನ್ ಟೈಮ್ ಸೆಟ್ಲ್ ಮೆಂಟ್’(ಒಟಿಎಸ್) ಯೋಜನೆಯನ್ನು ರಾಜ್ಯ ಸರ್ಕಾರ ಫೆ.22ರಂದು ಅಧಿಸೂಚನೆ ಹೊರಡಿಸಿ ಜಾರಿಗೆ ತಂದಿದ್ದು, ಒಟಿಎಸ್ ಸೌಲಭ್ಯವನ್ನು ಆನ್‌ಲೈನ್ ಮೂಲಕ ಪಡೆದು ಪಾವತಿಸಲು ಅವಕಾಶ ಕಲ್ಪಿಸಲಾಗಿದೆ. ಜುಲೈ 31 ರ ಒಳಗೆ ಅಥವಾ ಸರ್ಕಾರದ ಮುಂದಿನ ಆದೇಶದವರೆಗೆ ಈ ಯೋಜನೆ ಜಾರಿಯಲ್ಲಿರುತ್ತದೆ ಎಂದು ಬಿಬಿಎಂಪಿಯು ಈ ಹಿಂದೆ ತಿಳಿಸಿತ್ತು.
ಒಟಿಎಸ್ ಸೌಲಭ್ಯ ಯಾರಿಗೆಲ್ಲಾ ಅನುಕೂಲ? :
ಅದರಂತೆ ಪಾಲಿಕೆಯ ಆಸ್ತಿ ತೆರಿಗೆಯನ್ನು ಆನ್ ಲೈನ್ ಮೂಲಕ ಪಾವತಿಸುವ ಸಾಪ್ಟ್ ವೇರ್ ನಲ್ಲಿ ಒಟಿಎಸ್ ಅನ್ನು ಪಾವತಿಸಲು ಅವಕಾಶ ಕಲ್ಪಿಸಲಾಗಿದ್ದು, ಎಲ್ಲಾ ನಾಗರೀಕರು ಒಟಿಎಸ್ ನ ಸಂಪೂರ್ಣ ಪ್ರಯೋಜನವನ್ನು ಪಡೆದು ಆನ್‌ಲೈನ್‌ನಲ್ಲಿ ಆಸ್ತಿ ತೆರಿಗೆ ಪಾವತಿಸಬಹುದಾಗಿದೆ. ಬಿಬಿಎಂಪಿಯ ಆನ್‌ಲೈನ್ ಆಸ್ತಿ ತೆರಿಗೆ ಪಾವತಿ ವ್ಯವಸ್ಥೆಯಲ್ಲಿ ಒಟಿಎಸ್ ಆದೇಶವನ್ನು ಜಾರಿಗೆ ತಂದಿದ್ದು, ನಾಗರೀಕರು ಸಂಪೂರ್ಣ ಬಡ್ಡಿ ಮನ್ನಾ, ವಂಚನೆ ಪ್ರಕರಣಗಳಲ್ಲಿ ಶೇ .50 ರಷ್ಟು ದಂಡ ಕಡಿತ ಹಾಗೂ ವಸತಿ ಮತ್ತು ಮಿಶ್ರ ಬಳಕೆ ಪ್ರಕರಣಗಳಲ್ಲಿ ಮಾತ್ರ ಗರಿಷ್ಠ 5 ವರ್ಷಗಳ ಮಿತಿಯ ಪ್ರಯೋಜನವನ್ನು ತಕ್ಷಣವೇ ಪಡೆಯಬಹುದಾಗಿದೆ. ಪಾಲಿಕೆಯ ಅಧಿಕೃತ ವೆಬ್ ಸೈಟ್ https://bbmptax.karnataka.gov.in ಗೆ ಭೇಟಿ ನೀಡಿ, ಒಟಿಎಸ್ ನ ಸಂಪೂರ್ಣ ಪ್ರಯೋಜನವನ್ನು ಆನ್‌ಲೈನ್‌ನಲ್ಲಿ ಪಡೆದು ಪಾವತಿಸಬಹುದಾಗಿದೆ.
ಬಿಬಿಎಂಪಿ ವ್ಯಾಪ್ತಿಯಲ್ಲಿ ಆಸ್ತಿ ತೆರಿಗೆ ಪಾವತಿಸದ 3,63,870 ಸ್ವತ್ತುಗಳಿವೆ. ಈ ಸ್ವತ್ತುಗಳಿಂದ ಪಾಲಿಕೆಗೆ ಆಸ್ತಿ ತೆರಿಗೆ ಮತ್ತು ಸೆಸ್ ಸೇರಿ 711.71 ಕೋಟಿ ರೂ. ಹಣ ಪಾಲಿಕೆಗೆ ಬರಬೇಕಿದೆ. ಅದೇ ರೀತಿ ಕಡಿಮೆ ಆಸ್ತಿ ತೆರಿಗೆ ಘೋಷಿಸಿಕೊಂಡ ಪ್ರಕರಣಗಳಲ್ಲಿ ತೆರಿಗೆ ಪರಿಷ್ಕರಣೆ ಮಾಡಿರುವ 16,657 ಪ್ರಕರಣಗಳು ಕಂಡು ಬಂದಿದ್ದು, ಈ ಸ್ವತ್ತುಗಳಿಂದ ಪಾಲಿಕೆಗೆ 231.77 ಕೋಟಿ ರೂ. ವ್ಯತ್ಯಾಸದ ಬೇಡಿಕೆ ಮೊತ್ತ ಬರಬೇಕಿದೆ. ಒನ್ ಟೈಮ್ ಸೆಟಲ್ಮೆಂಟ್ ಸ್ಕೀಮ್ ಅಡಿಯಲ್ಲಿ ಜನರು ಜುಲೈ 31ರ ಒಳಗಾಗಿ ಬಾಕಿ ಪಾವತಿಸಿದರೆ ಅವರು ಬಡ್ಡಿ ಮನ್ನಾವನ್ನು ಪಡೆಯುತ್ತಾರೆ. ಆದರೆ ಯಾರೂ ಈ ಸೌಲಭ್ಯವನ್ನು ಬಳಸಿಕೊಳ್ಳುತ್ತಿಲ್ಲ ಎಂಬುದು ಈ ಅಂಕಿ ಅಂಶಗಳಿಂದ ತಿಳಿದು ಬರುತ್ತಿದೆ. ಅದೇ ರೀತಿ 2024-25ನೇ ಸಾಲಿನ ಆಸ್ತಿ ತೆರಿಗೆಯನ್ನು ಜುಲೈ 31ರ ಒಳಗೆ ಪೂರ್ಣವಾಗಿ ಪಾವತಿಸಿದರೆ ತೆರಿಗೆಯಲ್ಲಿ ಶೇ.5ರಷ್ಟು ರಿಯಾಯಿತಿ ಪಡೆಯಬಹುದು.
ಪಾಲಿಕೆಯ 8 ವಲಯಗಳ ವ್ಯಾಪ್ತಿಯ ಪೈಕಿ ಮಹದೇವಪುರ ವಲಯದಲ್ಲಿ ಪ್ರಾಪರ್ಟಿ ಟ್ಯಾಕ್ಸ್ ಕಟ್ಟದವರ ಸಂಖ್ಯೆ ಅತಿಹೆಚ್ಚಿದೆ. ಒಟ್ಟು 76,132 ಸ್ವತ್ತುಗಳಿಂದ 174,88 ಕೋಟಿ ರೂ. ಪಾಲಿಕೆ ಖಜಾನೆಗೆ ಬರಬೇಕಿದೆ. ಇನ್ನು ಕಡಿಮೆ ತೆರಿಗೆ ಘೋಷಿಸಿಕೊಂಡು ಪರಿಷ್ಕರಣೆ ತೆರಿಗೆಯಲ್ಲಿ ವ್ಯತ್ಯಾಸದ ಮೊತ್ತ ಪಾವತಿಸಬೇಕಿರುವ ಪ್ರಕರಣ ಬೆಂಗಳೂರು ಪಶ್ಚಿಮ ವಲಯದಲ್ಲಿ ಹೆಚ್ಚಿದೆ. ಒಟ್ಟು 3,481 ಸ್ವತ್ತುಗಳಿಂದ 41.04 ಕೋಟಿ ರೂ. ವ್ಯತ್ಯಾಸದ ಬೇಡಿಕೆ ಮೊತ್ತ ಪಾಲಿಕೆ ಕಂದಾಯ ಇಲಾಖೆಗೆ ಬರಬೇಕಿದೆ.
ಈಗಲೂ ಕಾಲಮಿಂಚಿಲ್ಲ ಒಟಿಎಸ್ ಸೌಲಭ್ಯ ಬಳಸಿ ಬಡ್ಡಿ ಮನ್ನಾ ಪಡೆಯಿರಿ :
“ಬಿಬಿಎಂಪಿ ವ್ಯಾಪ್ತಿಯಲ್ಲಿ ಆಸ್ತಿ ತೆರಿಗೆ ತಪ್ಪಾಗಿ ಘೋಷಿಸಿಕೊಂಡಿರುವ ಆಸ್ತಿ ಮಾಲೀಕರಿಗೆ ಅನುಕೂಲವಾಗಲೆಂದು ಒಟಿಎಸ್ ಸೌಲಭ್ಯ ಕಲ್ಪಿಸಲಾಗಿದೆ. ಆದರೆ ಬಹುತೇಕ ಯಾರೂ ಒಟಿಎಸ್ ಪ್ರಯೋಜನವನ್ನು ಪಡೆಯುತ್ತಿಲ್ಲ. ಸಂಬಂಧಿಸಿದವರು ಜುಲೈ 31ರ ತನಕ ಒಟಿಎಸ್ ಸೌಲಭ್ಯ ಬಳಸಿಕೊಂಡು ಬಡ್ಡಿ ಮನ್ನಾ ಲಾಭ ಪಡೆಯಬಹುದು. ಅಲ್ಲದೆ ಬಿಬಿಎಂಪಿಯು ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡವರಿಗೂ (Property Tax Defaulters) ಮತ್ತು ಕಡಿಮೆ ಆಸ್ತಿ ತೆರಿಗೆ ಘೋಷಿಸಿಕೊಂಡ ತೆರಿಗೆ ಪರಿಷ್ಕರಣೆ (Tax Rivsion) ಪ್ರಕರಣಗಳಿಗೆ ಪ್ರತಿದಿನ ಎಸ್ಎಂಎಸ್ (SMS) ಕಳುಹಿಸುತ್ತಿದೆ ಮತ್ತು ಐವಿಆರ್ ಎಸ್ (IVRS) ಆಧಾರಿತ ಕರೆಗಳನ್ನು ಮಾಡುತ್ತಿದೆ. ಆದರೂ ಸ್ವತ್ತಿನ ಮಾಲೀಕರು ಆಸ್ತಿ ತೆರಿಗೆ ಬಾಕಿ ಪಾವತಿಸುತ್ತಿಲ್ಲ. ಬಿಬಿಎಂಪಿ ಕಾನೂನು ಪ್ರಕಾರ ತೆರಿಗೆ ವಸೂಲಿ ಕ್ರಮವನ್ನು ಸದ್ಯದಲ್ಲೇ ಆರಂಭಿಸಲಿದೆ. ಕೂಡಲೇ ಎಲ್ಲರೂ ಬಾಕಿ ತೆರಿಗೆ ಪಾವತಿಸಿ ಕಾನೂನು ಕ್ರಮ ಎದುರಿಸುವುದನ್ನು ತಪ್ಪಿಸಬಹುದು.”
– ಮುನೀಷ್ ಮುದ್ಗಿಲ್, ಬಿಬಿಎಂಪಿ ಕಂದಾಯ ವಿಶೇಷ ಆಯುಕ್ತರು