ಬೆಂಗಳೂರಿನಲ್ಲಿ ನೀರಿನ ಸಮಸ್ಯೆ ಬಗೆಹರಿಸಲು ಹಾಗೂ ನೀರಿನ ಸಂರಕ್ಷಣೆ ದೃಷ್ಟಿಯಿಂದ ನಗರದಲ್ಲಿನ ಎಲ್ಲಾ ಮಾಲ್‌ಗಳಲ್ಲಿ, ವಾಣಿಜ್ಯ ಸಂಕೀರ್ಣಗಳಲ್ಲಿ, ವಸತಿ ಸಮುಚ್ಚಯಗಳಲ್ಲಿ, ಸರ್ಕಾರಿ ಕಟ್ಟಡಗಳಲ್ಲಿ, ಐಷಾರಾಮಿ ಹೋಟೆಲ್‌ಗಳಲ್ಲಿ, ರೆಸ್ಟೋರೆಂಟ್‌ಗಳಲ್ಲಿ ಹಾಗೂ ಧಾರ್ಮಿಕ ಸ್ಥಳಗಳನ್ನೊಳಗೊಂಡ ಸಾರ್ವಜನಿಕ ಪ್ರದೇಶಗಳಲ್ಲಿ ಬಳಸುವ ನಲ್ಲಿಗಳಲ್ಲಿ ಕಡ್ಡಾಯವಾಗಿ ಏರಿಯೇಟರ್ (Aerator- ನೀರಿನ ಪೂರೈಕೆ ಮಿತಿಗೊಳಿಸುವ ಪುಟ್ಟ ಸಾಧನ) ಅಳವಡಿಸುವುದನ್ನು ಬೆಂಗಳೂರು ಜಲಮಂಡಳಿ ಖಡ್ಡಾಯ ಮಾಡಿತ್ತು. ಹೀಗಾಗಿ ಈತನಕ ಬೆಂಗಳೂರು ನಗರದಲ್ಲಿ ಸುಮಾರು 6,08,448 ನಲ್ಲಿಗಳಲ್ಲಿ ಫ್ಲೋ ರಿಸ್ಟ್ರಿಕ್ಟರ್ (Flow Restrictor) ಸಾಧನವನ್ನು ಅಳವಡಿಸಿಕೊಳ್ಳಲಾಗಿದೆ.
ಹೆಚ್ಚಿನ ಪ್ರಮಾಣದಲ್ಲಿ ನೀರು ಬಳಕೆ ಮಾಡುವ ಸ್ಥಳಗಳಲ್ಲಿ ಮಂಡಳಿಯ ವತಿಯಿಂದಲೇ ಆದ್ಯತೆಯ ಮೇರೆಗೆ ಏರಿಯೇಟರ್ ಅಥವಾ ಫ್ಲೋ ರಿಸ್ಟ್ರಿಕ್ಟರ್ ಸಾಧನವನ್ನು ಅಳವಡಿಸಿ ಅದರ ವೆಚ್ಚವನ್ನು ಆಯಾ ಗ್ರಾಹಕರ ಮಾಯೆಯ ಬಿಲ್ಲಿನಲ್ಲಿ ಸೇರಿಸಲಾಗುವುದೆಂದು ಆದೇಶಿಸಲಾಗಿರುತ್ತದೆ. ಈ ಹಿಂದೆ ಮಾರ್ಚ್ 21ರಿಂದ ಅನಗತ್ಯ ನೀರು ಪೋಲು ತಡೆಗೆ ಮನೆಗಳಲ್ಲಿ ಸ್ವಯಂಪ್ರೇರಿತವಾಗಿ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿನ ನಲ್ಲಿಗಳಿಗೆ ಖಡ್ಡಾಯವಾಗಿ ಏರಿಯೇಟರ್ ಹಾಕುವುದನ್ನು ಜಲಮಂಡಳಿ ಖಡ್ಡಾಯ ಮಾಡಿತ್ತು. ಇದಕ್ಕಾಗಿ ಮೊದಲಿಗೆ 30 ಗಡುವು, ಆನಂತರ ಏಪ್ರಿಲ್ 7 ಹಾಗೂ ಬಳಿಕ ಏಪ್ರಿಲ್ 30ರ ರ ಒಳಗೆ ಈ ಸಾಧನಗಳನ್ನು ನಲ್ಲಿಗಳಲ್ಲಿ ಅಳವಡಿಸಲು ನೀಡಿದ್ದ ಅವಕಾಶವನ್ನು ಆನಂತರ ಮೇ 7ರ ತನಕ ವಿಸ್ತರಣೆ ಮಾಡಲಾಗಿತ್ತು. ಅದಾದ ಬಳಿಕ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (BWSSB) ಜಲಮಂಡಳಿ ಕಾಯ್ದೆ-1964 ರ ಕಲಂ-53 ರಂತೆ ಮಂಡಳಿಯು ಕಾನೂನು ಕ್ರಮದಂತೆ ದಂಡ ವಿಧಿಸುವ ಎಚ್ಚರಿಕೆ ನೀಡಿತ್ತು.
ನಲ್ಲಿಗಳಿಗೆ ಏರಿಯೇಟರ್ ಅಳವಡಿಸದಿದ್ದರೆ ದಂಡ ಪ್ರಯೋಗ :
ನೀರು ಸರಬರಾಜು ಮಾಡುತ್ತಿರುವ ನೀರಿನ ಪ್ರಮಾಣದಲ್ಲಿ ಶೇ.50 ರವರೆಗೆ ಕಡಿತಗೊಳಿಸಲಾಗುವುದು ಹಾಗೂ ಕಲಂ-109 ರಂತೆ 5,000 ರೂ.ಗಳ ದಂಡ ವಿಧಿಸಲು ಅವಕಾಶವಿದೆ. ಈ ಉಲ್ಲಂಘನೆಯು ಮರುಕಳಿಸಿದ್ದಲ್ಲಿ ದಂಡ ಮೊತ್ತ ಐದು ಸಾವಿರ ರೂ. ಜೊತೆಗೆ ಹೆಚ್ಚುವರಿಯಾಗಿ ಪ್ರತಿದಿನ 500 ರೂ. ನಂತೆ ದಂಡ ವಿಧಿಸಲಾಗುವುದು. ಈ ಕ್ರಮವನ್ನು ಈಗಾಗಲೇ ನಿರ್ವಹಿಸುತ್ತಿರುವ ಗ್ರಾಹಕರುಗಳಿಗೆ ಜಲಮಂಡಳಿಯ ವತಿಯಿಂದ “ಪರಿಸರ ಸ್ನೇಹಿ ಹಸಿರು ಸ್ಟಾರ್‌ಬಳಕೆದಾರ” ರೆಂಬ ಪ್ರಮಾಣ ಪತ್ರವನ್ನು ಜಲಮಂಡಳಿಯು ನೀಡುತ್ತಿದೆ. ಮಾರ್ಚ್ 22ರಂದು ನಗರದ ಖಾಸಗಿ ಹೋಟೆಲ್ ನಲ್ಲಿ ನೀರಿನ ಮಿತ ಬಳಕೆ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಅಲ್ಲಿನ ನಲ್ಲಿಗಳಿಗೆ ಏರಿಯೇಟರ್ ಹಾಕುವ ಮೂಲಕ ಹೋಟೆಲ್ ಮತ್ತು ರೆಸ್ಟೋರೆಂಟ್ ಗಳಲ್ಲಿ ಏರಿಯೇಟರ್ ಅಳವಡಿಸುವ ಕುರಿತ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿತ್ತು.
ನಲ್ಲಿಗಳಲ್ಲಿ ಏರಿಯೇಟರ್ ಅಳವಡಿಸುವುದರಿಂದ ಶೇ.60 ರಿಂದ 85ರಷ್ಟು ನೀರಿನ ಉಳಿತಾಯ ಸಾಧ್ಯ. ಕರೋನಾ ಸಾಂಕ್ರಾಮಿಕ ರೋಗದ ಸಂದರ್ಭದಲ್ಲಿ ಮುನ್ನೆಚ್ಚರಿಕೆಯ ಕ್ರಮವಾಗಿ ಮುಖಕ್ಕೆ ಮಾಸ್ಕ್ ಹಾಗೂ ಕೈಗೆ ಸ್ಯಾನಿಟೈಸರು ಬಳಸಿದಂತೆ “ವಾಟರ್ ಟ್ಯಾಪ್ ಮಾಸ್ಕ್” ಅಳವಡಿಸುವುದು ಸುಲಭವಾಗಿದೆ. ಅಗತ್ಯಬಿದ್ದರೆ ಮಾತ್ರ ನಲ್ಲಿ ರಿಪೇರಿ ಮಾಡುವವರ ಸಹಾಯ ಅಗತ್ಯವಾಗಿರುತ್ತದೆ.
ನಗರದಲ್ಲಿ ನೀರಿನ ಸಮಸ್ಯೆ ಉಂಟಾಗದಂತೆ ಮಂಡಳಿಯು ಸಮರ್ಪಕವಾಗಿ ನೀರು ಮತ್ತು ಒಳಚರಂಡಿ ವ್ಯವಸ್ಥೆಯ ಸೇವೆ ಸಲ್ಲಿಸುತ್ತಿದ್ದು, ನಾಗರೀಕರ ಹಿತದೃಷ್ಟಿಯಿಂದ ಮಂಡಳಿಯು ನೀರಿನ ಸಂರಕ್ಷಣೆಯ ಬಗ್ಗೆ ಅನೇಕ ಮಹತ್ವದ ಜಾಗೃತಿ ಕಾರ್ಯಕ್ರಮಗಳನ್ನು ಕೈಗೊಳ್ಳತ್ತಲೇ ಇದೆ. ಈಗಾಗಲೇ ಮಂಡಳಿಯ ವ್ಯಾಪ್ತಿಯ ಎಲ್ಲಾ ಪ್ರದೇಶಗಳಲ್ಲಿ ಎಲೆಕ್ಟ್ರಿಕ್ ವಾಹನಗಳ ಮುಖಾಂತರ ನೀರಿನ ಸಂರಕ್ಷಣೆ, ಮಿತಬಳಕೆ, ಮಳೆ ನೀರು ಕೊಯ್ಲು ಪದ್ಧತಿ ಹಾಗೂ ಸಂಸ್ಕರಿಸಿದ ನೀರನ್ನು ಪುನರ್ ಬಳಸಲು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮವನ್ನು ಕೈಗೊಂಡಿದೆ. ಇತ್ತೀಚಿನ ದಿನಗಳಲ್ಲಿ ಅಂತರ್ಜಲ ಮಟ್ಟ ಕುಸಿಯುತ್ತಿರುವುದರಿಂದ ಸಾಕಷ್ಟು ಕೊಳವೆ ಬಾವಿಗಳು ಬತ್ತಿಹೋಗುತ್ತಿದ್ದು, ನೀರಿನ ಸಮಸ್ಯೆ ಬೇಸಿಗೆ ಸಮಯದಲ್ಲಿ ಉಂಟಾಗುತ್ತಿದೆ. ಈ ಸಮಸ್ಯೆಗಳನ್ನು ಬಗೆಹರಿಸಲು ಬಿಡಬ್ಲ್ಯುಎಸ್ ಎಸ್ ಬಿ ಜೊತೆಗೆ ಸಾರ್ವಜನಿಕರ ಹಾಗೂ ಸಂಘ ಸಂಸ್ಥೆಗಳ ಸಹಕಾರ ಮಹತ್ವದಾಗಿರುತ್ತದೆ.
1000 ಲೀ. ನೀರಿನ ಸರಬರಾಜಿಗೆ 95 ರೂ. ವೆಚ್ಚ :
ಬೆಂಗಳೂರು ಜಲಮಂಡಳಿಯು 100 ಕಿ.ಮೀ ದೂರದಿಂದ ಕಾವೇರಿ ನೀರನ್ನು ಬೆಂಗಳೂರು ನಗರಕ್ಕೆ ವಿವಿಧ ಹಂತಗಳಲ್ಲಿ ನಿರಂತರವಾಗಿ ಸರಬರಾಜು ಮಾಡುತ್ತಿದೆ. ಮಂಡಳಿಯು 1000 ಲೀ. ನೀರನ್ನು ಬೆಂಗಳೂರಿನ ಮನೆಗಳಿಗೆ ಸರಬರಾಜು ಮಾಡಲು ಬಿಡಬ್ಲ್ಯುಎಸ್ಎಸ್ ಬಿಗೆ ಸುಮಾರು 95 ರೂ. ವೆಚ್ಚವಾಗುತ್ತದೆ. ಆದರೆ ಸಾರ್ವಜನಿಕರಿಗೆ ಕೇವಲ 45 ರೂ. ದರದಲ್ಲಿ ಕಾವೇರಿ ನೀರನ್ನು ಒದಗಿಸುತ್ತಿದೆ.
ಅನಧಿಕೃತವಾಗಿ ಒಳಚರಂಡಿ ಸಂಪರ್ಕ ನೀಡಿದ್ದರೆ ಕಠಿಣ ಕ್ರಮ :
ತ್ಯಾಜ್ಯ ನೀರಿನ ಸಂಸ್ಕರಣೆಯ ನಂತರದ ನೀರಿನ ಪುನರ್‌ಬಳಕೆಯಿಂದ ಕಾವೇರಿ ನೀರಿನ ಅವಲಂಬನೆ ಕಡಿಮೆ ಮಾಡಬಹುದಾಗಿದ್ದು, ಇದು ನಗರದ ನಾಗರೀಕರ ಜವಾಬ್ದಾರಿಯುತ ನಡೆಯಾಗಿರುತ್ತದೆ. ಈ ನಿಟ್ಟಿನಲ್ಲಿ ಮಂಡಳಿಯು ತ್ಯಾಜ್ಯ ನೀರನ್ನು ಸಂಸ್ಕರಿಸಿ ಪುನರ್ ಬಳಸಲು ಉತ್ತೇಜನ ನೀಡುತ್ತಿದ್ದು, ಮಂಡಳಿಯ ಕಾಯಿದೆ 1964 ಕಲಂ-65 ಮತ್ತು 72ರ ನಡುವೆ ಬಿಬಿಎಂಪಿ ವ್ಯಾಪ್ತಿಯ ನಾಗರೀಕರು ಜಲಮಂಡಳಿಯ ನೀರು ಮತ್ತು ಒಳಚರಂಡಿ ಸಂಪರ್ಕವನ್ನು ಪಡೆದು, ಕಟ್ಟಡದ ಒಳಚರಂಡಿ ನೀರನ್ನು ಕಡ್ಡಾಯವಾಗಿ ಮಂಡಳಿಯ ಒಳಚರಂಡಿ ಕೊಳವೆ ಮಾರ್ಗಕ್ಕೆ ಹರಿಸಬೇಕಾಗಿರುತ್ತದೆ. ದೊಡ್ಡಗಾತ್ರದ ಕಟ್ಟಡದವರು ನಿಯಾಮಾನುಸಾರ ಎಸ್.ಟಿ.ಪಿ ಗಳನ್ನು ಅಳವಡಿಸಿಕೊಂಡು ಸಂಸ್ಕರಿಸಿದ ನೀರನ್ನು ತಮ್ಮ ಕಟ್ಟಡದಲ್ಲಿ ಗೃಹಬಳಕೆಗೆ ಹೊರತುಪಡಿಸಿ ಇನ್ನಿತರೆ ಅನ್ಯ ಉದ್ದೇಶಗಳಿಗೆ ಬಳಸಬೇಕಾಗಿರುತ್ತದೆ.
ನಗರದ ಕೆಲವು ದೊಡ್ಡಗಾತ್ರದ ಕಟ್ಟಡದ ಗ್ರಾಹಕರು ಮಂಡಳಿಯ ನಿಯಮಗಳನ್ನು ಉಲ್ಲಂಘಿಸಿ ಅನಧಿಕೃತವಾಗಿ ಒಳಚರಂಡಿ ನೀರನ್ನು ಮಂಡಳಿಯ ಒಳಚರಂಡಿ ಕೊಳವೆ ಮಾರ್ಗಕ್ಕೆ ಹಾಗೂ ಮಳೆ ನೀರು ಕಾಲುವೆಗೆ ಹರಿಸುತ್ತಿರುವುದು ಕಂಡುಬಂದಿರುತ್ತದೆ. ಈ ರೀತಿಯಾಗಿ ಕಾಯ್ದೆಯನ್ನು ಉಲ್ಲಂಘನೆ ಮಾಡಿ ಅನಧಿಕೃತವಾಗಿ ಒಳಚರಂಡಿ ನೀರಿನ ಸಂಪರ್ಕ ಪಡೆದಿದ್ದಲ್ಲಿ ನಿಗಧಿತ ದಿನಾಂಕದೊಳಗೆ ಮಂಡಳಿಗೆ ಅರ್ಜಿ ಸಲ್ಲಿಸಿ ಅನಧಿಕೃತ ಸಂಪರ್ಕವನ್ನು ನಿಯಮಾನುಸಾರ ಅಧಿಕೃತ ಮಾಡಿಕೊಳ್ಳಬೇಕು ಎಂದು ಜಲಮಂಡಳಿಯು ತಿಳಿಸಿದೆ. ನಿಗದಿತ ಸಮಯದ ನಂತರ ಒಳಚರಂಡಿಗೆ ನೀರನ್ನು ಅನಧಿಕೃತವಾಗಿ ಮಂಡಳಿಯ ಒಳಚರಂಡಿ ಕೊಳವೆ ಮಾರ್ಗಕ್ಕೆ ಅಥವಾ ಮಳೆ ನೀರು ಕಾಲುವೆಗೆ ಹರಿಸುತ್ತಿರುವುದು ಕಂಡುಬಂದಲ್ಲಿ ಅಂತಹ ಪ್ರಕರಣಕ್ಕೆ ಮಂಡಳಿಯ ಕಾಯಿದೆ -1964 ಕಲಂ-53, 72, 85 ಹಾಗೂ 109 ರಂತೆ ಒಂದು ವೇಳೆ ನೀರಿನ ಸಂಪರ್ಕವನ್ನು ಸಹ ಪಡೆದಿದ್ದಲ್ಲಿ ಸಂಪರ್ಕವನ್ನು ಕಡಿತಗೊಳಿಸುವುದಲ್ಲದೇ ನಿಯಮಾನುಸಾರ ಕಾನೂನಿನಂತೆ ಮೊಕದ್ದಮೆ ಹೂಡಿ ದಂಡ ವಿಧಿಸಲಾಗುವುದು ಎಂಬ ಕಾನೂನು ಜಾರಿಯಲ್ಲಿದೆ. ಹೀಗಾಗಿ ನಗರದ ನಾಗರೀಕರು ಈ ಬಗ್ಗೆ ಮುನ್ನೆಚ್ಚರಿಕೆ ವಹಿಸುವುದು ಸೂಕ್ತವಾಗಿದೆ.
“ಬೆಂಗಳೂರು ವೈರ್” ಡಿಜಿಟಲ್ ವೆಬ್ ನ್ಯೂಸ್ ಪೋರ್ಟೆಲ್ಲಿನ ಸೋಶಿಯಲ್ ಮೀಡಿಯಾ ಪೇಜ್ ಹಾಗೂ Google News ಗಳಿಗೆ ಉಚಿತವಾಗಿ Subscribe ಆಗಲು Facebook, Telegram, Twitter, Dailyhunt, Youtube, Whatsup Channel ಗೆ ಜಾಯಿನ್ ಆಗಲು ಇವುಗಳ ಲಿಂಕ್ ಮೇಲೆ ಕ್ಲಿಕ್ ಮಾಡಿ.