ಬೆಂಗಳೂರು, ಮೇ.18 www.bengaluruwire.com : ನಗರದ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕ್ರಿಕೆಟ್ ಪಂದ್ಯಾವಳಿಗಳು ನಡೆಯುವ ಸಮಯದಲ್ಲಿ ಕಳಪೆ ಆಹಾರ ಪೂರೈಕೆ ಬಗ್ಗೆ ಸಾಕಷ್ಟು ದೂರುಗಳು ಬಂದ ಹಿನ್ನಲೆಯಲ್ಲಿ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ ಆಯುಕ್ತರು, ಇನ್ನು ಮುಂದೆ ಪಂದ್ಯಾವಳಿಗಳು ನಡೆಯುವ ಮುನ್ನ ಅಲ್ಲಿ ವಿತರಿಸುವ ಆಹಾರ, ಕುಡಿಯುವ ನೀರನ್ನು ಪ್ರಯೋಗಾಲಯ ಪರೀಕ್ಷೆಗೆ ಒಳಪಡಿಸಬೇಕು ಎಂದು ಆದೇಶಿಸಿದ್ದಾರೆ.
ಈ ಹಿಂದೆ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕ್ರಿಕೆಟ್ ಪಂದ್ಯಾವಳಿಗಳು ನಡೆಯುವ ಸಂದರ್ಭದಲ್ಲಿ ಹಲವು ಬಾರಿ ಕಳಪೆ ಆಹಾರ ವಿತರಿಸಿರುವ ಕುರಿತು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆಗೆ ದೂರುಗಳು ಬಂದಿದೆ. ಈ ಹಿನ್ನಲೆಯಲ್ಲಿ ಆಹಾರ ಪೂರೈಕೆಯಲ್ಲಿ ನೈರ್ಮಲ್ಯ, ಶುಚಿತ್ವ ಮತ್ತು ಗುಣಮಟ್ಟಗಳನ್ನು ಕಾಪಾಡಿಕೊಳ್ಳುವ ಸಂಬಂಧ ಪಂದ್ಯಾವಳಿಗಳ ಮುಂಚಿತವಾಗಿ ಸಾರ್ವಜನಿಕರಿಗೆ ವಿತರಿಸಲಾಗುವ ಆಹಾರ ಪದಾರ್ಥಗಳನ್ನು ಹಾಗೂ ಕುಡಿಯುವ ನೀರು ಇತ್ಯಾದಿಗಳನ್ನು ಪ್ರಯೋಗಾಲಯದ ವಿಶ್ಲೇಷಣೆಗೊಳಪಡಿಸಿ, ವಿಶ್ಲೇಷಣಾ ವರದಿಯನ್ನು ಇಲಾಖೆಗೆ ಸಲ್ಲಿಸುವಂತೆ ಆಯುಕ್ತರು ತಮ್ಮ ಆದೇಶದಲ್ಲಿ ತಿಳಿಸಿದ್ದಾರೆ.
ಮೇ.16ರಂದು ಈ ಬಗ್ಗೆ ಇಲಾಖೆಯ ಆಯುಕ್ತರು, ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿನ ಕರ್ನಾಟಕ ಸ್ಟೇಟ್ ಕ್ರಿಕೇಟ್ ಅಸೋಸಿಯೇಷನ್ಸ್ ಅಧ್ಯಕ್ಷರು ಮತ್ತು ಕಾರ್ಯದರ್ಶಿಗಳಿಗೆ ಈ ಸೂಚನೆ ನೀಡಿದ್ದಾರೆ.
ಮೇ.12ರಂದು ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಕ್ರಿಕೆಟ್ ಪಂದ್ಯಾವಳಿಯ ಸಮಯದಲ್ಲಿ, ವ್ಯಕ್ತಿಯೊಬ್ಬರು ಕ್ರೀಡಾಂಗಣದ ಕ್ಯಾಂಟಿನ್‌ನಿಂದ ಕಳಪೆ ಆಹಾರ ಸೇವಿಸಿ ಅಸ್ವಸ್ಥಗೊಂಡಿರುವ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾಗಿರುತ್ತು. ಹಾಗೂ ಈಗಾಗಲೇ ಹಲವು ಬಾರಿ ಪಂದ್ಯಾವಳಿಗಳ ಸಂದರ್ಭದಲ್ಲಿ ಕಳಪೆ ಆಹಾರ ವಿತರಿಸಿರುವ ಕುರಿತು ದೂರುಗಳು ಈ ಕಛೇರಿಗೆ ಸ್ವೀಕೃತವಾಗಿರುತ್ತದೆ ಎಂದು ಇಲಾಖೆ ಆಯುಕ್ತರು ಕರ್ನಾಟಕ ಸ್ಟೇಟ್ ಕ್ರಿಕೇಟ್ ಅಸೋಸಿಯೇಷನ್ಸ್ ಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.
ಟಿ-20, ಟೆಸ್ಟ್ ಕ್ರಿಕೆಟ್, ಏಕದಿನದ ಸಾಕಷ್ಟಯ ಪಂದ್ಯಾವಳಿಗಳು ನಡೆದಾಗ ಲಕ್ಷಾಂತರ ಕ್ರೀಡಾಪ್ರೇಮಿಗಳು ಕ್ರೀಡಾಂಗಣಕ್ಕೆ ಬಂದು ಮ್ಯಾಚ್ ಗಳನ್ನು ವೀಕ್ಷಿಸುತ್ತಾರೆ. ಕ್ರೀಡಾಭಿಮಾನಿಗಳ ಆರೋಗ್ಯದ ಹಿತದೃಷ್ಟಿಯಿಂದ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆಯ ಈ ಆದೇಶ ಮಹತ್ವದ್ದಾಗಿದೆ.