ಬೆಂಗಳೂರು, ಮೇ.15 www.bengaluruwire.com : ಹೆಬ್ಬಾಳ ಮೇಲ್ಸೇತುವೆ (Hebbal Flyover)ಯಲ್ಲಿ ಏ.17ರಿಂದ ಕೆ.ಆರ್.ಪುರ ಲೂಪ್ ಸೇರುವ ಟ್ರ್ಯಾಕ್ ನಲ್ಲಿ ದ್ವಿಚಕ್ರ ವಾಹನಗಳನ್ನು ಹೊರತುಪಡಿಸಿ ಎಲ್ಲಾ ಮಾದರಿಯ ವಾಹನಗಳ ಸಂಚಾರವನ್ನು ನಿಷೇಧಿಸಲಾಗಿತ್ತು. ಇದೀಗ ನಿನ್ನೆಯಿಂದ ಎಲ್ಲಾ ಮಾದರಿಯ ವಾಹನಗಳ ಓಡಾಟಕ್ಕೆ ಅವಕಾಶವಿಲ್ಲ ಎಂದು ನಗರ ಸಂಚಾರ ವಿಭಾಗ ಪೊಲೀಸರು ತಿಳಿಸಿದ್ದಾರೆ.
ನಗರದಿಂದ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಸಂಪರ್ಕಿಸುವ ಹೆಬ್ಬಾಳ ಮೇಲ್ಸೇತುವೆಗೆ ಎರಡು ಹೊಸ ಟ್ರ್ಯಾಕ್ (Tracks)ಗಳನ್ನು ಸೇರಿಸಲು ಬಿಡಿಎ ಈಗಾಗಲೇ ಕಾಮಗಾರಿಯನ್ನು ಆರಂಭಿಸಿದೆ. ಏ.14 ರಿಂದ ಕೆ.ಆರ್.ಪುರಂ ಕಡೆಯಿಂದ ಬರುವ ಲೂಪ್ ಹೆಬ್ಬಾಳ ಫ್ಲೈಓವರ್ ಮುಖ್ಯ ಟ್ರ್ಯಾಕ್ಗೆ ಸೇರಿಸುವ ಎರಡು ಲಿಂಕ್ ಸ್ಪ್ಯಾನ್ (Link Span) ಗಳನ್ನು ತೆಗೆದುಹಾಕಲಾಗುತ್ತಿರುವುದರಿಂದ ರ್ಯಾಂಪ್ ಮತ್ತು ಮುಖ್ಯ ಟ್ರ್ಯಾಕಿಗೆ ಸಂಪರ್ಕ ಇಲ್ಲದಾಗುವುದರಿಂದ ಯಾವುದೇ ರೀತಿಯ ವಾಹನ ಸಂಚಾರವು ಸಾಧ್ಯವಿಲ್ಲ. ಈ ಹಿನ್ನೆಲೆಯಲ್ಲಿ, ಕಾಮಗಾರಿ ಮುಕ್ತಾಯವಾಗುವವರೆಗೆ ಸಾರ್ವಜನಿಕರ ಸುಗಮ ಸಂಚಾರಕ್ಕಾಗಿ ಸಂಚಾರ ವಿಭಾಗದಿಂದ ಈ ಕೆಳಕಂಡ ಮಾರ್ಪಾಡುಗಳನ್ನು ಮಾಡಲಾಗಿದೆ.
ನಿರ್ಬಂಧಿಸಲಾದ ವಾಹನಗಳ ಸಂಚಾರಕ್ಕೆ ಪರ್ಯಾಯ ವ್ಯವಸ್ಥೆ :
1. ನಾಗವಾರ (ಹೊರವರ್ತುಲ ರಸ್ತೆ) ಕಡೆಯಿಂದ ನಗರದ ಒಳಗೆ ಮೇಖ್ರಿ ಸರ್ಕಲ್ ಮುಖಾಂತರ ಸಂಚರಿಸುವ ವಾಹನಗಳು
ಹೆಬ್ಬಾಳ ಸರ್ಕಲ್ನಲ್ಲಿ ಫ್ಲೈಓವರ್ ಕೆಳಗಿನಿಂದ ಬಲ ತಿರುವು- ಕೊಡಿಗೇಹಳ್ಳಿ ಜಂಕ್ಷನ್ -ಯೂ ಟರ್ನ್ -ಸರ್ವಿಸ್ ರಸ್ತೆಯಿಂದ ಹೆಬ್ಬಾಳ ಫ್ಲೈಓವರ್ನ ರ್ಯಾಂಪ್ –
2. ಕೆ.ಆರ್. ಪುರಂ, ನಾಗವಾರ ಕಡೆಯಿಂದ ನಗರದ ಕಡೆಗೆ ಬರುವ ವಾಹನಗಳು
* ಐ.ಓ.ಸಿ.-ಮುಕುಂದ ಥಿಯೇಟರ್ ರಸ್ತೆ,
* ಲಿಂಗರಾಜಪುರ ಮೇಲ್ಸೇತುವೆ ಮಾರ್ಗ,
* ನಾಗವಾರ ಟ್ಯಾನರಿ ರಸ್ತೆ ಮಾರ್ಗವಾಗಿ
3. ಹೆಗಡೆನಗರ-ಥಣಿಸಂದ್ರ ಕಡೆಯಿಂದ ಬರುವ ವಾಹನಗಳು ಜಿ.ಕೆ.ವಿಕೆ-ಜಕ್ಕೂರು ರಸ್ತೆ ಮೂಲಕ ನಗರ ಪ್ರವೇಶಿಸಬಹುದಾಗಿದೆ.
4. ಕೆ.ಆರ್.ಪುರಂ ಕಡೆಯಿಂದ ಹೆಬ್ಬಾಳ ಮಾರ್ಗವಾಗಿ ಯಶವಂತಪುರ ಕಡೆಗೆ ಚಲಿಸುವ ವಾಹನಗಳು ಹೆಬ್ಬಾಳ ಫ್ಲೈಓವರ್- ಬಿ.ಇ.ಎಲ್. ಸರ್ಕಲ್ ತಲುಪಿ – ಸದಾಶಿವನಗರ ಜಂಕ್ಷನ್ನಲ್ಲಿ – ಐ.ಐ.ಎಸ್.ಸಿ. ಮುಖಾಂತರ ಚಲಿಸಬಹುದಾಗಿದೆ.
5. ಕೆ.ಆರ್.ಪುರಂ, ಹೆಣ್ಣೂರು, ಹೆಚ್.ಆರ್.ಬಿ.ಆರ್. ಲೇಔಟ್, ಕೆ.ಜಿ.ಹಳ್ಳಿ, ಬಾಣಸವಾಡಿ ಕಡೆಯಿಂದ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಕಡೆ ಸಂಚರಿಸುವ ವಾಹನಗಳು ಹೆಣ್ಣೂರು-ಬಾಗಲೂರು ರಸ್ತೆಯ ಮುಖಾಂತರ ಅಂತರಾಷ್ಟ್ರೀಯ ವಿಮಾನ ನಿಲ್ದಾಣವನ್ನು ತಲುಪಬಹುದಾಗಿದೆ. ಸಾರ್ವಜನಿಕರು ಸಹಕರಿಸಲು ನಗರ ಸಂಚಾರ ಪೊಲೀಸರು ಕೋರಿದ್ದಾರೆ.
ಏರ್ ಪೋರ್ಟ್ ಸಂಪರ್ಕ ರಸ್ತೆಯಲ್ಲಿ ವೇಗಮಿತಿ ಮೀರಿದರೆ ದಂಡ :
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಸಂಪರ್ಕಿಸುವ ಹೆದ್ದಾರಿಯಲ್ಲಿ ರಸ್ತೆ ಅಪಘಾತಗಳ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಏರಿಕೆ ಆಗುತ್ತಿದೆ. ಆದ್ದರಿಂದ ಏರ್‌ಪೋರ್ಟ್ ರಸ್ತೆಯಲ್ಲಿ ವಾಹನಗಳ ಗರಿಷ್ಟ ವೇಗ ಮಿತಿ ಗಂಟೆಗೆ 80 ಕಿ. ಮೀ. ಮೀರುವಂತಿಲ್ಲ ಎಂದು ಬೆಂಗಳೂರು ಸಂಚಾರ ಪೊಲೀಸರು ಹೇಳಿದ್ದಾರೆ. ಈ ವೇಗ ಮಿತಿಯನ್ನು ದಾಟಿ ಮುನ್ನುಗ್ಗುವ ವಾಹನಗಳಿಗೆ ದಂಡದ ಬರೆ ಹಾಕಲು ಇಲಾಖೆ ಮುಂದಾಗಿದೆ. ವಾಹನಗಳ ವೇಗ ಪರಿಶೀಲಿಸುವ ಕ್ಯಾಮರಾಗಳನ್ನು ಪೊಲೀಸರು ಅಳವಡಿಕೆ ಮಾಡಿದ್ದಾರೆ. ವಾಹನಗಳನ್ನು ಅತಿ ವೇಗವಾಗಿ ಚಾಲನೆ ಮಾಡಿದರೆ ಕ್ಯಾಮರಾಗಳು ಸ್ವಯಂ ಚಾಲಿತವಾಗಿ ಸೆರೆ ಹಿಡಿಯಲಿದ್ದು, ಇಂಥಾ ವಾಹನ ಮಾಲೀಕರಿಗೆ ದಂಡ ವಿಧಿಸಲು ಪೊಲೀಸರು ಮುಂದಾಗಿದ್ದಾರೆ.