ಬೆಂಗಳೂರು ಮೇ.15, www.bengaluruwire.com : ಕಾವೇರಿ 5 ನೇ ಹಂತದ ಕಾಮಗಾರಿ ಪೂರ್ಣಗೊಳ್ಳುವ ಅಂತಿಮ ಹಂತದಲ್ಲಿದ್ದು, ಜಲಮಂಡಳಿ ನೀರು ಸರಬರಾಜು ಮಾಡಲು ಸಿದ್ದತೆ ನಡೆಸಿದೆ. ಈ 110 ಗ್ರಾಮಗಳಲ್ಲಿ ಕಾವೇರಿ ಸಂಪರ್ಕ ನೀಡಲು ಜನರ ಮನೆಬಾಗಿಲಿಗೆ ಜಲಮಂಡಳಿ ತೆರಳಲಿದೆ ಎಂದು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಅಧ್ಯಕ್ಷರಾದ ಡಾ. ರಾಮ್ ಪ್ರಸಾತ್ ಮನೋಹರ್ ತಿಳಿಸಿದರು.
ಕಾವೇರಿ-5ನೇ ಹಂತದ ಕಾಮಗಾರಿ ನಡೆಯುತ್ತಿರುವ ಹಾರೋಹಳ್ಳಿ ಸ್ಥಳಕ್ಕೆ ಬುಧವಾರ ಭೇಟಿ ನೀಡಿದ ಅವರು ಪರಿಶೀಲನೆ ನಡೆಸಿ ಅಧಿಕಾರಿಗಳೊಂದಿಗೆ ಮಾತನಾಡುತ್ತಾ, ಹಲವು ಸಲಹೆ, ಸೂಚನೆಗಳನ್ನು ನೀಡಿದರು.
110 ಗ್ರಾಮಗಳಲ್ಲಿ ಕಾವೇರಿ ನೀರಿನ ಸಂಪರ್ಕ ಪಡೆಯಲು ಪ್ರೋತ್ಸಾಹಿಸಿ :
ಕಾವೇರಿ 5 ನೇ ಹಂತದ ಅಂತಿಮ ಹಂತದ ಕಾಮಗಾರಿಗಳು ನಡೆಯುತ್ತಿವೆ. ಇನ್ನು ಕೆಲವೇ ವಾರಗಳಲ್ಲಿ ಈ ಕಾಮಗಾರಿಗಳು ಪೂರ್ಣಗೊಳ್ಳಲಿದ್ದು ನೀರು ಸರಬರಾಜು ಪ್ರಾರಂಭವಾಗಲಿದೆ. ಅದಕ್ಕೂ ಮುನ್ನ ನೀರಿನ ಸಮರ್ಪಕ ಸರಬರಾಜು ಮಾಡುವ ವ್ಯವಸ್ಥೆ ಕಲ್ಪಿಸುವುದು ಹಾಗೂ ಹೊಸ ಕನೆಕ್ಷನ್‌ಗಳನ್ನ ನೊಂದಾಯಿಸಿಕೊಳ್ಳುವ ಪ್ರಕ್ರಿಯೆ ನಡೆಸಬೇಕಾಗಿದೆ. ಈ 5 ನೇ ಹಂತದ ಯೋಜನೆಯಿಂದ ಬೆಂಗಳೂರು ನಗರಕ್ಕೆ 750 ಎಂ.ಎಲ್.ಡಿ ಯಷ್ಟು ಹೆಚ್ಚಿನ ನೀರು ಲಭ್ಯವಾಗಲಿದೆ. ಇದನ್ನ ಸಮರ್ಪಕವಾಗಿ ಬಳಕೆ ಮಾಡುವ ನಿಟ್ಟಿನಲ್ಲಿ ಈ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಈ ನಿಟ್ಟಿನಲ್ಲಿ ಅಧಿಕಾರಿಗಳು 110 ಗ್ರಾಮಗಳಲ್ಲಿ ಎಲ್ಲರೂ ಕಾವೇರಿ ನೀರಿನ ಸಂಪರ್ಕ ಪಡೆಯಲು ಪ್ರೋತ್ಸಾಹಿಸಬೇಕು ಎಂದು ಅಧಿಕಾರಿಗಳಿಗೆ ಅಧ್ಯಕ್ಷರು ಸೂಚಿಸಿದರು.
ಅನಧಿಕೃತ ಸಂಪರ್ಕಗಳನ್ನು ಪತ್ತೆ ಹಚ್ಚಿ :
110 ಗ್ರಾಮಗಳಲ್ಲಿ ಕೆಲವೆಡೆ ಅನಧಿಕೃತವಾಗಿ ಸಂಪರ್ಕಗಳನ್ನು ನೀಡಿರುವ ಬಗ್ಗೆ ದೂರುಗಳು ಬಂದಿವೆ. ಇವುಗಳ ಬಗ್ಗೆ ಅಧಿಕಾರಿಗಳು ಪರಿಶೀಲನೆ ನಡೆಸಬೇಕು. ಇವುಗಳನ್ನ ಸಕ್ರಮಗೊಳಿಸಿ ಜಲಮಂಡಳಿಗೆ ಆದಾಯ ಬರುವಂತೆ ಕ್ರಮವಹಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸಮರ್ಪಕವಾಗಿ ಹೊಸ ಸಂಪರ್ಕಗಳನ್ನು ನೊಂದಾಯಿಸುವ ಮೂಲಕ ನೀರಿನ ಸದ್ಬಳಕೆ ಆಗುತ್ತದೆ. ಹಾಗೆಯೇ, ಜಲಮಂಡಳಿಗೆ ಅಗತ್ಯವಾದ ಆದಾಯ ದೊರೆಯಲಿದ್ದು ಸಾಲದ ಮರುಪಾವತಿಗೆ ಸಹಾಯವಾಗಲಿದೆ. ಈ ಹಿನ್ನಲೆಯಲ್ಲಿ ಅಧಿಕಾರಿಗಳು ಜನರ ಮನೆಬಾಗಿಲಿಗೆ ತೆರಳಿ ನೀರಿನ ಸಂಪರ್ಕ ತಗೆದುಕೊಳ್ಳುವ ನಿಟ್ಟಿನಲ್ಲಿ ಪ್ರೋತ್ಸಾಹಿಸಬೇಕು. ಹೆಚ್ಚಿನ ಜನರು ಕಾವೇರಿ ನೀರಿನ ಸಂಪರ್ಕ ಪಡೆದುಕೊಳ್ಳುವಂತೆ ಕ್ರಮವಹಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಜಲಮಂಡಳಿ ಅಧ್ಯಕ್ಷರು ತಿಳಿಸಿದರು.