ವಾರಣಾಸಿ, ಮೇ.14 www.bengaluruwire.com : ದೇಶದ ಪ್ರಧಾನಿ ನರೇಂದ್ರ ಮೋದಿ (PM Modi Nomination) ಅವರು ಮಂಗಳವಾರ ಉತ್ತರ ಪ್ರದೇಶದ ವಾರಣಾಸಿ ಲೋಕಸಭಾ ಕ್ಷೇತ್ರದಿಂದ (Varanasi Lok Sabha Constituency) ಸತತ ಮೂರನೇ ಬಾರಿಗೆ ಚುನಾವಣೆಗೆ ಸ್ಪರ್ಧಿಸುತ್ತಿದ್ದು, ನಾಮಪತ್ರ ಸಲ್ಲಿಸಿದರು. ಎಲ್ಲಾ ಅಭ್ಯರ್ಥಿಗಳಂತೆ ಮೋದಿ ಅವರು ಸಹ ತಮ್ಮ ಬಳಿ ಇರುವ ಚರ-ಸ್ತಿರಾಸ್ಥಿಗಳ ಆಸ್ತಿಯ ವಿವರದ ಅಫಿಡವಿಟ್ ಅನ್ನು ನಾಮಪತ್ರದ ಜೊತೆ ಸಲ್ಲಿಸಿದ್ದಾರೆ.
ಈ ಅಫಿಡೆವಿಟ್ ನಲ್ಲಿ ಅವರು 3.02 ಕೋಟಿ ರೂಪಾಯಿ ಮೌಲ್ಯದ ಚರ ಆಸ್ತಿ ಹೊಂದಿದ್ದರೆ, 52,920 ರೂಪಾಯಿ ನಗದು ಅವರ ಬಳಿ ಇರುವುದಾಗಿ ಘೋಷಿಸಿಕೊಂಡಿದ್ದಾರೆ. ಮೂರು ಬಾರಿ ಸಿಎಂ, 2 ಸಲ ಪ್ರಧಾನಿ ಆಗಿದ್ದರೂ ನರೇಂದ್ರ ಮೋದಿ ಅವರ ಬಳಿ ಯಾವುದೇ ಜಮೀನು, ಮನೆ ಅಥವಾ ಕಾರು ಇಲ್ಲ.
ಎರಡು ಪಟ್ಟಾದ ಮೋದಿಯವರ ತೆರಿಗೆ ಸಲ್ಲಿಕೆ :
2018-19 ರ ಆರ್ಥಿಕ ವರ್ಷದಲ್ಲಿ 11 ಲಕ್ಷ ರೂಪಾಯಿ ಆದಾಯ ತೆರಿಗೆ ಕಟ್ಟಿದ್ದ ಮೋದಿ ಅವರು 2022-23 ರಲ್ಲಿ 23.5 ಲಕ್ಷ ರೂಪಾಯಿ ಅಂದರೆ ದುಪ್ಪಟ್ಟು ತೆರಿಗೆ ಕಟ್ಟಿದ್ದಾರೆ. ಇದು ಅವರ ಆಸ್ತಿ ಬೆಳವಣಿಗೆಯಾಗಿರುವುದನ್ನು ತೋರಿಸುತ್ತದೆ. ಪ್ರಧಾನಿ ಮೋದಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಎರಡು ಖಾತೆಗಳನ್ನು ಹೊಂದಿದ್ದಾರೆ. ಎಸ್‌ಬಿಐನ ಗಾಂಧಿನಗರ ಶಾಖೆಯಲ್ಲಿ 73,304 ರೂ.ಗಳನ್ನು ಠೇವಣಿ ಇರಿಸಿದ್ದರೆ, ಎಸ್‌ಬಿಐನ ವಾರಣಾಸಿ ಶಾಖೆಯಲ್ಲಿ ಕೇವಲ 7,000 ರೂ. ಇದೆ.
ಹೂಡಿಕೆ ಮತ್ತು ಚಿನ್ನಾಭರಣ ವಿವರ :
ಪ್ರಧಾನ ಮಂತ್ರಿ ಎಸ್‌ಬಿಐ ಬ್ಯಾಂಕಿನಲ್ಲಿ 2,85,60,338 ರೂ ಮೌಲ್ಯದ ಸ್ಥಿರ ಠೇವಣಿಯನ್ನೂ ಹೊಂದಿದ್ದಾರೆ. ಪ್ರಧಾನಿಯವರ ಬಳಿ 2,67,750 ರೂಪಾಯಿ ಮೌಲ್ಯದ ನಾಲ್ಕು ಚಿನ್ನದ ಉಂಗುರಗಳಿವೆ.
ಇಂದು ನಾಮಪತ್ರ ಸಲ್ಲಿಸಿದ ಮೋದಿ :
2014 ರಲ್ಲಿ ವಾರಣಾಸಿಯಿಂದ ಎನ್‌ಡಿಎ ಪ್ರಧಾನಿ ಅಭ್ಯರ್ಥಿಯಾಗಿ ಮೊದಲ ಬಾರಿಗೆ ಸ್ಪರ್ಧಿಸಿದ್ದ ಪಿಎಂ ಮೋದಿ, ಈ ಕ್ಷೇತ್ರದಿಂದ ಸತತ ಮೂರನೇ ಬಾರಿಗೆ ಸ್ಪರ್ಧಿಸುತ್ತಿದ್ದಾರೆ. ವಾರಣಾಸಿಯಲ್ಲಿ ಜೂನ್ 1 ರಂದು ಮತದಾನ ನಡೆಯಲಿದೆ. ಮಂಗಳವಾರ ವಾರಣಾಸಿಯ ಜಿಲ್ಲಾಧಿಕಾರಿ ಕಚೇರಿಗೆ ನಾಮಪತ್ರ ಸಲ್ಲಿಸಲು ತೆರಳಿದ ಪ್ರಧಾನಿ ಮೋದಿ ಅವರಿಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಬಿಜೆಪಿ ಮುಖ್ಯಸ್ಥ ಜೆಪಿ ನಡ್ಡಾ ಸೇರಿದಂತೆ ಹಲವು ನಾಯಕರು ಜೊತೆಯಲ್ಲಿದ್ದರು.
ಪ್ರಧಾನಿ ನರೇಂದ್ರ ಮೋದಿ ಅವರು ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ಅವರ ನಾಮಪತ್ರದ ಸೂಚಕರು ಯಾರು ಎಂಬುದರ ಬಗ್ಗೆ ಭಾರೀ ಕುತೂಹಲ ಸೃಷ್ಟಿಯಾಗಿತ್ತು. ನರೇಂದ್ರ ಮೋದಿ ಅವರು ಒಬ್ಬರು ಬ್ರಾಹ್ಮಣ ಸಮುದಾಯ, ಇನ್ನೊಬ್ಬರು ದಲಿತ ಸಮುದಾಯ, ಮತ್ತೆ ಇಬ್ಬರು ಒಬಿಸಿ ಸಮುದಾಯದ ವ್ಯಕ್ತಿಗಳನ್ನು ಸೂಚಕರನ್ನಾಗಿ ಆಯ್ಕೆ ಮಾಡಿಕೊಂಡಿದ್ದಾರೆ.