ನವದೆಹಲಿ, ಮೇ.11 www.bengaluruwire.com : ಮಹಾಮಾರಿ ಪೋಲಿಯೋದಿಂದ ತನ್ನ ಎರಡೂ ಕೈಕಾಲುಗಳನ್ನು ಬಾಲ್ಯದಲ್ಲೇ ಕಳೆದುಕೊಂಡಿರುವ ಕರ್ನಾಟಕದ ಸಮಾಜ ಸೇವಕ ಕೆಎಸ್ ರಾಜಣ್ಣ (KS Rajanna) ಅವರಿಗೆ ಇತ್ತೀಚೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಪದ್ಮಶ್ರೀ ಪ್ರಶಸ್ತಿ (Padmashree Awardee) ನೀಡಿ ಗೌರವಿಸಿದರು.
ಅವರಿಗೆ ಕಾಲು, ಕೈಗಳು ಇಲ್ಲದಿದ್ದರೂ ಸಹ, ಅವರ ಸಾಧನೆ ಮಾತ್ರ ಇಡೀ ಜಗತ್ತೇ ಶ್ಲಾಘನೆ ಮಾಡುವಂತದ್ದಾಗಿದೆ. ಇಂತಹ ಹೆಮ್ಮೆಯ ಕನ್ನಡದ ಮಗನಿಗೆ ದೇಶದ ಅತ್ಯುನ್ನತ ನಾಗರೀಕ ಪ್ರಶಸ್ತಿ ಲಭಿಸಿರುವುದು ಹೆಮ್ಮೆಯ ವಿಷಯವೇ ಸರಿ.
ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಇದೇ ಗುರುವಾರ ರಾಷ್ಟ್ರಪತಿ ಭವನದಲ್ಲಿ 2024 ನೇ ಸಾಲಿನ ಪದ್ಮ ಪ್ರಶಸ್ತಿಗಳನ್ನು ಪ್ರದಾನ ಮಾಡಿದರು. ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ, ವಿದೇಶಾಂಗ ಸಚಿವ ಎಸ್ ಜೈಶಂಕರ್ ಮತ್ತಿತರರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಅಂಗವಿಕಲರ ಕಲ್ಯಾಣಕ್ಕಾಗಿ ಶ್ರಮಿಸಿದ ವಿಕಲಚೇತನ ಸಾಮಾಜಿಕ ಕಾರ್ಯಕರ್ತ ಕೆ.ಎಸ್.ರಾಜಣ್ಣ ಅವರಿಗೆ ಪದ್ಮಶ್ರೀ ಪುರಸ್ಕಾರ ನೀಡಿ ಗೌರವಿಸಲಾಯಿತು. ಸನ್ಮಾನ ಸ್ವೀಕರಿಸಲು ಅವರ ಹೆಸರು ಕರೆದಾಗ, ರಾಜಣ್ಣ ಅವರು ತಮ್ಮ ಕುರ್ಚಿಯಿಂದ ಎದ್ದು ಮೊದಲು ಪ್ರಧಾನಿ ನರೇಂದ್ರ ಮೋದಿ ಅವರ ಬಳಿಗೆ ಬಂದು ಅವರ ಕೈ ಕುಲುಕಿ ಸ್ವಾಗತಿಸಿದರು. ಕೆಲ ಸೆಕೆಂಡುಗಳ ರಾಜಣ್ಣನ ಜೊತೆ ಪ್ರಧಾನಿ ಮೋದಿ ಮಾತನಾಡಿದರು.
ರಾಜಣ್ಣ ನಂತರ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಆಸನದ ಕಡೆಗೆ ಸಾಗಿದರು ಮತ್ತು ಭಾರತದ ರಾಷ್ಟ್ರಪತಿಗಳಿಗೆ ತಲೆಬಾಗಿ ವಂದಿಸಿದರು. ಇದಾದ ಬಳಿಕ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ಪದ್ಮ ಪ್ರಶಸ್ತಿಯ ಗೌರವ ಸ್ವೀಕರಿಸಿದರು. ಬಳಿಕ ಸಭಾಂಗಣದಲ್ಲಿ ನೆರೆದಿದ್ದ ಜನರೆಲ್ಲರೂ ಚಪ್ಪಾಳೆ ತಟ್ಟಿ ಶುಭ ಹಾರೈಸಿದರು. ಈ ಸಮಯದಲ್ಲಿ, ಒಬ್ಬ ಸೈನಿಕ ಅವರಿಗೆ ಸಹಾಯ ಮಾಡಲು ಮುಂದೆ ಬಂದರು, ಆದರೆ ರಾಜಣ್ಣನವರು ಸಹಾಯವನ್ನು ಪಡೆಯಲು ನಯವಾಗಿ ನಿರಾಕರಿಸಿ ಎಂದಿನಂತೆ ತಮ್ಮ ಸ್ವಾವಲಂಬನೆಯ ದ್ಯೋತಕವಾಗಿ ತಾವೇ ಸ್ವತಃ ವಾಪಸ್ ಬಂದರು.
ಕೆ.ಎಸ್.ರಾಜಣ್ಣ ಅವರು ತಮ್ಮ ಬಾಲ್ಯದಲ್ಲಿ ಪೋಲಿಯೊದಿಂದ ಕೈ ಕಾಲುಗಳನ್ನು ಕಳೆದುಕೊಂಡ ನಂತರ ಛಲ ಬಿಡದೆ ಮೊಣಕಾಲುಗಳ ಮೇಲೆ ನಡೆಯಲು ಕಲಿತರು. ಅವರು ತಮ್ಮ ದೈಹಿಕ ಮಿತಿಗಳನ್ನು ಸ್ಫೂರ್ತಿಯಾಗಿ ಬಳಸಿಕೊಂಡಿದ್ದು ಮಾತ್ರವಲ್ಲದೇ, ದಿವ್ಯಾಂಗರಿಗಾಗಿ ಕೆಲಸ ಮಾಡಲು ನಿರ್ಧರಿಸಿದರು, ಆ ಮೂಲಕ ತಾನು ಯಾರಿಗಿಂತ ಕಡಿಮೆಯಿಲ್ಲ ಎಂದು ಸಾಧಿಸಿ ತೋರಿಸಿದರು.
ಕೆಎಸ್ ರಾಜಣ್ಣ ಅವರು ನಿರಂತರವಾಗಿ ಮಾಡಿದ ಸಮಾಜ ಸೇವೆಯನ್ನು ಪರಿಗಣಿಸಿ ಕರ್ನಾಟಕ ಸರ್ಕಾರ 2013ರಲ್ಲಿ ರಾಜ್ಯ ಅಂಗವಿಕಲರ ಕಲ್ಯಾಣ ಇಲಾಖೆಯ ಆಯುಕ್ತರನ್ನಾಗಿ ಮಾಡಿತ್ತು. ಬೆಂಗಳೂರಿನ ನಿವಾಸಿ ರಾಜಣ್ಣ ಅವರಿಗೆ ಮೂರು ವರ್ಷಗಳ ಕಾಲ ಈ ಹುದ್ದೆಯನ್ನು ನೀಡಲಾಗಿತ್ತು. ಮೆಕ್ಯಾನಿಕಲ್ ಎಂಜಿನಿಯರ್ ಪದವೀಧರರಾಗಿರುವ ರಾಜಣ್ಣ ಅವರು ಉದ್ಯಮಿಯಾಗಿ 350ಕ್ಕೂ ಹೆಚ್ಚು ಮಂದಿಗೆ ಅದರಲ್ಲೂ ದಿವ್ಯಾಂಗರಿಗೆ ಕೆಲಸ ನೀಡಿದ್ದಾರೆ. ಈ ನಡುವೆ ಪ್ಯಾರಾ ಒಲಂಪಿಕ್ಸ್‌ನಲ್ಲಿ ಪಾಲ್ಗೊಂಡು ಚಿನ್ನದ ಪದಕವನ್ನೂ ಗೆದ್ದಿದ್ದಾರೆ. 2002ರ ಪ್ಯಾರಾ ಒಲಿಂಪಿಕ್ಸ್‌ನಲ್ಲಿ ರಾಜಣ್ಣ ಅವರು ಡಿಸ್ಕಸ್ ಥ್ರೋದಲ್ಲಿ ಚಿನ್ನ ಹಾಗೂ ಈಜು ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಜಯಿಸುವ ಮೂಲಕ ದೇಶಕ್ಕೆ ಹೆಮ್ಮೆ ತಂದಿದ್ದರು. ಇಷ್ಟೆಲ್ಲ ಸಾಧನೆಗಳ ಮಧ್ಯೆಯೂ ವಿಶೇಷವಾಗಿ ಅವರು ಅಂಗವಿಕಲರ ಕಲ್ಯಾಣಕ್ಕೆ ನೀಡಿದ ಕೊಡುಗೆಯನ್ನು ಪರಿಗಣಿಸಿ ಕೇಂದ್ರ ಸರ್ಕಾರ ಪದ್ಮಶ್ರೀ ಗೌರವ ನೀಡಿದೆ.
ಒಟ್ಟಿನಲ್ಲಿ ಸಾಧನೆಗೆ ಯಾವ ಅಂಗವಿಕಲತೆಯೂ ಅಡ್ಡಿಯಲ್ಲ ಎಂದು ತಮ್ಮ ಕಾರ್ಯವೈಖರಿಯ ಮೂಲಕವೇ ಸಮಾಜದಲ್ಲಿನ ಅಂಗವಿಕಲರ ಕಲ್ಯಾಣಕ್ಕೆ ಕೊಡುಗೆ ನೀಡಿ ದೇಶದ ಅತ್ಯುನ್ನತ ನಾಗರೀಕ ಪುರಸ್ಕಾರಕ್ಕೆ ಒಬ್ಬ ಕನ್ನಡಿಗರು ಪಾತ್ರರಾಗಿರುವುದು ನಿಜಕ್ಕೂ ಹೆಚ್ಚುಗಾರಿಕೆ ವಿಷಯವಾಗಿದೆ.