ಬೆಂಗಳೂರು, ಮೇ.10 www.bengaluruwire.com : ಅಕ್ಷಯ ತೃತೀಯದಂದೇ ಬಿಬಿಎಂಪಿಯು ತನಗೆ ಬರಬೇಜಾದ ಆಸ್ತಿತೆರಿಗೆ ಬಾಕಿ ವಸೂಲಿಗೆ ಮುಂದಾಗಿದೆ. ಅವರು ಕೊಡಲ್ಲ, ಇವರು ಬಿಡಲ್ಲ ಅನ್ನುವ ರೀತಿಯದ್ದಾಗಿದೆ ರಾಜಧಾನಿ ಬೆಂಗಳೂರಿನ ಮಂತ್ರಿ ಮಾಲ್ ಬಾಕಿ ಪ್ರಾಪರ್ಟಿ ಟ್ಯಾಕ್ಸ್ ವಿಷಯದಲ್ಲಿ. ತೆರಿಗೆ ಹಣ ಬಾಕಿ ಉಳಿಸಿಕೊಂಡ ಹಿನ್ನೆಲೆಯಲ್ಲಿ ಬಿಬಿಎಂಪಿ ಅಧಿಕಾರಿಗಳು ಬೆಳಿಗ್ಗೆಯೇ ಮಂತ್ರಿ ಮಾಲ್ ಗೆ ಮತ್ತೆ ಬೀಗಹಾಕಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಈ ರೀತಿ ಆ ಮಾಲ್ ಗೆ ಬೀಗ ಹಾಕುತ್ತಿರೋದು ಪುನರಾವರ್ತಿತವಾಗಿದೆ. ತೆರಿಗೆ ಹಣ ಪಾವತಿಸದ ಹಿನ್ನೆಲೆಯಲ್ಲಿ ಮಂತ್ರಿ ಮಾಲ್ ಲೈಸನ್ಸ್ ರದ್ದುಪಡಿಸಲಾಗಿದೆ ಎಂದು ನೋಟಿಸ್ ಅಂಟಿಸಲಾಗಿದೆ. ಅಲ್ಲದೇ ಮಾಲ್ ಸೀಜ್ ಮಾಡಲಾಗಿದೆ. 32 ಕೋಟಿ ರೂಪಾಯಿ ತೆರಿಗೆ ಬಾಕಿ ಉಳಿಸಿಕೊಂಡಿರುವ ಹಿನ್ನೆಲೆಯಲ್ಲಿ ಮಂತ್ರಿ ಮಾಲ್ ಗೆ ಬಿಬಿಎಂಪಿ ತೆರಿಗೆ ವಿಭಾಗದ ಅಧಿಕಾರಿಗಳು ಬೀಗ ಹಾಕಿ ಸೀಲೊತ್ತಿದ್ದಾರೆ.
ಈ ಹಿಂದೆಯೂ ಹಲವು ಬಾರಿ ಮಂತ್ರಿ ಮಾಲ್ ಗೆ ತೆರಿಗೆ ಹಣ ಪಾವತಿಸುವಂತೆ ಪಾಲಿಕೆ ಅಧಿಕಾರಿಗಳು ಸೂಚಿಸಿದ್ದರು. ನೋಟೀಸ್ ಕೂಡ ನೀಡಲಾಗಿತ್ತು. ಆದರೆ ಮಂತ್ರಿ ಮಾಲ್ ನಿಂದ ಯಾವುದೇ ಪ್ರತಿಕ್ರಿಯೆ ಬಾರದ ಹಿನ್ನೆಲೆಯಲ್ಲಿ ಶುಕ್ರವಾರವಾದ ಇಂದು ತೆರಿಗೆ ವಿಭಾಗದ ಅಧಿಕಾರಿಗಳು ಮಾಲ್ ಸೀಜ್ ಮಾಡಿ ತೆರಳಿದ್ದಾರೆ. ಇದರಿಂದಾಗಿ ವಾರಾಂತ್ಯದ ಸಂದರ್ಭದಲ್ಲೇ ಮಂತ್ರಿ ಮಾಲ್ ಗೆ ಬಿಬಿಎಂಪಿ ಬಿಗ್ ಶಾಕ್ ಕೊಟ್ಟಂತಾಗಿದೆ.