ನವದೆಹಲಿ, ಮೇ.9 www.bengaluruwire.com : ಜಗತ್ತಿನ ಐಟಿ ದೈತ್ಯ ಗೂಗಲ್ (Google) ಕಂಪನಿಯು ದೇಶದಲ್ಲಿನ ತನ್ನ ಗ್ರಾಹಕರಿಗೆ ಹೊಸ ತಂತ್ರಜ್ಞಾನವನ್ನು ಪರಿಚಯಿಸಿದೆ. ಆಂಡ್ರಾಯ್ಡ್ ಮೊಬೈಲ್ ಹೊಂದಿರುವ ಗ್ರಾಹಕರಿಗೆ ಮೇ.8ರಿಂದ ಗೂಗಲ್ ವ್ಯಾಲೆಟ್ (Google Wallet) ಎನ್ನುವ ವಿಶೇಷ ಅಪ್ಲಿಕೇಶನ್ ಅನ್ನು ಪರಿಚಯಿಸಿದೆ.
ಗೂಗಲ್ ಪರಿಚಯಿಸಿರುವ ಈ ವ್ಯಾಲೆಟ್‌ನಿಂದ ಬೋರ್ಡಿಂಗ್ ಪಾಸ್, ಲಾಯಲ್ಟಿ ಕಾರ್ಡ್, ಕಾರ್ಯಕ್ರಮಗಳ ಟಿಕೆಟ್ , ಸಾರ್ವಜನಿಕ ಸಾರಿಗೆ ಪಾಸ್‌ಗಳು, ಚಲನಚಿತ್ರ ಟಿಕೆಟ್‌ಗಳು, ಪ್ರವೇಶ ಕಾರ್ಡ್‌ಗಳು, ಈವೆಂಟ್ ಕಾರ್ಡ್‌ಗಳು, ಉಡುಗೊರೆ ಕಾರ್ಡ್‌ಗಳು, ವಿಷಯವನ್ನು ಸಂಗ್ರಹಿಸಲು ಸೇರಿದಂತೆ ದೈನಂದಿನ ಅಗತ್ಯಕ್ಕೆ ಬೇಕಾಗುವ ಎಲ್ಲ ದಾಖಲೆಗಳನ್ನು ಒಂದೆಡೆ ಇಡುವುದಕ್ಕೆ ಈ ಅಪ್ಲಿಕೇಶನ್ ಸೂಕ್ತವಾಗಿರಲಿದೆ.
ಗೂಗಲ್ ಪೇ (Google Pay) ಇನ್ನೂ ದೇಶದಲ್ಲಿ ಪಾವತಿಯ ವಿಧಾನವಾಗಿರುವುದರಿಂದ ಗೂಗಲ್ ವ್ಯಾಲೆಟ್ ಅನ್ನು ಬಳಸಿಕೊಂಡು ಪಾವತಿಗಳನ್ನು ಮಾಡಲು ನಿಮಗೆ ಸಾಧ್ಯವಾಗುವುದಿಲ್ಲ. ಗೂಗಲ್ ಸಂಸ್ಥೆಯು ಪಿವಿ ಆರ್ (PVR) ಮತ್ತು ಐನಾಕ್ಸ್ (INOX) ನಂತಹ ಬ್ರ್ಯಾಂಡ್‌ಗಳೊಂದಿಗೆ ಪಾಲುದಾರಿಕೆ ಹೊಂದಿದೆ, ಆದ್ದರಿಂದ ವ್ಯಾಲೆಟ್ ಬಳಕೆದಾರರು ಚಲನಚಿತ್ರ ಮತ್ತು ಈವೆಂಟ್ ಟಿಕೆಟ್‌ಗಳನ್ನು ಇದರಲ್ಲಿ ಉಳಿಸಲು ಸಾಧ್ಯವಾಗುತ್ತದೆ.
ಗೂಗಲ್ ವ್ಯಾಲೆಟ್ ನಲ್ಲಿ ಏರ್ ಇಂಡಿಯಾ ಎಕ್ಸ್‌ಪ್ರೆಸ್, ಏರ್ ಇಂಡಿಯಾ ಏರ್‌ಲೈನ್ ಪಾಲುದಾರರಾಗಿದ್ದಾರೆ. ಇನ್ನು ಆನ್‌ಲೈನ್ ಟ್ರಾವೆಲ್ ಕಂಪನಿಗಳಾದ ಮೇಕ್ ಮೈ ಟ್ರಿಪ್ (MakeMyTrip), ಈಸಿಮೈ ಟ್ರಿಪ್ (EaseMyTrip) ನೊಂದಿಗೂ ಗೂಗಲ್ ಒಪ್ಪಂದ ಮಾಡಿಕೊಂಡಿದೆ. ಫ್ಲಿಪ್‌ಕಾರ್ಟ್, ಡೊಮಿನೋಸ್, ಶಾಪರ್ಸ್ ಸ್ಟಾಪ್ ಮತ್ತು ಹೆಚ್ಚಿನವುಗಳೊಂದಿಗೆ ಉಡುಗೊರೆ ಕಾರ್ಡ್‌ಗಳನ್ನು ಈ ಗೂಗಲ್ ವ್ಯಾಲೆಟ್ ನೊಂದಿಗೆ ರಿಡೀಮ್ ಮಾಡಬಹುದು.
ಈಗಾಗಲೇ ಈ ಗೂಗಲ್ ವ್ಯಾಲೆಟ್ ಒಟ್ಟು 80 ದೇಶಗಳಲ್ಲಿ ಕಾರ್ಯನಿರ್ವಹಣೆ ಮಾಡುತ್ತಿದೆ. ಗೂಗಲ್ ಸದ್ಯದಲ್ಲೇ ಭವಿಷ್ಯದಲ್ಲಿ ಪಾವತಿ ಮತ್ತು ಪಾವತಿ ರಹಿತ ವ್ಯವಸ್ಥೆಯನ್ನು ಎರಡನ್ನೂ ಒಂದೇ ಆಪ್ನಲ್ಲಿ ತರುವ ಪ್ರಯತ್ನ ಮಾಡಲಿದೆ. ಗೂಗಲ್ ವಾಲೆಟ್ ಅನ್ನು ರಕ್ಷಣೆ ಮತ್ತು ಖಾಸಗಿತನ ಅಧಾರದ ಮೇಲೆ ಅಭಿವೃದ್ಧಿ ಮಾಡಲಾಗಿದೆ. ಇದು ಬಳಕೆದಾರರಿಗೆ ಮುಕ್ತ, ಆಯ್ಕೆ ಮತ್ತು ಸುರಕ್ಷತೆ ಭರವಸೆ ನೀಡಲಿದೆ ಎಂದು ಗೂಗಲ್ ತಿಳಿಸಿದೆ.