ಬೆಂಗಳೂರು ಗ್ರಾಮಾಂತರ ಜಿಲ್ಲೆ, ಮೇ 08 www.bengaluruwire.com : ಬಸವ ಜಯಂತಿ ಹಾಗೂ ಅಕ್ಷಯ ತೃತೀಯ ದಿನವಾದ ಮೇ.10 ರ ಸಂದರ್ಭದಲ್ಲಿ ವೈಯಕ್ತಿಕ ವಿವಾಹಗಳು ಹಾಗೂ ಸಾಮೂಹಿಕ ವಿವಾಹಗಳು ನಡೆಯುವ ಸಾಧ್ಯತೆ ಹೆಚ್ಚಾಗಿದ್ದು, ಇಂತಹ ವಿವಾಹಗಳಲ್ಲಿ ಬಾಲ್ಯವಿವಾಹಗಳು ನಡೆಯುವ ಸಾಧ್ಯತೆಯೂ ಸಹ ಹೆಚ್ಚಿರುತ್ತದೆ ಎಂದು ಜಿಲ್ಲೆಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರು ಎಚ್ಚರಿಸಿದ್ದಾರೆ.
ಈಗಾಗಲೇ ಶಾಲೆ ಬಿಟ್ಟ ಮಕ್ಕಳ ಅನುಸರಣೆ ಮಾಡಿ ಬಾಲ್ಯವಿವಾಹಕ್ಕೆ ಒಳಗಾಗದಂತೆ ಸೂಕ್ತ ಕ್ರಮಕೈಗೊಳ್ಳುವುದು. ಈ ಸಮಯದಲ್ಲಿ ಯಾವುದೇ ಬಾಲ್ಯವಿವಾಹಗಳು ನಡೆಯದಂತೆ ಸೂಕ್ತ ಮುನ್ನೆಚ್ಚರಿಕೆ ಕ್ರಮವಹಿಸಬೇಕು ಎಂದು ಅವರು ಎಲ್ಲಾ ವೃತ್ತದ ಮೇಲ್ವಿಚಾರಕಿಯವರಿಗೆ, ಎಲ್ಲಾ ಅಂಗನವಾಡಿ ಕಾರ್ಯಕರ್ತೆಯರಿಗೆ, ಆಯಾ ಗ್ರಾಮಗಳಲ್ಲಿ ಬಾಲ್ಯವಿವಾಹ ನಡೆಯದಂತೆ ಮುನ್ನೆಚ್ಚರಿಕೆ ವಹಿಸಬೇಕು ಎಂದು ಅವರು ತಿಳಿಸಿದ್ದಾರೆ.
ಜಿಲ್ಲೆಯ ಪ್ರಸಿದ್ದ ದೇವಸ್ಥಾನಗಳಾದ ದೊಡ್ಡಬಳ್ಳಾಪುರ ತಾಲ್ಲೂಕಿನ ಘಾಟಿ ಸುಬ್ರಮಣ್ಯ, ಮಧುರೆ ದೇವಸ್ಥಾನ, ನೆಲಮಂಗಲ ತಾಲ್ಲೂಕಿನ ಶಿವಗಂಗೆ, ದೇವಹಳ್ಳಿ ತಾಲ್ಲೂಕಿನ ತಿಮ್ಮರಾಯಸ್ವಾಮಿ ಬೆಟ್ಟ(ಅವತಿ) ಹಾಗೂ ಹೊಸಕೋಟೆ ತಾಲ್ಲೂಕಿನ ಶ್ರೀ ಕಾಲಬೈರವ ದೇವಸ್ಥಾನ ಜಡಿಗೇನಹಳ್ಳಿ, ಅನುಗೊಂಡನಹಳ್ಳಿಯ ಮದ್ದೂರಮ್ಮ ದೇವಸ್ಥಾನಗಳಲ್ಲಿ ಸಾಮೂಹಿಕ ವಿವಾಹಗಳು ನಡೆಯುವ ಸಾಧ್ಯತೆಗಳಿರುತ್ತದೆ. ಹೀಗಾಗಿ ಆ ದೇವಾಲಯಗಳ ಮುಖ್ಯಸ್ಥರಿಗೆ ಸಾಮೂಹಿಕ ವಿವಾಹಗಳಲ್ಲಿ ಹಾಗೂ ಕಲ್ಯಾಣ ಮಂಟಪಗಳಲ್ಲಿ ಯಾವುದೇ ಬಾಲ್ಯವಿವಾಹಗಳಿಗೆ ಅವಕಾಶ ಮಾಡಿಕೊಡಬಾರದೆಂದು ಬಾಲ್ಯವಿವಾಹ ಕಾಯ್ದೆಯ ಕುರಿತು ಅವರಿಗೆ ತಿಳಿಸಿ, ಅರಿವು ಮೂಡಿಸಬೇಕು ಎಂದು ಅವರು ಇಲಾಖೆಯ ಸಿಬ್ಬಂದಿಗೆ ತಿಳಿಸಿದ್ದಾಗಿ ಪತ್ರಿಕಾ ಪ್ರಕಟಣೆಯಲ್ಲಿ ಹೇಳಿದ್ದಾರೆ.