ಬೆಂಗಳೂರು, ಮೇ.08 www.bengaluruwire.com : ಆಕಾಶ ಎಂದರೆ ಅದು ಕುತೂಹಲಗಳ ಆಗರ. ಸೂರ್ಯ, ಅದರ ಸುತ್ತ ಸುತ್ತುವ ಗ್ರಹಗಳು, ನಕ್ಷತ್ರ, ಕ್ಷುದ್ರಗ್ರಹಗಳು, ಆಕಾಶ ಕಾಯಗಳು ಹೀಗೆ ಒಂದಾ ಎರಡಾ ಪ್ರತಿಯೊಂದರ ಹಿಂದೆಯೂ ಗತಕಾಲದ ಪುರಾಣ, ಇತಿಹಾಸ, ದಂತಕಥೆಗಳು, ವೈಜ್ಞಾನಿಕ ಯುಗದಲ್ಲಿ ಖಗೋಳ ಸಂಶೋಧನೆಗಳು ನಡೆದಿವೆ.
ಇವೆಲ್ಲದರ ಬಗ್ಗೆ ಚರ್ಚಿಸುತ್ತಾ ಚಿತ್ರ, ದೃಶ್ಯ ಸಹಿತ ಮಾಹಿತಿಗಳು, ಅದ್ಭುತ ಆನಿಮೇಶನ್ ಗಳನ್ನು ಒಳಗೊಂಡ “ನಮ್ಮ ಸೂರ್ಯ ಹಾಗೂ ಅದರ ಪರಿವಾರ” ಎಂಬ ಕುರಿತ ನೂತನ ಆಕಾಶ ಮಂದಿರ ಪ್ರದರ್ಶನವನ್ನು ನಾಳೆಯಿಂದ (ಮೇ.9) ಜವಾಹರಲಾಲ್ ನೆಹರು ಪ್ಲಾನಿಟೋರಿಯಂ ನಲ್ಲಿ ಆರಂಭಿಸಲಾಗುತ್ತಿದೆ.
ಒಟ್ಟು 40 ನಿಮಿಷಗಳ “ನಮ್ಮ ಸೂರ್ಯ ಹಾಗೂ ಅದರ ಪರಿವಾರ” ಎಂಬ ಆಕಾಶ ಮಂದಿರ ಪ್ರದರ್ಶನದಲ್ಲಿ ಸೌರವ್ಯೂಹದ ಸಮಸ್ತ ಕಾಯಗಳ ಖಗೋಳೀಯ ಪ್ರವಾಸಕ್ಕೆ ಕುಳಿತಲ್ಲಿಂದಲೇ ದೃಕ್ ಶ್ರವಣ ಪ್ರದರ್ಶನದ ಮೂಲಕ ಕರೆದೊಯ್ಯುವ ವ್ಯವಸ್ಥೆಯನ್ನು ನೆಹರು ಪ್ಲಾನಿಟೋರಿಯಂ ವಿಜ್ಞಾನಿಗಳು ಮಾಡಿದ್ದಾರೆ. ನಮ್ಮ ಸೂರ್ಯ ಮತ್ತು ಅದರ ಕುಟುಂಬದ ಸದಸ್ಯರುಗಳ ಕುರಿತ ಹಲವು ಆಸಕ್ತಿದಾಯಕ ಅಂಶಗಳನ್ನು ಪರಿಚಯಿಸುವ ಪ್ರಯತ್ನ ಇದಾಗಿದೆ ಎಂದು ಪ್ಲಾನಿಟೋರಿಯಂನ ನಿರ್ದೇಶಕ ಡಾ.ಬಿ.ಆರ್.ಗುರುಪ್ರಸಾದ್ ಹೇಳಿದ್ದಾರೆ.
ನಮ್ಮ ಸೌರವ್ಯೂಹದ ಎಂಟು ಗ್ರಹಗಳ ಕುರಿತಾದ ಆಸಕ್ತಿದಾಯಕ ವಿಚಾರಗಳು, ಕ್ಷುದ್ರ ಗ್ರಹಗಳು, ಕೈಪರ್ ಪಟ್ಟಿಯ ಕಾಯಗಳು, ‘ಊರ್ಟ್ ಮೋಡ’ ದಿಂದ ಬರುವ ಧೂಮಕೇತುಗಳು, ಇತ್ಯಾದಿ ಕುತೂಹಲಕಾರಿ ವಿಷಯಗಳನ್ನು ರಮಣೀಯ ದೃಶ್ಯಾವಳಿಗಳು ಮತ್ತು ಅದ್ಭುತ ಅನಿಮೇಶನ್ ಗಳ ಮೂಲಕ ಈ ಪ್ರದರ್ಶನದಲ್ಲಿ ಪ್ರಸ್ತುತಪಡಿಸಲಾಗಿದೆ. ಚಂದ್ರ, ಮಂಗಳಗ್ರಹ ಮತ್ತು ಸೂರ್ಯ, ಈ ಆಕಾಶಕಾಯಗಳನ್ನು ಹಾಗೂ ವಿಶ್ವವನ್ನು ಅನ್ವೇಷಿಸುವುದಕ್ಕೆ ಸಂಬಂಧಿಸಿದಂತೆ ಕಳೆದ ಎರಡು ದಶಕಗಳಲ್ಲಿ ಭಾರತ ಮಾಡಿರುವ ಪ್ರಮುಖವಾದ ಸಾಧನೆಗಳ ಹಿನ್ನೆಲೆಯಲ್ಲಿ “ನಮ್ಮ ಸೂರ್ಯ ಹಾಗೂ ಅದರ ಪರಿವಾರ” ಆಕಾಶ ಮಂದಿರ ಪ್ರದರ್ಶನವು ಹೆಚ್ಚಿನ ಪ್ರಾಮುಖ್ಯತೆಯನ್ನು ಪಡೆದುಕೊಳ್ಳುತ್ತದೆ.
ಸೌರವ್ಯೂಹದ ನಿಬ್ಬೆರಗಾಗಿಸುವ ಮಾಹಿತಿ ಕಣಜ :
ನಿಬ್ಬೆರಗಾಗಿಸುವ ಬುಧ ಗ್ರಹದ ಬರಡಾದ ನೆಲ, ದಟ್ಟವಾದ ಮೋಡಗಳಿಂದ ಆವೃತವಾಗಿರುವ ಶುಕ್ರ ಗ್ರಹದ ಮೇಲೆ, ಜೀವಿಗಳನ್ನು ಪೋಷಿಸುತ್ತಿರುವ ಸುಂದರ ವಸುಂಧರೆ- ನಮ್ಮ ಭೂಮಿ, ಭೂಮಿಯ ಏಕೈಕ ನೈಸರ್ಗಿಕ ಉಪಗ್ರಹವಾದ ನಮ್ಮ ಚಂದ್ರ, ಅತ್ಯಂತ ಕುತೂಹಲಕಾರಿ ಕೆಂಪು ಗ್ರಹ- ಮಂಗಳ, ಬೃಹತ್ ಗಾತ್ರದ ಗುರು ಗ್ರಹ, ಮನೋಹರವಾದ ಉಂಗುರ ವ್ಯವಸ್ಥೆಯಿಂದ ಕೂಡಿರುವ ಶನಿ ಗ್ರಹ, ದೂರದ ಹಿಮದೈತ್ಯಗಳಾದ ಯುರೇನಸ್ ಮತ್ತು ನೆಪ್ಚೂನ್ ಗಳು – ನಮ್ಮ ಸೌರವ್ಯೂಹದ ಗ್ರಹಗಳಲ್ಲಿನ ಈ ವೈವಿಧ್ಯವನ್ನು ಆಕಾಶ ಮಂದಿರದ ಗೋಳದ ಮೇಲೆ ಆಸ್ವಾದಿಸುವ ಅನುಭವ ಈ ಪ್ರದರ್ಶನದಲ್ಲಿ ಸಿಗಲಿದೆ. ಈ ಗ್ರಹ ಪರಿವಾರದ ಒಡೆಯ ನಮ್ಮ ಸೂರ್ಯ. ಈ ಬೃಹತ್ ಅನಿಲ ಗೋಳದ ಹಲವು ಸ್ವಾರಸ್ಯಕರ ವಿಚಾರಗಳನ್ನು ಈ ಪ್ರದರ್ಶನದಲ್ಲಿ ಚರ್ಚಿಸಲಾಗಿದೆ. ನಮ್ಮ ಸೌರವ್ಯೂಹಕ್ಕೆ ಅಪರೂಪಕ್ಕೊಮ್ಮೆ ಬಂದು ಹೋಗುವ ಅತಿಥಿಗಳಾದ ಧೂಮಕೇತುಗಳ ಕುರಿತ ಹಲವು ಕುತೂಹಲಕಾರಿ ಅಂಶಗಳನ್ನೂ ಈ ಪ್ರದರ್ಶನ ಒಳಗೊಂಡಿದೆ.
ಈ ನೂತನ ಸ್ಕೈ ಥಿಯೇಟರ್ ಟೂರ್ (ಆಕಾಶ ಮಂದಿರ ಪ್ರದರ್ಶನ) ಕಾರ್ಯಕ್ರಮಕ್ಕೆ ಇಂದು ಚಾಲನೆ ದೊರೆಯಿತು. ಕಾರ್ಯಕ್ರಮದಲ್ಲಿ ರಾಮನ್ ಸಂಶೋಧನಾ ಸಂಸ್ಥೆಯ ನಿರ್ದೇಶಕ ಪ್ರೊ.ತರುಣ್ ಸೌರದೀಪ್ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರೆ, ಇಸ್ರೋ ಮಾಜಿ ಅಧ್ಯಕ್ಷ ಹಾಗೂ ಬೇಸ್ ಕೌನ್ಸಿಲ್ ಅಧ್ಯಕ್ಷರಾದ ಎ.ಎಸ್.ಕಿರಣ್ ಕುಮಾರ್ ಅಧ್ಯಕ್ಷತೆವಹಿಸಿದ್ದರು. ಇದೇ ಸಂದರ್ಭದಲ್ಲಿ ಇಬ್ಬರೂ ಅತಿಥಿಗಳು ಖಗೋಳ ವಿಜ್ಞಾನದ ಪ್ರಾಮುಖ್ಯತೆ ಬಗ್ಗೆ ತಿಳಿಸಿದರು. ನೆಹರು ಪ್ಲಾನಿಟೋರಿಯಂ ಮಾಜಿ ನಿರ್ದೇಶಕ ಪ್ರಮೋದ್ ಗಲಗಲಿಯವರು ಆಕಾಶ ಮಂದಿರದ ಪ್ರದರ್ಶನದ ಬಗ್ಗೆ ಮಾತನಾಡಿದರು.
ಪ್ರದರ್ಶನ ದಿನ ಮತ್ತು ಸಮಯ ಈ ರೀತಿಯಿದೆ :
ಪ್ರತಿದಿನ (ಪ್ರತಿ ಸೋಮವಾರ ಮತ್ತು ಪ್ರತಿ ತಿಂಗಳ ಎರಡನೇ ಮಂಗಳವಾರ ಹೊರತಾಗಿ) ಮಧ್ಯಾಹ್ನ 12.30ರಿಂದ 1.30ರ ತನಕ ಇಂಗ್ಲೀಷ್ ಪ್ರದರ್ಶನ, ಮಧ್ಯಾಹ್ನ 2.30ರಿಂದ 3.30ರ ವರೆಗಿನ ಅವಧಿಯಲ್ಲಿ ಕನ್ನಡ ಭಾಷೆಯಲ್ಲಿ ಈ ಆಕಾಶ ಮಂದಿರದ ಪ್ರದರ್ಶನ ಇರಲಿದೆ.
“ಬೆಂಗಳೂರು ವೈರ್” ಡಿಜಿಟಲ್ ವೆಬ್ ನ್ಯೂಸ್ ಪೋರ್ಟೆಲ್ಲಿನ ಸೋಶಿಯಲ್ ಮೀಡಿಯಾ ಪೇಜ್ ಹಾಗೂ Google News ಗಳಿಗೆ ಉಚಿತವಾಗಿ Subscribe ಆಗಲು Facebook, Telegram, Twitter, Dailyhunt, Youtube, Whatsup Channel ಗೆ ಜಾಯಿನ್ ಆಗಲು ಇವುಗಳ ಲಿಂಕ್ ಮೇಲೆ ಕ್ಲಿಕ್ ಮಾಡಿ.