ಬೆಂಗಳೂರು, ಮೇ.08 www.bengaluruwire.com : ಬೆಂಗಳೂರಿನ ಸಿಬಿಐ ಪ್ರಕರಣಗಳ ವಿಶೇಷ ನ್ಯಾಯಾಧೀಶರು ಲಂಚ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ, ಇಂದು ಕೇಂದ್ರ ಅಬಕಾರಿ ಮತ್ತು ಕೇಂದ್ರ ತೆರಿಗೆ (ಜಿಎಸ್‌ಟಿ – GST) ಅಧೀಕ್ಷಕರಾಗಿದ್ದ ಜಿತೇಂದ್ರ ಕುಮಾರ್ ಡಾಗೂರ್ ಅವರಿಗೆ 3 ವರ್ಷಗಳ ಜೈಲು ಶಿಕ್ಷೆ ಮತ್ತು 5.0 ಲಕ್ಷ ರೂ. ದಂಡ ವಿಧಿಸಿದೆ.
ಉತ್ತರ ಕನ್ನಡದ ಹೊನ್ನಾವರದಲ್ಲಿ ಕೇಂದ್ರೀಯ ಅಬಕಾರಿ ಮತ್ತು ಕೇಂದ್ರ ತೆರಿಗೆಯ (GST) ಜಿತೇಂದ್ರ ಕೆ ಡಾಗೂರ್ ಅವರು, ಪ್ರಕರಣವೊಂದರಲ್ಲಿ 2015-2016 ನೇ ಸಾಲಿನ ತೆರಿಗೆ ಮತ್ತು ದಂಡವನ್ನು ಮನ್ನಾ ಮಾಡಲು ದೂರುದಾರರಿಂದ ರೂ.25,000 ರೂ.ಗಳಿಗೆ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಈ ಸಂಬಂಧ ಸಿಬಿಐ ಅಧಿಕಾರಿಗಳು ಬಲೆ ಬೀಸಿ ಆರೋಪಿ ಅಧಿಕಾರಿ ಲಂಚ ಸ್ವೀಕರಿಸುವಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದರು. ಈ ಸಂಬಂಧ 2021ರ ಮಾರ್ಚ್ 26ನೇ ತಾರೀಖಿನಂದು ಸಿಬಿಐ ಈ ಬಗ್ಗೆ ಪ್ರಕರಣ ದಾಖಲಿಸಿತ್ತು.
ತನಿಖೆಯ ನಂತರ ಸಿಬಿಐ ಆರೋಪಿ ವಿರುದ್ಧ 2021ರ ಆಗಸ್ಟ್ 27ರಂದು ಚಾರ್ಜ್ ಶೀಟ್ ಸಲ್ಲಿಸಿತ್ತು. ವಿಚಾರಣೆಯ ನಂತರ ಸಿಬಿಐ ನ್ಯಾಯಾಲಯವು ಆರೋಪಿಯನ್ನು ತಪ್ಪಿತಸ್ಥನೆಂದು ಪರಿಗಣಿಸಿ ಮೇ.8 ರಂದು ತೀರ್ಪು ನೀಡಿ ಈ ಶಿಕ್ಷೆ ವಿಧಿಸಿದೆ.