ನವದೆಹಲಿ/ಬೆಂಗಳೂರು, ಮೇ.7 www.bengaluruwire.com : ಲೋಕಸಭೆ ಚುನಾವಣೆ 2024ರ ಮೂರನೇ ಹಂತದ ಮತದಾನ ಕರ್ನಾಟಕವೂ ಸೇರಿದಂತೆ 11 ರಾಜ್ಯಗಳು, ಕೇಂದ್ರಾಡಳಿತ ಪ್ರದೇಶದ 93 ಕ್ಷೇತ್ರಗಳಲ್ಲಿ ಪ್ರಗತಿಯಲ್ಲಿದ್ದು ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಸೇರಿದಂತೆ ಹಲವು ಪ್ರಮುಖರು ತಮ್ಮ ಹಕ್ಕನ್ನು ಚಲಾಯಿಸಿದರು.
ಲೋಕಸಭೆ ಚುನಾವಣೆಯ ಮೂರನೇ ಹಂತದ ಮತದಾನದ ವೇಳೆ ಪ್ರಧಾನಿ ನರೇಂದ್ರ ಮೋದಿ ಇಂದು ಬೆಳಗ್ಗೆ 7:30ರ ನಂತರ
ಅಹಮದಾಬಾದ್‌ನ ಶಾಲೆಯೊಂದಕ್ಕೆ ಬಂದಾಗ ಕೇಂದ್ರ ಸಚಿವ ಅಮಿತ್ ಶಾ ಅವರನ್ನು ಸ್ವಾಗತಿಸಿ ಇಬ್ಬರು ನಾಯಕರು ಬೂತ್‌ಗೆ ತೆರಳಿದರು. ನಂತರ ಪ್ರಧಾನಮಂತ್ರಿ ನರೇಂದ್ರ ಮೋದಿ, ಅಮಿತ್ ಶಾರವರು ಮತದಾನ ಮಾಡಿದರು.
ಪ್ರಧಾನಿ ಮೋದಿಯವರ ದರ್ಶನ ಪಡೆಯಲು ನೆರೆದಿದ್ದ ಅಪಾರ ಜನಸ್ತೋಮ ರಸ್ತೆಬದಿಯಿಂದ ಹರ್ಷೋದ್ಘಾರ ಮಾಡಿ ಅವರಿಗಾಗಿ ಘೋಷಣೆಗಳನ್ನು ಕೂಗಿದರು. ಬೂತ್‌ನ ಹೊರಗೆ ಬಂದ ಬಳಿಕ, ಪ್ರಜಾಪ್ರಭುತ್ವದಲ್ಲಿ ಮತದಾನ ಹೆಚ್ಚು ಪ್ರಾಮುಖ್ಯತೆಯನ್ನು ಹೊಂದಿರುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಮತ ಚಲಾಯಿಸುವಂತೆ ಪ್ರಧಾನಿ ದೇಶದ ನಾಗರಿಕರನ್ನು ಒತ್ತಾಯಿಸಿದರು. “ನಮ್ಮ ದೇಶದಲ್ಲಿ ‘ದಾನ’ಕ್ಕೆ ಹೆಚ್ಚಿನ ಪ್ರಾಮುಖ್ಯತೆ ಇದೆ ಮತ್ತು ಅದೇ ಉತ್ಸಾಹದಲ್ಲಿ ದೇಶವಾಸಿಗಳು ಸಾಧ್ಯವಾದಷ್ಟು ಮತ ಚಲಾಯಿಸಬೇಕು. ನಾಲ್ಕು ಸುತ್ತಿನ ಮತದಾನ ಇನ್ನೂ ಮುಂದಿದೆ” ಎಂದು ಪ್ರಧಾನಿ ಮೋದಿ ಹೇಳಿದರು.
ಇನ್ನೊಂದೆಡೆ ಕರ್ನಾಟಕದಲ್ಲಿ ಎರಡನೇ ಮತದಾನ ನಡೆಯುತ್ತಿದ್ದು, ಹಲವು ಗಣ್ಯರು, ರಾಜಕೀಯ ಮುಖಂಡರು, ಅಭ್ಯರ್ಥಿಗಳು ಕುಟುಂಬ ಸಮೇತರಾಗಿ ತಮ್ಮ ತಮ್ಮ ಮತದಾನ ಕೇಂದ್ರಕ್ಕೆ ತೆರಳಿ ಮತದಾನ ಮಾಡಿದರು.
ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ವೈದ್ಯಕೀಯ ಶಿಕ್ಷಣ ಹಾಗೂ ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಶರಣ್ ಪ್ರಕಾಶ್ ಪಾಟೀಲ್ ಅವರು ಇಂದು ಕಲಬುರಗಿ ಜಿಲ್ಲೆ ಸೇಡಂ ತಾಲ್ಲೂಕಿನ ಉಡುಗಿಯ ಸ್ವಗ್ರಾಮದಲ್ಲಿ ಕುಟುಂಬ ಸಮೇತ ಆಗಮಿಸಿ ಮತ ಚಲಾಯಿಸಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ಅವರ ಪುತ್ರ ಮತ್ತು ಬೆಳಗಾವಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮೃಣಾಲ್ ಹೆಬ್ಬಾಳಕರ್, ಸೊಸೆ ಡಾ.ಹಿತಾ ಸೇರಿದಂತೆ ಅವರ ಕುಟುಂಬದವರು, ಬೆಳಗಾವಿಯ ವಿಜಯನಗರದ ಸರಕಾರಿ ಮರಾಠಿ ಪ್ರಾಥಮಿಕ ಪಾಠ ಶಾಲೆಯ ಬೂತ್ ನಂಬರ್ 61ರಲ್ಲಿ ಕುಟುಂಬ ಸಮೇತ ಆಗಮಿಸಿ ಮತದಾನ ಮಾಡಿದರು.
ಗ್ರಾಮೀಣಾಭಿವೃದ್ದಿ ಹಾಗೂ ಪಂಚಾಯತ್ ರಾಜ್ ಸಚಿವರಾದ ಪ್ರಿಯಾಂಕ್ ಖರ್ಗೆ, ಅವರ ಧರ್ಮಪತ್ನಿ ಶೃತಿ ಖರ್ಗೆ ಹಾಗೂ ಕಲಬುರಗಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರಾಧಾಕೃಷ್ಣ ದೊಡ್ಡಮನಿ ಅವರು ಚಿತ್ತಾಪುರ ವಿಧಾನಸಭಾ ಮತಕ್ಷೇತ್ರದ ಗುಂಡಗುರ್ತಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಬೂತ್ ನಂಬರ್ 26 ರಲ್ಲಿ ಮತದಾನ ಮಾಡಿದರು.
ಮಾಜಿ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ (ಹಾವೇರಿ ಲೋಕಸಭಾ ಕ್ಷೇತ್ರದ ಅಭ್ಯರ್ಥಿ) ಅವರು ಶಿಗ್ಗಾಂವಿಯಲ್ಲಿ ಹಾಗೂ ಜಗದೀಶ ಶೆಟ್ಟರ್ ಅವರು (ಬೆಳಗಾವಿ ಅಭ್ಯರ್ಥಿ) ಬೆಳಗಾವಿಯ ನಿಗದಿತ ಮತಗಟ್ಟೆಯಲ್ಲಿ ಕುಟುಂಬ ಸಮೇತ ಆಗಮಿಸಿ ಮತದಾನ ಮಾಡಿದರು.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಮಾಜಿ ಮುಖ್ಯಮಂತ್ರಿ ಮತ್ತು ಕೇಂದ್ರ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್.ಯಡಿಯೂರಪ್ಪ, ಶಿವಮೊಗ್ಗ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಬಿ.ವೈ.ರಾಘವೇಂದ್ರ ಅವರು ಇಂದು ಬೆಳಿಗ್ಗೆ ಶಿಕಾರಿಪುರದ ತಾಲ್ಲೂಕು ಪಂಚಾಯತ್ ಕಾರ್ಯಾಲಯದಲ್ಲಿ ಮತದಾನ ಮಾಡಿದರು.
ಧಾರವಾಡ ಕ್ಷೇತ್ರದ ಅಭ್ಯರ್ಥಿ ಪ್ರಲ್ಹಾದ್ ಜೋಶಿ ಅವರು ಹುಬ್ಬಳ್ಳಿಯ ಕಿವುಡ ಮೂಕರ ಶಾಲೆಯಲ್ಲಿ ತಮ್ಮ ಮತದಾನದ ಹಕ್ಕು ಚಲಾಯಿಸಿದರು.