ಬೆಂಗಳೂರು, ಮೇ.7 www.bengaluruwire.com : ನಗರದಲ್ಲಿ ಮಳೆಗಾಲದ ವೇಳೆ ಯಾವುದೇ ರೀತಿಯ ಸಮಸ್ಯೆಯಾಗದಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲು ಮುಖ್ಯ ಆಯುಕ್ತರಾದ ತುಷಾರ್ ಗಿರಿನಾಥ್ ರವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಬಿಬಿಎಂಪಿ ವ್ಯಾಪ್ತಿಯಲ್ಲಿ ಮಳೆಗಾಲದಲ್ಲಿ ಮುಂಜಾಗ್ರತಾ ಕ್ರಮ ಕೈಗೊಳ್ಳುವ ಸಂಬಂಧ ಇಂದು ನಡೆದ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಆಯಾ ವಲಯ ವ್ಯಾಪ್ತಿಯ ಅಧಿಕಾರಿಗಳು ಮಳೆಗಾಲದ ವೇಳೆ ಎಲ್ಲಿಯೂ ಸಮಸ್ಯೆಯಾಗದಂತೆ ಕ್ರಮವಹಿಸಬೇಕೆಂದು ಸೂಚಿಸಿದರು.
ಮೆಟ್ರೊ ಕಾಮಗಾರಿ ನಡೆಯುವ ಸ್ಥಳ, ರಾಜಕಾಲುವೆ, ರಸ್ತೆ ಬದಿ ಚರಂಡಿಗಳಲ್ಲಿ ಹೂಳನ್ನು ತ್ವರಿತಗತಿಯಲ್ಲಿ ತೆರವುಗೊಳಿಸಬೇಕು. ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಯಾವುದೇ ರೀತಿಯ ತೊಂದರೆಯಾಗದಂತೆ ಕ್ರಮವಹಿಸಬೇಕು. ನಗರದಲ್ಲಿ ಜೋರು ಮಳೆಯಾಗುವ ಸಮಯದಲ್ಲಿ ರಸ್ತೆಗಳ ಮೇಲೆ ಹೆಚ್ಚು ನೀರು ನಿಂತು ವಾಹನಗಳ ಸಂಚಾರಕ್ಕೆ ಹೆಚ್ಚು ಸಮಸ್ಯೆಯಾಗುತ್ತದೆ. ಈ ನಿಟ್ಟಿನಲ್ಲಿ ರಸ್ತೆ ಮೇಲೆ ಬೀಳುವ ನೀರು ಚರಂಡಿಗಳಿಗೆ ಸರಾಗವಾಗಿ ಹರಿದು ಹೋಗುವ ನಿಟ್ಟಿನಲ್ಲಿ ಶೋಲ್ಡರ್ ಡ್ರೈನ್ ಗಳ ಬಳಿ ಸ್ವಚ್ಚತೆ ಕಾಪಾಡಲು ಸೂಚಿಸಿದರು.
ನಿಯಂತ್ರಣ ಕೊಠಡಿಗಳು ಸಕ್ರಿಯವಾಗಿ ಕಾರ್ಯನಿರ್ವಹಿಸಬೇಕು :


ಪಾಲಿಕೆ 8 ವಲಯಗಳು ಹಾಗೂ ಕೇಂದ್ರ ಕಛೇರಿ ಸೇರಿದಂತೆ 9 ಶಾಶ್ವತ ನಿಯಂತ್ರಣ ಕೊಠಡಿಗಳು ಸಕ್ರಿಯವಾಗಿ ಕಾರ್ಯನಿರ್ವಹಿಸಬೇಕು. ಜೊತೆಗೆ ಮಳೆಗಾಲದ ವೇಳೆ ತಾತ್ಕಾಲಿಕವಾಗಿ 63 ನಿಯಂತ್ರಣ ಕೊಠಡಿಗಳನ್ನು ಸ್ಥಾಪಿಸಿಕೊಂಡು, ಅಗತ್ಯವಿರುವ ಪಂಪ್‌ಸೆಟ್, ಸಲಕರಣೆಗಳು, ಗ್ಯಾಂಗ್ಸ್ ಗಳನ್ನು ಸನ್ನದ್ಧವಾಗಿಟ್ಟುಕೊಳ್ಳಬೇಕೆಂದು ಸೂಚಿಸಿದರು.

ಮರ ಕಟಾವು ತಂಡಗಳು ಸದಾ ಸನ್ನದ್ಧ :
ನಗರದಲ್ಲಿ ಮಳೆಗಾಲದ ವೇಳೆ ಬಿದ್ದಂತಹ ಮರಗಳು ಹಾಗೂ ರೆಂಬೆ ಕೊಂಬೆಗಳನ್ನು ತ್ವರಿತಗತಿಯಲ್ಲಿ ತೆರವುಗೊಳಿಸುವ ಸಲುವಾಗಿ 28 ತಂಡಗನ್ನು ಕಾರ್ಯನಿರ್ವಹಿಸುತ್ತಿವೆ. ಅದರ ಜೊತೆಗೆ ಹೆಚ್ಚುವರಿಯಾಗಿ 6 ತಂಡಗಳನ್ನು ನಿಯೋಜನೆ ಮಾಡಿಕೊಳ್ಳಲಾಗಿದೆ. ಅದಲ್ಲದೇ ರಸ್ತೆಗಳಲ್ಲಿ ಬಿದ್ದಂತಹ ಮರಗಳನ್ನು ಕೂಡಲೆ ತೆರವುಗೊಳಿಸಿ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡುವ ದೃಷ್ಠಿಯಿಂದ ವಲಯವಾರು 8 ದ್ವಿಚಕ್ರ ವಾಹನಗಳ ತಂಡಗಳನ್ನು ನಿಯೋಜನೆ ಮಾಡಿಕೊಳ್ಳಲಾಗುತ್ತದೆ.
ಮರ, ರೆಂಬೆ ಕೊಂಬೆ ತೆರವು ಕಾರ್ಯಾಚರಣೆಗಾಗಿ 8 ಟ್ರ್ಯಾಕ್ಟರ್, 2 ಜೆಸಿಬಿ, 2 ಕ್ರೇನ್, ಅವಶ್ಯಕ ಸಲಕರಣೆಗಳು ಹಾಗೂ ಅಗತ್ಯ ಸಿಬ್ಬಂದಿಯನ್ನು ನಿಯೋಜನೆ ಮಾಡಿಕೊಳ್ಳಲಾಗಿದೆ. ಬಿದ್ದಂತಹ ಮರ, ರೆಂಬೆ-ಕೊಂಬೆಗಳ ವಿಲೇವಾರಿಗಾಗಿ ಆಯಾ ವಲಯಗಳಲ್ಲಿ ಡಂಪಿಂಗ್ ಯಾರ್ಡ್ಗಳ ವ್ಯವಸ್ಥೆ ಮಾಡಿಕೊಳ್ಳಲು ಉಪ ಅರಣ್ಯ ಸಂರಕ್ಷಾಧಿಕಾರಿಗೆ ಸೂಚನೆ ನೀಡಿದರು.
ಅಗ್ನಿಶಾಮಕ ಮತ್ತು ಎಸ್.ಡಿ.ಆರ್.ಎಫ್ ಜೊತೆ ಸಂಪರ್ಕ :
ಮಳೆಗಾಲದ ವೇಳೆ ಪಾಲಿಕೆಯ ಜೊತೆ ಅಗ್ನಿ ಶಾಮಕ ಠಾಣೆ ಹಾಗೂ ಎಸ್.ಡಿ.ಆರ್.ಎಫ್ ಇಲಾಖೆಗಳು ಕೈಜೋಡಿಸಲಿದ್ದಾರೆ. ಈ ಸಂಬಂಧ ಆಯಾ ವಲಯ ಆಯುಕ್ತರು ಅಗ್ನಿ ಶಾಮಕ ಠಾಣೆ ಸ್ಥಳಗಳಿಗೆ ಭೇಟಿ ನೀಡಿ ಸದರಿ ಇಲಾಖೆಗಳ ಜೊತೆ ನಿತ್ಯ ಸಂಪರ್ಕದಲ್ಲಿರಬೇಕು. ತುರ್ತು ಪರಿಸ್ಥಿತಿಯ ವೇಳೆ ಸದರಿ ಇಲಾಖೆಗಳ ಸಹಾಯ ಪಡೆದು ಸಮಸ್ಯೆಯನ್ನು ಬಗೆಹರಿಸಿಕೊಳ್ಳಬೇಕೆಂದು ಸೂಚನೆ ನೀಡಿದರು.
ವ್ಯಾಟ್ಸಪ್ ಗ್ರೂಪ್‌ಗಳನ್ನು ರಚಿಸಿ :
ನಗರದಲ್ಲಿ ಮಳೆಗಾಲದ ವೇಳೆ ನಾಗರೀಕರ ಸಮಸ್ಯೆಗೆ ಕೂಡಲೇ ಸ್ಪಂದಿಸುವ ನಿಟ್ಟಿನಲ್ಲಿ ಪಾಲಿಕೆ, ಬೆಸ್ಕಾಂ, ಜಲಮಂಡಳಿ ಸೇರಿದಂತೆ ಇನ್ನಿತರೆ ಇಲಾಖೆಗಳನ್ನು ಒಳಗೊಂಡಂತೆ ಆಯಾ ವಲಯದ ಉಪ ವಿಭಾಗವಾರು ವ್ಯಾಟ್ಸಪ್ ಗ್ರೂಪ್‌ಗಳನ್ನು ರಚಿಸಿಕೊಂಡು, ಅದರ ಮೂಲಕ ಬಂದಂತರ ದೂರು, ಸಮಸ್ಯೆಗಳನ್ನು ಕೂಡಲೆ ಇತ್ಯರ್ಥಪಡಿಸಬೇಕೆಂದು ಸೂಚನೆ ನೀಡಿದರು.
ಕಟ್ಟಡ ನಿರ್ಮಾಣ ಭಗ್ನಾವಶೇಷ ಸುರಿದರೆ ದಂಡ ವಿಧಿಸಿ :
ನಗರದ ರಸ್ತೆ ಬದಿ, ಇಕ್ಕೆಲಗಳಲ್ಲಿ, ರಾಜಕಾಲುವೆಗಳು, ಅದರ ಪಕ್ಕದಲ್ಲಿ ಅನಧಿಕೃತವಾಗಿ ಕಟ್ಟಡ ನಿರ್ಮಾಣ ಭಗ್ನಾವಶೇಷಗಳನ್ನು ಹಾಕಿದರೆ ದಂಡ ವಿಧಿಸಬೇಕು. ಈ ಸಂಬಂಧ ಕಟ್ಟಡ ಭಗ್ನಾವಶೇಷಗಳ ವಿಲೇವಾರಿ ಮಾಡುವವರ ಮೇಲೆ ಘನತ್ಯಾಜ್ಯ ವಿಭಾಗವು ಸಕ್ರಿಯವಾಗಿ ನಿಗಾವಹಿಸಿ ಅನಧಿಕೃತ ಸ್ಥಳದಲ್ಲಿ ಸುರಿಯದಂತಹವರಿಗೆ ದಂಡ ವಿಧಿಸಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಈ ವೇಳೆ ಯೋಜನಾ ವಿಭಾಗದ ವಿಶೇಷ ಆಯುಕ್ತರಾದ ಡಾ. ಕೆ. ಹರೀಶ್ ಕುಮಾರ್, ವಿಪತ್ತು ನಿರ್ವಹಣೆಯ ವಿಶೇಷ ಆಯುಕ್ತರಾದ ಸುರೋಳ್ಕರ್ ವಿಕಾಸ್ ಕಿಶೋರ್, ಎಲ್ಲಾ ವಲಯ ಆಯುಕ್ತರು, ಎಲ್ಲಾ ವಲಯ ಜಂಟಿ ಆಯುಕ್ತರು, ಪ್ರಧಾನ ಅಭಿಯಂತರರು, ಎಲ್ಲಾ ವಲಯ ಮುಖ್ಯ ಅಭಿಯಂತರರು ಸೇರಿದಂತೆ ಇನ್ನಿತರೆ ಸಂಬಂಧಪಟ್ಟ ಅಧಿಕಾರಿಗಳು ಉಪಸ್ಥಿತರಿದ್ದರು.